Advertisement

ಮೊದಲ ದಿನವೇ 1.30 ಲಕ್ಷ ರೂ. ವಸೂಲಿ

11:41 AM Sep 08, 2019 | Team Udayavani |

ಕಾರವಾರ: ಹೆಲ್ಮೆಟ್ ಮತ್ತು ಲೈಸೆನ್ಸ್‌ ಇಲ್ಲದ ವಾಹನ ಚಲಾವಣೆಗೆ ಹೊಸ ದರದ ದಂಡ ಕ್ರಮ ಜಾರಿಗೆ ಬರುತ್ತಿದ್ದಂತೆ ಕಾರ್ಯಪ್ರವೃತ್ತರಾದ ಟ್ರಾಫಿಕ್‌ ಪೊಲೀಸರು ಮೊದಲ ದಿನವೇ 1.30 ಲಕ್ಷ ರೂ. ದಂಡ ವಸೂಲಿ ಮಾಡಿದ್ದಾರೆ.

Advertisement

ಕಾರವಾರದ ಮಟ್ಟಿಗೆ ಇದು ನೂತನ ದಾಖಲೆಯಾಗಿದೆ. ಆರು ತಿಂಗಳಲ್ಲಿ ಹೆಲ್ಮೆಟ್ ಹಾಕದ ಸವಾರರಿಗೆ ಹಾಕಿದ ದಂಡ 60 ಸಾವಿರ ರೂ. ದಾಟುತ್ತಿರಲಿಲ್ಲ. ಕಾರವಾರ ಅತೀ ಹೆಚ್ಚು ಸೆಖೆಯ, ಉಷ್ಣಾಂಶ ಇರುವ ಊರಾದ ಕಾರಣ ಇಲ್ಲಿ ಹೆಲ್ಮೆಟ್ ಹಾಕಿ ವಾಹನ ಚಲಾಯಿಸುವುದು ಅತ್ಯಂತ ಕಷ್ಟ. ಆದರೂ ಈಚಿನ ದಿನಗಳಲ್ಲಿ ವಾರಕ್ಕೊಮ್ಮೆ ದಂಡ ವಸೂಲಿ ಮಾಡಲಾಗುತ್ತಿತ್ತು. ಆಗ ದ್ವಿಚಕ್ರವಾಹನ ಸವಾರರು ಟ್ರಾಫಿಕ್‌ ಪೊಲೀಸರ ಕಣ್ಣು ತಪ್ಪಿಸಿ ಓಡಾಡುತ್ತಿದ್ದರು. ಈಗ ಬಿಜೆಪಿಯಲ್ಲಿ ಕೇಂದ್ರ ಸಚಿವರಾಗಿದ್ದ ನಿತಿನ್‌ ಗಡ್ಕರಿ ಹೊಸ ತೆರಿಗೆ ದಂಡ ಪದ್ಧತಿಯನ್ನು ಮೋಟಾರ ವಾಹನ ಕಾಯ್ದೆ ತಿದ್ದುಪಡಿ ಮೂಲಕ ಜಾರಿ ಮಾಡಿದ್ದು, ರಾಜ್ಯ ಸರ್ಕಾರಗಳು ಸಹ ಹೊಸ ದಂಡ ಪದ್ಧತಿ ಜಾರಿ ಮಾಡಿವೆ. ಶುಕ್ರವಾರದಿಂದ ನೂತನ ದಂಡ ಪದ್ಧತಿ ಜಾರಿಗೆ ಬಂದಿದ್ದು, ಕಾರವಾರದಲ್ಲಿ ಹೆಲ್ಮೆಟ್ ಧರಿಸದೇ ಸವಾರಿ ಮಾಡಿದ 130 ಜನ ದ್ವಿಚಕ್ರ ವಾಹನ ಸವಾರರಿಗೆ ದಂಡ ಹಾಕಲಾಗಿದೆ. ಹೆಲ್ಮೆಟ್ ಹಾಕದೇ ದ್ವಿಚಕ್ರ ವಾಹನ ಸವಾರಿ ಮಾಡಿದ್ದಕ್ಕೆ ಪ್ರತಿ ಸವಾರಿನಿಗೆ ಒಂದು ಸಾವಿರ ರೂ. ದಂಡ ಹಾಕಲಾಗಿದೆ. ಹಾಗಾಗಿ ಮೊದಲ ದಿನ 1.30ಲಕ್ಷ ರೂ. ದಂಡ ಸಂಗ್ರಹವಾಗಿದೆ.

ಹೆಲ್ಮೆಟ್ ಹಾಕಿ ವಾಹನ ಓಡಿಸಿ ಎಂದು ಕರಪತ್ರ ಹಂಚಲಾಗಿದೆ. ಅನೇಕ ಸಲ ದಂಡ ಹಾಕಿ ಎಚ್ಚರಿಸಲಾಗಿದೆ. ಆದರೂ ಯುವಕರು ಹೆಲ್ಮೆಟ್ ಹಾಕುತ್ತಿಲ್ಲ ಎಂದು ಟ್ರಾಫಿಕ್‌ ಪೊಲೀಸರು ಹೇಳುತ್ತಿದ್ದಾರೆ.

ಪೊಲೀಸರು ದಂಡ ಹಾಕುತ್ತಿರುವ ಬಗ್ಗೆ ಜಾಗೃತ ನಾಗರಿಕರು ವ್ಯಾಟ್ಸ್‌ಆ್ಯಪ್‌ನಲ್ಲಿ ಇತರ ನಾಗರಿಕರಿಗೆ ಸೂಚನೆ ನೀಡಿದರು. ಹೊಸ ಕಾನೂನು ಜಾರಿ ಮಾಡಿದ್ದಕ್ಕೆ, ವಿಪರೀತ ದಂಡ ಹಾಕುತ್ತಿರುವುದಕ್ಕೆ ಸರ್ಕಾರದ ವಿರುದ್ಧ ಹಾಗೂ ಪೊಲೀಸರ ವಿರುದ್ಧ ಕೆಲವರು ಕಿಡಿ ಕಾರಿದ್ದಾರೆ.

ಹೆಲ್ಮೆಟ್ ಹಾಕಿದ್ದರೂ ದಾಖಲೆ ಪರೀಕ್ಷೆ: ಹೆಲ್ಮೆಟ್ ಹಾಕಿದ ಸವಾರರಿಗೆ ಲೈಸೆನ್ಸ್‌ ಮತ್ತು ಇನ್ಸುರೆನ್ಸ್‌ ಚೆಕ್‌ ಮಾಡಲಾಗುತ್ತಿದೆ. ಅಂಥವರಿಂದ ದಂಡ ವಸೂಲಿಯಾಗಿಲ್ಲ. ಆದರೆ ಹೆಲ್ಮೆಟ್ ಹಾಕಿದ ಸವಾರರನ್ನೇ ಒಂದೇ ದಿನ 3 ಸಾರಿ ದಾಖಲೆ ಪರಿಶೀಲಿಸಿದ ಘಟನೆ ನಡೆದಿದೆ. ಇದರಿಂದ ಹೆಲ್ಮೆಟ್ ಧರಿಸಿ, ಎಲ್ಲಾ ದಾಖಲೆ ಇಟ್ಟುಕೊಂಡ ವಾಹನ ಸವಾರರು ಕಿರಿಕಿರಿ ಅನುಭವಿಸಿದ್ದಾರೆ. ಪ್ರತಿ ಸಾರಿ ದಾಖಲೆ ಪರಿಶೀಲನೆಗೆ ಹತ್ತು ನಿಮಿಷ ವ್ಯರ್ಥವಾಗುತ್ತಿದೆ. ಬ್ಯಾಂಕ್‌ಗೆ ತುರ್ತಾಗಿ ಹೋಗಬೇಕಾದಾಗ ಎಲ್ಲಾ ಇದ್ದ ವಾಹನ ಸವಾರರನ್ನು ಪದೇಪದೇ ಪರೀಕ್ಷೆ ಮಾಡುವುದು ಎಷ್ಟು ಸರಿ? ಒಂದು ದಿನ ಪರೀಕ್ಷೆ ಮಾಡಿದ ಮೇಲೆ ವಾಹನ ಅಥವಾ ಹೆಲ್ಮೆಟ್‌ಗೆ ಸ್ಟಿಕ್ಕರ್‌ ಅಂಟಿಸಿ ಎಂದು ವಾಹನ ಸವಾರರು ಟ್ರಾಫಿಕ್‌ ಪೊಲೀಸರಿಗೆ ಹೇಳಿದ ಘಟನೆ ಸಹ ನಡೆದಿದೆ.

Advertisement

ಪುಟ್ಪಾತ್‌ ಮೇಲೆ ವ್ಯಾಪಾರ ಮತ್ತು ವಾಹನ ನಿಲುಗಡೆಯನ್ನು ಟ್ರಾಫಿಕ್‌ ಪೊಲೀಸರು ಯಾಕೆ ಜಾರಿ ಮಾಡುತ್ತಿಲ್ಲ. ಎಲ್ಲದಕ್ಕೂ ನಗರಸಭೆಯತ್ತ ಕೈ ಮಾಡುವುದು ಎಷ್ಟು ಸರಿ ಎಂದು ಸಾರ್ವಜನಿಕರು ಟ್ರಾಫಿಕ್‌ ಪೊಲೀಸರ ಬಳಿ ವಾಗ್ವಾದ ಮಾಡಿದ ಘಟನೆ ಸಹ ನಡೆದಿದೆ.

Advertisement

Udayavani is now on Telegram. Click here to join our channel and stay updated with the latest news.

Next