ಸುರಪುರ: ಕಾಂಗ್ರೆಸ್ ಮತು ಬಿಜೆಪಿ ಒಂದೇ ನಾಣ್ಯದ ಎರಡು ಮುಖ ಇದ್ದಂತೆ. ಬಿಜೆಪಿ ಹಿಂದುತ್ವದ ಮೇಲೆ ಅಧಿಕಾರ ನಡೆಸಿದರೆ, ಕಾಂಗ್ರೆಸ್‌ಪಕ್ಷ ಮತ, ಧರ್ಮ ವಿಭಜಸುತ್ತ ಒಡೆದಾಳುವ ನೀತಿ ಅನುಸರಿಸಿದೆ. ಇವೆರೆಡು ಪಕ್ಷಗಳು ಪ್ರಜಾಪ್ರಭುತ್ವದ ನಿಜವಾದ ವಿರೋಧಿಗಳು. ಮತದಾರರ ಪ್ರಭುಗಳು ಪ್ರಜಾಪ್ರಭುತ್ವದ ಉಳುವಿಗೆ, ಸಂವಿಧಾನ ರಕ್ಷಣೆಗಾಗಿ ಬಿಎಸ್‌ಪಿ ಬೆಂಬಲಿಸಬೇಕು ಎಂದು ರಾಯಚೂರು ಲೋಕಸಭೆ ಕ್ಷೇತ್ರದ ಬಹುಜನ ಸಮಾಜ ಪಕ್ಷದ ಅಭ್ಯರ್ಥಿ ವೆಂಕನಗೌಡ ನಾಯಕ ಮನವಿ ಮಾಡಿದರು.
ನಗರದಲ್ಲಿ ರವಿವಾರ ಹಮ್ಮಿಕೊಂಡಿದ್ದ ಪ್ರಚಾರ ಸಭೆಯಲ್ಲಿ ಮಾತನಾಡಿ ಅವರು, ಸಂವಿಧಾನವನ್ನೆ ಬದಲಾಯಿಸುತ್ತೇವೆ ಎಂದು ಬಿಜೆಪಿ ಅಬ್ಬರಿಸಿದರೆ. ಇನ್ನೊಂದೆಡೆ ಜಾತಿ ಧರ್ಮಗಳ ಓಲೈಕೆಯಲ್ಲಿ ತೊಡಗಿರುವ ಕಾಂಗ್ರೆಸ್ ದಲಿತ ವಿರೋಧಿ ನೀತಿ ಅನುಸರಿಸುತ್ತಿದೆ. ಇದರಿಂದ ದೇಶದ ಹಿಂದುಳಿದ, ದಲಿತ ಶೋಷಿತ, ತುಳಿತಕ್ಕೊಳಪಟ್ಟ ದಮನಿತರ ಬಹುಸಂಖ್ಯಾತ ಜನಾಂಗ ಆತಂಕದಲ್ಲಿದೆ. ಅಧಿಕಾರದ ಆಸೆಗಾಗಿ ಪ್ರಜಾಪ್ರಭುತ್ವನ್ನೆ ದಿಕ್ಕರಿಸುತ್ತಿರುವ ಇವೆರಡು ಪಕ್ಷಗಳಿಗೆ ಮತದಾರರು ತಕ್ಕ ಪಾಠ ಕಲಿಸುವ ಮೂಲಕ ಬಿಎಸ್‌ಪಿ ಬೆಂಬಲಿಸ ಬೇಕು ಎಂದು ಕರೆ ನೀಡಿದರು.
ಹಾಲಿ ಸಂಸದ ಬಿ.ವಿ. ನಾಯಕ ನಿಷಿ¢ಯ ವ್ಯಕ್ತಿ. ಕ್ಷೇತ್ರದ ಅಭಿವೃದ್ಧಿ, ಬಡವರ ಬಗ್ಗೆ ಎಳ್ಳಷ್ಟು ಕಾಳಜಿ ಇಲ್ಲ. ಕ್ಷೇತ್ರಕ್ಕೆ ಯಾವೊಂದು ಯೋಜನೆ ತಂದಿಲ್ಲ. ಐಐಟಿ ಸ್ಥಾಪನೆಗೆ ಪ್ರಯತ್ನಸಲಿಲ್ಲ. ಇಂತವರಿಗೆ ಅಧಿಕಾರ ನೀಡಿದರೆ ಯಾವುದೇ ಲಾಭವಿಲ್ಲ. ಕಾರಣ ಮತದಾರರು ಬಡತನ ನಿರ್ಮಲನೆಗಾಗಿ. ಕ್ಷೇತ್ರದ ಅಭಿವೃದ್ಧಿಗಾಗಿ ನನ್ನನ್ನು ಗೆಲ್ಲಿಸುವ ಮೂಲಕ ಬಹುಜನ ಸಮಾಜ ಪಕ್ಷ ಬಲಪಡಿಸಬೇಕು ಎಂದು ಪ್ರಾರ್ಥಿಸಿದರು.
ನಾನು ಗೆದ್ದರೆ ಪ್ರಜಾಪ್ರಭುತ್ವ ಗೆದ್ದಂತೆ. ಅದು ಮತದಾರನ ಗೆಲುವು. ಆದ್ದರಿಂದ ಮತದಾರರು ಪ್ರಜಾಪ್ರಭುತ್ವದ ಉಳುವಿಗಾಗಿ ಬಿಎಸ್‌ಪಿ ಬೆಂಬಲಿಸಬೇಕು. ಪಕ್ಷದ ಚಿಹ್ನೆಯಾದ ಆನೆ ಗುರುತಿಗೆ ಮತ ನೀಡಬೇಕು ಎಂದು ಕೋರಿದರು.
ಡಾ| ಅಂಬೇಡ್ಕರ್ ಕನಸು ನನಸು ಮಾಡುವುದು ನಮ್ಮ ನಿಮ್ಮೆಲ್ಲರ ಜವಾಬ್ದಾರಿ. ಪ್ರತಿ ಸಮಸ್ಯೆಗೂ ಸಂವಿಧಾನದಲ್ಲಿ ಪರಿಹಾರವಿದೆ. ಸಂಪೂರ್ಣ ಸಂವಿಧಾನ ಜಾರಿಗೆ ಪಕ್ಷ ಬದ್ಧವಾಗಿದೆ. ಬಡತನ ನಿರ್ಮೂಲನೆ, ಪ್ರತಿ ಕುಟುಂಬಕ್ಕೂ ಸೂರು, ಉದ್ಯೋಗ, ಮನೆಗೊಬ್ಬರಿಗೆ ನೌಕರಿ, ರೈತರ ಆದಾಯ ದ್ವಿಗುಣದೊಂದಿಗೆ ಕೃಷಿಗೆ ಆದ್ಯತೆ ನೀಡಲಾಗುವುದು. ಸಂವಿಧಾನ ರಕ್ಷಣೆಯೇ ನಮ್ಮ ಮೂಲ ಧ್ಯೇಯ. ಸರ್ವಜನರ ಕಲ್ಯಾಣಕ್ಕಾಗಿ, ದೇಶದ ಭವಿಷ್ಯಕ್ಕಾಗಿ, ಕ್ಷೇತ್ರದ ಅಭಿವೃದ್ಧಿಗಾಗಿ ಬಿಎಸ್‌ಪಿ ಬೆಂಬಲಿಸಬೇಕು ಎಂದು ಪ್ರಾರ್ಥಿಸಿದರು.