Advertisement
ಕೃಷಿ ಮತ್ತು ಕಂದಾಯ ಇಲಾಖೆ ಜಂಟಿ ಸಮೀಕ್ಷೆ ಪ್ರಕಾರ ಆಗಸ್ಟ್, ಸೆಪ್ಟೆಂಬರ್ ತಿಂಗಳಲ್ಲಿ ಸುರಿದ ಭಾರಿ ಮಳೆ, ‘ಮಹಾ’ ನೀರಿನ ಕಂಟಕದಿಂದ 1.83 ಲಕ್ಷ ಹೆಕ್ಟೇರ್ ಬೆಳೆ ನೀರು ಪಾಲಾಗಿದ್ದು, ನೆರವಿಗಾಗಿ ಜಿಲ್ಲಾಡಳಿತ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ.
Related Articles
Advertisement
ಇದನ್ನೂ ಓದಿ: ಬೆಂಗಳೂರಿಗೆ ಆಗಮಿಸಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಬೀದರ ಜಿಲ್ಲೆಯಲ್ಲಿ ಕಳೆದ ಜನವರಿ 1ರಿಂದ ಅಕ್ಟೋಬರ್ 20ರವರೆಗೆ 882 ಮಿ.ಮೀ. (795 ಮಿ.ಮೀ.) ಮಳೆ ಆಗಿದೆ. ಮುಂಗಾರು ಹಂಗಾಮಿನಲ್ಲಿ 3.71 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿದ್ದು, ಅದರಲ್ಲಿ 1,83,660 ಹೆಕ್ಟೇರ್ ಪ್ರದೇಶದಲ್ಲಿನ ಬೆಳೆ ಹಾನಿಯಾಗಿದೆ. ಕೃಷಿ ಮತ್ತು ಕಂದಾಯ ಇಲಾಖೆಯ ಜಂಟಿ ಸಮೀಕ್ಷೆ ಆಗಿದ್ದು, ಅ.18ರಂದು ಜಿಲ್ಲಾಧಿಕಾರಿ ರಾಮಚಂದ್ರನ್ ಆರ್. ಅವರು ಕಂದಾಯ ಇಲಾಖೆಯ (ವಿಪತ್ತು ನಿರ್ವಹಣೆ) ಪ್ರಧಾನ ಕಾರ್ಯದರ್ಶಿಗಳಿಗೆ ನಷ್ಟದ ಬಗ್ಗೆ ನೆರವು ಕೋರಿ ಪ್ರಸ್ತಾವನೆ ಸಲ್ಲಿಸಿದ್ದಾರೆ.
ಹಾನಿಯಾದ ಬೆಳೆಗಳ ಪೈಕಿ ಸೊಯಾಬಿನ್ ಅತಿ ಹೆಚ್ಚು 1,01,981 ಹೆಕ್ಟೇರ್ ಪ್ರದೇಶ ಸೇರಿದೆ. ಇನ್ನುಳಿದಂತೆ 60,502 ಹೆಕ್ಟೇರ್ ತೊಗರಿ, 9882 ಹೆಕ್ಟೇರ್ ಹೆಸರು, 8551 ಹೆಕ್ಟೇರ್ ಉದ್ದು, 2054 ಹೆಕ್ಟೇರ್ ಕಬ್ಬು ಮತ್ತು 688 ಹೆಕ್ಟೇರ್ ಇತರೆ ಬೆಳೆಗಳು ಹಾನಿಯಾಗಿದೆ ಎಂದು ಸರ್ಕಾರಕ್ಕೆ ಸಲ್ಲಿಸಿರುವ ವರದಿಯಲ್ಲಿ ತಿಳಿಸಲಾಗಿದೆ.
“ನೆರೆ ಪೀಡಿತ ಜಿಲ್ಲೆ ಘೋಷಿಸಿ”
ಕಳೆದ ಮುಂಗಾರು ಹಂಗಾಮಿನಲ್ಲೂ ಜಿಲ್ಲೆಯಲ್ಲಿ ರೈತರ ಬದುಕು ದುಸ್ತರಗೊಂಡಿತ್ತು. ಪ್ರಸಕ್ತ ವರ್ಷದ ಮುಂಗಾರಿನಲ್ಲಿ ಮಾರಣಾಂತಿಕ ಕೋವಿಡ್ ಸಂಕಷ್ಟದ ನಡುವೆಯೂ ಬಿತ್ತನೆ ಮಾಡಿ ಬದುಕು ಕಟ್ಟಿಕೊಳ್ಳುತ್ತಿದ್ದ ಅನ್ನದಾತರಿಗೆ ಮಳೆ ಅಬ್ಬರ ಮತ್ತೆ ಸಂತ್ರಸ್ತರನ್ನಾಗಿಸಿದೆ. ಬೆಳೆಹಾನಿ ಸಮೀಕ್ಷೆ ವರದಿ ಸಲ್ಲಿಸಿ ಎರಡು ದಿನ ಕಳೆದಿದ್ದು, ಯಾವಾಗ ಪರಿಹಾರ ಸಿಗುತ್ತದೇ ಕಾದು ನೋಡಬೇಕಿದೆ. ಇನ್ನೂ ಬೀದರನ್ನು ನೆರೆ ಪೀಡಿತ ಜಿಲ್ಲೆಯನ್ನಾಗಿ ಘೋಷಿಸಬೇಕೆಂಬುದು ಕೃಷಿಕರ ಒತ್ತಾಯ ಇದ್ದು, ಸ್ಥಳೀಯ ಚುನಾಯಿತ ಪ್ರತಿನಿಧಿಗಳು ಈ ನಿಟ್ಟಿನಲ್ಲಿ ಸರ್ಕಾರದ ಮೇಲೆ ಒತ್ತಡ ಹಾಕಬೇಕಿದೆ.
-ಶಿಕಾಂತ ಬಂಬುಳಗೆ