ಬೆಂಗಳೂರು: ಹಿರಿಯ ನಟ ಡಾ.ಅಂಬರೀಶ್ ಅವರ ಸ್ಮಾರಕವನ್ನು ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿ ನಿರ್ಮಿಸಲು 1.34 ಎಕರೆ ಜಾಗ ಗುರುತಿಸಲಾಗಿದ್ದು , ಕೂಡಲೇ ಕಾಮಗಾರಿ ಆರಂಭಿಸಲು 5 ಕೋಟಿ ರೂ. ಅನುದಾನ ನೀಡಲಾಗುವುದು ಎಂದು ಮುಖ್ಯ ಮಂತ್ರಿ ಬಿ.ಎಸ್. ಯಡಿಯೂರಪ್ಪ ಪ್ರಕಟಿಸಿದರು.
ವಿಧಾನಸೌಧದಲ್ಲಿ ಸೋಮವಾರ ನಡೆದ ಡಾ.ಅಂಬರೀಶ್ ಸ್ಮಾರಕ ಪ್ರತಿಷ್ಠಾನದ ಉನ್ನತ ಮಟ್ಟದ ಸಮಿತಿಯ ಪ್ರಥಮ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಅಂಬರೀಶ್ ಅವರು ಚಿತ್ರರಂಗಕ್ಕೆ ವಿಶಿಷ್ಟ ಕೊಡುಗೆ ನೀಡಿ ಎತ್ತರಕ್ಕೆ ಏರಿದ ಮೇರು ಕಲಾವಿದ. ಖ್ಯಾತ ಪಿಟೀಲು ವಾದಕ ಪಿಟೀಲು ಚೌಡಯ್ಯ ಅವರ ಮೊಮ್ಮಗನಾದ ಅಂಬರೀಶ್, ಚಿತ್ರರಂಗದಲ್ಲಿ ತಮ್ಮ ಸ್ನೇಹ, ಔದಾರ್ಯದಿಂದಾಗಿ ಎಲ್ಲರಿಗೂ ಬೇಕಾಗಿದ್ದವರು.
ಅಂಬರೀಶ್ ಸ್ಮಾರಕವನ್ನು ಕಂಠೀರವ ಸ್ಟುಡಿಯೋದ 1.34 ಎಕರೆ ಜಾಗದಲ್ಲಿ ನಿರ್ಮಿಸಲು ತೀರ್ಮಾನಿಸಲಾಗಿದೆ ಎಂದರು. ಸ್ಮಾರಕ ನಿರ್ಮಾಣ ಸಂಬಂಧ ಈಗಾಗಲೇ ಸಮಿತಿಗಳನ್ನು ರಚಿಸಲಾಗಿದ್ದು, ತಡ ಮಾಡದೆ ನಿರ್ಮಾಣ ಕೆಲಸ ಆರಂಭವಾಗಬೇಕಿದೆ. ಬಜೆಟ್ ನಲ್ಲಿ ಕಾಯ್ದಿರಿಸದಿದ್ದರೂ ಐದು ಕೋಟಿ ರೂ. ಅನುದಾನ ನೀಡಲಾಗುವುದು. ತಕ್ಷಣ ಕೆಲಸ ಆರಂಭವಾಗಬೇಕು. ಸ್ಮಾರಕ ನಿರ್ಮಾಣಕ್ಕೆ ಪೂರಕ ಯೋಜನೆ ರೂಪಿಸಿ ಅಂದಾಜು ಪಟ್ಟಿ ಸಿದ್ಧಪಡಿಸಿದರೆ ಅದಕ್ಕೆ ಅಗತ್ಯ ಹಣ ಒದಗಿಸಲಾಗುವುದು ಎಂದು ತಿಳಿಸಿದರು.
ಸ್ಮಾರಕ ನಿರ್ಮಾಣ ಕಾರ್ಯ ತ್ವರಿತವಾಗಿ ನಡೆಯಲು ಅನುಕೂಲವಾಗುವಂತೆ ಇಲಾಖೆ ಕಾರ್ಯದರ್ಶಿಗಳ ಅಧ್ಯಕ್ಷತೆಯಲ್ಲಿ ಉಪಸಮಿತಿ ರಚಿಸುವಂತೆ ಯಡಿಯೂರಪ್ಪ ಸೂಚನೆ ನೀಡಿದರು. ಸಂಸದೆ ಸುಮಲತಾ ಅಂಬರೀಶ್, ನಟ ಅಭಿಷೇಕ್, ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್, ಹಿರಿಯ ನಟ ದೊಡ್ಡಣ್ಣ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಕಾರ್ಯದರ್ಶಿ ಎಂ.ಮಹೇಶ್ವರ ರಾವ್, ಆಯುಕ್ತ ಡಾ.ಪಿ.ಎಸ್. ಹರ್ಷ ಇತರರು ಇದ್ದರು.
ಕಂಠೀರವ ಸ್ಟುಡಿಯೋ ಆವರಣದಲ್ಲಿರುವ ಅಂಬರೀಶ್ ಅವರ ಸಮಾಧಿ ಇರುವ ಜಾಗದಲ್ಲೇ ಸ್ಮಾರಕ ನಿರ್ಮಾಣಕ್ಕೆ 1.34 ಎಕರೆ ಭೂಮಿಯನ್ನು ಸರ್ಕಾರ ನೀಡಿದೆ. ಹಾಗೆಯೇ ಬಜೆಟ್‌ನಲ್ಲಿ 5 ಕೋಟಿ ರೂ. ಅನುದಾನ ನಿಗದಿಪಡಿಸಿ ಆದಷ್ಟು ಶೀಘ್ರ ಸ್ಮಾರಕ ನಿರ್ಮಾಣ ಕಾರ್ಯ ಆರಂಭಿಸುವುದಾಗಿ ಮುಖ್ಯಮಂತ್ರಿಗಳು ಭರವಸೆ ನೀಡಿದ್ದಾರೆ.
-ಸುಮಲತಾ ಅಂಬರೀಶ್, ಸಂಸದೆ