ಬೆಂಗಳೂರು: ಕುಕ್ಕುಟೋದ್ಯಮ ಕ್ಷೇತ್ರ ಬಹಳ ವಿಸ್ತಾರವಾಗಿ ಬೆಳೆದಿದ್ದು, ಒಟ್ಟು ದೇಶೀಯ ಉತ್ಪನ್ನದಲ್ಲಿ (ಜಿಡಿಪಿ) ಶೇ.1ರಷ್ಟು ಕೊಡುಗೆ ನೀಡುತ್ತಿದೆ. ಸರ್ಕಾರ ಸೂಕ್ತ ಸಹಕಾರ ನೀಡಿದಲ್ಲಿ ಇದರ ಪ್ರಮಾಣ ಮತ್ತಷ್ಟು ಹೆಚ್ಚಲಿದೆ ಎಂದು ಅಂತಾರಾಷ್ಟ್ರೀಯ ಮೊಟ್ಟೆ ಆಯೋಗದ ಉಪಾಧ್ಯಕ್ಷ ಸುರೇಶ್ ಚಿತ್ತೂರಿ ಹೇಳಿದ್ದಾರೆ.
ನಗರದಲ್ಲಿ ನಡೆದ ಕುಕ್ಕುಟೋದ್ಯಮ ಕ್ಷೇತ್ರದ ಪಶುವೈದ್ಯರ ಸಂಸ್ಥೆ (ಐವಿಪಿಐ)ಯ “ಇಂಡಿಯನ್ ಪೌಲ್ಟ್ರಿ 2.0 – ಲರ್ನ್, ಅನ್‌ಲರ್ನ್ ಮತ್ತು ರೀಲರ್ನ್’ ವಾರ್ಷಿಕ ವೈಜ್ಞಾನಿಕ ಕಾರ್ಯಕ್ರಮದಲ್ಲಿ ಮಾತನಾಡಿದರು. ಮೊಟ್ಟೆ ಉತ್ತಮ ಸಸ್ಯಾಹಾರ ಎಂಬುದು ಬಹಳಷ್ಟು ಮಂದಿಗೆ ತಿಳಿದಿಲ್ಲ. ವಾರದಲ್ಲಿ 3 ಮೊಟ್ಟೆ ಸೇವಿದರೆ ಉತ್ತಮ ಪೌಷ್ಟಿಕಾಂಶ ಲಭಿಸುತ್ತದೆ ಎಂಬುದು ಸಂಶೋಧನೆಗಳಿಂದ ಸಾಬೀತಾಗಿದೆ.
ದೇಶದಲ್ಲಿ ವಾರ್ಷಿಕ ಸರಾಸರಿ 75 ಮೊಟ್ಟೆ ಮತ್ತು 4 ಕೆ.ಜಿ ಕೋಳಿ ಮಾಂಸ ತಲಾ ಬಳಕೆ ಮಾಡಲಾಗುತ್ತಿದೆ. 2030 ವೇಳೆಗೆ ಇದು 125 ಮತ್ತು 7.8 ಕೆಜಿಗೆ ಏರಿಕೆಯಾಗುವ ಸಾಧ್ಯತೆ ಇದೆ. ವಿಶ್ವದಲ್ಲಿ ಮೊಟ್ಟೆ ಉತ್ಪಾದನೆಯಲ್ಲಿ ಭಾರತ 2ನೇ ಸ್ಥಾನದಲ್ಲಿದೆ ಮತ್ತು ಮಾಂಸ ಉತ್ಪಾದನೆಯಲ್ಲಿ 4ನೇ ಸ್ಥಾನ ಪಡೆದಿದೆ. ಜನತೆಯಲ್ಲಿ ಪೌಷ್ಟಿಕಾಂಶದ ಅರಿವು ಮೂಡಿಸಿದಲ್ಲಿ ವಹಿವಾಟು ಮತ್ತಷ್ಟು ಹೆಚ್ಚಳವಾಗಲಿದೆ ಎಂದರು.
ತಮಿಳುನಾಡು ಕುಕ್ಕುಟೋದ್ಯಮ ರೈತರ ಸಂಘದ ಅಧ್ಯಕ್ಷ ಮತ್ತು ಸಂಸದ ಎ.ಕೆ.ಪಿ.ಚಿನ್‌ರಾಜ್ ಮಾತನಾಡಿ, ದೇಶಾದ್ಯಂತ 42 ಮೆಗಾ ಫುಡ್ ಪಾರ್ಕ್‌ಗಳನ್ನು ತೆರೆಯಲು ಚಿಂತಿಸಲಾಗಿದ್ದು, ಈ ಬಗ್ಗೆ ಪ್ರಧಾನ ಮಂತ್ರಿ ಮತ್ತು ಕೃಷಿ ಸಚಿವರೊಂದಿಗೆ ಚರ್ಚಿಸಲಾಗಿದೆ. ಈಗಾಗಲೇ 36 ಪಾರ್ಕ್‌ಗಳಿಗೆ ಅನುಮತಿ ದೊರೆತಿದೆ. ಪ್ರತಿ ಪಾರ್ಕ್‌ಗೆ 350 ಕೋಟಿ ರೂ. ವೆಚ್ಚವಾಗಲಿದ್ದು, ವಾರ್ಷಿಕ ವಹಿವಾಟು 450 ಕೋಟಿ ತಲುಪುವ ಸಾಧ್ಯತೆ ಇದೆ.
ಇದರಿಂದ 30 ಸಾವಿರಕ್ಕೂ ಅಧಿಕ ಉದ್ಯೋಗಾವಕಾಶ ಸೃಷ್ಟಿಯಾಗಲಿವೆ. ಉದ್ಯಮಿಗಳು ಹೊಸ ತಂತ್ರಜ್ಞಾನ ಮತ್ತು ಗುಣಮಟ್ಟಕ್ಕೆ ಆದ್ಯತೆ ನೀಡಿ ಮೊಟ್ಟೆ, ಮಾಂಸ ಒದಗಿಸಿದ್ದಲ್ಲಿ ಹೆಚ್ಚಿನ ಗ್ರಾಹಕರನ್ನು ಸೆಳೆಯಬಹುದು ಎಂದರು. ಲಿಸಿಯಸ್ ಕಂಪನಿಯ ಸಿಇಒ ಅಭಯ್ ಹಂಜೂರಾ, ಮಾತನಾಡಿದರು. ಇದೇ ವೇಳೆ ಪಶುವೈದ್ಯ ಡಾ.ಜಿ.ಬಿ.ಪುಟ್ಟಣ್ಣಯ್ಯ ಹಾಗೂ ಎ.ಕೆ.ಪಿ.ಚಿನ್ನರಾಜ್ ಅವರನ್ನು ಸನ್ಮಾನಿಸಲಾಯಿತು.