ಭಟ್ಕಳ : ಇಂದು ದೇಶದೆಲ್ಲೆಡೆ ಕೇಳಿ ಬರುತ್ತಿರುವ ಮಾತು ಪರಿಸರ ಉಳಿಸಿ, ಪ್ಲಾಸ್ಟಿಕ್ ತ್ಯಜಿಸಿ. ಆದರೆ ಇದೇ ಪ್ಲಾಸ್ಟಿಕ್ ನಮಗೆ ಎಷ್ಟು ದುಷ್ಪರಿಣಾಮಕಾರಿ, ರೈತರಿಗೆ ಕೂಡಾ ಇದು ಹೇಗೆ ಮಾರಕ ಎನ್ನುವ ಕುರಿತು ಜನ ಜಾಗೃತಿ ಮೂಡಿಸಲು ಶಾಲಾ ಕಾಲೇಜು ವಿದ್ಯಾರ್ಥಿಗಳನ್ನು ಜಾಗೃತಗೊಳಿಸಲು ಸೈಕಲ್ ಮೇಲೆ ದೇಶ ಪರ್ಯಟನೆಗೆ ಹೊರಟ ಬ್ರಿಜೇಶ್ ಶರ್ಮಾ ಅವರ ಜಾಗೃತಿ ಕಾರ್ಯಕ್ರಮ ಸದ್ದಿಲ್ಲದೇ ನಡೆದಿದೆ.
ಮೂಲತಹ ಗುಜರಾತ್‍ನವರಾದ ಬ್ರಿಜೇಶ್ 2019ರಿಂದ ವಿವಿಧ ರಾಜ್ಯಗಳನ್ನು ಸುತ್ತಿ ರೈತರು, ವಿದ್ಯಾರ್ಥಿಗಳನ್ನು ಭೇಟಿ ಮಾಡಿ ಪ್ಲಾಸ್ಟಿಕ್ ಮುಕ್ತ ವಾತಾವರಣ ನಿರ್ಮಾಣ ಮಾಡಲು ಪ್ರಯತ್ನಿಸುತ್ತಿದ್ದಾರೆ. ರೈತರಿಗೆ ಪ್ಲಾಸ್ಟಿಕ್‍ನಿಂದಾಗುವ ಹಾನಿಯನ್ನು ಮನನ ಮಾಡಿಕೊಡುವುದರ ಜೊತೆಗೆ ಸಾವಯವ ಕೃಷಿಯತ್ತ ಇರುವ ಅವಕಾಶವನ್ನು ಕೂಡಾ ತಿಳಿಸಿ ಹೇಳುತ್ತಿದ್ದಾರೆ.
ಈಗಾಗಲೇ ಇವರು ಸುಮಾರು 36000ಕ್ಕೂ ಹೆಚ್ಚು ಕಿ.ಮಿ. ಸೈಕಲ್ ಯಾತ್ರೆ ಮುಗಿಸಿದ್ದು ತಾವು ಹೋದ ಕಡೆಗಳಲ್ಲಿ ಜನರನ್ನು ಸಂಘಟಿಸಿ ಪರಿಸರದ ಕುರಿತು ಜಾಗೃತಿ ಮೂಡಿಸುವ ಕಾರ್ಯ ಮಾಡುತ್ತಿದ್ದಾರೆ. ಗೋವಾದಿಂದ ಕರ್ನಾಟಕ್ಕೆ ಪ್ರವೇಶ ಮಾಡಿದ ಇವರು ಕರ್ನಾಟಕದಲ್ಲಿ ಎಲ್ಲಾ ಜಿಲ್ಲೆ, ತಾಲೂಕುಗಳನ್ನು ಸುತ್ತಿ ಮುಂದೆ ಕೇರಳದ ಮೂಲಕ ತಮ್ಮ ಪ್ರಯಾಣವನ್ನು ಮುಂದುವರಿಸುವ ಇಚ್ಚೆ ಹೊಂದಿದ್ದಾರೆ. ಸುಮಾರು ಐದು ವರ್ಷಗಳಲ್ಲಿ ಭಾರತ ಯಾತ್ರೆಯನ್ನು ಮುಗಿಸುವ ಇಚ್ಚೆ ಹೊಂದಿದ ಇವರು ಮುಂದೆ ಸೈಕಲ್‍ನಲ್ಲಿಯೇ ವಿಶ್ವ ಪರ್ಯಟನೆ ಮಾಡುವ ಇಚ್ಚೆಯನ್ನು ಕೂಡಾ ಹೊಂದಿದ್ದು ಮುಂದಿನ ದಿನಗಳಲ್ಲಿ ಈ ಬಗ್ಗೆ ಸೂಕ್ತ ನಿರ್ಧಾರ ಕೈಗೊಳ್ಳುವ ಯೋಚನೆಯಲ್ಲಿದ್ದಾರೆ. ದಿನ ನಿತ್ಯ 50-60 ಕಿ.ಮಿ. ದೂರವನ್ನು ಕ್ರಮಿಸುವ ಇವರು ಉತ್ತರ ಕನ್ನಡದ ಕಾರವಾರ, ಅಂಕೋಲ, ಕುಮಟಾ, ಸಿರ್ಸಿ, ಸಿದ್ದಾಪುರ, ಯಲ್ಲಾಪುರ, ದಾಂಡೇಲಿ, ಹೊನ್ನಾವರ, ಮುರ್ಡೇಶ್ವರ ಸೇರಿದಂತೆ ಎಲ್ಲಾ ತಾಲೂಕುಗಳನ್ನು ಕ್ರಮಿಸಿದ್ದು ಭಟ್ಕಳದ ಮೂಲಕ ಉಡುಪಿ ಜಿಲ್ಲೆಯನ್ನು ಪ್ರವೇಶಿಸಲಿದ್ದಾರೆ. ದಿನಾಲೂ ಯಾವುದಾದರೂ ದಾಬಾ, ಪೆಟ್ರೋಲ್ ಬಂಕ್ ಇತ್ಯಾದಿ ಕಡೆಗಳಲ್ಲಿ ತಂಗುವ ಇವರು ಹಣಕ್ಕಾಗಿ ಯಾರನ್ನೂ ಕೈಚಾಚುವುದಿಲ್ಲ. ಜನರು ಹಣ್ಣು, ಊಟ, ತಿಂಡಿ ಕೊಟ್ಟರೆ ಸಂತೋಷದಿಂದ ಸ್ವೀಕರಿಸುವ ಇವರ ಯಾತ್ರೆ ಗುರಿ ಮುಟ್ಟುವ ತನಕ ವಿರಮಿಸುವುದಿಲ್ಲ ಎನ್ನುವ ಛಲ ಹೊಂದಿದ್ದಾರೆ.
ಇದನ್ನೂ ಓದಿ : ಬೆಳಗಾವಿ ಭೀಕರ ಅಪಘಾತದಲ್ಲಿ 9 ಮಂದಿ ಸಾವು : ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್ ಸಂತಾಪ
ಮಳೆಗಾಲದಲ್ಲಿಯೂ ಪ್ಲಾಸ್ಟಿಕ್ ಎನ್ನುವ ಕಾರಣಕ್ಕಾಗಿ ರೈನ್ ಕೋಟ್ ಬಳಸದ ಇವರು ಮಳೆ ಬಂದರೆ ಎಲ್ಲಿಯಾದರೂ ಆಶ್ರಯ ಪಡೆದು ಮುಂದೆ ಸಾಗುತ್ತೇನೆ ಎನ್ನುತ್ತಾರೆ.
ಮುರ್ಡೇಶ್ವರ ದೇವಸ್ಥಾನಕ್ಕೆ ಭೇಟಿ ಕೊಟ್ಟು ದೇವರಲ್ಲಿ ಉತ್ತಮ ವಾತಾವರಣಕ್ಕಾಗಿ ಪ್ರಾರ್ಥಿಸಿದ್ದೇನೆ. ಮುರ್ಡೇಶ್ವರ ಪರಿಸರ ಅತ್ಯಂತ ಸುಂದರವಾಗಿದ್ದು ದೇವಾಲಯವನ್ನು ಅತ್ಯಂತ ಸ್ವಚ್ಛವಾಗಿ ಇಡಲಾಗಿದ್ದನ್ನು ನೋಡಿ ಸಂತಸವಾಗಿದೆ. ಮುರ್ಡೇಶ್ವರ ದೇವಾಲಯವನ್ನು ಕಟ್ಟಿದ ಡಾ. ಆರ್.ಎನ್.ಶೆಟ್ಟಿಯವರ ಪುತ್ತಳಿ ನೋಡಿದ್ದೇನೆ. ಬೆಂಗಳೂರಿನಲ್ಲಿ ಅವರ ಪುತ್ರರನ್ನು ಭೇಟಿಯಾಗುವ ಇಚ್ಚೆ ಹೊಂದಿದ್ದೇನೆ. .
– ಬ್ರಿಜೇಶ್ ಶರ್ಮಾ, ಪ್ಲಾಸ್ಟಿಕ್ ಜಾಗೃತಿ ಸೈಕಲ್ ಯಾತ್ರಿ.