Advertisement
ಅಫಜಲಪುರ: ಹಿಂಗಾರು ಹಂಗಾಮಿನ ಬೆಳೆಗಳಲ್ಲಿ ಪ್ರಮುಖವಾದ ಜೋಳದ ಬೆಳೆಗೆ ಮಿಡತೆ ಕಾಟ ಶುರುವಾಗಿದ್ದು, ಜೋಳದ ಎಲೆಗಳಿಗೆಲ್ಲ ತೂತು ಬೀಳುತ್ತಿವೆ. ಇದರಿಂದ ಬೆಳೆ ಹಾಳಾಗುತ್ತಿದೆ. ತಾಲೂಕಿನಾದ್ಯಂತ ಹಿಂಗಾರು ಹಂಗಾಮಿನ ಪ್ರಮುಖ ಬೆಳೆಯಾಗಿರುವ ಜೋಳಕ್ಕೆ ಸದ್ಯ ಮಿಡತೆ ಕಾಟ ಕಾಡುತ್ತಿದೆ. ಫಲವತ್ತಾಗಿ ಬೆಳೆದ ಜೋಳಕ್ಕೆ ಮಿಡತೆ ಕಾಟದಿಂದ ದಂಟುಗಳು, ಎಲೆಗಳಿಗೆಲ್ಲ ತೂತುಗಳು ಬೀಳುತ್ತಿವೆ. ಇದರಿಂದ ರೈತರಿಗೆ ಚಿಂತೆ ಶುರುವಾಗಿದೆ.
Related Articles
Advertisement
ಚರಗ ಚೆಲ್ಲಲು ಜೋಳದ ಸಮಸ್ಯೆ: ಪ್ರತಿ ವರ್ಷ ಎಳ್ಳಮವಾಸ್ಯೆ ಪ್ರಯುಕ್ತ ರೈತ ಬಾಂಧವರೆಲ್ಲ ಬಗೆಬಗೆಯ ಅಡುಗೆ ಮಾಡಿಕೊಂಡು ಮನೆ ಮಂದಿಯೆಲ್ಲ ಜೋಳ ಬಿತ್ತಿದ ಹೊಲಕ್ಕೆ ಹೋಗಿ ಭೂತಾಯಿಗೆ ಚರಗ ಚೆಲ್ಲುವ ಪದ್ಧತಿ ಇದೆ. ಆದರೆ ಈ ಬಾರಿ ಒಣ ಬೇಸಾಯ ಮಾಡುವ ರೈತರ ಜಮೀನುಗಳಲ್ಲಿ ಜೋಳದ ಬೆಳೆ ಗುಣಮಟ್ಟದಲ್ಲಿ ಬೆಳವಣಿಗೆ ಆಗುತ್ತಿಲ್ಲ. ಹೀಗಾಗಿ ಎಳ್ಳಮವಾಸ್ಯೆಗೆ ಚರಗ ಚಲ್ಲಲು ಜೋಳ ಇಲ್ಲದಂತಾಗಿದೆ. ಒಟ್ಟಿನಲ್ಲಿ ಜೋಳಕ್ಕೆ ರೋಗ ಬಾಧೆ ಕಾಡುತ್ತಿದ್ದರೆ, ರೈತರಲ್ಲಿ ಹಬ್ಬದ ಕಳೆ ಇಲ್ಲದಂತಾಗಿಸಿದೆ.
ಚರಗ ಚೆಲ್ಲಾಕ್ ಜ್ವಾಳ ಇಲ್ಲದಂಗ ಆಗ್ಯಾದ್ರಿ. ಮೊಳಕಾಳುದ್ದ ಬೆಳೆದ ಜ್ವಾಳಕ್ ಮಿಡತಿ ಹಾರಿ ಅರ್ಧ ಹಾಳಾಗ್ಯಾವ. ಇನ್ನರ್ಧ ಸುಳಿ ರೋಗ ಬಿದ್ದು ಹಾಳಾಗ್ಯಾವ. ಹೊಟ್ಟಿಗಿ ಗಂಜಿ ಆಗ್ತದ, ದನಕರಗೊಳಿಗೆ ಮೇವಾಗ್ತದ ಅನ್ಕೊಂಡಿದ್ದೆವು. ಈಗ ಎರಡು ಆಗಂಗ ಕಾಣವಲ್ದು.ಚಾಂದಸಾಬ ನಾಕೇದಾರ,
ರೈತ, ಬಳೂರ್ಗಿ ತಾಲೂಕಿನಾದ್ಯಂತ 2019ನೇ ಸಾಲಿನಲ್ಲಿ 11580 ಹೆಕ್ಟೇರ್ ಜೋಳ ಬಿತ್ತನೆಯಾಗಿದೆ. ಕಳೆದ ವರ್ಷ 23 ಸಾವಿರ ಹೆಕ್ಟೇರ್ ಬಿತ್ತನೆಯಾಗಿತ್ತು. ಕಳೆದ ವರ್ಷಕ್ಕಿಂತ ಈ ವರ್ಷ ಜೋಳ ಬಿತ್ತನೆ ಕಡಿಮೆಯಾಗಲು ಕಾರಣ ಪ್ರಸಕ್ತ ಸಾಲಿನ ಮುಂಗಾರು ಹಂಗಾಮಿನಲ್ಲಿ ಹತ್ತಿ, ತೊಗರಿ ಬಿತ್ತನೆ ಕ್ಷೇತ್ರ 80ರಿಂದ 90 ಪ್ರತಿಶತ ಹೆಚ್ಚಳವಾಗಿದೆ. ಹೀಗಾಗಿ ಜೋಳ ಬಿತ್ತನೆ ಈ ವರ್ಷ ಕಮ್ಮಿಯಾಗಿದೆ. ತಡವಾಗಿ ಬಿತ್ತನೆ ಆಗಿದ್ದರಿಂದ ಬೆಳವಣಿಗೆಗೆ ಹಿನ್ನಡೆಯಾಗಿದೆ. ಮಿಡತೆ ಕಾಟದಿಂದ ಜೋಳಕ್ಕೆ ಯಾವ ಹಾನಿಯೂ ಇಲ್ಲ. ಆದರೆ ಜೋಳಕ್ಕೆ ಸುಳಿ ರೋಗ ಬಿದ್ದರೆ ಅದಕ್ಕೆ ಔಷಧ ಸಿಂಪಡಿಸಿ ನಿಯಂತ್ರಣಕ್ಕೆ ತರಬೇಕು.
ಸರ್ದಾರಭಾಷಾ ನದಾಫ್,
ತಾಂತ್ರಿಕ ಅಧಿಕಾರಿ, ಕೃಷಿ ಇಲಾಖೆ