Advertisement

Tax: 5 ವರ್ಷದಲ್ಲಿ ಕೇಂದ್ರದಿಂದ 1.88 ಲಕ್ಷ ಕೋಟಿ ರೂ. ಕಡಿತ: ಸಿಎಂ

10:53 PM Feb 07, 2024 | Team Udayavani |

ಬೆಂಗಳೂರು: ಕೇಂದ್ರ ಸರಕಾರದ ಮಲತಾಯಿ ಧೋರಣೆಯಿಂದಾಗಿ 2017- 18ರಿಂದ ಕರ್ನಾಟಕಕ್ಕೆ 1,87,867 ಕೋಟಿ ರೂ.ಗಳ ನಷ್ಟವಾಗಿದ್ದು ಇದ ರಿಂದ ರಾಜ್ಯದ ಸರ್ವತೋಮುಖ ಅಭಿವೃದ್ಧಿಯ ಅವಕಾಶವನ್ನು ತಪ್ಪಿಸಿ ದಂತಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದರು.

Advertisement

ಕರ್ನಾಟಕ ಮತ್ತು ಕನ್ನಡಿಗರ ಮೇಲೆ ಕೇಂದ್ರ ಸರಕಾರ ಎಸಗಿರುವ ಆರ್ಥಿಕ ದೌರ್ಜನ್ಯದ ವಿರುದ್ಧ ಹೊಸದಿಲ್ಲಿಯ ಜಂತರ್‌ ಮಂತರ್‌ನಲ್ಲಿ ಬುಧವಾರ ಹಮ್ಮಿಕೊಳ್ಳಲಾಗಿದ್ದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.

ರಾಜ್ಯಕ್ಕೆ ಬರಬೇಕಾದ ತೆರಿಗೆ ಪಾಲಿನ ಹಂಚಿಕೆಯಲ್ಲಿ ಇಳಿಕೆ, ಮೂಲಸೌಕರ್ಯ ಬದ್ಧತೆಗಳ ಈಡೇರಿಕೆಯಲ್ಲಿ ಮತ್ತು ಕೇಂದ್ರ ಸರಕಾರದಿಂದ ವಿಪತ್ತು ನಿರ್ವಹಣೆಗೆ ಅನುದಾನ ಬಿಡುಗಡೆಯಲ್ಲಿನ ವಿಳಂಬದ ಕುರಿತು ಸವಿಸ್ತಾರ ವಾಗಿ ಮಾತನಾಡಿದ ಮುಖ್ಯ ಮಂತ್ರಿಗಳು, ಇದು ಕನ್ನಡಿಗರ ಅಸ್ಮಿತೆಯ ಮೇಲಾ ಗುತ್ತಿರುವ ವ್ಯವಸ್ಥಿತ ದಾಳಿ ಎಂದು ವ್ಯಾಖ್ಯಾನಿಸಿದರು.

ಕೇಂದ್ರದ ನಿರ್ಲಕ್ಷ್ಯ ದಿಂದ ಕನ್ನಡಿಗರಿಗೆ ತೊಂದರೆ ಯುಂಟಾಗುತ್ತಿರುವುದು ಗಾಬರಿ ಹುಟ್ಟಿಸುವಂತಿದೆ. ಕನ್ನಡಿಗರ ಹಿತಾಸಕ್ತಿಯನ್ನು ಕೇಂದ್ರ ಬಿಜೆಪಿ ನಾಯಕರು ದುರ್ಬಲಗೊಳಿಸುತ್ತಿದ್ದಾರೆ. ಸಂವಿಧಾನದೆಡೆಗೆ ಹಾಗೂ ಮತ್ತು ಸಹಕಾರಿ ಒಕ್ಕೂಟದೆಡೆಗೆ ಅವರ ಬದ್ಧತೆ ಇಲ್ಲವಾಗಿದೆ ಎಂದರು. ಕೇಂದ್ರ ತೆರಿಗೆಯಲ್ಲಿ ಕರ್ನಾಟಕ ರಾಜ್ಯದ ಪಾಲಿನಲ್ಲಿ ಅನ್ಯಾಯವಾಗುತ್ತಿರುವ ಬಗ್ಗೆ ಸುದೀರ್ಘ‌ವಾಗಿ ವಿವರಿಸಿದ ಮುಖ್ಯಮಂತ್ರಿಗಳು, 14ನೇ ಹಣಕಾಸು ಆಯೋಗದಿಂದ ಶೇ. 4.71ರಿಂದ 15ನೇ ಹಣಕಾಸು ಆಯೋಗದಲ್ಲಿ ಶೇ. 3.64 ಇಳಿಕೆಯಾಗಿರುವುದು ಕಳೆದ 5 ವರ್ಷಗಳಲ್ಲಿ ಅಂದಾಜು 62,098 ಕೋಟಿಗಳಷ್ಟು ನಷ್ಟವಾಗಲು ಕಾರಣವಾಗಿದೆ ಎಂದರು.

ಹಾಲು ಕೊಡುವ ಕೆಚ್ಚಲು ಕತ್ತರಿಸುತ್ತೀರಾ?
ದೇಶಕ್ಕೆ ಎರಡನೇ ಅತಿಹೆಚ್ಚು ತೆರಿಗೆ ನೀಡುತ್ತಿರುವವರು ನಾವು. ಉತ್ತರ ಭಾರತದ ರಾಜ್ಯಗಳಿಗೆ ಹೆಚ್ಚಿನ ಅನುದಾನ ನೀಡುವ ಬಗ್ಗೆ ನಮ್ಮ ತಕರಾರಿಲ್ಲ. ಆದರೆ, ನಮಗೇ ಅನ್ಯಾಯ ಮಾಡುವುದು ಎಷ್ಟು ಸರಿ? ಹಾಲು ಕೊಡುವ ಕೆಚ್ಚಲು ಕತ್ತರಿಸುತ್ತೀರಾ? ಚಿನ್ನದ ಮೊಟ್ಟೆ ಇಡುವ ಕೋಳಿಯ ಕತ್ತು ಕೊಯ್ಯುತ್ತೀರಾ? ಬರ ಪರಿಹಾರ ಕೊಡಲಿಲ್ಲ, ನೀರಾವರಿ ಯೋಜನೆಗಳಿಗೆ ಮೀಸಲಿಟ್ಟ ಹಣ ಬಿಡುಗಡೆ ಮಾಡಲಿಲ್ಲ. ವಿವಿಧ ಯೋಜನೆಗಳಿಗೆ ಅನುಮತಿ ನೀಡಲಿಲ್ಲ. ಇದು ದ್ರೋಹ ಅಲ್ಲವೇ? ಎಂದು ಸಿದ್ದರಾಮಯ್ಯ ಗುಡುಗಿದರು.

Advertisement

ಕೋಲೆ ಬಸವನಂತಾದ ರಾಜ್ಯದ ಬಿಜೆಪಿ ಸಂಸದರು
ರಾಜ್ಯದಿಂದ ಆಯ್ಕೆಯಾಗಿರುವ ಬಿಜೆಪಿ ಸಂಸದರು ಕೋಲೆ ಬಸವನ ತರಹ ಪ್ರಧಾನಿ ಮೋದಿ ಎದುರು ತಲೆ ಅಲ್ಲಾಡಿಸುವುದು ಬಿಟ್ಟರೆ, ರಾಜ್ಯದ ಪಾಲನ್ನು ಬಾಯಿಬಿಟ್ಟು ಕೇಳಲೇ ಇಲ್ಲ. ನಾನು ವಿಧಾನಸಭಾ ಅಧಿವೇಶನದಲ್ಲಿ ಮೇಲಿಂದ ಮೇಲೆ ಒತ್ತಾಯಿಸಿದೆ. ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್‌. ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ ಅವರಿಗೆ ಒತ್ತಾಯಿಸಿ ಕೇಂದ್ರದ ಮುಂದೆ ರಾಜ್ಯದ ಹಕ್ಕು ಮಂಡಿಸಿ ಎಂದು ಆಗ್ರಹಿಸಿದರೂ, ಇದಕ್ಕೆ ಅವರ್ಯಾರೂ ಸ್ಪಂದಿಸಲಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಅನ್ಯಾಯಕ್ಕೊಳಗಾದವರೆಲ್ಲ ದನಿ ಎತ್ತಬೇಕು: ಡಿಕೆಶಿ
ಸುದ್ದಿಗಾರರೊಂದಿಗೆ ಮಾತನಾಡಿದ ಡಿಸಿಎಂ ಡಿ.ಕೆ.ಶಿವಕುಮಾರ್‌, ಬಿಜೆಪಿಯವರು ನಮ್ಮ ಹೋರಾಟದ ಬಗ್ಗೆ ಏನಾದರೂ ಹೇಳಲಿ. ನಮ್ಮಲ್ಲಿ ಯಾರೂ ಸಿನಿಮಾ ನಿರ್ದೇಶಕರು, ನಿರ್ಮಾಪಕರು ಇಲ್ಲ; ಅವರ ಪಕ್ಷ (ಬಿಜೆಪಿಯಲ್ಲಿ)ದಲ್ಲೇ ನಿರ್ದೇಶಕರು, ನಿರ್ಮಾಪಕರು ಇದ್ದಾರೆ. ನಾವು ನೋಡುತ್ತಿದ್ದೇವೆ. ಅವರು ಭಾವನೆ ಮೇಲೆ ದೇಶ ತೆಗೆದುಕೊಂಡು ಹೋದರೆ, ನಾವು ಜನರ ಬದುಕಿನ ಬಗ್ಗೆ ಗಮನ ಹರಿಸುತ್ತಿದ್ದೇವೆ ಎಂದರು. ಕೇರಳ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುತ್ತೀರಾ ಎಂದು ಕೇಳಿದಾಗ, ಕೇರಳ ಸರಕಾರ ನಮ್ಮ ಮುಖ್ಯಮಂತ್ರಿಗೆ ಈ ವಿಚಾರವಾಗಿ ಪತ್ರ ಬರೆದಿದ್ದಾರೆ. ಆದರೆ, ರಾಜ್ಯದಲ್ಲಿ ಅಧಿವೇಶನ ಆರಂಭವಾಗಲಿದೆ. ಅವರು ನಮ್ಮ ನೆರೆ ರಾಜ್ಯ. ಅವರನ್ನು ನಾವು ಗೌರವಿಸುತ್ತೇವೆ. ದೇಶದಲ್ಲಿ ಎಲ್ಲರೂ ಒಂದೇ, ಯಾರಿಗೆಲ್ಲಾ ಅನ್ಯಾಯವಾಗಿದೆ ಅವರು ದನಿ ಎತ್ತಲಿ ಎಂದರು. ಪ್ರಧಾನಿ ಹಾಗೂ ಕೇಂದ್ರ ಸಚಿವರಿಗೆ ಮನವಿ ಮಾಡುತ್ತೀರಾ ಎಂದಾಗ, ಖಂಡಿತ. ನಮ್ಮ ಇಲಾಖೆ ವಿಚಾರವಾಗಿ ಮಾತನಾಡಲು ನಾವು ಪ್ರಧಾನಮಂತ್ರಿ ಬಳಿ ಸಮಯ ಕೇಳಿದ್ದೇವೆ ಎಂದರು.

ಅನ್ಯಾಯ ಸರಿಪಡಿಸದ ಕೇಂದ್ರ ಸರಕಾರ ಯಾಕಿರಬೇಕು

ರಾಜ್ಯಕ್ಕೆ ಆಗುತ್ತಿರುವ ಅನ್ಯಾಯ ಸರಿಪಡಿಸುವುದು ಕೇಂದ್ರದ ಕರ್ತವ್ಯ. ಈ ಅಧಿಕಾರ ಕೇಂದ್ರ ಸರಕಾರಕ್ಕೆ ಇಲ್ಲವೆಂದಾದರೆ, ಆ ಸರಕಾರವಾದರೂ ಯಾಕಿರಬೇಕು ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ವಾಗ್ಧಾಳಿ ನಡೆಸಿದರು. ರಾಜ್ಯಕ್ಕೆ ಅನುದಾನ ನೀಡುವ ಅಧಿಕಾರ ಹಣಕಾಸು ಆಯೋಗದ ಮುಂದೆ ಇದೆ. ಕೇಂದ್ರ ಸರಕಾರದ ಕೈಯಲ್ಲಿಲ್ಲ ಅಂತ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತರಾಮನ್‌ ಸಮಜಾಯಿಷಿ ನೀಡುತ್ತಿದ್ದಾರೆ. ನಿಮ್ಮ ಬಳಿ ಅಧಿಕಾರವೇ ಇಲ್ಲವಾದರೆ ಸರಕಾರ ಯಾಕಿರಬೇಕು? ರಾಜ್ಯಕ್ಕೆ ಅನ್ಯಾಯವಾಗಿರುವುದನ್ನು ಸರಿಪಡಿಸುವುದು ಕೇಂದ್ರ ಸರ್ಕಾರದ ಕೆಲಸವಲ್ಲವೇ ಎಂದು ಖಾರವಾಗಿ ಕೇಳಿದರು.

 

Advertisement

Udayavani is now on Telegram. Click here to join our channel and stay updated with the latest news.

Next