Advertisement

ಎಲ್ಲ ಗ್ರಾ.ಪಂ.ಗಳಿಗೆ 1 ಕೋಟಿ ರೂ. ಅನುದಾನ: ನಳಿನ್‌

11:05 PM Aug 19, 2019 | mahesh |

ಆಲಂಕಾರು: ಹದಿನಾಲ್ಕನೇ ಹಣಕಾಸು ಯೋಜನೆಯಡಿ ಕೇಂದ್ರ ಸರಕಾರದಿಂದ ಪ್ರತಿ ಗ್ರಾಮ ಪಂಚಾಯತ್‌ಗಳಿಗೆ 1 ಕೋಟಿ ರೂ. ಅನುದಾನ ನೇರವಾಗಿ ದೊರೆಯಲಿದೆ ಎಂದು ಮಂಗಳೂರು ಲೋಕಸಭಾ ಕ್ಷೇತ್ರದ ಸಂಸದ ನಳೀನ್‌ ಕುಮಾರ್‌ ಕಟೀಲು ಹೇಳಿದರು.

Advertisement

ಆಲಂಕಾರು ಗ್ರಾ.ಪಂ. ಸಭಾ ಭವನದಲ್ಲಿ ಸೋಮವಾರ ನಡೆದ ಆಲಂಕಾರು, ಕುಂತೂರು, ಪೆರಾಬೆ ಗ್ರಾಮದ ಕಾರ್ಯಕರ್ತರ ಸಭೆಯಲ್ಲಿ ಅಹವಾಲು ಗಳನ್ನು ಸ್ವೀಕರಿಸಿ ಅವರು ಮಾತನಾಡಿದರು.

ಸಂಸದರಿಗೆ ರಸ್ತೆಗಳ ಅಭಿವೃದ್ಧಿಯ ಯಾವುದೇ ಅಧಿಕಾರ ಇರುವುದಿಲ್ಲ. ಕಾನೂನು – ಸುವ್ಯವಸ್ಥೆ ಕಾಪಾಡುವುದು ಅವರ ಕರ್ತವ್ಯವಾಗಿರುತ್ತದೆ. ಇಂದು ರಸ್ತೆ ದುರಸ್ತಿಗೆ ಸಂಬಂಧಿಸಿ ಸಾರ್ವಜನಿಕರಿಂದ ಅತಿ ಹೆಚ್ಚು ಬೇಡಿಕೆಗಳು ಬಂದಿವೆ. ಗ್ರಾಮ ಸಡಕ್‌ ಯೋಜನೆ 10 ವರ್ಷಗಳಿಂದ ರಾಜ್ಯದಲ್ಲಿ ಇರಲಿಲ್ಲ. ಈ ವರ್ಷ ಆರಂಭಿಸ ಲಾಗಿದೆ. ಸರ್ವೆ ಕಾರ್ಯ ನಡೆಯುತ್ತಿದೆ. ಯಡಿಯೂರಪ್ಪ ನೇತೃತ್ವದ ಸರಕಾರ ಆಡಳಿತದಲ್ಲಿದ್ದು, ಕ್ಷೇತ್ರದ ಸಾರ್ವಜನಿಕ ರಸ್ತೆಗಳ ಬೇಡಿಕೆಗಳನ್ನು ಶಾಸಕರ ಮೂಲಕ ಐದು ವರ್ಷಗಳಲ್ಲಿ ಈಡೇರಿಸುತ್ತೇವೆ ಎಂದು ಭರವಸೆ ನೀಡಿದರು.

ಹಲವು ಬೇಡಿಕೆಗಳು
ಐದು ಗ್ರಾಮಗಳನ್ನು ಸಂಪರ್ಕಿಸುವ ಕುಂತೂರು ಪದವು, ಇಡಾಳ ಕುಂಟ್ಯಾನ, ಆಲಂಕಾರು ಗ್ರಾಮದ ಪಜ್ಜಡ್ಕ, ಕಕ್ವೆ ಹಾಗೂ ಗೋಳಿತ್ತಡಿ ಸಂಪರ್ಕ ರಸ್ತೆಯನ್ನು ಗ್ರಾಮ ಸಡಕ್‌ ಯೋಜನೆಯಡಿ ನೂತನವಾಗಿ ನಿರ್ಮಿಸಿ ಅಭಿವೃದ್ಧಿ ಪಡಿಸಬೇಕು. ಆಲಂಕಾರು ಗ್ರಾಮದಲ್ಲಿ ಉದ್ದೇಶಿತ 110 ಕೆವಿ ಸಬ್‌ಸ್ಟೇಶನ್‌ ಅನ್ನು ಶೀಘ್ರವೇ ಅನುಷ್ಠಾನ ಮಾಡಬೇಕು. ಶರವೂರು ದುರ್ಗಾಪರಮೇಶ್ವರೀ ದೇವಾಲಯವನ್ನು ನವೀಕರಿಸಿ ಬ್ರಹ್ಮಕಲಶೋತ್ಸವವು ತಮ್ಮ ಮುಂದಾಳತ್ವದಲ್ಲಿ ನಡೆಯಬೇಕು. ಶತಮಾನೋತ್ಸವ ಸಂಭ್ರಮದಲ್ಲಿರುವ ಆಲಂಕಾರು ಸರಕಾರಿ ಶಾಲೆಯ ಅಭಿವೃದ್ಧಿ ಕಾರ್ಯಗಳಿಗೆ ಶೀಘ್ರವೇ ಅನುದಾನ ಬಿಡುಗಡೆ ಮಾಡುವಂತೆ ಸಾರ್ವಜನಿಕರ ಪರವಾಗಿ ಪೂವಪ್ಪ ನಾಯ್ಕ ಎಸ್‌. ಸಂಸದರಲ್ಲಿ ಬೇಡಿಕೆಯನ್ನು ಸಲ್ಲಿಸಿದರು.

ಆಲಂಕಾರಿನಲ್ಲಿ ನಿರ್ಮಿಸಲು ಉದ್ದೇಶಿಸಿ ರುವ 110 ಕೆವಿ ಸಬ್‌ಸ್ಟೇಶನ್‌ನ ಬಗ್ಗೆ ಶೀಘ್ರವೇ ಮೆಸ್ಕಾಂ ಅಧಿಕಾರಿಗಳೊಂದಿಗೆ ಚರ್ಚಿಸುತ್ತೇನೆ. ಶರವೂರು ದೇವಸ್ಥಾನ ಹಾಗೂ ಶಾಲೆಗೆ ಅನುದಾನ ಬಿಡುಗಡೆ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಸ್ವಲ್ಪ ಹೆಚ್ಚು ಅನುದಾನ ನೀಡುತ್ತೇನೆ ಎಂದರು.

Advertisement

ಮರಳು ಸಮಸ್ಯೆ ಶೀಘ್ರ ಪರಿಹಾರ
ಜಿಲ್ಲೆಯಲ್ಲಿ ಮರಳಿನ ಸಮಸ್ಯೆ ಸಾಕಷ್ಟು ಕಾಡುತ್ತಿದೆ. ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳ ಬೇಕು ಎಂದು ಶೇಷಪತಿ ರೈ ಗುತ್ತುಪಾಲು ಆಗ್ರಹಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಂಸದ ನಳಿನ್‌, ಜಿಲ್ಲೆಯಲ್ಲಿ ತಲೆದೋರಿರುವ ಮರಳಿನ ಸಮಸ್ಯೆಯನ್ನು ಆದಷ್ಟು ಬೇಗ ನಿವಾರಿಸಲು ಕಟಿಬದ್ಧನಾಗಿದ್ದು, ಜಿಲ್ಲೆಯ ನೂತನ ಉಸ್ತುವಾರಿ ಸಚಿವರ ಮೂಲಕ ಕ್ರಮ ಕೈಗೊಂಡು ಎಲ್ಲರಿಗೂ ಕೈಗೆಟಕುವ ದರದಲ್ಲಿ ಮರಳು ಸಿಗುವಂತೆ ಮಾಡುತ್ತೇನೆ ಎಂದು ಭರವಸೆಯಿತ್ತರು.

Advertisement

Udayavani is now on Telegram. Click here to join our channel and stay updated with the latest news.

Next