Advertisement

ನಾಲ್ಕೂ ಜಿಲ್ಲೆಗಳಲ್ಲಿ ಬಿಜೆಪಿ ಅಭ್ಯರ್ಥಿಗಳ ವಿರುದ್ಧ ಪ್ರಚಾರ

05:18 PM Apr 18, 2019 | Naveen |

ಹುಬ್ಬಳ್ಳಿ: ಮಹದಾಯಿ ಹೋರಾಟಕ್ಕೆ ಸ್ಪಂದಿಸದ, ಕೇಂದ್ರದ ಮೇಲೆ ಒತ್ತಡ ತರುವಲ್ಲಿ ವಿಫ‌ಲರಾದ ಹಿನ್ನೆಲೆಯಲ್ಲಿ ಮಹದಾಯಿ ವ್ಯಾಪ್ತಿಯ ನಾಲ್ಕೂ ಜಿಲ್ಲೆಗಳಲ್ಲಿ ಬಿಜೆಪಿ ಅಭ್ಯರ್ಥಿಗಳ ವಿರುದ್ಧ ಮತ ಪ್ರಚಾರ ನಡೆಸಲಾಗುವುದು ಎಂದು ಕರ್ನಾಟಕ ರೈತ ಸೇನಾ ರಾಜ್ಯಾಧ್ಯಕ್ಷ ಶಂಕರಣ್ಣ ಅಂಬಲಿ ತಿಳಿಸಿದರು.

Advertisement

ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸ್ಥಳೀಯ ಸಮಸ್ಯೆಗಳ ಬಗ್ಗೆ ಲೋಕಸಭೆ ಚುನಾವಣೆ ಚರ್ಚೆ ನಡೆಯಬೇಕಿತ್ತು.
ಆದರೆ ಬಿಜೆಪಿ ಸಂಸದರು ರಾಷ್ಟ್ರರಕ್ಷಣೆ, ಪ್ರಧಾನಿ ಮೋದಿಗಾಗಿ ಮತ ಹಾಕಿ ಎಂದು ಚುನಾವಣೆ ಮಾಡುತ್ತಿರುವುದು ದುರಂತ.ಬೆಳಗಾವಿ, ಧಾರವಾಡ, ಹಾವೇರಿ-ಗದಗ ಹಾಗೂ ಬಾಗಲಕೋಟೆ ಜಿಲ್ಲೆಗಳ ಪ್ರಮುಖ ಬೇಡಿಕೆಯಾಗಿರುವ ಮಹದಾಯಿ ಯೋಜನೆ ಅನುಷ್ಠಾನಕ್ಕೆ ಬಿಜೆಪಿ ಅಭ್ಯರ್ಥಿಗಳಿಂದ ಯಾವುದೇ ಭರವಸೆಗಳಿಲ್ಲ. ಈ ಹೋರಾಟಕ್ಕೆ ಸ್ಪಂದಿಸದ
ಕಾರಣಕ್ಕೆ ನಾಲ್ಕು ಜಿಲ್ಲೆಯ ಬಿಜೆಪಿ ಅಭ್ಯರ್ಥಿಗಳ ವಿರುದ್ಧ 2ಲಕ್ಷ ಕರ ಪತ್ರ ಹಂಚುವುದಾಗಿ ತಿಳಿಸಿದರು.

ಮೈತ್ರಿ ಅಭ್ಯರ್ಥಿಗೆ ಬೆಂಬಲ: ಮಹದಾಯಿ ವಿಚಾರದಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರಕಾರ ಹಲವು ರೀತಿಯಲ್ಲಿ ಸ್ಪಂದಿಸಿತ್ತು. ಮಧ್ಯಂತರ ಅರ್ಜಿ ಸಲ್ಲಿಕೆ, ಸೌಹಾರ್ದ ಮಾತುಕತೆಗೆ
ಗೋವಾ, ಮಹಾರಾಷ್ಟ್ರ ಮುಖ್ಯಮಂತ್ರಿಗಳಿಗೆ ಪತ್ರ ಇನ್ನಿತರ ಕ್ರಮ ಕೈಗೊಂಡಿತ್ತು. ಈ ಹಿನ್ನೆಲೆಯಲ್ಲಿ ಲೋಕಸಭೆ ಚುನಾವಣೆಯಲ್ಲಿ ಮೈತ್ರಿ ಅಭ್ಯರ್ಥಿಯನ್ನು ಬೆಂಬಲಿಸಲಾಗುವುದು ಎಂದು ಮಹದಾಯಿ ಹೋರಾಟಗಾರ ಲೋಕನಾಥ ಹೆಬಸೂರು ತಿಳಿಸಿದರು.

ಏ.13ರಂದು ನವಲಗುಂದಲ್ಲಿ ನಡೆದ ಸಭೆಯಲ್ಲಿ ನೋಟಾ ಪ್ರಯೋಗಕ್ಕೆ ತೀರ್ಮಾನಿಸಲಾಗಿತ್ತಾದರೂ ಅದನ್ನು ಬದಲಿಸಿ
ಇದೀಗ ಮೈತ್ರಿ ಅಭ್ಯರ್ಥಿ ಬೆಂಬಲ ಮೂಲಕ, ಹೋರಾಟಗಾರರನ್ನು ಅವಮಾನ ಮಾಡಿದ ಬಿಜೆಪಿಗೆ ತಕ್ಕ ಪಾಠ ಕಲಿಸಲು ನಿರ್ಧರಿಸಲಾಗಿದೆ ಎಂದರು.

ಮಹದಾಯಿ ವಿಚಾರದಲ್ಲಿ ಪ್ರಹ್ಲಾದ ಜೋಶಿ ಹೇಳುತ್ತಿರುವುದೆಲ್ಲ ಸುಳ್ಳಿನ ಕಂತೆಯಾಗಿದೆ. ನ್ಯಾಯಾಧಿಕರಣ ತೀರ್ಪು ಹೊರ ಬಂದ ನಂತರ ರಾಜ್ಯ ಸರಕಾರ ಕೇಂದ್ರಕ್ಕೆ ಪತ್ರ ಬರೆದು ಗೆಜೆಟ್‌ ನೋಟಿಫಿಕೇಶನ್‌ ಹೊರಡಿಸುವಂತೆ ಮನವಿ ಮಾಡಿದೆ. ಈ ನಿಟ್ಟಿನಲ್ಲಿ ಮಹದಾಯಿ ಯೋಜನೆ ವ್ಯಾಪ್ತಿಯ ನಾಲ್ಕು ಸಂಸದರು ಪ್ರಧಾನಿಯವರ ಮೇಲೆ ಒತ್ತಡ ತರಬೇಕಿತ್ತು. ಆದರೆ ಇಂತಹ
ಯಾವುದೇ ಕೆಲಸ ಮಾಡದೆ ಈ ಭಾಗದ ಹೋರಾಟಕ್ಕೆ ಅವಮಾನ ಮಾಡಿದ್ದಾರೆ. ಹೋರಾಟ ಹತ್ತಿಕ್ಕುವ ನಿಟ್ಟಿನಲ್ಲಿ ಸಾಕಷ್ಟು ಪ್ರಯತ್ನಿಸಿ, ಬಿಜೆಪಿ ನಾಯಕರು ನಿರ್ನಾಮ ಮಾಡುವ ಹುನ್ನಾರ
ಮಾಡಿದ್ದಾರೆ. ನವಲಗುಂದದಲ್ಲಿ ನಡೆದ ಗಲಭೆಗೆ ಬಿಜೆಪಿ ನಾಯಕರೇ ಪ್ರಮುಖ ಕಾರಣವಾಗಿದ್ದರು ಎಂದು ಆರೋಪಿಸಿದರು.

Advertisement

ಉತ್ತರ ಕರ್ನಾಟಕ ಹೋರಾಟ ಸಮಿತಿ ಜಿಲ್ಲಾಧ್ಯಕ್ಷ ಲಕ್ಷ್ಮಣ ಬಕ್ಕಾಯಿ ಮಾತನಾಡಿ, ಮೂರು ರಾಜ್ಯಗಳ ಮಧ್ಯೆ ಇರುವ ನೀರಿನ
ಸಮಸ್ಯೆಯನ್ನು ಸಂಧಾನ ಮೂಲಕ ಬಗೆಹರಿಸುವ ಅಧಿಕಾರಿ ಪ್ರಧಾನ ಮಂತ್ರಿಗಿತ್ತು. ಇರುವ ಅಧಿಕಾರ ಬಳಸದೆ ಈ ಭಾಗದ ರೈತರಿಗೆ ಪ್ರಧಾನಿ ಅನ್ಯಾಯ ಮಾಡಿದ್ದಾರೆ. ಇಂತಹ ಸರಕಾರಕ್ಕೆ
ಜನರು ಹಾಗೂ ರೈತರು ತಕ್ಕ ಪಾಠ ಕಲಿಸಬೇಕು ಎಂದರು. ಹೋರಾಟಗಾರರಾದ ಎನ್‌.ಎ.ಖಾಜಿ, ಸಿದ್ದು ತೇಜಿ, ಬಾಬಾಜಾನ ಮುಧೋಳ ಹಾಗೂ ಇನ್ನಿತರರಿದ್ದರು.

ಗೊಂದಲ
ಬಿಜೆಪಿ ಅಭ್ಯರ್ಥಿಯನ್ನು ಸೋಲಿಸುವ ಕಾರಣಕ್ಕೆ ಮೈತ್ರಿ ಅಭ್ಯರ್ಥಿಗೆ ಬೆಂಬಲ ನೀಡುವುದಾಗಿ ಹೇಳಿದ ರೈತ ಒಕ್ಕೂಟ ಅಧ್ಯಕ್ಷ ಲೋಕನಾಥ ಹೆಬಸೂರ ಅವರ ಅಭಿಪ್ರಾಯ ಸುದ್ದಿಗೋಷ್ಠಿ ವೇದಿಕೆ ಮೇಲಿದ್ದ ಹೋರಾಟಗಾರರಿಗೆ ಮುಜುಗುರ ಉಂಟು ಮಾಡಿತು. ಇದಕ್ಕೆ ಪ್ರತಿಯಾಗಿ ಹೇಳಿಕೆ ನೀಡಿದ ಶಂಕರಣ್ಣ ಅಂಬಲಿ, ಮಹದಾಯಿ ಹೋರಾಟಕ್ಕೆ ಬೆಂಬಲ ನೀಡದ ಹಾಗೂ ಯೋಜನೆಗೆ ಅಡ್ಡಗಾಲಾಗಿರುವ ಬಿಜೆಪಿ ಅಭ್ಯರ್ಥಿಗಳನ್ನು ಸೋಲಿಸುವುದು ನಮ್ಮ ಮುಂದಿರುವ ಗುರಿ. ಇಂತಹ ಅಭ್ಯರ್ಥಿಗೇ ಬೆಂಬಲ ನೀಡಬೇಕು ಎನ್ನುವುದರ ಕುರಿತು ಯಾವುದೇ ಚರ್ಚೆಯಾಗಿಲ್ಲ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next