Advertisement

ಮತ್ತೊಮ್ಮೆ ಮೋದಿ ಪ್ರಧಾನಿಯಾಗಬೇಕಿದೆ

01:16 PM Apr 04, 2019 | Naveen |

ಹೊನ್ನಾಳಿ: ದೇಶದ ಏಕತೆ ಮತ್ತು ಸಮಗ್ರತೆಗಾಗಿ ನರೇಂದ್ರ ಮೋದಿ ಮತ್ತೊಮ್ಮೆ ಭಾರತದ ಪ್ರಧಾನ ಮಂತ್ರಿಯಾಗಬೇಕು. ಎಲ್ಲರೂ ಬಿಜೆಪಿಯನ್ನು ಬೆಂಬಲಿಸುವ ಮೂಲಕ ಸಹಕರಿಸಬೇಕು ಎಂದು ದಾವಣಗೆರೆ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಜಿ.ಎಂ. ಸಿದ್ಧೇಶ್ವರ್‌ ವಿನಂತಿಸಿದರು.

Advertisement

ಬುಧವಾರ ತಾಲೂಕಿನ ಸುಂಕದಕಟ್ಟೆ ಗ್ರಾಮದಲ್ಲಿ ಶ್ರೀ ಮಂಜುನಾಥ ಸ್ವಾಮಿ, ಶ್ರೀ ನರಸಿಂಹ ಸ್ವಾಮಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ, ನಂತರ ಚುನಾವಣಾ ಪ್ರಚಾರ ಪ್ರಾರಂಭಿಸಿ ಅವರು ಮಾತನಾಡಿದರು. ನರೇಂದ್ರ ಮೋದಿ ಅವರಂಥ ಸಮರ್ಥ ನಾಯಕ ಹತ್ತು ವರ್ಷಗಳ ಕಾಲ ಪ್ರಧಾನಿಯಾದರೆ ದೇಶದ ಎಲ್ಲಾ ಹಳ್ಳಿಗಳೂ ಅಭಿವೃದ್ಧಿ ಹೊಂದುತ್ತವೆ. ಗ್ರಾಮಗಳ ಅಭಿವೃದ್ಧಿ ರಾಷ್ಟ್ರಪಿತ ಮಹಾತ್ಮ ಗಾಂಧಿ ಅವರ ಕನಸಾಗಿತ್ತು. ಆ ಕನಸನ್ನು ನನಸಾಗಿಸಲು ನರೇಂದ್ರ ಮೋದಿ ಮತ್ತೊಮ್ಮೆ ಭಾರತದ ಪ್ರಧಾನ ಮಂತ್ರಿಯಾಗವುದು ಅವಶ್ಯಕ ಎಂದರು.

ದೇಶದ ರಕ್ಷಣೆಯ ವಿಷಯದಲ್ಲಿ ನರೇಂದ್ರ ಮೋದಿ ಎಂದಿಗೂ ರಾಜೀ ಮಾಡಿಕೊಂಡಿಲ್ಲ. ಸೈನಿಕರ ಯೋಗಕ್ಷೇಮಕ್ಕೆ ಆದ್ಯತೆ ನೀಡುವ ಮೂಲಕ ದೇಶದ ಭದ್ರತೆಗೂ ಶ್ರಮಿಸಿದ್ದಾರೆ. ಈಚೆಗೆ ಫುಲ್ವಾಮಾದಲ್ಲಿ ನಡೆದ ಉಗ್ರರ ದಾಳಿಗೆ ಏರ್‌ ಸ್ಟ್ರೆಕ್  ಮೂಲಕ ಸೂಕ್ತ ಪ್ರತ್ಯುತ್ತರ ನೀಡಿ ಭಾರತದ ಶಕ್ತಿಯನ್ನು ಜಗತ್ತಿಗೆ ತೋರಿಸಿದ್ದಾರೆ ಎಂದು ನುಡಿದರು.

ಪ್ರಧಾನಮಂತ್ರಿ ಆವಾಸ್‌ ಯೋಜನೆಯಡಿ ಸಾವಿರಾರು ಬಡವರಿಗೆ ಸೂರು ಒದಗಿಸಲಾಗಿದೆ. ಪ್ರಧಾನಮಂತ್ರಿ ಉಜ್ವಲಾ ಯೋಜನೆಯಡಿ ದೇಶದಲ್ಲಿ 8 ಕೋಟಿ ಕುಟುಂಬಗಳಿಗೆ, ರಾಜ್ಯದಲ್ಲಿ ಎರಡು ಲಕ್ಷ ಕುಟುಂಬಗಳಿಗೆ ಗ್ಯಾಸ್‌ ಸಿಲಿಂಡರ್‌ ವಿತರಿಸಲಾಗಿದೆ. ಜನತೆಯ ಆರೋಗ್ಯ ರಕ್ಷಣೆಗೆ ಆಯುಷ್ಮಾನ್‌ ಭಾರತ್‌ ಯೋಜನೆ ಜಾರಿಗೊಳಿಸಲಾಗಿದೆ. ಜನರಿಕ್‌ ಔಷಧ ಮಳಿಗೆಗಳನ್ನು ಸ್ಥಾಪಿಸುವ ಮೂಲಕ ದುಬಾರಿ ಬೆಲೆಯ ಔಷಧ ಖರೀದಿಸುತ್ತಿದ್ದ ಜನರ ಆರ್ಥಿಕ ಹೊರೆಯನ್ನು ಕಡಿಮೆ ಮಾಡಲಾಗಿದೆ. ಹೀಗೆ, ಅನೇಕ ಜನಪರ ಯೋಜನೆಗಳನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿ ಜಾರಿಗೊಳಿಸಿದ್ದಾರೆ ಎಂದು ನುಡಿದರು.

ದಾವಣಗೆರೆ ಲೋಕಸಭಾ ಕ್ಷೇತ್ರದ ಸಂಸದರಾದ ಬಳಿಕ ತಾವೂ ಅನೇಕ ಅಭಿವೃದ್ಧಿ ಕಾಮಗಾರಿಗಳನ್ನು ಅನುಷ್ಠಾನಗೊಳಿಸಿರುವುದಾಗಿ ತಿಳಿಸಿದ ಅವರು, ಎಲ್ಲ ಮನೆಗಳಲ್ಲೂ ಶೌಚಾಲಯಗಳನ್ನು ನಿರ್ಮಿಸಲು ಪ್ರೋತ್ಸಾಹಿಸುವ ಮೂಲಕ ಬಯಲು ಬಹಿರ್ದೆಸೆ ಮುಕ್ತ ಜಿಲ್ಲೆ ಮಾಡಲಾಗಿದೆ. ಈ ಬಾರಿ ಮತ ನೀಡುವ ಮೂಲಕ ಮತ್ತೂಮ್ಮೆ ತಮ್ಮನ್ನು ಸಂಸತ್ತಿಗೆ ಆಯ್ಕೆ ಮಾಡಬೇಕು ಎಂದು ವಿನಂತಿಸಿದರು. ಶಾಸಕ ಎಂ.ಪಿ. ರೇಣುಕಾಚಾರ್ಯ ಮಾತನಾಡಿ, ದಾವಣಗೆರೆ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಜಿ.ಎಂ. ಸಿದ್ಧೇಶ್ವರ್‌ ಕಳೆದ ಮೂರು ಅವಧಿಗಳಲ್ಲಿ
ಸಾಕಷ್ಟು ಜನಪರ ಕೆಲಸಗಳನ್ನು ಮಾಡುವ ಮೂಲಕ ಜನರಿಗೆ ಹತ್ತಿರವಾಗಿದ್ದಾರೆ. ಕಾಂಗ್ರೆಸ್‌ ಅಭ್ಯರ್ಥಿ ಯಾರು ಎಂಬುದು ನಮಗೆ ಮುಖ್ಯವಲ್ಲ. ತಾಲೂಕಿನಲ್ಲಿ ಈ ಬಾರಿ ಜಿ.ಎಂ.ಸಿದ್ಧೇಶ್ವರ್‌ ಅವರಿಗೆ 25 ಸಾವಿರಕ್ಕೂ ಅಧಿಕ ಮತಗಳ ಲೀಡ್‌ ಒದಗಿಸಬೇಕು. ಎರಡು ಲಕ್ಷಕ್ಕೂ ಅಧಿಕ ಮತಗಳ ಅಂತರದ ಗೆಲುವು ದಾಖಲಿಸಲು ನಾವೆಲ್ಲರೂ ಶ್ರಮಿಸೋಣ ಎಂದು ಹೇಳಿದರು.

Advertisement

ಕಾಂಗ್ರೆಸ್‌ ದೇಶಕ್ಕೆ ಶಾಪವಿದ್ದಂತೆ. ಅಂಥ ಪಕ್ಷದಿಂದ ನಾಡಿನ ಅಭಿವೃದ್ಧಿ ಸಾಧ್ಯವಿಲ್ಲ. ದೇಶಕ್ಕೆ ಸ್ವಾತಂತ್ರ್ಯ ದೊರೆತ ಬಳಿಕ ಕಾಂಗ್ರೆಸ್‌ ವಿಸರ್ಜಿಸುವಂತೆ ಮಹಾತ್ಮ ಗಾಂಧಿ ಹೇಳಿದ್ದರು. ಆದರೆ, ಅಂದಿನ ಸ್ವಾರ್ಥಿಗಳು ಕಾಂಗ್ರೆಸ್ಸನ್ನು ತಮಗೆ ಬೇಕಾದಂತೆ ಬಳಸಿಕೊಂಡರು ಎಂದು ಹರಿಹಾಯ್ದರು.

ಈ ಲೋಕಸಭಾ ಚುನಾವಣೆಯ ಬಳಿಕ ಜೆಡಿಎಸ್‌ ಅಡ್ರೆಸ್‌ ಇಲ್ಲದಂತಾಗುತ್ತದೆ. ದೇಶಾದ್ಯಂತ ಕಾಂಗ್ರೆಸ್‌ ಗೆ ಕಳೆದ ಬಾರಿ ದೊರೆತಷ್ಟೂ ಎಂಪಿ ಸ್ಥಾನಗಳು ದೊರೆಯುವುದಿಲ್ಲ. ರಾಜ್ಯದ ಸಮ್ಮಿಶ್ರ ಸರಕಾರ ಪತನವಾಗಿ ಬಿಜೆಪಿ ಸರಕಾರ ರಚನೆಯಾಗಲಿದೆ. ಬಿ.ಎಸ್‌. ಯಡಿಯೂರಪ್ಪ ಮುಖ್ಯಮಂತ್ರಿಯಾಗಲಿದ್ದಾರೆ. ಮತ್ತೂಮ್ಮೆ ರಾಜ್ಯದಲ್ಲಿ ಅಭಿವೃದ್ಧಿ ಪರ್ವ ಪ್ರಾರಂಭಿಸಲಿದ್ದಾರೆ ಎಂದು ಹೇಳಿದರು. ಜಿಪಂ ಅಧ್ಯಕ್ಷೆ ಶೈಲಜಾ ಬಸವರಾಜ್‌, ಉಪಾಧ್ಯಕ್ಷ ಸಿ. ಸುರೇಂದ್ರನಾಯ್ಕ, ಸದಸ್ಯರಾದ ವೀರಶೇಖರಪ್ಪ,
ಎಂ.ಆರ್‌. ಮಹೇಶ್‌, ರೈತ ಮೋರ್ಚಾ ಅಧ್ಯಕ್ಷ ಶಾಂತರಾಜ್‌ ಪಾಟೀಲ್‌, ತಾಲೂಕು ಬಿಜೆಪಿ ಅಧ್ಯಕ್ಷ ಡಿ.ಜಿ. ರಾಜಪ್ಪ, ಪ್ರಧಾನ ಕಾರ್ಯದರ್ಶಿ ಅರಕೆರೆ ಎ.ಎಂ.ನಾಗರಾಜ್‌, ಜಿಪಂ ಮಾಜಿ ಉಪಾಧ್ಯಕ್ಷ ಕೆ.ವಿ. ಚನ್ನಪ್ಪ, ಸದಸ್ಯ ಕೆ.ಎಚ್‌.ಗುರುಮೂರ್ತಿ, ತಾಪಂ ಮಾಜಿ ಸದಸ್ಯ ಸುರೇಶ್‌, ಬೂತ್‌ ಸಮಿತಿ ಅಧ್ಯಕ್ಷ ಮಂಜಣ್ಣ, ಮುಖಂಡರಾದ ದಿಡಗೂರು ಫಾಲಾಕ್ಷಪ್ಪ, ತಿಮ್ಮೇನಹಳ್ಳಿ ಟಿ.ಆರ್‌. ಚಂದಪ್ಪ, ನೆಲಹೊನ್ನೆ ಮಂಜುನಾಥ್‌, ಗುಂಡಣ್ಣ, ಚಂದ್ರಪ್ಪ, ಮಂಜುನಾಥ್‌, ಗ್ರಾಮಸ್ಥರು ಉಪಸ್ಥಿತರಿದ್ದರು. ತಾಲೂಕಿನ ಅರಬಗಟ್ಟೆ, ಗೋವಿನಕೋವಿ, ಚೀಲೂರು ಮತ್ತಿತರ ಗ್ರಾಮಗಳಲ್ಲಿ ಬಿಜೆಪಿ ಅಭ್ಯರ್ಥಿ ಜಿ.ಎಂ. ಸಿದ್ಧೇಶ್ವರ್‌, ಶಾಸಕ ಎಂ.ಪಿ. ರೇಣುಕಾಚಾರ್ಯ ಮತ್ತಿತರರು ಚುನಾವಣಾ ಪ್ರಚಾರ ನಡೆಸಿದರು.

Advertisement

Udayavani is now on Telegram. Click here to join our channel and stay updated with the latest news.

Next