ಕಟಪಾಡಿ : ಜೋಕಾಲಿ ಫ್ರೆಂಡ್ಸ್ ಪಳ್ಳಿಗುಡ್ಡೆ ಅಷ್ಟಮಿಯಂದು ವೇಷ ಧರಿಸಿ ಸಂಗ್ರಹಿಸಿದ ಮೊತ್ತದಲ್ಲಿ ಅನಾರೋಗ್ಯ ಪೀಡಿತ ಬಡ ಅಶಕ್ತ ರಿಕ್ಷಾ ಚಾಲಕನ ಪುತ್ರ ಕಿಡ್ನಿ ವೈಫಲ್ಯದಿಂದ ಬಳಲುತ್ತಿರುವ ಜೆ.ಎನ್.ನಗರದ ಸಂಜಯ್ ಕೋಟ್ಯಾನ್ ಅವರ ವೈದ್ಯಕೀಯ ವೆಚ್ಚಕ್ಕಾಗಿ 1.5 ಲಕ್ಷ ರೂ. ಸಹಾಯಧನವನ್ನು ಕೇಮಾರು ಸಾಂದೀಪನಿ ಸಾಧನಾಶ್ರಮದ ಶ್ರೀ ಈಶ ವಿಠ್ಠಲದಾಸ ಸ್ವಾಮೀಜಿ ಅವರು ಹಸ್ತಾಂತರಿಸಿದರು.
ಬಳಿಕ ಆಶೀರ್ವಚನ ನೀಡಿ, ಸಂಕಷ್ಟಕ್ಕೆ ಸ್ಪಂದಿಸುವ ಶ್ರೇಷ್ಠ ಧರ್ಮದ ಮೂಲಕ ಮನಸ್ಸು ಕಟ್ಟುವ ಕೆಲಸ ಮಾಡಿದ ಜೋಕಾಲಿ ಫ್ರೆಂಡ್ಸ್ ಜೀವನ ಧರ್ಮ ಪಾಲಿಸಿದೆ. ಧರ್ಮ ಎಂಬುದು ಆಚಾರ, ನಡೆನುಡಿಗಳಲ್ಲಿ ಅನುಷ್ಠಾನವಾಗಬೇಕು. ನಾಟಕೀಯ ಬದುಕಿನ ನಡುವೆ ಸಾಮಾಜಿಕ ಜಾಲತಾಣಗಳ ಮೂಲಕ ದಾರಿ ತಪ್ಪುತ್ತಿರುವ ಸಮಾಜದ ಬಗ್ಗೆ ಕಟ್ಟೆಚ್ಚರ ಅವಶ್ಯ ಎಂದರು
ಉದ್ಯಮಿ ಸುರೇಶ್ ಶೆಟ್ಟಿ ಗುರ್ಮೆ ಮಾತನಾಡಿ, ಬಡವರ ಕಣ್ಣೀರೊರೆಸುವ ಕಾಯಕದ ಮೂಲಕ ಜೋಕಾಲಿ ಫ್ರೆಂಡ್ಸ್ ಸಮಾಜಮುಖಿ ಕಾರ್ಯವು ನಿರಂತರವಾಗಿರಲಿ ಎಂದರು.
ಕಟಪಾಡಿ ಜಾಮಿಯಾ ಮಸ್ಜಿದ್ ಧರ್ಮಗುರು ಯೂಸುಫ್ ಝಹಾರಿ, ಅಂಬಾಡಿ ಸಿಎಸ್ಐ ಚರ್ಚ್ ಧರ್ಮಗುರು ರೆ|ಜಾನ್ ವೆಸ್ನಿ ಕುಂದರ್ ತಮ್ಮ ಆಶೀರ್ವಚನದಲ್ಲಿ ಜಾತಿ ಧರ್ಮಗಳ ಎಲ್ಲೆಯನ್ನು ಮೀರಿ ಸಾಂತ್ವನ ಪದ್ಧತಿ ನಡೆಯುತ್ತಿದ್ದು, ಕಳೆದ ಮೂರು ವರ್ಷಗಳಿಂದ ಜೋಕಾಲಿ ಫ್ರೆಂಡ್ಸ್ ತಂಡವು ಅಗತ್ಯವುಳ್ಳ ನೊಂದವರಿಗೆ ಬೆಳಕಾಗುವ ಶ್ರೇಷ್ಠ ಕಾಯಕ ನಡೆಸಿದ್ದಾರೆ ಎಂದರು.
ಸಮಾರಂಭದಲ್ಲಿ ಕೋಟೆಗ್ರಾಮದ 6 ಆಶಾ ಕಾರ್ಯಕರ್ತರಿಗೆ ನಗದು ಸಹಿತ ಪುರಸ್ಕಾರ, ಕೋಟೆ ಗ್ರಾ.ಪಂ. ಅಧ್ಯಕ್ಷ ಕಿಶೋರ್ ಅಂಬಾಡಿ, ಪೋಸ್ಕೋ ವಿಶೇಷ ಸರಕಾರಿ ಅಭಿಯೋಜಕ ರಾಘವೇಂದ್ರ ವೈ. ಟಿ, ನೋಟರಿ, ನ್ಯಾಯವಾದಿ ಗಣೇಶ್ ಕುಮಾರ್ ಮಟ್ಟು, ಡಾ|ಯು.ಕೆ. ಶೆಟ್ಟಿ, ಸಮಾಜ ಸೇವಕ ಆಸ್ಟಿನ್ ಕೋಟ್ಯಾನ್, ವೇಷಧಾರಿ ನಿತಿನ್ ಜೆ.ಅಂಚನ್, ಪತ್ರಕರ್ತರಾದ ಬಾಲಕೃಷ್ಣ ಪೂಜಾರಿ ಉಚ್ಚಿಲ, ಪ್ರಕಾಶ್ ಸುವರ್ಣ, ವಿಜಯ ಆಚಾರ್ಯ ಉಚ್ಚಿಲ ಅವರನ್ನು ಸಮ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭ ಶ್ರೀಕ್ಷೇತ್ರ ಪೇಟೆಬೆಟ್ಟುವಿನ ತುಕಾರಾಮ ಎಸ್, ಗರಡಿ ಜವನೆರ್ ಮುಖ್ಯಸ್ಥ ಸುಧೀರ್ ರಾಜ್ ಪೂಜಾರಿ, ಮಲಬಾರ್ ಗೋಲ್ಡ್,ಡೈಮಂಡ್ಸ್ನ ಹಫೀಸ್ ರೆಹ್ಮಾನ್, ಶ್ರೀ ಕ್ಷೇತ್ರ ಪೇಟೆಬೆಟ್ಟುವಿನ ತುಕಾರಾಮ ಎಸ್. ಉರ್ವ, ಬಿಜೆಪಿ ಜಿಲ್ಲಾ ವಕ್ತಾರ ಗುರುಪ್ರಸಾದ್ ಶೆಟ್ಟಿ, ಕಟಪಾಡಿ ಗ್ರಾ.ಪಂ. ಸದಸ್ಯ ಸುಭಾಸ್ ಬಲ್ಲಾಳ್, ಜೋಕಾಲಿ ಫ್ರೆಂಡ್ಸ್ ಸಲಹೆಗಾರರಾದ ಭಾಸ್ಕರ್ ಕಾಂಚನ್, ಮಂಜುನಾಥ ಪೂಜಾರಿ ಖಂಡಿಗ, ಸತೀಶ್ ಅಂಚನ್, ಶರತ್ ಕೋಟೆ ಉಪಸ್ಥಿತರಿದ್ದರು.
ಜೋಕಾಲಿ ಫ್ರೆಂಡ್ಸ್ ತಂಡವು ಕಳೆದ ಮೂರು ವರ್ಷಗಳಿಂದ ಗುರುತಿಸಿದ ಆಯ್ದ ಅಶಕ್ತ ಬಡಕುಟುಂಬಗಳಿಗೆ ಸುಮಾರು 7 ಲಕ್ಷ ರೂ. ಸಹಾಯ ಹಸ್ತವನ್ನು ನೀಡಿರುತ್ತದೆ.