ಮಂಗಳೂರು: ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರ ಸೂತ್ರ ಹಿಡಿಯುತ್ತಿದ್ದಂತೆ, ಕರಾವಳಿಯನ್ನು ಕಳೆದುಕೊಂಡು ನಿರಾಶೆ ಎದುರಿಸು ತ್ತಿರುವ ಕಾಂಗ್ರೆಸ್ ಪಾಲಯದಲ್ಲಿ ಮಾತ್ರ ವಿವಿಧ ಹುದ್ದೆಗಳ ಆಶಾಭಾವ ಆರಂಭವಾಗಿದೆ!
ಕರಾವಳಿ ಅಭಿವೃದ್ಧಿ ಪ್ರಾಧಿಕಾರ, ಮೀನುಗಾರಿಕಾ ಅಭಿವೃದ್ಧಿ ನಿಗಮ, ಗೇರು ಅಭಿವೃದ್ಧಿ ನಿಗಮ, ಅರಣ್ಯ ಅಭಿವೃದ್ಧಿ ನಿಗಮ ಸಹಿತ ವಿವಿಧ ನಿಗಮಗಳ ಮೇಲೆ ಕಾಂಗ್ರೆಸ್‌ನ ಕರಾವಳಿ ಮುಖಂಡರು ಕಣ್ಣಿಟ್ಟಿದ್ದಾರೆ. ಜತೆಗೆ ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರ ಸಹಿತ ವಿವಿಧ ಪ್ರಾಧಿಕಾರ, ಹಲವು ಅಕಾಡೆಮಿಗಳ ಹುದ್ದೆಯ ಬಗ್ಗೆಯೂ ಕಾಂಗ್ರೆಸ್ ಮುಖಂಡರು ಕನಸು ಕಾಣುತ್ತಿದ್ದಾರೆ. ಈ ಸಂಬಂಧ ಕೆಲವರು ಈಗಾಗಲೇ ಬೆಂಗಳೂರು ಮಟ್ಟದಲ್ಲಿ ಲಾಬಿ ಮಾಡಲಾರಂಭಿಸಿ ದ್ದಾರೆ. ಜತೆಗೆ ವಿವಿಧ ನಿಗಮ, ಮಂಡಳಿಯ ನಿರ್ದೇಶಕ ಸ್ಥಾನ ಪಡೆಯಲು ಕೆಲವರು ಆಸೆಪಟ್ಟಿದ್ದಾರೆ.
ಕರಾವಳಿಯಲ್ಲಿ ಬಹುತೇಕ ಧೂಳೀಪಟವಾಗಿರುವ ಕಾಂಗ್ರೆಸ್‌ನಲ್ಲಿ ಭರವಸೆ ಮೂಡಿಸಲು ವಿವಿಧ ಆಯಕಟ್ಟಿನ ನಿಗಮ-ಮಂಡಳಿ ಸ್ಥಾನ ಪಕ್ಷದ ಪ್ರಮುಖರಿಗೆ ನೀಡುವ ಮೂಲಕ ಕರಾವಳಿ ಕಾಂಗ್ರೆಸ್‌ಗೆ ಚೈತನ್ಯ ನೀಡುವ ಬಗ್ಗೆ ಚರ್ಚೆ ನಡೆಯುತ್ತಿದೆ. ಆದರೆ ಕರಾವಳಿ ಹೊರತುಪಡಿಸಿ ಉಳಿದ ಜಿಲ್ಲೆಗಳಲ್ಲಿ ಕಾಂಗ್ರೆಸ್ ಗಮನಾರ್ಹ ಸಾಧನೆ ಮಾಡಿದ ಕಾರಣದಿಂದ ಅಲ್ಲಿನವರಿಗೆ ಆದ್ಯತೆ ನೀಡಬೇಕಾದ ಅನಿವಾರ್ಯತೆ ಕಾಂಗ್ರೆಸ್‌ಗೆ ಎದುರಾಗಿದ್ದು, ಈ ಕಾರಣದಿಂದ ಕರಾವಳಿಯ ವಿವಿಧ ನಿಗಮ ಮಂಡಳಿ ಹುದ್ದೆಯ ಮೇಲೆ ಹತ್ತಿರದ ಜಿಲ್ಲೆಯವರು ಕೂಡ ಲಾಬಿ ಶುರು ಮಾಡಿದ್ದಾರೆ.
ಈ ಮಧ್ಯೆ ಬಿಜೆಪಿ ಸರಕಾರದಲ್ಲಿ ಕರಾವಳಿಗೆ ಕಿಯೋನಿಕ್ಸ್ ಅಧ್ಯಕ್ಷ ಸ್ಥಾನ, ಮೈಸೂರು ಎಲೆಕ್ಟ್ರಿಕಲ್ ಇಂಡಸ್ಟ್ರೀಸ್ ಲಿ., ಅಲೆಮಾರಿ, ಅರೆ ಅಲೆಮಾರಿಗಳ ಅಭಿವೃದ್ಧಿ ನಿಗಮ ಸಹಿತ ವಿವಿಧ ಹುದ್ದೆ ಪಕ್ಷದ ಪ್ರಮುಖರಿಗೆ ದೊರೆತ ಕಾರಣದಿಂದ ರಾಜ್ಯದ ವಿವಿಧ ನಿಗಮ ಸ್ಥಾನಮಾನದ ಬಗ್ಗೆ ಕಾಂಗ್ರೆಸ್‌ನ ಕೆಲವರು ನಿರೀಕ್ಷೆಯಲ್ಲಿದ್ದಾರೆ.
ಕಾಂಗ್ರೆಸ್ ಆಡಳಿತ ಬಂದರೆ ಬಿಲ್ಲವ, ಬಂಟ ಸಹಿತ ವಿವಿಧ ಸಮುದಾಯಗಳ ಅಭಿವೃದ್ಧಿಗೆ ನಿಗಮ ಮಾಡುವ ಬಗ್ಗೆ ಪ್ರಣಾಳಿಕೆಯಲ್ಲಿ ಘೋಷಿಸಲಾಗಿದೆ. ಇದರಂತೆ ನಿಗಮ ರಚನೆ ಆದಲ್ಲಿ ಕರಾವಳಿಯ ಪಕ್ಷದ ಪ್ರಮುಖ ನಾಯಕರಿಗೆ ಇದರಲ್ಲಿ ಉನ್ನತ ಸ್ಥಾನ ದೊರೆಯುವ ಸಾಧ್ಯತೆಯೂ ಇದೆ.