ಬೆಂಗಳೂರು: ವಿವಿಧ ಭಾಷೆಗಳಿಂದ ಕನ್ನಡಕ್ಕೆ ಹಲವು ಕೃತಿಗಳು ಅನುವಾದಗೊಂಡಿದ್ದು, ಅವುಗಳನ್ನು ಓದುವ ಹವ್ಯಾಸ ರೂಢಿಸಿಕೊಳ್ಳುವಂತೆ ಯುವ ಸಮುದಾಯಕ್ಕೆ ವಿಮರ್ಶಕ ಡಾ.ಎಚ್.ಎಸ್.ರಾಘವೇಂದ್ರ ರಾವ್ ಕರೆ ನೀಡಿದರು.
ಕನ್ನಡ ಸಂಘರ್ಷ ಸಮಿತಿ, ಮಂಗಳವಾರ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಲೇಖಕಿ ಡಾ.ವಿಜಯಾ ಸುಬ್ಬರಾಜ್ ಅವರ “ಲೂಷನ್ ಅವರ ಆಯ್ದ 10 ಚೀನೀ ಕಥೆಗಳು’ ಮತ್ತು “ಮರಳ ದಿಬ್ಬಗಳಲ್ಲಿ ಮಹಿಳೆ’ ಅನುವಾದಿತ ಕೃತಿಗಳನ್ನು ಬಿಡುಗಡೆ ಗೊಳಿಸಿ ಮಾತನಾಡಿದ ಅವರು, ಕನ್ನಡಕ್ಕೆ ಅನುವಾದಗೊಂಡ ಅನ್ಯ ಭಾಷೆಯ ಕೃತಿಗಳನ್ನು ಓದುವುದರಿಂದ ಬರಹಗಾರರ ಆಲೋಚನಾ ಲಹರಿ ವಿಸ್ತಾರಗೊಳ್ಳುತ್ತದೆ ಎಂದರು.
ಈ ಹಿಂದೆ ಅನುವಾದ ಎಂದರೆ ಸಂಸ್ಕೃತದಿಂದ ಕನ್ನಡಕ್ಕೆ ಹಾಗೂ ಆಂಗ್ಲಭಾಷೆಯಿಂದ ಕನ್ನಡಕ್ಕೆ ತರುವುದಾಗಿತ್ತು. ಆದರೆ ಈಗ ಆ ಸಂಸ್ಕೃತಿ ಬದಲಾಗಿದೆ. ಕುವೆಂಪು ಭಾಷಾ ಭಾರತಿ ಪ್ರಾಧಿಕಾರ ಹಲವು ಕೃತಿಗಳನ್ನು ಅನುವಾದ ಮಾಡುತ್ತದೆ. ಬೇರೆ ಬೇರೆ ಭಾಷೆಯ ಕೃತಿಗಳನ್ನು ಓದುವುದರಿಂದ ಅಲ್ಲಿನ ಸಾಂಸ್ಕೃತಿ ಮತ್ತು ಸಾಹಿತ್ಯದ ಪರಿಚಯವಾಗುತ್ತದೆ ಎಂದು ತಿಳಿಸಿದರು.
ಲೇಖಕಿ ವಿಜಯಾ ಸುಬ್ಬರಾಜ್ ಅವರ ಬರವಣಿಗೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಅವರು, ಇತ್ತೀಚಿನ ದಿನಗಳಲ್ಲಿ ಒಂದೇ ಒಂದು ಕೃತಿ ಬರೆದವರಿಗೂ, ಹೆಚ್ಚಿನ ಮನ್ನಣೆ ಸಿಗುತ್ತದೆ. ಆದರೆ ವಿಜಯಾ ಅವರು ಐವತ್ತು ದಶಕಗಳಿಂದ ಸಾಹಿತ್ಯದ ಕೃಷಿಯಲ್ಲಿ ತೊಡಗಿ ಕೊಂಡಿದ್ದಾರೆ. ಆದರೆ ಅವರಿಗೆ ಸಿಗಬೇಕಾದ ಗೌರವ, ಮನ್ನಣೆ ಇನ್ನೂ ಸಿಕ್ಕಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಇದೇ ವೇಳೆ ವಿಜಯಾ ಅವರ “ಲೂಷನ್ ಅವರ ಆಯ್ದ 10 ಚೀನೀ ಕಥೆಗಳು’ ಮತ್ತು “ಮರಳ ದಿಬ್ಬಗಳಲ್ಲಿ ಮಹಿಳೆ’ ಕೃತಿಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಸಾಹಿತಿ ರಾಮರಾವ್ ಕುಲಕರ್ಣಿ, ಕನ್ನಡ ಸಂಘರ್ಷ ಸಮಿತಿ ಅಧ್ಯಕ್ಷ ಡಾ. ಕೋ.ವೆಂ.ರಾಮಕೃಷ್ಣೇಗೌಡ, ಲೇಖಕಿ ಡಾ. ವಿಜಯಾ ಸುಬ್ಬರಾಜ್, ಸದ್ಭಾವನ ಪ್ರತಿಷ್ಠಾನದ ಅಧ್ಯಕ್ಷ ಎಂ. ಪ್ರಕಾಶಮೂರ್ತಿ ಮತ್ತಿತರರು ಉಪಸ್ಥಿತರಿದ್ದರು.