ಗುಂಡ್ಲುಪೇಟೆ: ಬಂಡೀಪುರ ಅಭಯಾರಣ್ಯದಲ್ಲಿ ಸಫಾರಿಗೆ ತೆರಳಿದ ವೇಳೆ ಕಾಡುಪ್ರಾಣಿಗಳಿಂದ ಪ್ರಾಣಹಾನಿ ಸಂಭವಿಸಿದರೆ 1 ಕೋಟಿ ರೂ. ವಿಮೆ ಯೋಜನೆಯನ್ನು ಬಂಡೀಪುರ ಅರಣ್ಯ ಇಲಾಖೆ ಜಾರಿಗೊಳಿಸಿದೆ.
ಬಂಡೀಪುರ ಅಭಯಾರಣ್ಯದಲ್ಲಿ ನಡೆಯುವ ಸಫಾರಿಗೆ ಪ್ರತಿನಿತ್ಯ ಸಾವಿರಾರು ಪ್ರವಾಸಿಗರು ಭೇಟಿ ನೀಡಿ ಕಾಡು ಪ್ರಾಣಿಗಳು ಹಾಗೂ ಪ್ರಾಕೃತಿಕ ಸೌಂದರ್ಯ ಸವಿಯುತ್ತಿದ್ದರು. ಸಫಾರಿ ವೇಳೆ ಕಾಡು ಪ್ರಾಣಿಗಳು ದಾಳಿಗೆ ಮುಂದಾಗಿರುವ ಹಲವು ನಿದರ್ಶನಗಳಿವೆ. ಇದನ್ನು ಮನದಲ್ಲಿಟ್ಟುಕೊಂಡು ಬಂಡೀಪುರ ಅರಣ್ಯ ಸಂರಕ್ಷಣಾಧಿಕಾರಿ ಡಾ.ಪಿ.ರಮೇಶ್ ಕುಮಾರ್ ಇದೀಗ ವಿನೂತನ ವಿಮಾ ಯೋಜನೆ ಜಾರಿಗೊಳಿಸುವ ಮೂಲಕ ಪ್ರವಾಸಿಗರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಪ್ರವಾಸಿಗರಿಗೆ ರಕ್ಷಣೆ: ವಿಮೆ ಯೋಜನೆಗೆ ಅರ್ಹರಾಗಲು ಯಾವುದೇ ನೋಂದಣಿ ಅಗತ್ಯವಿಲ್ಲ. ಸಫಾರಿಗೆ ಹೋಗಿರುವ ಟಿಕೆಟ್ ಇದ್ದರೆ ಸಾಕು. ಕಾಡಿನೊಳಗೆ ಸಫಾರಿ ವೇಳೆ ವನ್ಯ ಪ್ರಾಣಿ ಗಳಿಂದ ಹಾನಿ ಸಂಭವಿಸಿದರೆ ಅರಣ್ಯ ಇಲಾಖೆಯಿಂದ ಆರ್ಥಿಕ ನೆರವು ಸಿಗಲಿದೆ. ಈ ಮೂಲಕ ಇಲಾಖೆ ಪ್ರವಾಸಿಗರ ರಕ್ಷಣೆಗೆ ಮುಂದಾಗಿದೆ. ಬಂಡೀಪುರ ಸಫಾರಿಗೆ ಪ್ರತಿವರ್ಷ 1ರಿಂದ 1.5 ಲಕ್ಷ ಮಂದಿ ಭೇಟಿ ನೀಡಿ, ಪ್ರಕೃತಿ ಸೌಂದರ್ಯ ಹಾಗೂ ವನ್ಯ ಜೀವಿಗಳನ್ನು ಕಣ್ತುಂಬಿಕೊಳ್ಳುತ್ತಿದ್ದಾರೆ. ಇವರ ಭದ್ರತೆಗೆ ಹೆಚ್ಚಿನ ಒತ್ತು ನೀಡಿ 1 ಕೋಟಿ ರೂ. ವಿಮೆ ಯೋಜನೆ ಜಾರಿ ಮಾಡಲಾಗಿದೆ. ವಿಮೆ ಯೋಜನೆಯಿಂದ ಸಫಾರಿಗೆ ಪ್ರವಾಸಿಗರ ಸಂಖ್ಯೆ ಹೆಚ್ಚಳವಾಗುವ ಸಾಧ್ಯತೆ ಇದೆ ಎಂದು ಅರಣ್ಯಾಧಿಕಾರಿಗಳು ಮಾಹಿತಿ ನೀಡಿದರು.
ಬೆಳಗ್ಗೆ ಮತ್ತು ಸಂಜೆ ಸಫಾರಿ: ಬಂಡೀಪುರ ಅಭಯಾರಣ್ಯದಲ್ಲಿ ಬೆಳಗ್ಗೆ 7 ಗಂಟೆಯಿಂದ 9 ಗಂಟೆವರೆಗೆ ಸಫಾರಿಗೆ ತೆರಳಲು ಅವಕಾಶವಿದ್ದು, ಸಂಜೆ 3 ಗಂಟೆಯಿಂದ 7ರವರೆಗೆ ವೀಕ್ಷಣೆ ಮಾಡಬಹುದಾಗಿದೆ. ಸಫಾರಿ ವೇಳೆ ಪ್ರಾಣಿಗಳು ಮತ್ತು ಸ್ಥಳದ ಬಗ್ಗೆ ಮಾಹಿತಿ ನೀಡಲು ಸಫಾರಿ ಗೈಡ್‌ಗಳನ್ನೂ ಅರಣ್ಯ ಇಲಾಖೆ ನೇಮಕ ಮಾಡಿಕೊಂಡು, ಬಂಡೀಪುರ ಸಫಾರಿ ಸಂಬಂಧ ಪ್ರವಾಸಿಗರಿಗೆ ಪೂರ್ಣ ಮಾಹಿತಿ ಒದಗಿಸುತ್ತಿದೆ. ಹಲವು ವಾಹನ: ಬಂಡೀಪುರದ ಸಫಾರಿ ಕೇಂದ್ರದಲ್ಲಿ ಸುಮಾರು 8 ಬಸ್, 5 ಜಿಪ್ಸಿ, ಮತ್ತು ಒಂದು ಕ್ಯಾಂಟರ್ ವಾಹನಗಳಿವೆ. ಕ್ಯಾಂಪಸ್ ಕೌಂಟರ್ ನಲ್ಲಿ ಟಿಕೆಟ್ ಖರೀದಿಸುವ ಜತೆಗೆ ಆನ್ ಲೈನ್‌ನಲ್ಲಿಯೂ ಮುಂಗಡ ಟಿಕೆಟ್ ಬುಕ್ಕಿಂಗ್‌ಗೆ ಅವಕಾಶ ಕಲ್ಪಿಸಲಾಗಿದೆ. ಬಸ್‌ಗಳ ಜತೆಗೆ ಪ್ರತ್ಯೇಕವಾಗಿ ಜಿಪ್ಸಿ ವ್ಯವಸ್ಥೆಯೂ ಇದೆ. ತಮಿಳುನಾಡು, ಕೇರಳ, ಬೆಂಗಳೂರು, ಮೈಸೂರು ಸೇರಿ ರಾಜ್ಯದ ವಿವಿಧ ಜಿಲ್ಲೆ ಹಾಗೂ ತಾಲೂಕುಗಳಿಂದ ಪ್ರವಾಸಿಗರು ಸಫಾರಿಗೆ ಆಗಮಿಸುತ್ತಾರೆ.
ಬಂಡೀಪುರ ಸಫಾರಿಗೆ ಆಗಮಿಸುವ ಪ್ರವಾಸಿಗರಿಗೆ ಭದ್ರತೆ ನೀಡುವ ಉದ್ದೇಶದಿಂದ 1 ಕೋಟಿ ರೂ. ವಿಮೆ ಯೋಜನೆ ಜಾರಿ ಮಾಡಲಾಗಿದೆ. ಇದರಿಂದ ಪ್ರವಾಸಿಗರು ನಿರ್ಭಯದಿಂದ ಸಫಾರಿ ವೀಕ್ಷಣೆ ಮಾಡಬಹುದು. ಜತೆಗೆ ಸಫಾರಿ ಪ್ರವಾಸಿಗರ ಸಂಖ್ಯೆ ಹೆಚ್ಚಳವಾಗುವ ನಿರೀಕ್ಷೆಯಿದೆ.
– ಡಾ.ಪಿ.ರಮೇಶ್ ಕುಮಾರ್, ಬಂಡೀಪುರ ಅರಣ್ಯ ಸಂರಕ್ಷಣಾಧಿಕಾರಿ
-ಬಸವರಾಜು ಎಸ್.ಹಂಗಳ