Advertisement

ಬಿಎಸ್‌ವೈಗೆ ಸದನದ ವಿಶ್ವಾಸ

01:43 AM Jul 30, 2019 | Team Udayavani |

ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ವಿಧಾನಸಭೆಯಲ್ಲಿ ಸೋಮವಾರ ಧ್ವನಿಮತದ ವಿಶ್ವಾಸಮತ ಸಾಬೀತುಪಡಿಸಿದ್ದು, ಇದರೊಂದಿಗೆ ರಾಜ್ಯದಲ್ಲಿ ಅಧಿಕೃತವಾಗಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದಿದೆ.

Advertisement

ಕಾಂಗ್ರೆಸ್‌, ಜೆಡಿಎಸ್‌ ಹಾಗೂ ಕೆಪಿಜೆಪಿ ಸೇರಿ ಹದಿನೇಳು ಶಾಸಕರ ಅನರ್ಹತೆಯಿಂದಾಗಿ ಸದನದ ಸಂಖ್ಯಾಬಲ 208ಕ್ಕೆ ಇಳಿದಿತ್ತು. ಹೀಗಾಗಿ ಬಿಜೆಪಿ 106 ಸದಸ್ಯ ಬಲದೊಂದಿಗೆ ಬಹುಮತ ಹೊಂದಿದ್ದರಿಂದ ಪ್ರತಿಪಕ್ಷವು ವಿಶ್ವಾಸಮತ ನಿರ್ಣಯ ಮತಕ್ಕೆ ಹಾಕುವ ಒತ್ತಾಯವನ್ನೂ ಮಾಡಲಿಲ್ಲ. ಹೀಗಾಗಿ, ಧ್ವನಿಮತದ ಮೂಲಕ ಯಡಿಯೂರಪ್ಪ ಅವರು ಮಂಡಿಸಿದ ವಿಶ್ವಾಸಮತ ನಿರ್ಣಯ ಅಂಗೀಕಾರಗೊಂಡ ಬಗ್ಗೆ ಸ್ಪೀಕರ್‌ ರಮೇಶ್‌ಕುಮಾರ್‌ ಪ್ರಕಟಿಸಿದರು.

ಯಡಿಯೂರಪ್ಪ ಅವರು ವಿಶ್ವಾಸಮತದಲ್ಲಿ ಯಶಸ್ವಿಯಾಗುತ್ತಿದ್ದಂತೆ ಬಿಜೆಪಿ ಸದಸ್ಯರ ಮುಖದಲ್ಲಿ ಸಂತಸ ಮೂಡಿತು. ಕಳೆದೊಂದು ತಿಂಗಳಿನಿಂದ ನಡೆದ ರಾಜಕೀಯ ಹೈಡ್ರಾಮಾ ಕೊನೆಗೊಂಡು ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಂತಾಗಿದೆ. ಸದ್ಯದ ಮಟ್ಟಿಗೆ ಆರು ತಿಂಗಳು ನೂತನ ಸರ್ಕಾರಕ್ಕೆ ಯಾವುದೇ ಆತಂಕವಿಲ್ಲ.

ಸೇಡಿನ ರಾಜಕಾರಣ ಇಲ್ಲ: ವಿಶ್ವಾಸಮತ ನಿರ್ಣಯ ಮಂಡಿಸಿ ಮಾತನಾಡಿದ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರು, ನಾಡದೇವತೆ ಚಾಮುಂಡೇಶ್ವರಿ, ಸಂವಿಧಾನ ಶಿಲ್ಪಿ ಡಾ.ಬಾಬಾ ಸಾಹೇಬ್‌ ಅಂಬೇಡ್ಕರ್‌ ಅವರನ್ನು ಸ್ಮರಿಸಿ, ‘ರಾಜ್ಯದ ಜನರ ಸೇವೆ ಮಾಡಲು ಅವಕಾಶ ಸಿಕ್ಕಿದೆ. ಸಿದ್ದರಾಮಯ್ಯ, ಕುಮಾರಸ್ವಾಮಿ ಸೇಡಿನ ರಾಜಕಾರಣ ಮಾಡಿಲ್ಲ. ನಮ್ಮ ಸರ್ಕಾರವು ಸಹ ಸೇಡಿನ ರಾಜಕಾರಣ ಮಾಡಲ್ಲ. ‘ಫ‌ರ್ಗೆಟ್ ಅಂಡ್‌ ಫ‌ರ್ಗೀವ್‌’ ನಮ್ಮ ಇಚ್ಛೆ. ಕುಸಿದಿರುವ ಆಡಳಿತ ಯಂತ್ರಕ್ಕೆ ಚುರುಕು ನೀಡಲಾಗುವುದು’ ಎಂದು ಹೇಳಿದರು.

ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕಾರ ಮಾಡಿದ ಕೂಡಲೇ ರೈತರ ನೆರವಿಗೆ ಧಾವಿಸಿದ್ದೇನೆ. ಪ್ರಧಾನ ಮಂತ್ರಿ ಕೃಷಿ ಸಮ್ಮಾನ್‌ ಯೋಜನೆಗೆ ರಾಜ್ಯ ಸರ್ಕಾರದಿಂದ ನಾಲ್ಕು ಸಾವಿರ ಕೋಟಿ ರೂ. ನೀಡುವ ತೀರ್ಮಾನ ಕೈಗೊಂಡಿದ್ದೇನೆ. ನೇಕಾರರ ಸಾಲ ಮನ್ನಾ ಮಾಡುವ ಘೋಷಣೆ ಮಾಡಿದ್ದೇನೆ. ಉತ್ತಮ ಆಡಳಿತ ನೀಡುವ ಗುರಿ ಹೊಂದಿದ್ದು ಪ್ರತಿಪಕ್ಷಗಳು ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.

Advertisement

ಆಡಳಿತ ಯಂತ್ರ ಸ್ಥಗಿತವಾಗಿಲ್ಲ: ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಮಾತನಾಡಿ, ಯಡಿಯೂರಪ್ಪ ಅವರು ಯಾವ ಮಾರ್ಗದಿಂದ ಮುಖ್ಯಮಂತ್ರಿಯಾದರು ಎಂಬ ಬಗ್ಗೆ ನಾನು ಚರ್ಚೆ ಮಾಡಲ್ಲ. ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ. ನಾಡಿನ ಒಳಿತಿಗಾಗಿ ಪ್ರಾಮಾಣಿಕವಾಗಿ ಕೆಲಸ ಮಾಡಬೇಕು. ನಾನು ಹಾಗೂ ಕುಮಾರಸ್ವಾಮಿ ಪ್ರಾಮಾಣಿಕವಾಗಿ ಕೆಲಸ ಮಾಡಿದ್ದೇವೆ. ಆಡಳಿತ ಯಂತ್ರ ಸ್ಥಗಿತಗೊಂಡಿದೆ ಎಂಬುದು ಸರಿಯಲ್ಲ. ಅಭಿವೃದ್ಧಿ ಕೆಲಸಗಳು ನಡೆಯುತ್ತಿವೆ ಎಂದು ತಿರುಗೇಟು ನೀಡಿದರು.

ಮೈತ್ರಿ ಸರ್ಕಾರ ಜನ ಮೆಚ್ಚುವ ಆಡಳಿತ ನೀಡಿದೆ. ಆಡಳಿತ ಸ್ಥಗಿತವಾಗಿಲ್ಲ. ಜನಸೇವೆಯನ್ನು ಪ್ರಾಮಾಣಿಕವಾಗಿ ಮಾಡಿ ದ್ದೇವೆ. ನಾನು ಕಡೇ ಬಜೆಟ್ ಮಂಡಿಸಿದ್ದ ವೇಳೆ ರೈತ ಬೆಳಕು ಯೋಜನೆಯಡಿ 10 ಸಾವಿರ ರೂ. ನೀಡುವ ಯೋಜನೆ ಘೋಷಿಸಿದ್ದೆ ಎಂದರು.

ನೇಕಾರರ ಸಾಲ ಮನ್ನಾ ಕೂಡ ನಮ್ಮ ಸರ್ಕಾರದ ಅವಧಿಯಲ್ಲಿ ಮಾಡಲಾಗಿತ್ತು. ನೀವು ಅದನ್ನು ಪುನರುಚ್ಛಾರ ಮಾಡಿದ್ದೀರಿ, ಅದಕ್ಕೆ ನಿಮಗೆ ಅಭಿನಂದನೆಗಳು ಎಂದು ಹೇಳಿದರು.

ಜನಾದೇಶವಿರಲಿಲ್ಲ: ಬಿಜೆಪಿಗೆ ಜನಾದೇಶವಿಲ್ಲ, ಶಾಸಕರು ಅತೃಪ್ತರಾಗಿರಲಿಲ್ಲ, ನೀವು ಅವರನ್ನು ಅತೃಪ್ತರಾಗಿ ಮಾಡಿದ್ದೀರಿ. ಯಡಿಯೂರಪ್ಪ ಅವರಿಗೆ ಒಂದು ಬಾರಿಯೂ ಜನಾದೇಶ ಸಿಗಲಿಲ್ಲ. ಎಷ್ಟು ದಿನ ನೀವು ಅಧಿಕಾರದಲ್ಲಿ ಇರುತ್ತೀರೋ ನೋಡೋಣ ಎಂದು ಕಾಲೆಳೆದರು. ಮುಖ್ಯ ಮಂತ್ರಿಯಾಗಿ ಪ್ರಮಾಣ ಸ್ವೀಕರಿಸಿದ ಒಂದೇ ದಿನದಲ್ಲಿ ಹಿಂದಿನ ಸರ್ಕಾರ ಹೊರಡಿಸಿದ್ದ ಆದೇಶ, ವರ್ಗಾವಣೆ, ಕಾಮಗಾರಿ ಟೆಂಡರ್‌ ಎಲ್ಲದಕ್ಕೂ ತಡೆ ನೀಡಿದ್ದೀರಿ. ದ್ವೇಷದ ರಾಜಕಾರಣ ಮಾಡಲ್ಲ ಎಂದು ಹೇಳಿ ಹೀಗೆ ಮಾಡಿದ್ದು ಸರಿಯಲ್ಲ ಎಂದು ಸಿದ್ದರಾಮಯ್ಯ ಹೇಳಿದರು.

ದಾಖಲೆ ಸಮೇತ ಹೇಳಿ: ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ಮಾತನಾಡಿ, ಆಡಳಿತ ಯಂತ್ರ ಕುಸಿದಿದೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಅವರು ಹೇಳಿದ್ದಾರೆ. ಪ್ರತಿಪಕ್ಷ ನಾಯಕರಾಗಿ ಹೇಗೆ ಆಡಳಿತ ಯಂತ್ರ ಇತ್ತು ಎಂಬ ಮಾಹಿತಿ ಪಡೆದಿದ್ದಾರೆ. ಅದನ್ನು ಸದನದಲ್ಲಿ ದಾಖಲೆ ಸಹಿತ ಚರ್ಚೆ ಮಾಡಲಿ, ಕೇವಲ ಬಾಯಿ ಚಪಲಕ್ಕೆ ಮಾತನಾಡುವುದು ಬೇಡ ಎಂದು ಹೇಳಿದರು. ಹಲವಾರು ಅಡಚಣೆಗಳ ಮಧ್ಯೆ, 14 ತಿಂಗಳಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡಿದ್ದೇನೆ. ಮೈತ್ರಿ ಸರ್ಕಾರದಲ್ಲಿ ನನ್ನ ಇತಿಮಿತಿಯಲ್ಲಿ ಅಭಿವೃದ್ಧಿ ಕೆಲಸ ಮಾಡಿದ್ದೇನೆ.ಪಾಪದ ಸರ್ಕಾರ ತೆಗೆದು ಪುಣ್ಯದ ಸರ್ಕಾರ ಮಾಡಿದ್ದೀರಿ. 17 ಶಾಸಕರನ್ನು ನಡು ನೀರಿನಲ್ಲಿ ಕೈ ಬಿಡಬೇಡಿ. ಅವರು ಈಗ ಬೀದಿಗೆ ಬಂದಿದ್ದಾರೆ. ವಿಶೇಷ ವಿಮಾನದಲ್ಲಿ ಕರೆದೊಯ್ದಿರಿ, ವಾಪಸ್‌ ಬರುವಾಗ ಸ್ಪೆಷಲ್ ಫ್ಲೈಟ್ ಎಲ್ಲಿ ಎಂದು ಯಡಿಯೂರಪ್ಪ ಆವರಿಗೆ ಟಾಂಗ್‌ ನೀಡಿದರು.

ಅತೃಪ್ತರ ಕೈ ಬಿಡಬೇಡಿ: ಡಿ.ಕೆ.ಶಿವಕುಮಾರ್‌ ಮಾತನಾಡಿ, ನಿಮ್ಮನ್ನು ನಂಬಿರುವ ಅತೃಪ್ತರನ್ನು ಕೈ ಬಿಡಬೇಡಿ. ಅವರಿಗೆ ಏನೆಲ್ಲಾ ಭರವಸೆ ಕೊಟ್ಟಿದ್ದೀರೋ ಅವೆಲ್ಲವನ್ನು ಪೂರೈಸಿ. ನಿಮ್ಮ ಜತೆಯಲ್ಲೇ ಸಚಿವ ಸ್ಥಾನ ಕೊಡಿ. ವಿಪ್‌ಗೆ ಕವಡೆ ಕಾಸಿನ ಬೆಲೆ ಇಲ್ಲ ಎಂದು ಹೇಳಿದ್ದೀರಿ. ಈಗ ಏನಾಯ್ತು ನೋಡಿದಿರಲ್ಲಾ ಎಂದು ಹೇಳಿದರು.

ಬೋಪಯ್ಯ ಸ್ಪೀಕರ್‌?

ಬಿಜೆಪಿ ಹಿರಿಯ ನಾಯಕ ಕೆ.ಜಿ.ಬೋಪಯ್ಯ ಅವರು ವಿಧಾನಸಭಾ ಸ್ಪೀಕರ್‌ ಆಗುವುದು ಬಹುತೇಕ ಖಚಿತವಾಗಿದೆ. ಮಂಗಳವಾರ ಬೆಳಗ್ಗೆ ಬಿಜೆಪಿಯಿಂದ ಬೋಪಯ್ಯ ನಾಮಪತ್ರ ಸಲ್ಲಿಸಲಿದ್ದಾರೆ. ರಮೇಶ್‌ಕುಮಾರ್‌ ರಾಜೀನಾಮೆ ಬಳಿಕ ಬಿಜೆಪಿ ಹಿರಿಯ ನಾಯಕರೊಂದಿಗೆ ಸಿಎಂ ಬಿ.ಎಸ್‌.ಯಡಿಯೂರಪ್ಪ ಅವರು ಚರ್ಚಿಸಿ ಬೋಪಯ್ಯ ಹೆಸರು ಅಂತಿಮಗೊಳಿಸಿದ್ದಾರೆ ಎಂದು ಹೇಳಲಾಗಿದೆ. ಬೆಳಗ್ಗೆ 10.30 ರಿಂದ 12ರ ಒಳಗೆ ನಾಮಪತ್ರ ಸಲ್ಲಿಕೆಗೆ ಅವಕಾಶವಿದ್ದು, ಬಿಜೆಪಿಯ ಬೋಪಯ್ಯ ಅವರ ಹೊರತಾಗಿ ಕಾಂಗ್ರೆಸ್‌-ಜೆಡಿಎಸ್‌ನಿಂದ ಯಾರೊಬ್ಬರೂ ನಾಮಪತ್ರ ಸಲ್ಲಿಸದೇ ಹೋದರೆ, ಅವಿರೋಧವಾಗಿ ನೇಮಕವಾಗಲಿದ್ದಾರೆ ಎನ್ನಲಾಗಿದೆ.

ಗುರುವಾರ ದೆಹಲಿಗೆ ಯಡಿಯೂರಪ್ಪ

ಈಗಾಗಲೇ ವಿಧಾನಸಭೆಯಲ್ಲಿ ಬಹುಮತ ಸಾಬೀತು ಮಾಡಿರುವ ಬಿ.ಎಸ್‌.ಯಡಿಯೂರಪ್ಪ ಅವರು, ಸಂಪುಟ ರಚನೆ ಕಸರತ್ತು ಶುರುಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಅವರು, ಗುರುವಾರ ದೆಹಲಿಗೆ ತೆರಳಿ ಸಂಪುಟ ರಚನೆ ಕುರಿತಂತೆ ವರಿಷ್ಠರೊಂದಿಗೆ ಚರ್ಚಿಸುವ ಸಾಧ್ಯತೆ ಇದೆ. ಸದ್ಯ 20 ರಿಂದ 22 ಸಚಿವ ಸ್ಥಾನಗಳನ್ನು ಒಂದು ಅಥವಾ ಎರಡು ಹಂತಗಳಲ್ಲಿ ತುಂಬುವುದು. ಉಳಿದ 10-12 ಅನ್ನು ಅನರ್ಹ ಗೊಂಡಿರುವ ಶಾಸಕರ ಪೈಕಿ ಕೆಲವರಿಗೆಂದು ಕಾಯ್ದಿರಿಸಿ ಕಾನೂನು ಹೋರಾಟದ ಫ‌ಲಿತಾಂಶ ಆಧರಿಸಿ ಹಂಚಿಕೆ ಮಾಡುವ ಬಗ್ಗೆ ಚಿಂತನೆ ನಡೆಸಲಾಗಿದೆ ಎಂದು ಹೇಳಲಾಗುತ್ತಿದೆ.

ಮೀನುಗಾರರ ಸಾಲ ಮನ್ನಾ

ಬೆಂಗಳೂರು: ನೇಕಾರರ ಸಾಲ ಮನ್ನಾ ಬೆನ್ನಲ್ಲೇ ಮೀನುಗಾರರ ಸಾಲ ಮನ್ನಾ ಮಾಡಿ ನೂತನ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಸಂಪುಟ ಸಭೆಯಲ್ಲಿ ತೀರ್ಮಾನ ಕೈಗೊಂಡಿದ್ದಾರೆ. ಕರಾವಳಿ ಭಾಗದ ಮೂರು ಜಿಲ್ಲೆಗಳ 23507 ಮೀನುಗಾರರು ವಾಣಿಜ್ಯ ಬ್ಯಾಂಕ್‌ ಹಾಗೂ ಪ್ರಾದೇಶಿಕ ಗ್ರಾಮೀಣ ಬ್ಯಾಂಕ್‌ಗಳಿಂದ ಪಡೆದ 60.584 ಕೋಟಿ ರೂ. ಸಾಲ ಮನ್ನಾ ಮಾಡಲಾಗಿದೆ. ಸೋಮವಾರದ ಕಲಾಪ ಮುಗಿದ ನಂತರ ಸಂಪುಟ ಸಭೆ ನಡೆಸಿದ ಯಡಿಯೂರಪ್ಪ ಅವರು ಈ ನಿರ್ಧಾರ ಕೈಗೊಂಡಿದ್ದಾರೆ. 2017-18 ಮತ್ತು 2018 -19 ನೇ ಸಾಲಿನಲ್ಲಿ ಪಡೆದಿರುವ ಸಾಲ ಮನ್ನಾ ಆಗಿದೆ.

ಮೀನುಗಾರರು ಹಾಗೂ ವಿಶೇಷವಾಗಿ ಮಹಿಳಾ ಮೀನುಗಾರರು, ಮೀನುಗಾರಿಕೆ ಚಟುವಟಿಕೆಗಳಾದ ಮೀನು ಮಾರಾಟ ಪರಿಕರಗಳ ಖರೀದಿ, ಮೀನಿನ ವ್ಯಾಪಾರಕ್ಕಾಗಿ ಬಂಡವಾಳ, ಮೀನಿನ ಸಂರಕ್ಷಣೆ ಹಾಗೂ ಮೀನಿನ ಸಾಗಾಣಿಕೆ ಇತರೆ ಮೀನುಗಾರಿಕೆ ಸಂಬಂಧಿತ ಚಟುವಟಿಕೆಗಳನ್ನು ಕೈಗೊಳ್ಳಲು ಆರ್ಥಿಕ ನೆರವು ನೀಡುವುದು. ಇದಕ್ಕಾಗಿ ಶೇ. 2ರಷ್ಟು ಬಡ್ಡಿ ದರದಲ್ಲಿ ವಾಣಿಜ್ಯ ಬ್ಯಾಂಕ್‌ ಮತ್ತು ಪ್ರಾದೇಶಿಕ ಗ್ರಾಮೀಣ ಬ್ಯಾಂಕ್‌ಗಳಿಂದ ಸಾಲ ಪಡೆಯುವ ಯೋಜನೆ ಅನುಷ್ಠಾನಗೊಳಿಸಲಾಗುತ್ತಿದೆ. ಸದ್ಯ ಅವರ ಸಾಲ ಮನ್ನಾ ಮಾಡಲಾಗಿದೆ ಎಂದು ಸರ್ಕಾರ ಪ್ರಕಟಣೆಯಲ್ಲಿ ತಿಳಿಸಿದೆ.

ಸ್ಪೀಕರ್‌ ರಾಜೀನಾಮೆ

ಮೈತ್ರಿ ಸರ್ಕಾರದ ವಿರುದ್ಧ ಬಂಡಾಯ ಸಾರಿದ್ದ ಹದಿನೇಳು ಶಾಸಕರನ್ನು ಪಕ್ಷಾಂತರ ನಿಷೇಧ ಕಾಯ್ದೆ ಅಡಿಯಲ್ಲಿ ಅನರ್ಹಗೊಳಿಸಿ ಐತಿಹಾಸಿಕ ತೀರ್ಪು ನೀಡಿದ್ದ ರಮೇಶ್‌ಕುಮಾರ್‌ ಸೋಮವಾರ ವಿಧಾನಸಭಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಸೋಮವಾರ ಮುಖ್ಯಮಂತ್ರಿ ಯಡಿಯೂರಪ್ಪ ವಿಶ್ವಾಸ ಮತ ಯಾಚನೆ ಹಾಗೂ ಧನ ವಿನಿಯೋಗ ವಿಧೇಯಕ ಅಂಗೀಕಾರಗೊಂಡ ನಂತರ ರಮೇಶ್‌ ಕುಮಾರ್‌ 14 ತಿಂಗಳು 4 ದಿನಗಳ ತಮ್ಮ ಸಭಾಧ್ಯಕ್ಷ ಹುದ್ದೆಗೆ ರಾಜೀನಾಮೆಯನ್ನು ಪ್ರಕಟಿಸಿ ಉಪಸಭಾಧ್ಯಕ್ಷ ಕೃಷ್ಣಾ ರೆಡ್ಡಿ ಅವರಿಗೆ ತಮ್ಮ ರಾಜೀನಾಮೆ ಪತ್ರ ಸಲ್ಲಿಸಿದರು.

ಇಂದು ಪ್ರತಿಪಕ್ಷ ನಾಯಕನ ಆಯ್ಕೆ

ಅತ್ತ ಹೊಸ ಸರ್ಕಾರದಲ್ಲಿ ಸಂಪುಟ ಸರ್ಕಸ್‌ ಶುರುವಾಗಿದ್ದರೆ, ಕಾಂಗ್ರೆಸ್‌ನಲ್ಲಿ ಪ್ರತಿಪಕ್ಷ ನಾಯಕನ ಆಯ್ಕೆಗಾಗಿ ತಯಾರಿ ನಡೆದಿದೆ. ಸಿದ್ದರಾಮಯ್ಯ ಅವರ ಬಳಿ ಶಾಸಕಾಂಗ ನಾಯಕನ ಸ್ಥಾನ ಇರುವುದರಿಂದ, ಬೇರೊಬ್ಬರಿಗೆ ಪ್ರತಿಪಕ್ಷ ನಾಯಕನ ಸ್ಥಾನ ನೀಡುವ ಬಗ್ಗೆ ಚಿಂತನೆ ಇದೆ. ಇದಕ್ಕಾಗಿಯೇ ಹೈಕಮಾಂಡ್‌ ಕಡೆಯಿಂದ ಗುಲಾಂ ನಬಿ ಆಜಾದ್‌ ಬೆಂಗಳೂರಿಗೆ ಬಂದಿದ್ದಾರೆ. ಸದ್ಯ ವಿಪಕ್ಷ ನಾಯಕನ ಸ್ಥಾನಕ್ಕೆ ಎಚ್.ಕೆ.ಪಾಟೀಲ್, ಆರ್‌.ವಿ.ದೇಶಪಾಂಡೆ ಮತ್ತು ಡಾ.ಜಿ ಪರಮೇಶ್ವರ ಹೆಸರು ಕೇಳಿಬಂದಿದೆ. ಈ ಮೂವರಲ್ಲಿ ಎಚ್.ಕೆ.ಪಾಟೀಲ್ ಅವರಿಗೇ ಒಲಿಯುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಸೋಮವಾರ ಸಿದ್ದರಾಮಯ್ಯ ಅವರೇ ಪ್ರತಿಪಕ್ಷದ ನಾಯಕ ಸ್ಥಾನ ಅಲಂಕರಿಸಿದ್ದರು.

ಲೇಖಾನುದಾನ, ಪೂರಕ ಅಂದಾಜು ಒಪ್ಪಿಗೆ

ವಿಶ್ವಾಸಮತದಲ್ಲಿ ಯಶಸ್ವಿಯಾದ ನಂತರ ಅಕ್ಟೋಬರ್‌ವರೆಗೆ ಮೂರು ತಿಂಗಳ ಮಟ್ಟಿಗೆ 6275101.45 ಲಕ್ಷ ರೂ.ಗಳ ಲೇಖಾನುದಾನ, 3327.85 ಕೋಟಿ ರೂ. ಪೂರಕ ಅಂದಾಜುಗಳ ಮೊದಲ ಕಂತು ಮಂಡಿಸಿ, ಬಿಎಸ್‌ವೈ ಸದನದ ಅನುಮೋದನೆ ಪಡೆದರು. ಈ ಮೂಲಕ ಹೊಸದಾಗಿ ಬಜೆಟ್ ಮಂಡಿಸುವ ಸುಳಿವನ್ನೂ ನೀಡಿದರು. ಪೂರ್ಣ ಬಜೆಟ್‌ಗೆ ಒಪ್ಪಿಗೆ ಪಡೆದುಕೊಳ್ಳಿ ಎಂದು ಸಿದ್ದರಾಮಯ್ಯ ಹೇಳಿದರು. ಆದರೆ ಹೊಸ ಸರ್ಕಾರ ಬಂದಿರುವುದರಿಂದ ಅವರು ಮಾಡಿಕೊಳ್ಳಲಿ ಬಿಡಿ ಎಂದು ಸ್ಪೀಕರ್‌ ಹೇಳಿದ್ದರಿಂದ ಲೇಖಾನುದಾನಕ್ಕೆ ಎಲ್ಲರೂ ಒಪ್ಪಿಗೆ ನೀಡಿದರು.

ನಿಗಮ-ಮಂಡಳಿಗಳ ಅಧ್ಯಕ್ಷರಿಗೆ ಕೊಕ್‌

ಬೆಂಗಳೂರು: ಕಾಂಗ್ರೆಸ್‌-ಜೆಡಿಎಸ್‌ ಸಮ್ಮಿಶ್ರ ಸರ್ಕಾರದಲ್ಲಿ ನೇಮಕಗೊಂಡಿದ್ದ ನಿಗಮ-ಮಂಡಳಿ, ಆಯೋಗದ ಅಧ್ಯಕ್ಷರಿಗೆ ಕೊಕ್‌ ನೀಡಲಾಗಿದ್ದು, ತಕ್ಷಣದಿಂದಲೇ ಎಲ್ಲ ನೇಮಕಾತಿ ರದ್ದುಪಡಿಸಲು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಆದೇಶಿಸಿದ್ದಾರೆ. ನಿಗಮ/ಮಂಡಳಿ/ಪ್ರಾಧಿಕಾರ/ಆಯೋಗ/ಸಂಸ್ಥೆಗಳಲ್ಲಿನ ಅಧಿಕಾರೇತರ ಅಧ್ಯಕ್ಷರು/ಉಪಾಧ್ಯಕ್ಷರು/ನಿರ್ದೇಶಕರು/ಸದಸ್ಯರುಗಳ ನಾಮ ನಿರ್ದೇಶನಗಳನ್ನು ತಕ್ಷಣದಿಂದ ಜಾರಿಗೆ ಬರುವಂತೆ ರದ್ದುಪಡಿಸುವಂತೆ ಸೂಚಿಸಿದ್ದಾರೆ. ಇವುಗಳಿಗೆ ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳನ್ನು ಅಧ್ಯಕ್ಷರನ್ನಾಗಿ ನೇಮಿಸಲು ಸೂಚಿಸಿದ್ದಾರೆ. ಸಿಂಡಿಕೇಟ್ ಸದಸ್ಯರ ಆದೇಶ ರದ್ದು: ನಿಗಮ-ಮಂಡಳಿಗಳಷ್ಟೇ ಅಲ್ಲ, ರಾಜ್ಯದ 13 ವಿಶ್ವವಿದ್ಯಾಲಯಗಳ ಸಿಂಡಿಕೇಟ್‌ಗೆ ಸರ್ಕಾರದ ನಾಮನಿರ್ದೇಶಿತ ಸದಸ್ಯರನ್ನು ನೇಮಿಸಿದ್ದ ಆದೇಶವನ್ನು ಬಿಜೆಪಿ ಸರ್ಕಾರ ರದ್ದುಗೊಳಿಸಿದೆ. ಮೈಸೂರು, ಬೆಂಗಳೂರು, ಬೆಂಗಳೂರು ಕೇಂದ್ರ, ಮಂಗಳೂರು, ದಾವಣಗೆರೆ, ಧಾರವಾಡ ಸೇರಿದಂತೆ ರಾಜ್ಯದ 13 ವಿಶ್ವವಿದ್ಯಾಲಯಕ್ಕೆ ಉನ್ನತ ಶಿಕ್ಷಣ ಇಲಾಖೆಯ ಮೂಲಕ ಹಿಂದಿನ ಸರ್ಕಾರವು ಜುಲೈ 20 ರಂದು ಸಿಂಡಿಕೇಟ್ ಸದಸ್ಯರನ್ನು ನೇಮಿಸಿ ಆದೇಶ ಹೊರಡಿಸಿತ್ತು.
Advertisement

Udayavani is now on Telegram. Click here to join our channel and stay updated with the latest news.

Next