Advertisement

ಹನೂರು: ರಾಜ್ಯದಲ್ಲಿ ಚುನಾವಣೆ ಪ್ರಚಾರ ಆರಂಭಿಸಿರುವ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ವಾದ್ರಾ, ರಾಜ್ಯ ಸರಕಾರದ ವಿರುದ್ಧ ಭ್ರಷ್ಟಾಚಾರದ ಬಾಣ ಪ್ರಯೋಗಿಸಿದ್ದಾರೆ.
ಚುನಾವಣೆ ಘೋಷಣೆ ಬಳಿಕ ಮೊದಲ ಬಾರಿಗೆ ರಾಜ್ಯಕ್ಕೆ ಆಗಮಿಸಿದ ಅವರು ಚಾಮರಾಜನಗರದ ಹನೂರು ಮತ್ತು ಮೈಸೂರು ಜಿಲ್ಲೆಯ ಕೆ.ಆರ್‌. ನಗರದಲ್ಲಿ ಬಿರುಸಿನ ಪ್ರಚಾರ ನಡೆಸಿದರು.
ರಾಜ್ಯದ ಬಿಜೆಪಿ ಸರಕಾರ 40 ಪರ್ಸೆಂಟ್‌ ಭ್ರಷ್ಟಾಚಾರದಲ್ಲಿ ಮುಳುಗಿದ್ದು, 1.50 ಲಕ್ಷ ಕೋಟಿ ರೂ. ಮೌಲ್ಯದ ಭ್ರಷ್ಟಾಚಾರ ಎಸಗಿದೆ ಎಂದು ಗಂಭೀರ ಆರೋಪ ಮಾಡಿದರು.

Advertisement

ಬಿಜೆಪಿ ಸರಕಾರ ನಡೆಸಿದ 1.50 ಲಕ್ಷ ಕೋಟಿ ರೂ. ಮೊತ್ತದಿಂದ 100 ಏಮ್ಸ್‌ ಆಸ್ಪತ್ರೆಗಳು, 175 ಇಎಸ್‌ಐ ಆಸ್ಪತ್ರೆಗಳು, 30 ಸಾವಿರ ಸ್ಮಾರ್ಟ್‌ ಕ್ಲಾಸ್‌ಗಳು, 750 ಕಿ.ಮೀ. ಮೆಟ್ರೋ, 2, 250 ಕಿ.ಮೀ. ಹೆದ್ದಾರಿ ಮತ್ತು ಬಡವರಿಗೆ 30 ಲಕ್ಷ ಮನೆಗಳನ್ನು ನಿರ್ಮಾಣ ಮಾಡಿಕೊಡಬಹುದಿತ್ತು ಎಂದು ಟೀಕಿಸಿದರು. ಸರಕಾರದಲ್ಲಿ ಹಲವಾರು ಹುದ್ದೆಗಳು ಖಾಲಿಯಿದ್ದರೂ ನಿರುದ್ಯೋಗಿ ಯವಕರಿಗೆ ಆ ಉದ್ಯೋಗಗಳನ್ನು ನೀಡುವಲ್ಲಿ ಸರಕಾರ ಸಂಪೋರ್ಣವಾಗಿ ವಿಫ‌ಲವಾಗಿದೆ ಎಂದು ಆರೋಪಿಸಿದರು.

ದುರ್ಬಲಗೊಳಿಸಲು ಯತ್ನ
ನಂದಿನಿಯನ್ನು ದುರ್ಬಲಗೊಳಿಸಿ ಗುಜರಾತ್‌ನ ಅಮುಲ್‌ ಸಂಸ್ಥೆಯ ಮಾರಾಟವನ್ನು ಹೆಚ್ಚಳ ಮಾಡಿಕೊಳ್ಳುವ ಪ್ರಯತ್ನ ನಡೆಯುತ್ತಿದೆ. ಕಾಂಗ್ರೆಸ್‌ ಸರಕಾರ ಅಧಿಕಾರದಲ್ಲಿದ್ದಾಗ ಹಾಲಿನ ಉತ್ಪಾದನೆ ಹೆಚ್ಚಾಗಿ ಅದನ್ನು ಸರಕಾರಿ ಶಾಲಾ ಮಕ್ಕಳಿಗೆ ಕ್ಷೀರಭಾಗ್ಯ ಯೋಜನೆಯಡಿ ವಿತರಿಸಲಾಗುತಿತ್ತು. ಆದರೆ ಬಿಜೆಪಿ ಸರಕಾರ ನಂದಿನಿ ಹಾಲಿನ ಕೊರತೆಯಿದೆ ಎನ್ನುತ್ತಿದೆ. ಕಾಂಗ್ರೆಸ್‌ ಅಧಿಕಾರದಲ್ಲಿದ್ದಾಗ ಉತ್ಪಾದನೆಯಾಗುತ್ತಿದ್ದ ಹಾಲು ಈಗ ಎಲ್ಲಿ ಹೋಗುತ್ತಿದೆ ಎಂದು ಕಿಡಿಕಾರಿದರು.

ರೈತರ ಆದಾಯ 27 ರೂ.
ಡಬಲ್‌ ಎಂಜಿನ್‌ ಸರಕಾರದಿಂದ ರೈತರ ಆದಾಯ ದ್ವಿಗುಣಗೊಳ್ಳಲಿದೆ ಎಂಬ ಭರವಸೆ ನೀಡಲಾಗಿತ್ತು. ಆದರೆ ಈ ಸರಕಾರ ಅಧಿಕಾರಕ್ಕೆ ಬಂದ ಬಳಿಕ ರೈತನ ಆದಾಯ ಕೇವಲ 27 ರೂ. ಆಗಿದೆ. ಆದರೆ ಪ್ರಧಾನಿಯ ಸ್ನೇಹಿತ ಅದಾನಿಯ ಒಂದು ದಿನದ ಆದಾಯ 16 ಲಕ್ಷ ಕೋ.ರೂ. ಇದೆ. ಈ ಸರಕಾರಗಳ ಬೆಲೆ ಏರಿಕೆ ನೀತಿಯಿಂದಾಗಿ ರೈತರು ಮತ್ತ ಬಡವರ ಬದುಕು ದುಸ್ತರವಾಗಿದೆ ಎಂದು ಕಿಡಿಕಾರಿದರು.

ಹಗುರವಾಗಿ ಪರಿಗಣಿಸಬೇಡಿ
ಈ ಚುನಾವಣೆಯನ್ನು ಯಾರೂ ಸುಲಭವಾಗಿ ಪರಿಗಣಿಸಬಾರದು ಎಂದು ಹೇಳಿದ ಪ್ರಿಯಾಂಕಾ, ಈ ಚುನಾವಣೆ ನಿಮ್ಮ ಮಕ್ಕಳ, ಈ ರಾಜ್ಯದ ಯುವಕರ ಭವಿಷ್ಯವನ್ನು ರೂಪಿಸಲಿದೆ. ಈ ಚುನಾವಣೆ ನಿಮ್ಮ ಆತ್ಮಾಭಿಮಾನ. ಕರ್ನಾಟಕದ ಆತ್ಮಾಭಿಮಾನ ಮತ್ತು ದೇಶದ ಭವಿಷ್ಯವನ್ನು ರೂಪಿಸುವ ಚುನಾವಣೆಯಾಗಿದೆ. ಈ ಚುನಾವಣೆಯಲ್ಲಿ ಕಾಂಗ್ರೆಸ್‌ ಗೆಲ್ಲಿಸಿದರೆ ನಿಮ್ಮ ಕಷ್ಟವನ್ನು ಗುರುತಿಸುವ ಕೆಲಸ ಮಾಡಲಾಗುವುದು ಎಂದರು.

Advertisement

ಗಿರಿಜನರ ಜತೆಗೆ ಸಂವಾದ
ನಾವು ಅಧಿಕಾರಕ್ಕೆ ಬರಲಿ -ಬಿಡಲಿ, ನಿಮ್ಮ ಗ್ರಾಮದ ಎಲ್ಲ ಸಮಸ್ಯೆಗಳನ್ನು ಬಗೆಹರಿಸುತ್ತೇವೆ. ನಿಮ್ಮ ಹೆಸರು ಮತ್ತು ಊರಿನ ಹೆಸರು ಬರೆದುಕೊಡಿ… ಕೊಕ್ಕಬರೆ ಗ್ರಾಮದ ಮಹಿಳೆಯ ಬಳಿ ಪ್ರಿಯಾಂಕಾ ವಾದ್ರಾ ಮಾಹಿತಿ ಹೇಳಿದ್ದಿದು. ಗಿರಿಜನ ಮಹಿಳೆಯರೊಂದಿಗೆ ನಡೆಸಿದ ಸಂವಾದದ ವೇಳೆ ಅವರು ಈ ವಾಗ್ಧಾನ ಮಾಡಿದ್ದಾರೆ. ಕೊಕ್ಕಬರೆ ಗ್ರಾಮದ ಬೊಮ್ಮಮ್ಮ ತಮ್ಮ ಗ್ರಾಮದ ಸಂಕಷ್ಟ ಹೇಳಿಕೊಂಡರು. ಇದಕ್ಕೆ ಸ್ಪಂದಿಸಿದ ಪ್ರಿಯಾಂಕಾ ವಾದ್ರಾ ಕಷ್ಟ ಬಗೆಹರಿಸುವ ವಾಗ್ಧಾನ ಮಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next