Advertisement
ಕೋವಿಡ್‌ಗೆ ಲಸಿಕೆ ಮತ್ತು ಮದ್ದು ಕಂಡುಕೊಳ್ಳುವ ನೂರಕ್ಕೂ ಹೆಚ್ಚು ಸಂಶೋಧನೆಗಳೇನೋ ನಡೆಯುತ್ತಿವೆ. ಆದರೆ ಯಾವುದೂ ನಿರೀಕ್ಷಿತ ಫಲಿತಾಂಶ ನೀಡಿಲ್ಲ. ಅಲ್ಲದೆ ಯಾವುದೇ ಲಸಿಕೆ ಕಂಡು ಹಿಡಿದರೂ ಅದನ್ನು ಮೊದಲು ಪ್ರಾಣಿಗಳಿಗೆ ನೀಡಿ ಪರಿಶೀಲಿಸಬೇಕು. ಇದು ಬಹಳ ಸಮಯ ಬೇಡುವ ಪ್ರಕ್ರಿಯೆ. ಹೀಗೆ ಒಂದೊಂದೇ ಲಸಿಕೆಯನ್ನು ಪ್ರಾಣಿಗಳ ಮೇಲೆ ಪ್ರಯೋಗಿಸುತ್ತಾ ಹೋದರೆ ನಿಜವಾದ ಲಸಿಕೆ ಸಿಗಲು ಹಲವು ವರ್ಷಗಳೇ ಹಿಡಿಯಬಹುದು. ಅಷ್ಟರೊಳಗೆ ಅದೆಷ್ಟೋ ಲಕ್ಷ ಮಂದಿಯ ಪ್ರಾಣವನ್ನು ಕೋವಿಡ್ ಹರಣಗೊಳಿಸಬಹುದು.
Related Articles
Advertisement
ಕೋವಿಡ್ ಸೋಂಕಿತರನ್ನು ಕರೆತಂದು ಅವರಿಂದ ಒಪ್ಪಿಗೆ ಪಡೆದು ಲಸಿಕೆಗಳನ್ನು ಪ್ರಯೋಗಿಸಿ ನೋಡುತ್ತಾ ಕುಳಿತುಕೊಳ್ಳುವುದು ಸಮಯ ತಿನ್ನುವ ಪ್ರಕ್ರಿಯೆ. ಹ್ಯುಮನ್ ಇನ್‌ಫೆಕ್ಷನ್ ಸ್ಟಡಿಯಲ್ಲಿ ರೋಗಿಗಳಾಗಳು ಒಪ್ಪಿಕೊಂಡವರಿಗೆ ಮೊದಲು ಲಸಿಕೆ ನೀಡಿ ಬಳಿಕ ಸಿರಿಂಜ್, ಕಾಕ್‌ಟೈಲ್, ಸೊಳ್ಳೆ ಕಡಿತ ಅಥವಾ ಮೂಗಿನ ಸ್ಪ್ರೆ ಮೂಲಕ ನೇರವಾಗಿ ಸೋಂಕು ತಗಲುವಂತೆ ಮಾಡಲಾಗುತ್ತದೆ. ಲಸಿಕೆ ಯಾವ ರೀತಿ ಅವರ ಮೇಲೆ ಕಾರ್ಯ ನಿರ್ವಹಿಸುತ್ತದೆ ಎಂಬುದನ್ನು ಈ ಮೂಲಕ ತ್ವರಿತವಾಗಿ ತಿಳಿದುಕೊಳ್ಳಲು ಸಾಧ್ಯವಾಗುತ್ತದೆ.
ಇಂಥ ಪ್ರಯೋಗಕ್ಕೊಡ್ಡಿಕೊಳ್ಳಲು ಸ್ವ ಇಚ್ಚೆಯಿಂದ ಮುಂದೆ ಬರುವವರಿಗೆ ಭಾರೀ ದೊಡ್ಡ ಪ್ರತಿಫಲ ಸಿಗುತ್ತದೆ. ಆದರೆ ಇದು ಭಾರೀ ಅಪಾಯವಿರುವ, ಒಂದರ್ಥದಲ್ಲಿ ಪ್ರಾಣವನ್ನೇ ಪಣಕ್ಕಿಟ್ಟು ಆಡುವ ಆಟದಂತೆ.
ಮಾ.31ರಂದು ಜರ್ನಲ್ ಆಫ್ ಇನ್‌ಫೆಕಿಯಸ್ ಡಿಸೀಸಸ್ ಎಂಬ ನಿಯತಕಾಲಿಕದಲ್ಲಿ ಪ್ರಕಟವಾದ ಲೇಖನವೊಂದು ಕೋವಿಡ್ ವೈರಸ್ ಲಸಿಕೆ ಪ್ರಯೋಗಕ್ಕೊಡ್ಡಿಕೊಳ್ಳಲು ಸ್ವಯಂ ಮುಂದೆ ಬರುವ ಅಭಿಯಾನಕ್ಕೆ ಪ್ರೇರಣೆಯಾಗಿದೆ. ಜಗತ್ತಿಗೆ ಕೋವಿಡ್ ನಿಗ್ರಹಿಸುವ ಲಸಿಕೆ ಎಷ್ಟು ಕ್ಷಿಪ್ರವಾಗಿ ಅಗತ್ಯವಿದೆ ಎಂಬ ಅಂಶವನ್ನು ಈ ಲೇಖನದಲ್ಲಿ ಪ್ರತಿಪಾದಿಸಲಾಗಿತ್ತು.
ಹ್ಯುಮನ್ ಚಾಲೆಂಜ್ ಸ್ಟಡಿಗೆ ನೋಂದಣಿ ಮಾಡಿಕೊಳ್ಳುವವರು ತಮ್ಮ ವೈದ್ಯಕೀಯ ಮಾಹಿತಿಗಳು, ವಂಶವಾಹಿಗಳ ಕುರಿತಾಗಿ ಲಭ್ಯವಿರುವ ಮಾಹಿತಿ ಇತ್ಯಾದಿಗಳನ್ನು ನೀಡಬೇಕಾಗುತ್ತದೆ. ಉಳಿದಂತೆ ವಾಸವಿರುವ ಪ್ರದೇಶ, ಪ್ರಾಯ, ಕೌಟುಂಬಿಕ ಹಿನ್ನೆಲೆ ಈ ಮುಂತಾದ ಸಾಮಾನ್ಯ ಮಾಹಿತಿಗಳನ್ನೂ ನೀಡಬೇಕು.
ಜೋಶ್ ಮೊರಿಸನ್ ಎಂಬವರು ಒನ್ ಡೇ ಸೂನರ್ ವೆಬ್‌ಸೈಟ್‌ನ ಸ್ಥಾಪಕ. ಕಾರ್ಪೋರೇಟ್ ಸಂಸ್ಥೆಗಳ ವಕೀಲರಾಗಿದ್ದ ಮೊರಿಸನ್ ಪ್ರಸ್ತುತ ಈ ಕೆಲಸವನ್ನು ಬಿಟ್ಟು ಮನುಕುಲವನ್ನು ಮಾರಕ ಕಾಯಿಲೆಗಳಿಂದ ರಕ್ಷಿಸುವ ಉದಾತ್ತ ಕಾರ್ಯಕ್ಕಿಳಿದಿದ್ದಾರೆ. ಕಿಡ್ನಿ ದಾನಿಗಳು ಮತ್ತು ಪಡೆಯುವವರ ನಡುವೆ ಸಂಪರ್ಕ ಸೇತುವಾಗಿ ಕಾರ್ಯ ನಿರ್ವಹಿಸುವ ವೈಟ್‌ಲಿಸ್ಟ್ ಜೀರೊ ಎಂಬ ಸೇವಾ ಸಂಸ್ಥೆಯನ್ನು ಅವರು ಕೆಲವು ವರ್ಷಗಳ ಹಿಂದೆಯೇ ಸ್ಥಾಪಿಸಿದ್ದಾರೆ. ಕೋವಿಡ್‌ನಿಂದಾಗಿ ಸದ್ಯ ಕಿಡ್ನಿ ಕಸಿಯಂಥ ಚಿಕಿತ್ಸೆಗಳೆಲ್ಲ ಸ್ಥಗಿತಗೊಂಡಿರುವುದರಿಂದ ಮೊರಿಸನ್ ಬಿಡುವಿನ ವೇಳೆಯಲ್ಲಿ ಒನ್ ಡೇ ಸೂನರ್ ಮೂಲಕ ಕೋವಿಡ್ ಲಸಿಕೆ ಪರಿಕ್ಷೆಗೆ ಸ್ವಯಂ ಸೇವಕರಾಗಲು ತಯಾರಿರುವವರನ್ನು ಒಟ್ಟುಗೂಡಿಸುತ್ತಿದ್ದಾರೆ.
ಆದರೆ ಕೋವಿಡ್ ಲಸಿಕೆಯನ್ನು ನೇರವಾಗಿ ಮನುಷ್ಯರ ಮೇಲೆ ಪ್ರಯೋಗಿಸಿ ನೋಡುವ ಸಾಹಸಕ್ಕೆ ವೈಜ್ಞಾನಿಕ ಸಮುದಾಯದಿಂದ ತೀವ್ರ ವಿರೋಧವೂ ವ್ಯಕ್ತವಾಗಿದೆ. ಇದು ಆಳ ನೋಡಲು ಯಾರಧ್ದೋ ಮಕ್ಕಳನ್ನು ನೀರಿಗಿಳಿಸಿದಂತೆ. ಕನಿಷ್ಠ ಲಸಿಕೆಯ ತೀವ್ರತೆಯನ್ನಾದರೂ ಪ್ರಾಣಿಗಳ ಮೇಲೆ ಪರೀಕ್ಷಿಸಿ ನೋಡುವುದು ಉಚಿತ ಎನ್ನುವ ಸಲಹೆಯನ್ನು ವಿಜ್ಞಾನಿಗಳು ನೀಡಿದ್ದಾರೆ. ಕೋವಿಡ್ ವೈರಸ್ ಸ್ವತಃ ನಿಗೂಢವಾಗಿದೆ. ಅದರ ಸಂರಚನೆಯನ್ನು ಪರಿಪೂರ್ಣವಾಗಿ ತಿಳಿದುಕೊಳ್ಳಲು ಇನ್ನೂ ಸಾಧ್ಯವಾಗಿಲ್ಲ. ಹೀಗಿರುವಾಗ ಮನುಷ್ಯರನ್ನು ಅಪಾಯಕ್ಕೆ ತಳ್ಳುವುದು ಸರಿಯಲ್ಲ ಎನ್ನುತ್ತಾರೆ ಯುನಿವರ್ಸಿಟಿ ಆಫ್ ಸೌತಾಂಪ್ಟನ್‌ನ ಡಾ| ರಾಬರ್ಟ್ ರೀಡ್.