ಜೇವರ್ಗಿ: ತಾಲೂಕಿನ ಕೂಡಿ ದರ್ಗಾದಿಂದ ಕೋಬಾಳ ಗ್ರಾಮಕ್ಕೆ ತೆರಳುವ ರಸ್ತೆ ನಿರ್ಮಾಣಕ್ಕೆ ಕರ್ನಾಟಕ ಗ್ರಾಮೀಣ ರಸ್ತೆ ಅಭಿವೃದ್ಧಿ ಯೋಜನೆಯಡಿ 1.30ಕೋಟಿ ರೂ.ಅನುದಾನ ಬಿಡುಗಡೆ ಮಾಡಲಾಗಿದೆ ಎಂದು ಶಾಸಕ ಡಾ| ಅಜಯಸಿಂಗ್ ಹೇಳಿದರು.
ತಾಲೂಕಿನ ಕೂಡಿ ದರ್ಗಾ ಬಳಿ ಕರ್ನಾಟಕ ಗ್ರಾಮೀಣ ರಸ್ತೆ ಅಭಿವೃದ್ಧಿ ಯೋಜನೆಯಡಿ 2021-22 ನೇ ಸಾಲಿನ ವಿಶೇಷ ಅಭಿವೃದ್ಧಿ ಯೋಜನೆಯಡಿ ರಸ್ತೆ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.
ಗ್ರಾಮೀಣ ರಸ್ತೆ ಸುಧಾರಣೆಯಿಂದ ಕ್ಷೇತ್ರದ ಸಮಗ್ರ ಅಭಿವೃದ್ಧಿ ಸಾಧ್ಯ. ಈ ನಿಟ್ಟಿನಲ್ಲಿ ಜೇವರ್ಗಿ, ಯಡ್ರಾಮಿ ತಾಲೂಕಿನ 164 ಹಳ್ಳಿಗಳ ರಸ್ತೆಗೆ ಒತ್ತು ನೀಡಲಾಗಿದೆ. ಕೋಳಕೂರ ಜಿಪಂ ವ್ಯಾಪ್ತಿಯ ವಿವಿಧ ಗ್ರಾಮಗಳ ರಸ್ತೆಗಳ ನಿರ್ಮಾಣಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಕಳೆದ ಎರಡು ವರ್ಷದಿಂದ ಕೊರೊನಾ ಸಂಕಷ್ಟದಿಂದ ಅನುದಾನ ಬಿಡುಗಡೆ ಆಗಿರಲಿಲ್ಲ ಎಂದು ಹೇಳಿದರು.
ಕೋಬಾಳ ರಸ್ತೆ ನಿರ್ಮಾಣಕ್ಕೆ ಗ್ರಾಮಸ್ಥರು ಹಲವು ಬಾರಿ ಮನವಿ ಮಾಡಿದ್ದರು. ಈ ಕುರಿತು ಮುತುವರ್ಜಿ ವಹಿಸಿ ರಸ್ತೆ ನಿರ್ಮಾಣಕ್ಕೆ ಅನುದಾನ ಬಿಡುಗಡೆ ಮಾಡಿಸಿ, ಕಾಮಗಾರಿ ಆರಂಭಿಸಲಾಗುತ್ತಿದೆ ಎಂದರು.
ಕರ್ನಾಟಕ ಗ್ರಾಮೀಣ ರಸ್ತೆ ಅಭಿವೃದ್ಧಿ ಯೋಜನೆ ಇಲಾಖೆ ಎಇಇ ಸದರುದ್ಧೀನ್, ಮುಖಂಡರಾದ ಶಿವಶರಣಪ್ಪ ಕೋಬಾಳ, ರುಕುಂ ಪಟೇಲ ಕೂಡಿ, ರಾಜಶೇಖರ ಸೀರಿ, ಮಹೆಬೂಬ್ ಪಟೇಲ ಕೋಬಾಳ, ಬಾಷಾ ಪಟೇಲ ಬಣಮಿ, ಶಿವಣಗೌಡ ಮಂದರವಾಡ, ಹನಮಂತ ಸಾಹು, ಸರ್ವೇಶ ಕೋಬಾಳ, ಸಲಿಂ ಕಣ್ಣಿ, ದೇವು ಕೂಡಿ ಹಾಗೂ ಗ್ರಾಮಸ್ಥರು ಇದ್ದರು.
“ಉದಯವಾಣಿ‘ಯಲ್ಲಿ ವರದಿ: ತಾಲೂಕಿನ ಕೂಡಿ ದರ್ಗಾದಿಂದ ಕೋಬಾಳ ವರೆಗಿನ 3ಕಿ.ಮೀ ರಸ್ತೆ ಹದಗೆಟ್ಟಿರವು ಕುರಿತು “ಉದಯವಾಣಿ’ಯ 2021ರ ಆಗಸ್ಟ್ 3ರ ಸಂಚಿಕೆಯಲ್ಲಿ “ಹದಗೆಟ್ಟ ರಸ್ತೆ: ನಿತ್ಯವೂ ಅವ್ಯವಸ್ಥೆ’ ಎನ್ನುವ ಶಿರ್ಷಿಕೆಯಡಿ ವರದಿ ಪ್ರಕಟವಾಗಿತ್ತು.