Advertisement

1.17 ಕೋ.ರೂ. ವೆಚ್ಚದಲ್ಲಿ ಟ್ಯಾಂಕರ್‌ ನೀರು!

01:04 AM May 30, 2019 | sudhir |

ಕುಂದಾಪುರ: ತಾಲೂಕಿನಲ್ಲಿ ಜೀವಜಲದ ಸೆಲೆ ಯಾವ ರೀತಿ ಬತ್ತಿದೆ ಎಂದರೆ ಈವರೆಗೆ ತಾಲೂಕಿನ ಪಂಚಾಯತ್‌ಗಳು ಟ್ಯಾಂಕರ್‌ ಮೂಲಕ 1.17 ಕೋ.ರೂ. ಮೌಲ್ಯದ ನೀರು ವಿತರಿಸಿವೆ.

Advertisement

ಕಳೆದ ವರ್ಷ

ಕಳೆದ ವರ್ಷ 35 ಗ್ರಾಮ ಪಂಚಾಯತ್‌ಗಳಿಗೆ 87 ಲಕ್ಷ ರೂ. ಪಾವತಿಸಲಾಗಿದೆ. ಈ ಪೈಕಿ ಅತಿಹೆಚ್ಚು ಅನುದಾನ ಪಡೆದದ್ದು ಗುಲ್ವಾಡಿ ಪಂಚಾಯತ್‌. ಇಲ್ಲಿಗೆ 4.91 ಲಕ್ಷ ರೂ. ಪಾವತಿಯಾಗಿದೆ. ಉಳಿದಂತೆ ಕಟ್ಬೆಲ್ತೂರಿಗೆ 4.01 ಲಕ್ಷ ರೂ., ಬಸ್ರೂರಿಗೆ 4.96 ಲಕ್ಷ ರೂ., ಹಟ್ಟಿಯಂಗಡಿಗೆ 4.89 ಲಕ್ಷ ರೂ., ಕರ್ಕುಂಜೆಗೆ 4.86 ಲಕ್ಷ ರೂ., ಆಜ್ರಿಗೆ 4.07 ಲಕ್ಷ ರೂ., ಅಂಪಾರಿಗೆ 4.13 ಲಕ್ಷ ರೂ., ಚಿತ್ತೂರಿಗೆ 3.69 ಲಕ್ಷ ರೂ., ಹಕ್ಲಾಡಿಗೆ 3.87 ಲಕ್ಷ ರೂ., ಉಳ್ಳೂರು 74ಕ್ಕೆ 3.89 ಲಕ್ಷ ರೂ., ಹೊಂಬಾಡಿ ಮಂಡಾಡಿಗೆ 3.4 ಲಕ್ಷ ರೂ., ಹಕ್ಲಾಡಿಗೆ 3.87 ಲಕ್ಷ ರೂ. ಪಾವತಿಸಲಾಗಿದೆ. ಮಡಾಮಕ್ಕಿ, ಬಸ್ರೂರು ಪಂಚಾಯತ್‌ಗಳು ನಾಲ್ಕು ಹಂತಗಳಲ್ಲಿ ನೀರು ಸರಬರಾಜು ಮಾಡಿ ಬಿಲ್ಲು ಸಲ್ಲಿಸಿವೆ. ಹಾಲಾಡಿ, ಮಡಾಮಕ್ಕಿ, ವಂಡ್ಸೆ, ಹಕ್ಲಾಡಿ, ಚಿತ್ತೂರು ಪಂಚಾಯತ್‌ಗಳು ಮೂರು ಹಂತದಲ್ಲಿ ಸರಬರಾಜು ಮಾಡಿ ಬಿಲ್ಲು ಸಲ್ಲಿಸಿವೆ. ಇತರೆಡೆ ಒಂದು ಹಾಗೂ ಎರಡು ಹಂತದಲ್ಲೇ ಸರಬರಾಜು ಸಾಕಾಗಿತ್ತು.

ಈ ಬಾರಿ ಹೆಚ್ಚು

ಈ ಬಾರಿ ಮಳೆ ಪ್ರಮಾಣ ಕಡಿಮೆಯಾದ ಕಾರಣ ಬೇಗನೇ ನೀರಿನ ಮೂಲಗಳು ಬತ್ತಿವೆ. ಆದ್ದರಿಂದ ಅನೇಕ ಕಡೆ ಮಾರ್ಚ್‌ ಆರಂಭದಲ್ಲೇ ಟ್ಯಾಂಕರ್‌ ನೀರು ಪೂರೈಸಲು ಕ್ರಮ ಕೈಗೊಳ್ಳಲಾಗಿತ್ತು. ಮೇ 23ರವರೆಗೆ 37 ಪಂಚಾಯತ್‌ನವರು 1.17 ಕೋ.ರೂ. ಗಳ ನೀರು ಸರಬರಾಜು ಮಾಡಿದ್ದಾರೆ. ಒಟ್ಟು ಮೊತ್ತದಲ್ಲಿ 17.9 ಲಕ್ಷ ರೂ. ಪಾವತಿಗೆ ಬಾಕಿ ಇದೆ. 29 ಪಂಚಾಯತ್‌ನವರಿಗೆ 48.9 ಲಕ್ಷ ರೂ. ನೀಡಲಾಗಿದೆ. 21 ಪಂಚಾಯತ್‌ಗಳ 19.7 ಲಕ್ಷ ರೂ.ಗಳ ಬಿಲ್ಲನ್ನು ಜಿಲ್ಲಾಧಿಕಾರಿಗಳಿಗೆ ಕಳುಹಿಸಲಾಗಿದೆ. 9 ಪಂಚಾಯತ್‌ನವರಿಗೆ 11.2 ಲಕ್ಷ ರೂ. ಆರ್‌ಟಿಜಿಎಸ್‌ ಮೂಲಕ ಪಾವತಿಸಲಾಗಿದೆ.

Advertisement

ಪ್ರಾಕೃತಿಕ ವಿಕೋಪ ಅನುದಾನ

2019ನೇ ಸಾಲಿನಲ್ಲಿ ಪ್ರಾಕೃತಿಕ ವಿಕೋಪದಡಿ, ಕುಡಿಯುವ ನೀರಿಗೆ ಎಂದು ತಾಲೂಕಿಗೆ 45 ಲಕ್ಷ ರೂ. ಮಂಜೂರಾಗಿದೆ. ಈ ಪೈಕಿ 11.2 ಲಕ್ಷ ರೂ. ಪಾವತಿಸಲಾಗಿದ್ದು 33.7 ಲಕ್ಷ ರೂ. ಖಾತೆಯಲ್ಲಿ ಬಾಕಿಯಿದೆ. ಪ್ರಾಕೃತಿಕ ವಿಕೋಪದಡಿ 10 ಲಕ್ಷ ರೂ., ಕುಡಿಯುವ ನೀರಿಗೆ 25 ಲಕ್ಷ ರೂ., ಹಿಂದಿನ ಸಾಲಿನ ಉಳಿಕೆಯಾಗಿ 10 ಲಕ್ಷ ರೂ.ಗಳು ಖಾತೆಯಲ್ಲಿವೆ.

ಶಾಶ್ವತ ಪರಿಹಾರ ಇಲ್ಲ

ಪ್ರತಿ ವರ್ಷ ಕೋಟ್ಯಂತರ ರೂ. ಟ್ಯಾಂಕರ್‌ ನೀರಿಗೆ ಸುರಿಯುವ ಬದಲು ಶಾಶ್ವತ ಯೋಜನೆ ಮಾಡಿದರೆ ಅನೇಕ ಪಂಚಾಯತ್‌ಗಳ ಸಮಸ್ಯೆ ನಿವಾರಣೆಯಾಗಲಿದೆ. ಪುರಸಭೆ ಹಾಗೂ ಐದು ಪಂಚಾಯತ್‌ಗಳಿಗೆ ನೀರು ಕೊಡುವ ಜಪ್ತಿಯಲ್ಲಿ ನೀರಿಲ್ಲ. ಇಲ್ಲಿಗೆ ಪೈಪ್‌ಲೈನ್‌ ಮಾಡಲು ಅನುದಾನ ಇಲ್ಲ. ಇಲ್ಲಿಗೊಂದು ಪೈಪ್‌ಲೈನ್‌ ಮಾಡಿಕೊಟ್ಟರೆ ಇಲ್ಲಿನ ಸಮಸ್ಯೆಗೆ ಶಾಶ್ವತ ಪರಿಹಾರ ದೊರೆಯಲಿದೆ. ಶಾಸಕರಿಂದ ಪ್ರಸ್ತಾವನೆ ಹೋಗಿದ್ದರೂ ಸರಕಾರದ ಮಟ್ಟದಲ್ಲಿ ಮಂಜೂರಾತಿಗೆ ಬಾಕಿಯಿದೆ.

ಉಚಿತ ನೀರು

ಗುಜ್ಜಾಡಿ ಗ್ರಾಮದ ನಾಗರಿಕರಿಗೆ ಸ್ಥಳೀಯ ಸುಬ್ರಹ್ಮಣ್ಯೇಶ್ವರ ಯೂತ್‌ ಕ್ಲಬ್‌ನವರು, ಕೆರಾಡಿಯಲ್ಲಿ ಚಂದ್ರಶೇಖರ ಶೆಟ್ಟಿ ಅವರು, ಬೇಳೂರಿನಲ್ಲಿ ಉದ್ಯಮಿ ಮನೋಹರ್‌ ಶೆಟ್ಟಿ ಅವರು ಸೇರಿದಂತೆ ಅನೇಕ ಕಡೆ ಉಚಿತ ನೀರು ಸರಬರಾಜು ಕೂಡ ನಡೆಯುತ್ತಿದೆ.

ಬಹುಗ್ರಾಮ ಯೋಜನೆ

ನಾಡಾ ಗುಡ್ಡೆಯಂಗಡಿಯಲ್ಲಿ 10 ಕೋ.ರೂ. ವೆಚ್ಚದಲ್ಲಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಕಾಮಗಾರಿ ಮುಗಿಯುವ ಹಂತದಲ್ಲಿದೆ. ಉಡುಪಿ ಜಿಲ್ಲೆಯಲ್ಲಿ ನಾಡಾ ಪಂಚಾಯತ್‌ ಮಾತ್ರ ಈ ಯೋಜನೆಗೆ ಆಯ್ಕೆಯಾಗಿದ್ದು ಅನಂತರ ಸುತ್ತಲಿನ 8-10 ಪಂಚಾಯತ್‌ ಗಳಿಗೆ ಇಲ್ಲಿಂದಲೇ ನೀರು ಒದಗಿಸಬಹುದು. ಎರಡನೇ ಅತಿದೊಡ್ಡ ಪಂಚಾಯತ್‌ ಇದು. ನಾಲ್ಕೂ ಗ್ರಾಮಗಳಲ್ಲಿ ನೀರಿನ ಸಮಸ್ಯೆಯಿದೆ. 4 ಸಾವಿರ ಲೀ. ಸಾಮರ್ಥ್ಯದ 3 ಟ್ಯಾಂಕರ್‌ಗಳಲ್ಲಿ 2 ದಿನಕ್ಕೊಮ್ಮೆಯಂತೆ ನೀರು ವಿತರಿಸಲಾಗುತ್ತಿದೆ. ವಿಶ್ವಬ್ಯಾಂಕ್‌ ನೆರವಿನ ನೀರಿನ ಘಟಕ ಯೋಜನೆ ಪೂರ್ಣವಾದ ಬಳಿಕ ಸಮಸ್ಯೆ ನಿವಾರಣೆಯಾಗಲಿದೆ ಎನ್ನುವ ವಿಶ್ವಾಸ ಆಡಳಿತ ಮಂಡಳಿಯದ್ದು.
ಹಣಕಾಸಿನ ಕೊರತೆ ಇಲ್ಲ

ಕುಡಿಯುವ ನೀರಿನ ವಿತರಣೆಗೆ ಸಂಬಂಧಿಸಿದಂತೆ ಹಣಕಾಸಿನ ಕೊರತೆ ಇಲ್ಲ. ತಾಲೂಕು ನಿಧಿಯಲ್ಲಿ 45 ಲಕ್ಷ ರೂ.ಗಳಿದ್ದು 11 ಲಕ್ಷ ಪಾವತಿಸಲಾಗಿದೆ. ಜಿಲ್ಲಾಧಿಕಾರಿಗಳು ಕೂಡ ಅನುದಾನದ ಕೊರತೆ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಬಿಲ್ಗಳ ಪರಿಶೀಲನೆ ನಡೆದು ಪಾವತಿಯಾಗುತ್ತದೆ. ವಿಳಂಬ ಮಾಡುವುದಿಲ್ಲ. -ವೀರೇಂದ್ರ ಬಾಡ್ಕರ್‌,ತಹಶೀಲ್ದಾರರು.
Advertisement

Udayavani is now on Telegram. Click here to join our channel and stay updated with the latest news.

Next