Advertisement

ಗ್ರಾಪಂನಲ್ಲೇ ಮೀನು ಮಾರಾಟ

04:42 PM Feb 27, 2020 | Team Udayavani |

ಭಟ್ಕಳ: ಕಳೆದ ಮೂರು ದಿನಗಳಿಂದ ಶಿರಾಲಿ ಗ್ರಾಪಂನ್ನೇ ಮೀನು ಮಾರುಕಟ್ಟೆಯನ್ನಾಗಿ ಮಾಡಿಕೊಂಡ ಮೀನುಗಾರರ ಬೇಡಿಕೆಗೆ ಸ್ಪಂದಿಸುವಲ್ಲಿ ಗ್ರಾಪಂ ವಿಫಲವಾಗಿದ್ದು ಮೀನು ಮಾರಾಟ ಮುಂದುವರಿದೆ.

Advertisement

ಕಳೆದ ಹಲವು ಸಮಯದಿಂದ ಮೀನುಗಾರ ಮಹಿಳೆಯರು ಶಿರಾಲಿ ಮೀನು ಮಾರುಕಟ್ಟೆ ಎದುರು ಖಾಸಗಿ ವ್ಯಕ್ತಿಗೆ ಮೀನು ಮಾರಾಟಕ್ಕೆ ಅವಕಾಶ ನೀಡಿರುವುದರಿಂದ ತಮಗೆ ಮೀನು ವ್ಯಾಪಾರಕ್ಕೆ ತೊಂದರೆಯಾಗಿದೆ. ತಕ್ಷಣ ಅವರಿಗೆ ನೀಡಿದ ಅನುಮತಿಯನ್ನು ರದ್ದು ಪಡಿಸಬೇಕು ಎಂದು ಒತ್ತಾಯಿಸುತ್ತಲೇ ಬಂದಿದ್ದರು. 15 ದಿನಗಳ ಹಿಂದೆ ಸಾಂಕೇತಿಕವಾಗಿ ಮೀನುಗಾರ ಮಹಿಳೆಯರು ಗ್ರಾಪಂ ಹೊರಗೆ ಮೀನು ಮಾರಾಟ ಮಾಡಿ ಪ್ರತಿಭಟನೆಯನ್ನೂ ಮಾಡಿದ್ದರು. ಆದರೆ ಇದ್ಯಾವುದಕ್ಕೂ ಗ್ರಾಪಂ ಬೆಲೆ ಕೊಡದೇ ಇರುವುದರಿಂದ ಕಳೆದ ಮೂರು ದಿನಗಳಿಂದ ಗ್ರಾಪಂ ಮೆಟ್ಟಿಲುಗಳ ಮೇಲೆಯೇ ಮೀನು ಮಾರಾಟ ಮಾಡುತ್ತಿದ್ದು ತಮಗೆ ನ್ಯಾಯ ಸಿಗುವ ತನಕವೂ ನಾವು ಇಲ್ಲಿಂದ ಕದಲುವುದಿಲ್ಲ ಎಂದು ಹೇಳುತ್ತಿರುವುದು ಗ್ರಾಪಂಗೆ ಬಿಸಿ ತುಪ್ಪವಾಗಿದೆ.

ಶಿರಾಲಿ ಮೀನು ಮಾರುಕಟ್ಟೆ ಎದುರು ಕುಂದಾಪುರದ ಖಾಸಗಿ ವ್ಯಕ್ತಿಗೆ ಮೀನು ಮಾರಾಟ ನಡೆಸುವುದಕ್ಕೆ ಅವಕಾಶ ಕಲ್ಪಿಸಿದ್ದನ್ನು ಖಂಡಿಸಿದರು. ಶಿರಾಲಿ ಗ್ರಾಪಂ ಆಡಳಿತದವರು ಮೀನು ಮಾರುಕಟ್ಟೆ ಎದುರು ನಡೆಯುತ್ತಿರುವ ಮೀನು ಮಾರಾಟ ತಡೆಯುವುದಾಗಿ ಭರವಸೆ ನೀಡಿದ್ದರು. ಅದರಂತೆ ಗ್ರಾ.ಪಂ. ಸಾಮಾನ್ಯ ಸಭೆಯಲ್ಲಿ ಈ ಬಗ್ಗೆ ಗಂಭೀರ ಚರ್ಚೆಯಾಗಿ ಠರಾವು ಕೂಡ ಪಾಸಾಗಿತ್ತು. ಆದರೆ ಮೀನು ಮಾರುಕಟ್ಟೆ ಎದುರು ಮೀನು ಮಾರಾಟ ಸ್ಥಗಿತಗೊಳಿಸದ ಹಿನ್ನೆಲೆಯಲ್ಲಿ ಆಕ್ರೋಶಗೊಂಡ ಮೀನು ಮಾರಾಟ ಮಹಿಳೆಯರು ಶಿರಾಲಿ ಗ್ರಾಪಂ ಎದುರಿನಲ್ಲೇ ಕುಳಿತು ಮೀನು ಮಾರಾಟ ಮಾಡಿ ಪ್ರತಿಭಟನೆ ಮುಂದುವರಿಸಿದ್ದಾರೆ.

ಸುಸಜ್ಜಿತ ಮೀನು ಮಾರುಕಟ್ಟೆಯಲ್ಲಿ ಯಾವುದೇ ತಕರಾರಿಲ್ಲದೇ ಮೀನುಗಾರ ಮಹಿಳೆಯರು ಮೀನು ಮಾರಾಟ ಮಾಡುತ್ತಾ ಬಂದಿದ್ದಾರೆ. ಆದರೆ ಹೊರಗೆ ಮೀನು ವ್ಯಾಪಾರಕ್ಕೆ ಅವಕಾಶ ಮಾಡಿಕೊಟ್ಟಿರುವುದು ಸರಿಯಲ್ಲ. ಇದರಿಂದ ವ್ಯಾಪಾರ ಇಲ್ಲದೇ ಅವರ ಜೀವನದ ಮೇಲೆ ಪರಿಣಾಮ ಬೀರಲಿದೆ. ಸಮಸ್ಯೆ ಮತ್ತಷ್ಟು ಜಟಿಲವಾಗುವ ಪೂರ್ವದಲ್ಲಿ ಅಧಿಕಾರಿಗಳು ಬಗೆಹರಿಸಿ ಮೀನು ಮಾರಾಟ ಮಹಿಳೆಯರಿಗೆ ನ್ಯಾಯ ಒದಗಿಸಿಕೊಡಬೇಕು.

Advertisement

Udayavani is now on Telegram. Click here to join our channel and stay updated with the latest news.

Next