ಬಳ್ಳಾರಿ: ಉಪಚುನಾವಣೆ-ಸಾರ್ವತ್ರಿಕ ಚುನಾವಣೆಗಳೇ ಬೇರೆಬೇರೆ. ಸಾರ್ವತ್ರಿಕ ಚುನಾವಣೆಯಲ್ಲಿ ಎಲ್ಲೆಡೆ ಪ್ರಧಾನಿ ನರೇಂದ್ರ ಮೋದಿಯವರ ಅಲೆಯಿದ್ದು, ಪ್ರತಿಪಕ್ಷದವರು ಏನೇತಂತ್ರ ನಡೆಸಿದರೂ, ಜಿಲ್ಲೆಯಲ್ಲಿ ಬಿಜೆಪಿ ಅಭ್ಯರ್ಥಿ ವೈ.ದೇವೇಂದ್ರಪ್ಪ ಒಂದುವರೆ ಲಕ್ಷಕ್ಕೂ ಹೆಚ್ಚು ಮತಗಳ ಅಂತರದಿಂದ ಜಯಗಳಿಸುವುದು ಖಚಿತ ಎಂದು ಶಾಸಕ ಬಿ. ಶ್ರೀರಾಮುಲು ವಿಶ್ವಾಸ ವ್ಯಕ್ತಪಡಿಸಿದರು.
ನಗರದ ಬಿಜೆಪಿ ಕಚೇರಿಯಲ್ಲಿ ಭಾನುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಳ್ಳಾರಿ ಲೋಕಸಭೆ ಕ್ಷೇತ್ರ ವ್ಯಾಪ್ತಿಯ 8 ವಿಧಾನಸಭಾ ಕ್ಷೇತ್ರಗಳಿಗೂ ಪಕ್ಷದ ಅಭ್ಯರ್ಥಿ ವೈ.ದೇವೇಂದ್ರಪ್ಪ ಭೇಟಿ ನೀಡಿ ಮತಯಾಚನೆ ಮಾಡಿದ್ದಾರೆ. ಪಕ್ಷದ ಶಾಸಕರು, ಮಾಜಿ ಶಾಸಕರು, ಅಧ್ಯಕ್ಷರು, ಕಾರ್ಯಕರ್ತರು ಹಳ್ಳಿಹಳ್ಳಿಗಳಲ್ಲಿ ಪ್ರಚಾರ ಮಾಡಿ ಪ್ರಧಾನಿ ಮೋದಿ ಸಲುವಾಗಿ ಮತಯಾಚನೆ ಮಾಡಿದ್ದಾರೆ ಎಂದರು.
ಜಿಲ್ಲೆಯ ಜನರು ಸಹ ಕಳೆದ 72 ವರ್ಷಗಳ ಆಡಳಿತದ ಮುಂದೆ 5 ವರ್ಷದ ಮೋದಿ ಆಡಳಿತದಲ್ಲಿ ಹೊಸ ಭಾರತವನ್ನು ನೋಡಿದ್ದೇವೆ ಎನ್ನುತ್ತಿದ್ದಾರೆ. ಹಾಗಾಗಿ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ವೈ. ದೇವೇಂದ್ರಪ್ಪ ಶೇ.100 ರಷ್ಟು ಒಂದೂವರೆ ಲಕ್ಷ ಮತಗಳ ಅಂತರದಿಂದ ಗೆಲ್ಲಲಿದ್ದಾರೆ. ಜತೆಗೆ ಹೈಕ ಭಾಗದಲ್ಲಿ ನಾಲ್ಕು ಸೇರಿ ರಾಜ್ಯದಲ್ಲೂ 22 ಕ್ಷೇತ್ರಗಳಲ್ಲಿ ಬಿಜೆಪಿ ಜಯಗಳಿಸಲಿದೆ ಎಂದು ತಿಳಿಸಿದರು.
ಹಾಸನ, ಮಂಡ್ಯಾದಲ್ಲಿ ಐಟಿ ಅಧಿಕಾರಿಗಳು ದಾಳಿ ನಡೆಸಿದ ಬಳಿಕ ಸಿಎಂ ಎಚ್.ಡಿ. ಕುಮಾರಸ್ವಾಮಿ ಸಾಕಷ್ಟು ಹೇಳಿಕೆಗಳನ್ನು ನೀಡಿದ್ದಾರೆ. ಆದರೆ, ಐಟಿ ಅಧಿಕಾರಿಗಳು ಎಲ್ಲರ ಮೇಲೂ ದಾಳಿ ನಡೆಸುತ್ತಿದ್ದಾರೆ. ಶಾಸಕರ ಆಪ್ತರು, ಅಣ್ಣ ತಮ್ಮಂದಿರು, ಬೀಗರು, ಬಂಧುಗಳು ಎಂಬುದನ್ನು ನೋಡದೆ ಅನುಮಾನ ಇರುವ ಎಲ್ಲರ ಮೇಲೂ ದಾಳಿ ನಡೆಸುತ್ತಿದ್ದಾರೆ. ಅದೇ ರೀತಿ ಮೊಳಕಾಲ್ಮುರು ವಿಧಾನಸಭಾ ಕ್ಷೇತ್ರ, ಚಿತ್ರದುರ್ಗದಲ್ಲೂ ದಾಳಿ ನಡೆಸಿದ್ದಾರೆ. ಆದರೆ, ಕಾಂಗ್ರೆಸ್‌ನವರು ತಮ್ಮ ಮೇಲಷ್ಟೇ ದಾಳಿ ನಡೆಸಲಾಗುತ್ತಿದೆ ಎಂದು ಜನರನ್ನು ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ನನ್ನನ್ನು ವಿರೋಧಿಸಿದ್ದ ಎಲ್ಲರೂ ಮೇಲೆ ಹೋಗಿದ್ದಾರೆ ಎಂಬ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಹೇಳಿಕೆಗೆ ಪ್ರತಿಕ್ರಿಯಿಸಿದ ಶಾಸಕ ರಾಮುಲು, ದೇವೇಗೌಡ ಅವರನ್ನು ಮಾಜಿ ಸಿಎಂ ರಾಮಕೃಷ್ಣ ಹೆಗಡೆ, ಮಾಜಿ ಸಚಿವ ಬಚ್ಚೆಗೌಡ ಅವರಿಂದ ಹಿಡಿದು ಬಹುತೇಕರು ವಿರೋಧಿಸಿದ್ದಾರೆ. ವಯಸ್ಸಾದವರೆಲ್ಲ ಮೇಲೆ ಹೋಗಿರಬಹುದು. ಇನ್ನು ಹಲವರು ಇದ್ದಾರೆ. ಆದರೆ, ದೇಶದ ಪ್ರಧಾನಿಯಾಗಿದ್ದ ದೇವೇಗೌಡರು ನಮ್ಮ ರಾಜ್ಯದವರು ಎಂಬ ಗೌರವ ನಮ್ಮಲ್ಲಿದೆ. ಹಾಗಾಗಿ ಅವರನ್ನು ಸದಾ ಗೌರವದಿಂದ ಕಾಣುತ್ತೇವೆ ಎಂದರು.
ಸುದ್ದಿಗೋಷ್ಠಿಯಲ್ಲಿ ಶಾಸಕ ಜಿ. ಸೋಮಶೇಖರರೆಡ್ಡಿ, ಜಿಲ್ಲಾಧ್ಯಕ್ಷ ಚನ್ನಬಸವನಗೌಡ, ಮುಖಂಡರಾದ ಮಹಿಪಾಲ್, ಗುಜರಿ ಅಜೀಜ್, ವಿ.ಕೆ.ಬಸಪ್ಪ, ರಾಜಶೇಖರ್, ಜಿಲ್ಲಾ ಕಾರ್ಯದರ್ಶಿ ಮುರಹರಿಗೌಡ ಸೇರಿದಂತೆ ಹಲವರು ಇದ್ದರು.