Advertisement

1.50 ಲಕ್ಷ ಹೆಕ್ಟೇರ್‌ನಲ್ಲಿ ಸಾವಯವ ಕೃಷಿ ಆರಂಭಿಸುವ ಗುರಿ

11:14 AM Mar 02, 2020 | Suhan S |

ಹುಬ್ಬಳ್ಳಿ: ರಾಜ್ಯ ಸರಕಾರ ಸಾವಯವ ಕೃಷಿಗೆ ಆದ್ಯತೆ ನೀಡುತ್ತಿದ್ದು, 1.50 ಲಕ್ಷ ಹೆಕ್ಟೇರ್‌ ಭೂಮಿಯಲ್ಲಿ ಸಾವಯವ ಕೃಷಿ ಆರಂಭಿಸುವ ಗುರಿ ಹೊಂದಿದೆ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ ಹೇಳಿದರು.

Advertisement

ನಗರದಲ್ಲಿ ರವಿವಾರ ಆಯೋಜಿಸಿದ್ದ “ರೈತರೊಂದಿಗಿನ ಸಂವಾದ’ ದಲ್ಲಿ ಅವರು ಮಾತನಾಡಿದರು. ಸದ್ಯ ರಾಜ್ಯದಲ್ಲಿ 1.10 ಲಕ್ಷ ಹೆಕ್ಟೇರ್‌ ಭೂಮಿಯಲ್ಲಿ ರೈತರು ಸಾವಯವ ಬೇಸಾಯ ಮಾಡುತ್ತಿದ್ದಾರೆ. ಸಾವಯವದತ್ತ ರೈತರ ಆಸಕ್ತಿ ಹೆಚ್ಚಾಗುತ್ತಿದೆ. ರೈತರ ಎಲ್ಲ ಸಮಸ್ಯೆಗಳಿಗೆ ಸ್ಪಂದಿಸಲು ಸರಕಾರ ಬದ್ಧವಾಗಿದೆ. ಸಾವಯವ ಬೇಸಾಯ ದನಕರುಗಳು ಇಲ್ಲದೇ ಸಾಧ್ಯವಿಲ್ಲ. ಆದ್ದರಿಂದ ದನಕರುಗಳ ಸಂಖ್ಯೆ ಕೂಡ ಹೆಚ್ಚಾಗುವುದು ಅವಶ್ಯವಾಗಿದೆ ಎಂದರು.

ಶೇ.48ರಷ್ಟು ರೈತರ ಮಕ್ಕಳು ಕೃಷಿಯಿಂದ ವಿಮುಖರಾಗುತ್ತಿದ್ದಾರೆ. ಕೃಷಿಯಲ್ಲಿ ಲಾಭವಿಲ್ಲ ಎಂದುಕೊಂಡು ಪಟ್ಟಣ ಸೇರುತ್ತಿದ್ದಾರೆ. ಆದರೆ ಕೃಷಿಯಲ್ಲಿ ಲಾಭವಿದೆ ಎಂಬುದನ್ನು ಹಲವು ಕೃಷಿ ಆಸಕ್ತ ಯುವಕರು ಸಾಬೀತುಪಡಿಸಿದ್ದಾರೆ. ಬಹುಬೆಳೆ ಕೃಷಿ, ವಾಣಿಜ್ಯ ಕೃಷಿ ಅವಲಂಬಿಸಬೇಕು ಎಂದರು.

ಕರ್ನಾಟಕ ಎಣ್ಣೆ ಬೀಜ ನಿಗಮ (ಕೆಒಎಫ್‌) ತನ್ನ ಉತ್ಪನ್ನಗಳನ್ನು ಮಾರುಕಟ್ಟೆ ಮಾಡುವಲ್ಲಿ ಯಶಸ್ವಿಯಾಗಿದೆ. ಆದರೆ ರೈತರ ಉತ್ಪನ್ನಗಳನ್ನು ಮಾರುಕಟ್ಟೆ ಮಾಡುವಲ್ಲಿ ಕೆಪೆಕ್‌ ವಿಫಲವಾಗಿದೆ. ರೈತರ ಉತ್ಪನ್ನಗಳ ಮೌಲ್ಯವರ್ಧನೆ ಮಾಡಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು. ರೈತರ ಬೇಡಿಕೆಯಂತೆ ಕೃಷಿ ಹೊಂಡಗಳ ಸಂಖ್ಯೆ ಹೆಚ್ಚಿಸಲಾಗುವುದು. ಕೆರೆಗಳನ್ನು ತುಂಬಿಸಲು ಕ್ರಮ ಕೈಗೊಳ್ಳಲಾಗುವುದು. ಕೋಲ್ಡ್‌ ಸ್ಟೋರೇಜ್‌ಗಳ ನಿರ್ಮಾಣಕ್ಕೆ ಆದ್ಯತೆ ನೀಡಲಾಗುವುದು ಎಂದರು.

ಶಾಸಕ ಶಂಕರಪಾಟೀಲ ಮುನೇನಕೊಪ್ಪ, ಜಿಲ್ಲಾಧಿಕಾರಿ ದೀಪಾ ಚೋಳನ್‌ ಇದ್ದರು. ರಘುನಾಥರೆಡ್ಡಿ ನಡುವಿನಮನಿ, ಎ.ಪಿ.ಗುರಿಕಾರ, ನಿಂಗಯ್ಯ ಹಿರೇಮಠ, ನಿಜಗುಣಿ ಕೆಲಗೇರಿ, ಈಶ್ವರಪ್ಪ ಮಾಳಣ್ಣವರ, ಬಿ.ಎಂ.ಹನಸಿ, ಸಿ.ಎಫ್‌ .ಪಾಟೀಲ, ಈಶ್ವರ ಅರಳಿ, ವಿ.ಎಸ್‌.ಪಾಟೀಲ, ವಿಜಯ ನಾಡಜೋಶಿ, ಸುಭಾಸಗೌಡ ಪಾಟೀಲ, ಎಸ್‌.ವಿ.ಗಾಯತೊಂಡೆ ಪಾಲ್ಗೊಂಡಿದ್ದರು.

Advertisement

ಅಧಿಕಾರಿಗಳು ಬಂದಿಲ್ಲವೆಂದರೆ ಏನರ್ಥ? : ನಾನಿಲ್ಲಿ ಚುನಾವಣೆ ಪ್ರಚಾರಕ್ಕೆ ಅಥವಾ ಮತಯಾಚನೆಗೆ ಬಂದಿಲ್ಲ. ರೈತರೊಂದಿಗೆ ಸಂವಾದ ನಡೆಸಲು ಬಂದಿದ್ದೇನೆ. ಸಭೆಗೆ ಅಧಿಕಾರಿಗಳು ಬಂದಿಲ್ಲ ಎಂದರೆ ಏನರ್ಥ. ನಾನು ಇಂಥ ವರ್ತನೆ ಸಹಿಸಲ್ಲ. ರೈತರ ಸಮಸ್ಯೆಗಳನ್ನು ಅರಿತು ಅವರಿಗೆ ಸ್ಪಂದಿಸಲು ಕೃಷಿ ಸಂಬಂಧಿತ ಎಲ್ಲ ಇಲಾಖೆಗಳ ಅಧಿಕಾರಿಗಳು ಬರಬೇಕಿತ್ತು ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ ಆಕ್ರೋಶ ವ್ಯಕ್ತಪಡಿಸಿದರು.

ಸಿಬಿಲ್‌ ಸ್ಕೋರ್‌ ಮೂರ್ಖತನ : ಉದ್ಯೋಗಿಗಳು, ಉದ್ಯಮಿಗಳು ವಾಹನ, ಮನೆ ಸೇರಿದಂತೆ ಚರಾಸ್ಥಿ ಹಾಗೂ ಸ್ಥಿರಾಸ್ಥಿ ಖರೀದಿಸುವಾಗ ಬ್ಯಾಂಕ್‌ನವರು ಸಿಬಿಲ್‌ ಸ್ಕೋರ್‌ ನೋಡಬೇಕು. ರೈತರು ಬರ ಹಾಗೂ ಅತಿವೃಷ್ಟಿಯಿಂದ ತೊಂದರೆಯಲ್ಲಿದ್ದಾರೆ. ಬ್ಯಾಂಕ್‌ಗಳು ಅವರ ಸಿಬಿಲ್‌ ಸ್ಕೋರ್‌ ನೋಡುವುದು. ಸರಿಯಲ್ಲ. ಕಟಬಾಕಿದಾರರಲ್ಲ ಎಂಬ ಬಗ್ಗೆ ಪ್ರಮಾಣಪತ್ರ ಪಡೆಯಬೇಕು. ಅವರಿಗೆ ಸಾಲ ನೀಡಲು ಕಿರಿಕಿರಿ ಮಾಡಬಾರದು. ಈ ದಿಸೆಯಲ್ಲಿ ಬೆಂಗಳೂರಿನಲ್ಲಿ ಬ್ಯಾಂಕ್‌ ಹಿರಿಯ ಅಧಿಕಾರಿಗಳ ಸಭೆ ನಡೆಸಿ ನಿರ್ದೇಶನ ನೀಡಲಾಗುವುದು ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next