Advertisement

ಬಿಸಿಲು ಲೆಕ್ಕಿಸದೇ ಮತ ಚಲಾಯಿಸಿದ ಜನರು!

11:24 AM Apr 24, 2019 | Naveen |

ಬೀದರ: ಬೀದರ ಲೋಕಸಭಾ ಚುನಾವಣೆ ಅಂಗವಾಗಿ ಮಂಗಳವಾರ ಬೆಳಗ್ಗೆ 7 ಗಂಟೆಯಿಂದ ಸಂಜೆ 6 ಗಂಟೆ ವರೆಗೆ ಶೇ. 62.76ರಷ್ಟು ಮತದಾನ ನಡೆದಿದೆ. ನೆತ್ತಿ ಸುಡುವ ರಣ ಬಿಸಿಲು ಲೆಕ್ಕಿಸದೇ ಮತದಾರರು ಮತದಾನ ಮಾಡಿದ್ದು, ಈ ಚುನಾವಣೆಯ ವಿಶೇಷವಾಗಿದ್ದು, ಕಳೆದ ಲೋಕಸಭೆ ಚುನಾವಣೆಗಿಂತ ಈ ಬಾರಿ ಹೆಚ್ಚು ಮತದಾನ ಆಗಿದೆ.

Advertisement

ಮಂಗಳವಾರ ಬೆಳಗ್ಗೆ ಬಹುತೇಕ ಎಲ್ಲಾ ಮತಕೇಂದ್ರಗಳ ಮುಂದೆ ಮತದಾರರು ಕಂಡುಬಂದರು ಕೂಡ ಸಾಧಾರಣವಾಗಿ ಮತದಾನ ನಡೆದಿತ್ತು. ಮಧ್ಯಾಹ್ನ ವೇಳೆ ಬಿರುಸು ಪಡೆಯಿತು. ಔರಾದ, ಚಿಂಚೋಳಿ, ಭಾಲ್ಕಿ ವಿಧಾನಸಭಾ ಮತಕ್ಷೇತ್ರಗಳಲ್ಲಿ ಬೆಳಗಿನ 9 ಗಂಟೆ ವರೆಗೆ ಮತದಾನವು ಅತ್ಯಂತ ಮಂದಗತಿಯಲ್ಲಿ ನಡೆಯಿತು. ಬೀದರ ದಕ್ಷಿಣ ಮತ್ತು ಆಳಂದ ವಿಧಾನಸಭಾ ಮತಕ್ಷೇತ್ರಗಳಲ್ಲಿ ಬೆಳಗಿನ 11 ಗಂಟೆ ವರೆಗೆ ಹೆಚ್ಚು ಸಂಖ್ಯೆಯಲ್ಲಿ ಜನರು ಮತಗಟ್ಟೆಗೆ ಆಗಮಿಸಿ ಮತದಾನ ಮಾಡಿದ್ದು ಕಂಡು ಬಂದಿತು. ಬಸವಕಲ್ಯಾಣ, ಬೀದರ, ಭಾಲ್ಕಿ, ಔರಾದ್‌ ವಿಧಾನಸಭಾ ಮತಕ್ಷೇತ್ರಗಳಲ್ಲಿ ಮಧ್ಯಾಹ್ನ 1 ಗಂಟೆ ಅವಧಿಗೆ ಮತದಾನ ಪ್ರಮಾಣ ಏರು ಮುಖವಾಗಿತ್ತು.

ಚಿಂಚೋಳಿ: ವಿಧಾನಸಭಾ ಕ್ಷೇತ್ರದಲ್ಲಿ ಬೆಳಗ್ಗೆ 9 ಗಂಟೆ ವರೆಗೆ ಮತದಾನ ಪ್ರಮಾಣ ಶೇ.3.79ರಷ್ಟು ಇತ್ತು. 11 ಗಂಟೆಗೆ ಶೇ.15.83ರಷ್ಟು., ಮಧ್ಯಾಹ್ನ 1 ಗಂಟೆಗೆ ಶೇ.27.21ರಷ್ಟು, 3 ಗಂಟೆಗೆ ಶೇ.43 ಮತ್ತು ಸಂಜೆ 5 ಗಂಟೆ ಅವಧಿಗೆ ಶೇ.54ರಷ್ಟು ಮತದಾನವಾಗಿತ್ತು.

ಆಳಂದ: ವಿಧಾನಸಭಾ ಕ್ಷೇತ್ರದಲ್ಲಿ ಬೆಳಗ್ಗೆಯೇ ಮತದಾನ ಬಿರುಸಿನಿಂದ ನಡೆಯಿತು. 9 ಗಂಟೆ ವರೆಗೆ ಶೇ.8.64ರಷ್ಟು ಮತದಾರರು ಮತದಾನ ಮಾಡಿದ್ದರು. 11 ಗಂಟೆಗೆ ಶೇ.22ರಷ್ಟು, ಮಧ್ಯಾಹ್ನ 1ಕ್ಕೆ ಶೇ.32ರಷ್ಟು, 3 ಗಂಟೆಗೆ ಶೇ.42ರಷ್ಟು, ಸಂಜೆ 5ಕ್ಕೆ ಶೇ.50ರಷ್ಟು ಮತದಾನವಾಗಿತ್ತು.

ಬಸವಕಲ್ಯಾಣ: ವಿಧಾನಸಭಾ ಮತಕ್ಷೇತ್ರದಲ್ಲಿ ಮಧ್ಯಾಹ್ನ ವೇಳೆ ಮತದಾನ ತೀವ್ರಗತಿಯಲ್ಲಿ ನಡೆಯಿತು. ಮಧ್ಯಾಹ್ನ 3ರ ಸುಮಾರಿಗೆ ಶೇ.51.06ನಷ್ಟು, ಸಂಜೆ 5ರ ಹೊತ್ತಿಗೆ ಶೇ.57ರಷ್ಟು ಮತದಾನವಾಗಿತ್ತು. ಬೆಳಗ್ಗೆ 9 ಗಂಟೆಗೆ 7.24ರಷ್ಟು ಮತದಾನವಾಗಿತ್ತು. 11 ಗಂಟೆವರೆಗೆ ಶೇ.19ರಷ್ಟು, 1 ಗಂಟೆ ವರೆಗೆ ಶೇ.36ರಷ್ಟು ದಾಖಲಾಗಿತ್ತು.

Advertisement

ಹುಮನಾಬಾದ: ವಿಧಾನಸಭಾ ಕ್ಷೇತ್ರದಲ್ಲಿ ಬೆಳಗ್ಗೆ 9 ಗಂಟೆಗೆ ಶೇ.6.31ರಷ್ಟು ಮತದಾನವಾಗಿತ್ತು. 11 ಗಂಟೆಗೆ ಶೇ.14ಷ್ಟು, ಮಧ್ಯಾಹ್ನ 1 ಗಂಟೆಗೆ ಶೇ.36ರಷ್ಟು, 3 ಗಂಟೆಗೆ ಶೇ.48ರಷ್ಟು ಮತ್ತು ಸಂಜೆ 5 ಗಂಟೆವರೆಗೆ ಶೇ.59ರಷ್ಟು ಮತದಾನ ದಾಖಲಾಗಿತ್ತು.

ಬೀದರ (ದಕ್ಷಿಣ): ವಿಧಾನಸಭಾ ಮತಕ್ಷೇತ್ರದಲ್ಲಿ ಬೆಳಗ್ಗೆ 9 ಗಂಟೆಗೆ 7.62ರಷ್ಟು, 11 ಗಂಟೆಗೆ ಶೇ.23.40ರಷ್ಟು, ಮಧ್ಯಾಹ್ನ 1 ಗಂಟೆಗೆ ಶೇ.31.71ರಷ್ಟು, 3 ಗಂಟೆ ವರೆಗೆ ಶೇ.49ರಷ್ಟು ಹಾಗೂ ಸಂಜೆ 5 ಗಂಟೆ ವರೆಗೆ ಶೇ.59ರಷ್ಟು ಮತದಾನ ಪ್ರಮಾಣ ದಾಖಲಾಗಿತ್ತು.

ಬೀದರ: ವಿಧಾನಸಭಾ ಕ್ಷೇತ್ರದಲ್ಲಿ ಬೆಳಗಿನ 9 ಗಂಟೆಗೆ ಶೇ.8.43ರಷ್ಟು ಮತದಾನ ಪ್ರಮಾಣ ದಾಖಲಾಗಿತ್ತು. 11 ಗಂಟೆಗೆ 18ರಷ್ಟು, ಮಧ್ಯಾಹ್ನ 1 ಗಂಟೆಗೆ 35ರಷ್ಟು, 3 ಗಂಟೆಗೆ 48.14ರಷ್ಟು ಹಾಗೂ ಸಂಜೆ 5 ಗಂಟೆಗೆ 57.01ರಷ್ಟು ಮತದಾನ ದಾಖಲಾಗಿತ್ತು.

ಭಾಲ್ಕಿ: ವಿಧಾನಸಭಾ ಕ್ಷೇತ್ರದಲ್ಲಿ ಬೆಳಗಿನ 11 ಗಂಟೆಯಿಂದ ಸಂಜೆ ವರೆಗೆ ಮತದಾನ ನಿರಂತರ ಬಿರುಸಿನಿಂದ ನಡೆಯಿತು. ಬೆಳಗ್ಗೆ 9 ಗಂಟೆಗೆ 5.46ರಷ್ಟು ಮತದಾನ ಪ್ರಮಾಣ ದಾಖಲಾಗಿತ್ತು. 11 ಗಂಟೆಗೆ 16.24ರಷ್ಟು, ಮಧ್ಯಾಹ್ನ 1 ಗಂಟೆಗೆ 35.22ರಷ್ಟು, 3 ಗಂಟೆಗೆ 48ರಷ್ಟು ಸಂಜೆ 5 ಗಂಟೆ ಅವಧಿಗೆ ಶೇ.61ರಷ್ಟು ಮತದಾನ ನಡೆದಿತ್ತು.

ಔರಾದ್‌: ವಿಧಾನಸಭಾ ಮತಕ್ಷೇತ್ರದಲ್ಲಿ ಬೆಳಗ್ಗೆ 9 ಗಂಟೆ ವರೆಗೆ ಮತದಾನ ಅತ್ಯಂತ ಮಂದಗತಿಯಲ್ಲಿ ನಡೆಯಿತು. 11 ಗಂಟೆಯಿಂದ ತೀವ್ರಗತಿಯಲ್ಲಿ ನಡೆಯಿತು. ಮಧ್ಯಾಹ್ನ 1 ಗಂಟೆಗೆ 34.47ರಷ್ಟು, 3 ಗಂಟೆಗೆ ಶೇ.47, ಸಂಜೆ 5 ಗಂಟೆಗೆ ಶೇ.57ರಷ್ಟು ಮತದಾನವಾಗಿತ್ತು. ಬೆಳಗ್ಗೆ 9 ಗಂಟೆಗೆ 1.92ರಷ್ಟು ಅತೀ ಕಡಿಮೆ ಮತದಾನ ನಡೆದಿತ್ತು.

ಶಾಂತಿಯುತ ಮತದಾನ: ಜಿಲ್ಲೆಯ ಎರಡು ಕಡೆಗಳಲ್ಲಿ ಸಣ್ಣಪುಟ್ಟ ಘಟನೆಗಳನ್ನು ಹೊರತುಪಡಿಸಿದರೆ, ಜಿಲ್ಲಾದ್ಯಂತ ಶಾಂತಿಯುತ ಮತದಾನ ಆಗಿದೆ. ಔರಾದ ತಾಲೂಕಿ ಚಿಂತಾಕ್ಕಿ ಹಾಗೂ ಹುಮನಾಬಾದ ತಾಲೂಕಿನ ಡಾಕುಳಗಿ ಗ್ರಾಮದಲ್ಲಿ ಕಾಂಗ್ರೆಸ್‌-ಬಿಜೆಪಿ ಕಾರ್ಯಕರ್ತರ ಮಧ್ಯೆ ಜಗಳ ನಡೆದಿರುವುದು ವರದಿಯಾಗಿದೆ. ಅಲ್ಲದೆ, ಮಂಗಳವಾರ ಬೆಳಗ್ಗೆ ಕೆಲಕಡೆಗಳಲ್ಲಿ ಮತ ಯಂತ್ರದಲ್ಲಿ ದೋಷ ಕಂಡುಬಂದ ಹಿನ್ನೆಲೆಯಲ್ಲಿ ಮತದಾನ ವಿಳಂಬವಾಗಿ ಪ್ರಾರಂಭವಾದ ಘಟನೆಗಳು ನಡೆದಿವೆ. ಚುನಾವಣಾಧಿಕಾರಿಗಳು ಕೂಡಲೆ ಮತಯಂತ್ರ ಬದಲಿಸಿ ಮತದಾನಕ್ಕೆ ಅವಕಾಶ ಮಾಡಿಕೊಟ್ಟಿದ್ದಾರೆ.

ಹಕ್ಕಿಗಾಗಿ ಬಂದರು: ದೂರದ ಊರುಗಳಲ್ಲಿ ವಾಸವಾಗಿರುವ ಜಿಲ್ಲೆಯ ಮತದಾರರು ಈ ಭಾರಿ ಲೋಕಸಭೆ ಚುನಾವಣೆಯಲ್ಲೂ ಮತದಾನ ಮಾಡಬೇಕು ಎಂದು ಸ್ವಗ್ರಾಮಕ್ಕೆ ಬಂದು ಮತದಾನ ಮಾಡಿದ್ದಾರೆ. ಬೆಂಗಳೂರು, ಮುಂಬೈ, ಪುಣೆ, ಹೈದ್ರಾಬಾದ ಸೇರಿದಂತೆ ವಿವಿಧೆಡೆಯ ಜನರು ಈ ಬಾರಿ ಲೋಕಸಭೆ ಚುನಾವಣೆಗೆ ಆಗಮಿಸಿ ಮತದಾನ ಮಾಡಿದ್ದಾರೆ. ಬೆಂಗಳೂರಿನಿಂದ ಬರುವ ಪ್ರಯಾಣಿಕರಿಗೆ ರೈಲ್ವೆ ಇಲಾಖೆ ವಿಶೇಷ ರೈಲು ವ್ಯವಸ್ಥೆ ಕೂಡ ಮಾಡಿತ್ತು. ಯುವ ಮತದಾರರು ತಮ್ಮ ಹಕ್ಕು ಚಲಾಯಿಸಿ ಸಂಭ್ರಮಿಸಿದ ದೃಶ್ಯಗಳು ಎಲ್ಲಡೆ ಕಂಡುಬಂದವು.

Advertisement

Udayavani is now on Telegram. Click here to join our channel and stay updated with the latest news.

Next