Advertisement

“ವಿಜಯ ಬ್ಯಾಂಕ್‌ ವಿಲೀನ ತಡೆವಲ್ಲಿ ವಿಫಲ’

08:37 AM Apr 06, 2019 | Team Udayavani |

ಮಂಗಳೂರು: ಲಾಭದಲ್ಲಿರುವ ವಿಜಯ ಬ್ಯಾಂಕನ್ನು ನಷ್ಟದಲ್ಲಿರುವ ಬ್ಯಾಂಕ್‌ ಆಫ್‌ ಬರೋಡಾ ಜತೆ ವಿಲೀನ ಮಾಡಿರುವುದು ಖಂಡನೀಯ; ಸಂಸದ ನಳಿನ್‌ ಮನಸ್ಸು ಮಾಡಿದ್ದರೆ ಇದನ್ನು ತಡೆಯಬಹುದಿತ್ತು; ಕರಾವಳಿಯ ಜನರು ಕಟ್ಟಿದ ವಿಜಯ ಬ್ಯಾಂಕಿಗೆ ಈ ಗತಿ ಬಂದಿರುವುದಕ್ಕೆ ಸಂಸದ ಅವರೇ ಜವಾಬ್ದಾರರು ಎಂದು ವಿಜಯ ಬ್ಯಾಂಕ್‌ ಹೌಸಿಂಗ್‌ ಫೈನಾನ್ಸ್‌ನ ಮಾಜಿ ವ್ಯವಸ್ಥಾಪಕ ನಿರ್ದೇಶಕ ಹಾಗೂ ವಿಜಯ ಬ್ಯಾಂಕ್‌ ನೌಕರರ ಯೂನಿಯನ್‌ನ ಮಾಜಿ ಅಧ್ಯಕ್ಷ ಸುಬ್ಬಯ್ಯ ಶೆಟ್ಟಿ ಆರೋಪಿಸಿದ್ದಾರೆ.

Advertisement

ಕರಾವಳಿ ಭಾಗದ ವಿಶೇಷವಾಗಿ ಕೃಷಿಕರ ಜೀವನಾಡಿಯಾಗಿದ್ದ ವಿಜಯ ಬ್ಯಾಂಕ್‌ ಮುಂದೆ ಗುಜರಾತಿನ ಉದ್ಯಮಿಗಳ ಕೇಂದ್ರ ಸ್ಥಾನ ಆಗುತ್ತಿರುವುದು ದುರಂತ. ಕರಾವಳಿಯ ಜನರು ಈ ಬ್ಯಾಂಕಿನ ಜತೆ ಭಾವನಾತ್ಮಕ ಸಂಬಂಧ ಹೊಂದಿದ್ದು, ಅದೇ ರೀತಿ ಬ್ಯಾಂಕ್‌ ಕೂಡ ಪ್ರಾದೇಶಿಕ, ಭೌಗೋಳಿಕ, ಸಾಂಸ್ಕೃತಿಕ ಭಾವನೆ ಗಳೊಂದಿಗೆ ವ್ಯವಹಾರದಲ್ಲಿ ಸ್ಪಂದಿಸುತ್ತಿತ್ತು. ಮುಂದೆ ನಷ್ಟದಲ್ಲಿರುವ ಬರೋಡಾ ಮತ್ತು ದೇನಾ ಬ್ಯಾಂಕುಗಳಿಂದ ಉಂಟಾಗುವ ಸಮಸ್ಯೆಗಳಿಗೆ ವಿಜಯ ಬ್ಯಾಂಕಿನ ಷೇರುದಾರರು, ಠೇವಣಿದಾರರು, ಖಾತೆ ದಾರರು ಸಂಕಷ್ಟ ಅನುಭವಿಸುವ ದಿನಗಳು ದೂರವಿಲ್ಲ ಎಂದವರು ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಪ್ರಸ್ತುತ ಚುನಾವಣೆಯಲ್ಲಿ ಈ ವಿಷಯ ಗಂಭೀರವಾಗಿ ಚರ್ಚೆಗೆ ಒಳಪಡ ಬೇಕಾಗುತ್ತದೆ. ಬ್ಯಾಂಕಿನ ವಿಲೀನೀಕರಣ ದಂತಹ ಸಂಗತಿಗಳನ್ನು ಈ ಪ್ರದೇಶದ ಜನರೊಂದಿಗೆ, ಬ್ಯಾಂಕ್‌ ನೌಕರರ ಜತೆ, ಗಣ್ಯರೊಂದಿಗೆ ಕನಿಷ್ಠ ಸೌಜನ್ಯಕ್ಕಾದರೂ ಚರ್ಚಿಸಬೇಕಾಗಿತ್ತು. ಅದರ ಜವಾಬ್ದಾರಿ ಸ್ಥಳೀಯ ಸಂಸದರೇ ವಹಿಸಬೇಕಿತ್ತು. ಅವರು ಅದನ್ನು ನಿರ್ವಹಿಸಿಲ್ಲ. ವಿಲೀನೀ ಕರಣವನ್ನು ತಡೆಯಲು ಸಾಧ್ಯವಿಲ್ಲ ಎಂದಾಗ ಅವರು ಕರಾವಳಿಯ ಜನರ ಧ್ವನಿಯಾಗಿಸಿ ಜನರೊಂದಿಗೆ ಸೇರಬೇಕಿತ್ತು. ನರಸಿಂಹನ್‌ ಕಮಿಟಿ ವಿಜಯ ಬ್ಯಾಂಕ್‌ ಹೆಸರನ್ನಾಗಲಿ, ಬೇರೆ ಯಾವುದೇ ಬ್ಯಾಂಕಿನ ಹೆಸರನ್ನು ಹೇಳಿಲ್ಲ. ವಿಜಯ ಬ್ಯಾಂಕ್‌ ಹೆಸರು ಸೇರಿಸಿದ್ದು ಈಗಿನ ಸರಕಾರ. ಸಂಸದರು ಇದರಲ್ಲಿ ವಿಫಲರಾಗಿರುವುದು ವಿಷಾದನೀಯ ಎಂದರು.

ತಾನು ಆರೆಸ್ಸೆಸ್‌ ತಣ್ತೀ ಸಿದ್ಧಾಂತಗಳನ್ನು ಒಪ್ಪಿರುವ ವ್ಯಕ್ತಿ ಎಂದು ತಿಳಿಸಿದ ಸುಬ್ಬಯ್ಯ ಶೆಟ್ಟಿ, ವಿಜಯ ಬ್ಯಾಂಕಿನಲ್ಲಿ ಬಿಎಂಎಸ್‌ ಸಂಘಟನೆಯನ್ನು ಕಟ್ಟಿ ಬೆಳೆಸಿದ್ದೇನೆ. ಕಮ್ಯೂನಿಸ್ಟರ ಪ್ರಭಾವಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ 1970ರ ದಶಕದ‌ಲ್ಲಿ ಬ್ಯಾಂಕಿಗೆ ಕೇರಳದಿಂದ 69 ಮಂದಿ ಮತ್ತು ಪ.ಬಂಗಾಲದಿಂದ 59 ಮಂದಿ ಆರೆಸ್ಸೆಸ್‌ ಹಿನ್ನೆಲೆಯ ಯುವಕರನ್ನು ನೇಮಕ ಮಾಡಿದ್ದೆ ಎಂದರು. ಬ್ಯಾಂಕಿನ ನಿವೃತ್ತ ಸಿಬಂದಿ ನಾರಾಯಣ ಸಾಲಿಯಾನ್‌, ತಣ್ಣೀರುಪಂತ ಗ್ರಾ.ಪಂ. ಸದಸ್ಯ ಮತ್ತು ಸದಾನಂದ ಶೆಟ್ಟಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next