Advertisement

33 ಲಕ್ಷ ರೈತರಿಗೆ 24 ಸಾವಿರ ಕೋಟಿ ರೂ. ಶೂನ್ಯ ಬಡ್ಡಿ ಕೃಷಿಸಾಲ

12:53 AM Feb 12, 2023 | Team Udayavani |

ಮಂಗಳೂರು: ರಾಜ್ಯದ 33 ಲಕ್ಷ ರೈತರಿಗೆ 24 ಸಾವಿರ ಕೋಟಿ ರೂ. ಶೂನ್ಯ ಬಡ್ಡಿ ಕೃಷಿ ಸಾಲ ವಿತರಿಸುವ ಕುರಿತಂತೆ 2022-23ನೇ ಸಾಲಿನ ಬಜೆಟ್‌ನಲ್ಲಿ ಘೋಷಿಸಲಾಗಿತ್ತು. ಮಾರ್ಚ್‌ ಅಂತ್ಯದೊಳಗೆ ಶೇ. 100ರಷ್ಟು ಗುರಿ ಸಾಧಿಸುವ ನಿಟ್ಟಿನಲ್ಲಿ ಪ್ರಯತ್ನಗಳು ನಡೆಯುತ್ತಿದ್ದು, ಜನವರಿ ಅಂತ್ಯಕ್ಕೆ 22 ಲಕ್ಷ ರೈತರಿಗೆ 16,500 ಕೋಟಿ ರೂ. ಸಾಲ ವಿತರಿಸಲಾಗಿದೆ ಎಂದು ಸಹಕಾರ ಸಚಿವ ಎಸ್‌.ಟಿ. ಸೋಮಶೇಖರ್‌ ತಿಳಿಸಿದ್ದಾರೆ.

Advertisement

ಶನಿವಾರ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನ ಪ್ರಗತಿ ಪರಿಶೀಲನೆ ನಡೆಸಿದ ಬಳಿಕ ಪತ್ರಿಕಾ ಗೋಷ್ಠಿ ಯಲ್ಲಿ ಮಾತನಾಡಿದ ಅವರು, ಅರ್ಹ ಎಲ್ಲ ರೈತರಿಗೆ ಶೂನ್ಯ ಬಡ್ಡಿ ದರದ ಸಾಲ ವಿರಣೆಯಾಗಬೇಕು ಎನ್ನುವ ಉದ್ದೇಶದಿಂದ ಎಲ್ಲ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ಗಳಿಗೆ ಗುರಿ ನಿಗದಿಪಡಿಸಲಾಗಿದೆ. ಯಶಸ್ವಿ ಅನು ಷ್ಠಾನಕ್ಕೆ ನೋಡೆಲ್‌ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ. ಜತೆಗೆ ಎಲ್ಲ ಬ್ಯಾಂಕ್‌ಗಳಿಗೆ ಸ್ವತಃ ಭೇಟಿ ನೀಡಿ ಪ್ರಗತಿ ಪರಿಶೀಲನೆ ನಡೆಸುತ್ತಿದ್ದೇನೆ ಎಂದರು.

2,300 ಕೋ.ರೂ. ಸಾಲ ಗುರಿ
ಎಸ್‌ಸಿಡಿಸಿಸಿ ಬ್ಯಾಂಕ್‌ ವ್ಯಾಪ್ತಿಯಲ್ಲಿ 1.74 ಲಕ್ಷ ರೈತರಿಗೆ 2,300 ಕೋಟಿ ರೂ. ಸಾಲ ವಿತರಿಸುವ ಗುರಿ ನೀಡಲಾಗಿದೆ. ಈಗಾಗಲೇ 2024 ಕೋಟಿ ರೂ.ಸಾಲ ವಿತರಿಸುವ ಮೂಲಕ ಅತ್ಯುತ್ತಮ ಸಾಧನೆ ಮಾಡಿದೆ. ಕೃಷಿ ಸಾಲ ಶೇ. 100 ವಸೂಲಾಗಿದ್ದು, ಇತರ ಸಾಲ ಕೂಡ ಶೇ. 92ರಷ್ಟು ವಸೂಲಾಗಿದೆ. 191 ಕೋಟಿ ರೂ. ವೆಚ್ಚದಲ್ಲಿ ರಾಜ್ಯದಲ್ಲಿರುವ 6 ಸಾವಿರಕ್ಕೂ ಅಧಿಕ ಕೃಷಿ ಪತ್ತಿನ ಸಹಕಾರಿ ಬ್ಯಾಂಕ್‌ಗೆ ಏಕರೂಪದ ತಂತ್ರಾಂಶ ಅಳವಡಿಸಲಾ ಗುತ್ತಿದ್ದು, ಕೇಂದ್ರ ಸರಕಾರ ಶೇ. 60, ರಾಜ್ಯ ಸರಕಾರ ಶೇ. 20 ಹಾಗೂ ಡಿಸಿಸಿ ಬ್ಯಾಂಕ್‌ ಶೇ. 20 ಮೊತ್ತ ಭರಿಸಲಿದೆ. ಈಗಾಗಲೇ ಕೇಂದ್ರದ ಭಾಗದ ಮೊದಲ ಕಂತು 25 ಕೋ.ರೂ. ಬಿಡುಗಡೆಯಾಗಿದೆ ಎಂದರು.

ಗುರಿ ಮೀರಿದ ಸಾಧನೆ
ಸಹಕಾರ ಸಂಘಗಳ ಸದಸ್ಯರು ಮತ್ತು ಅವರ ಕುಟುಂಬದವರಿಗೆ ವೈದ್ಯಕೀಯ ಸೌಲಭ್ಯ ಒದಗಿಸಲು “ಯಶಸ್ವಿನಿ’ ಆರೋಗ್ಯ ಯೋಜನೆ ಜಾರಿಯಾಗಿದ್ದು, ಫೆಬ್ರವರಿ ಅಂತ್ಯದವರೆಗೆ ನೋಂದಣಿಗೆ ಅವಕಾಶ ಇದೆ. ಯಶಸ್ವಿನಿ ಯೋಜನೆಗೆ ಸಂಬಂಧಿಸಿ ಎಸ್‌ಸಿಡಿಸಿಸಿ ಬ್ಯಾಂಕ್‌ ಅವಿಭಜಿತ ದ.ಕ. ಜಿಲ್ಲೆಯಲ್ಲಿ ಒಟ್ಟು 1.75 ಲಕ್ಷ ವಿಮಾ ಪಾಲಿಸಿದಾರರ ಗುರಿ ಹೊಂದಿದೆ. ಆದರೆ ವರದಿ ವರ್ಷದಲ್ಲಿ 4,62,374 ಸದಸ್ಯರನ್ನು ಯಶಸ್ವಿನಿ ನೋಂದಾಯಿಸಿ ಗುರಿ ಮೀರಿದ ಸಾಧನೆ ಮಾಡಿರುವುದು ಶ್ಲಾಘನೀಯ ಎಂದರು. ರೈತರ ಸಾಲಮನ್ನಾ ಯೋಜನೆಗೆ ಸಂಬಂಧಿಸಿದ ಸಹಕಾರಿ ಬ್ಯಾಂಕ್‌ಗಳಿಗೆ ಬಿಡುಗಡೆಗೆ ಬಾಕಿ ಇರುವ 157 ಕೋ.ರೂ.ಗಳನ್ನು ಶೀಘ್ರ ಬಿಡುಗಡೆಗೆ ಮಾಡುವಂತೆ ಅರ್ಥಿಕ ಇಲಾಖೆಗೆ ಮನವಿ ಮಾಡಲಾಗಿದೆ ಎಂದರು.

ಶಾಸಕ ಡಿ. ವೇದವ್ಯಾಸ ಕಾಮತ್‌, ಎಸ್‌ಸಿಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಡಾ| ಎಂ.ಎನ್‌. ರಾಜೇಂದ್ರ ಕುಮಾರ್‌, ಉಪಾಧ್ಯಕ್ಷ ವಿನಯ ಕುಮಾರ್‌ ಸೂರಿಂಜೆ, ನಿರ್ದೇಶಕರಾದ ಭಾಸ್ಕರ್‌ ಎಸ್‌. ಕೋಟ್ಯಾನ್‌, ದೇವಿಪ್ರಸಾದ್‌ ಶೆಟ್ಟಿ ಬೆಳಪು, ಎಂ. ವಾದಿರಾಜ ಶೆಟ್ಟಿ, ಜೈರಾಜ್‌ ಬಿ.ರೈ, ಸದಾಶಿವ ಉಳ್ಳಾಲ, ರಾಜೇಶ್‌ ರಾವ್‌, ಸಿಇಒ ಗೋಪಾಲಕೃಷ್ಣ ಭಟ್‌, ಸಹಕಾರ ಸಂಘಗಳ ಜಂಟಿ ನಿಬಂಧಕ ಡಾ| ಜಿ. ಉಮೇಶ್‌, ಸ. ನಿಬಂಧಕ ಸುಧೀರ್‌ ಕುಮಾರ್‌ ಉಪಸ್ಥಿತರಿದ್ದರು.

Advertisement

ಎಸ್‌ಸಿಡಿಸಿಸಿ ಬ್ಯಾಂಕ್‌ಗೆ ಮೆಚ್ಚುಗೆ
ಸಹಕಾರಿ ಬ್ಯಾಂಕಿಂಗ್‌ ವ್ಯವಸ್ಥೆಯಲ್ಲಿ ಎಸ್‌ಸಿಡಿಸಿಸಿ ಬ್ಯಾಂಕ್‌ ರಾಜ್ಯದಲ್ಲೇ ಮುಂಚೂಣಿಯಲ್ಲಿದ್ದು, ಕೃಷಿ ಸಾಲ ವಿತರಣೆ ಮತ್ತು ಮರುಪಾವತಿಯಲ್ಲಿ ರಾಜ್ಯದ ಸಹಕಾರಿ ವ್ಯವಸ್ಥೆಗೆ ಮಾದರಿಯಾಗಿದೆ. ಡಾ| ಎಂ.ಎನ್‌. ರಾಜೇಂದ್ರ ಕುಮಾರ್‌ ನಾಯಕತ್ವದಲ್ಲಿ ಗಣನೀಯ ಪ್ರಗತಿ ಕಂಡಿದೆ. ಬ್ಯಾಂಕ್‌ ಸತತ 27 ವರ್ಷಗಳಿಂದ ಕೃಷಿ ಸಾಲ ಮರುಪಾವತಿಯಲ್ಲಿ ಶೇ. 100ರಷ್ಟು ಸಾಧನೆ ಗೈದಿದೆ. ಸಂಪೂರ್ಣ ಗಣಕೀಕೃತವಾಗಿರುವ ತನ್ನ 111 ಶಾಖೆಗಳ ಮೂಲಕ ಕಾರ್ಯನಿರ್ವಹಿಸುತ್ತಿರುವ ಈ ಬ್ಯಾಂಕ್‌ ಕೋರ್‌ ಬ್ಯಾಂಕಿಂಗ್‌ ಮತ್ತು ಮೊಬೈಲ್‌ ಬ್ಯಾಂಕ್‌ನಂತಹ ಉತ್ಕೃಷ್ಟ ವ್ಯವಸ್ಥೆ ಅಳವಡಿಸಿಕೊಂಡಿದೆ ಎಂದು ಸಚಿವ ಸೋಮಶೇಖರ್‌ ಶ್ಲಾಘಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next