ಮಂಡ್ಯ: ಕೃಷ್ಣರಾಜಸಾಗರ ಹಾಗೂ ಗೊರೂರು ಅಣೆ ಕಟ್ಟೆಯಿಂದ 2 ಲಕ್ಷ ಕ್ಯೂಸೆಕ್‌ಗೂ ಅಧಿಕ ನೀರು ಹರಿಯಬಿಟ್ಟ ಪರಿಣಾಮ ಜಿಲ್ಲೆಯ ನದಿ ಪಾತ್ರದ ನೂರಾರು ಎಕರೆ ಜಮೀನಲ್ಲಿ ಬೆಳೆದಿದ್ದ ಬೆಳೆ ನೀರಿನಲ್ಲಿ ಕೊಚ್ಚಿ ಹೋಗಿ 1.19 ಕೋಟಿ ಬೆಳೆ ನಷ್ಟ ಸಂಭವಿಸಿದೆ.
ಕೊಡಗು ಹಾಗೂ ಹೇಮಾವತಿ ನದಿ ಪಾತ್ರದಲ್ಲಿ ಸುರಿದ ಮಹಾಮಳೆಯಿಂದ ಒಂದೇ ವಾರದಲ್ಲಿ ಜಲಾಶಯಗಳು ಭರ್ತಿಯಾದವು. ಕೆಆರ್‌ಎಸ್ ಅಣೆ ಕಟ್ಟೆಯಿಂದ 1.87 ಲಕ್ಷ ಕ್ಯೂಸೆಕ್ ಹಾಗೂ ಗೊರೂರು ಅಣೆಕಟ್ಟೆಯಿಂದ 1.08 ಲಕ್ಷ ಕ್ಯೂಸೆಕ್ ನೀರನ್ನು ಹೊರ ಬಿಟ್ಟಿದ್ದರಿಂದ ಜಿಲ್ಲೆಯ ಕೆಲ ತಾಲೂಕುಗಳಲ್ಲಿ ಪ್ರವಾಹ ಪರಿಸ್ಥಿತಿ ಸೃಷ್ಟಿಯಾಗಿತ್ತು.
ಕೆ.ಆರ್.ಪೇಟೆ, ಪಾಂಡವಪುರ, ಶ್ರೀರಂಗಪಟ್ಟಣ ಮತ್ತು ಮಳವಳ್ಳಿ ತಾಲೂಕಿನಲ್ಲಿ ನೆರೆ ಹಾವಳಿಗೆ ನೂರಾರೂ ಎಕರೆ ಜಮೀನಿನಲ್ಲಿದ್ದ ಬೆಳೆ ಹಾಳಾಗಿವೆ. ಪ್ರವಾಹ ಇಳಿದ ಬಳಿಕ ಎರಡು ಇಲಾಖೆ ಅಧಿಕಾರಿಗಳು ಸ್ಥಳ ಪರಿಶೀಲಿಸಿ ಬೆಳೆ ನಷ್ಟ ಅಂದಾಜು ಸಿದ್ದಪಡಿಸಿದ್ದಾರೆ. ಇದರ ಪ್ರಕಾರ 92 ಲಕ್ಷ ರೂ. ಮೌಲ್ಯದ ತೋಟಗಾರಿಕೆ ಬೆಳೆ ಮತ್ತು 27 ಲಕ್ಷ ರೂ ಭತ್ತ, ಕಬ್ಬು, ಮುಸುಕಿನ ಜೋಳ ಬೆಳೆ ಹಾನಿ ಗೊಳಾಗಿದೆ ಎಂದು ಅಧಿಕಾರಿಗಳು ಜಿಲ್ಲಾಡಳಿತಕ್ಕೆ ವರದಿ ಸಲ್ಲಿಸಿದ್ದಾರೆ.
ತೋಟಗಾರಿಕೆ ಬೆಳೆ: ಕೆ.ಆರ್.ಪೇಟೆಯಲ್ಲಿ 175 ಎಕರೆ, ಶ್ರೀರಂಗಪಟ್ಟಣದಲ್ಲಿ 180 ಎಕರೆ, ಪಾಂಡವ ಪುರದಲ್ಲಿ ಎರಡೂವರೆ ಎಕರೆ ಮತ್ತು ಮಳವಳ್ಳಿಯಲ್ಲಿ 6.2 ಎಕರೆ ಪ್ರದೇಶದಲ್ಲಿ ಬೆಳೆದಿದ್ದ ತೆಂಗು, ಬಾಳೆ, ಹೂವು, ಅಡಿಕೆ, ಶುಂಠಿ, ತರಕಾರಿ ಹಾಳಾಗಿದ್ದು, ತೆಂಗು, ಬಾಳೆ ಪ್ರಮಾಣವೇ ಹೆಚ್ಚು ಎಂದು ತೋಟ ಗಾರಿಕೆ ಇಲಾಖೆ ಉಪ ನಿರ್ದೇಶಕ ರಾಜು ಹೇಳಿದರು.
ಕೃಷಿ ಇಲಾಖೆ ಬೆಳೆಗಳು: ಅದೇ ರೀತಿ ಈ ನಾಲ್ಕು ತಾಲೂಕುಗಳಲ್ಲಿ ಸುಮಾರು 200 ಹೆಕ್ಟೇರ್ ಪ್ರದೇಶ ದಲ್ಲಿದ್ದ ಭತ್ತ, ರಾಗಿ, ಮುಸುಕಿನ ಜೋಳ ಮತ್ತು ಕಬ್ಬು ಬೆಳೆ ಪ್ರವಾಹಕ್ಕೆ ಸಿಲುಕಿ ನಾಶವಾಗಿದೆ. ಪಾಂಡವಪುರ ತಾಲೂಕಿನಲ್ಲಿ 10 ಹೆಕ್ಟೇರ್ ಭತ್ತ ಮತ್ತು ನರ್ಸರಿ, ಕೆ.ಆರ್.ಪೇಟೆಯಲ್ಲಿ 40 ಹೆಕ್ಟೇರ್ ಕಬ್ಬು, 2 ಹೆಕ್ಟೇರ್ ಅಲಸಂದೆ, 4 ಹೆಕ್ಟೇರ್ ಮುಸುಕಿನ ಜೋಳ, ಶ್ರೀರಂಗ ಪಟ್ಟಣದಲ್ಲಿ 34 ಹೆಕ್ಟೇರ್ ಪ್ರದೇಶದಲ್ಲಿ ಕಬ್ಬು ಮತ್ತು 18 ಹೆಕ್ಟೇರ್ ಪ್ರದೇಶದಲ್ಲಿ ಭತ್ತ ಹಾಗೂ ಮಳವಳ್ಳಿ ತಾಲೂಕಿನಲ್ಲಿ 83 ಹೆಕ್ಟೇರ್‌ನಲ್ಲಿ ಭತ್ತ, 1.5 ಹೆಕ್ಟೇರ್‌ನಲ್ಲಿ ರಾಗಿ ಮತ್ತು 7.5 ಹೆಕ್ಟೇರ್‌ನಲ್ಲಿ ಮುಸುಕಿನ ಜೋಳ ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ ಎಂದು ಜಂಟಿ ಕೃಷಿ ನಿರ್ದೇಶಕ ಚಂದ್ರಶೇಖರ್ ತಿಳಿಸಿದರು.
ಪ್ರಸ್ತುತ ಬೆಳೆ ನಷ್ಟದ ಸಂಪೂರ್ಣ ವರದಿ ಸಿದ್ದಪಡಿಸಿ ಇಲಾಖೆ ಅಧಿಕಾರಿಗಳು ಜಿಲ್ಲಾಧಿಕಾರಿಗೆ ಸಲ್ಲಿಸಿದ್ದಾರೆ. ಆದರೆ, ಇದು ಮೊದಲನೇ ಹಂತವಾಗಿದೆ. ಇದಲ್ಲದೆ, ಇನ್ನೆರಡು ಬಾರಿ ಸಮೀಕ್ಷೆ ನಡೆಯಲಿದೆ. ಆ ವೇಳೆ ನಷ್ಟ ದ ಖಚಿತ ಮಾಹಿತಿಯೂ ಲಭ್ಯವಾಗಲಿದೆ.
ಜಿಲ್ಲೆಯೊಳಗೆ ಬಿತ್ತನೆ ಕಾರ್ಯ ಚುರುಕು: ಕಾವೇರಿ ಜಲಾನಯನ ಪ್ರದೇಶದಲ್ಲಿ ಉತ್ತಮ ಮಳೆಯಾಗಿ ಕೆಆರ್‌ಎಸ್ ಅಣೆಕಟ್ಟು ಭರ್ತಿಯಾಗಿರುವ ಹಿನ್ನೆಲೆಯಲ್ಲಿ ಮತ್ತು ಹಲವೆಡೆ ಅಲ್ಪಸ್ವಲ್ಪ ಮಳೆಯಾಗಿರುವ ಕಾರಣ ಜಿಲ್ಲೆಯಲ್ಲಿ ಬಿತ್ತನೆ ಕಾರ್ಯ ಚುರುಕು ಪಡೆದುಕೊಂಡಿದೆ. ಮುಂಗಾರು ಹಂಗಾಮಿನ ಬಿತ್ತನೆ ಶೇ.12ರಷ್ಟು ಬಿತ್ತನೆಯಾಗಿತ್ತು. ಇದೀಗ ಶೇ.18ರಷ್ಟು ಬಿತ್ತನೆ ಯಾಗಿದೆ. ಪ್ರಮುಖವಾಗಿ ರಾಗಿ, ಕಬ್ಬು, ಜೋಳ, ಮುಸುಕಿನ ಜೋಳ ಶೇ.12ರಷ್ಟು ಬಿತ್ತನೆಯಾಗಿದೆ. ಅಂತೆಯೇ, ದ್ವಿದಳ ಧಾನ್ಯಗಳಾದ ತೊಗರಿ, ಹುರುಳಿ, ಉದ್ದು, ಹೆಸರು, ಅಲಸಂದೆ, ಅವರೆ ಶೇ.36.1ರಷ್ಟು ಬಿತ್ತನೆಯಾಗಿದೆ. ಎಣ್ಣೆಕಾಳು ಬಿತ್ತನೆಯೂ ಶೇ.31.2ರಷ್ಟಾಗಿದ್ದು, ಕಬ್ಬು ಶೇ.18.4ರಷ್ಟು ಆಗಿದೆ ಎಂದು ಕೃಷಿ ಇಲಾಖೆ ಮೂಲಗಳು ತಿಳಿಸಿವೆ.