Advertisement
ಆದರ್ಶ ಸರ್ಕಾರಿ ನಗರ ಸಾರಿಗೆ ವಾಹನ: ಸಾರಿಗೆ ಬಸ್ ಎಂದಾಕ್ಷಣ ಸಾಮಾನ್ಯವಾಗಿ ಜನರಿಗೆ ನೆನಪಾಗುವುದು ಆ ಬಸ್‌ನಲ್ಲಿ ಹಾಕುವ ಅಬ್ಬರದ ಚಲನಚಿತ್ರಗೀತೆಗಳು, ಅಕ್ಕಪಕ್ಕದಲ್ಲಿ ಬೀಡಿ ಸಿಗರೇಟು ಸೇದುವ ಮಂದಿ ಬಿಡುವ ಹೊಗೆ ಇತ್ಯಾದಿ. ಆದರೆ ಭದ್ರಾವತಿ ಹೊಸಮನೆಯಿಂದ ಕಾಗದನಗರ, ಉಜ್ಜನಿಪುರಕ್ಕೆ ಪ್ರತಿನಿತ್ಯ ಬೆಳಗ್ಗೆಯಿಂದ ರಾತ್ರಿವರೆಗೆ ಸಂಚರಿಸುವ ಕೆ.ಎ.-17ಎಫ್-1836 ಹಸಿರು ಬಣ್ಣದ ಸರ್ಕಾರಿ ನಗರ ಸಾರಿಗೆ ಬಸ್ ಈ ರೀತಿಯ ವಾತಾವರಣಕ್ಕೆ ಅಪವಾದವೆನ್ನುವಂತಿದೆ. ಈ ಬಸ್ ಒಳಗೆ ಪ್ರವೇಶಿಸುತ್ತಿಂದಂತೆ ದೇಶಪ್ರೇಮ ತನ್ನಿಂದ ತಾನೆ ಮನಸ್ಸಿನಂಗಳದಲ್ಲಿ ಅರಳುತ್ತದೆ. ಅದಕ್ಕೆ ಕಾರಣಆ ಬಸ್‌ನ ಒಳಗಡೆ ಪ್ರಯಾಣಿಕರು ಕುಳಿತುಕೊಳ್ಳುವ ಆಸನಗಳ ಪಕ್ಕದ ಕಿಟಕಿಯ ಮೇಲ್ಭಾಗದಲ್ಲಿ ಸಾಲಾಗಿ ಹಾಕಲಾಗಿರುವ ಆಕರ್ಷಕ ಚಿತ್ರಗಳು ಹಾಗೂ ಆ ಚಿತ್ರಗಳ ಕೆಳಗೆ ಸೈನಿಕರ ಕುರಿತು ಅಭಿಮಾನ ಸಾರುವ ಮತ್ತು ಅವರ ತ್ಯಾಗಮಯ ಕಾರ್ಯಕ್ಕೆ ಒಂದು ಸಲಾಂ ಎನ್ನುವ ಬರಹ ಮನಸ್ಸನ್ನು ಸ್ಪರ್ಶಿಸುತ್ತದೆ. ಈ ಬಸ್‌ನಲ್ಲಿ ಪ್ರತಿನಿತ್ಯ ನಾರಾರು ವಿದ್ಯಾರ್ಥಿಗಳು, ನಾಗರಿಕರು ಸಂಚರಿಸುತ್ತಾರೆ. ಅವರೆಲ್ಲರೂ ಆ ಸರ್ಕಾರಿ ಬಸ್ ಚಾಲಕ ಪ್ರಕಾಶ್ ಮತ್ತು ಕಾರ್ಯ ನಿರ್ವಾಹಕ ರಮೇಶ್ ಅವರ ಕಾರ್ಯವನ್ನು ಮುಕ್ತಕಂಠದಿಂದ ಹೊಗಳುತ್ತಾರೆ.
ಎಂ. ವಿಶ್ವೇಶ್ವರಯ್ಯ, ಮಾಜಿ ರಾಷ್ಟ್ರಪತಿ ಡಾ| ಎಪಿಜೆ ಅಬ್ದುಲ್ ಕಲಾಂ ಸೇರಿದಂತೆ ಅಸಂಖ್ಯಾತ ಭಾರತೀಯ ಪ್ರಾತಃ ಸ್ಮರಣೀಯರ ವರ್ಣಮಯ ಚಿತ್ರಗಳು ಈ ವಾಹನದೊಳಗೆ ರಾರಾಜಿಸುತ್ತಿವೆ. ಆ ಬಸ್‌ನಲ್ಲಿ ಪ್ರಯಾಣಿಸುವ ವಿದ್ಯಾರ್ಥಿಗಳಿಗೆ ಮತ್ತು ಪ್ರಯಾಣಿಕರಿಗೆ ಈ ದೇಶ, ಭಾಷೆ, ನೆಲ, ಜಲ, ಸಾಹಿತ್ಯ, ಸಂಸ್ಕೃತಿಗೆ ಕೊಡುಗೆ ನೀಡಿದ ಮಹನೀಯರಂತೆ ಜೀವನದಲ್ಲಿ ನಾವೂ ಅಥವಾ ನಮ್ಮ ಮಕ್ಕಳೂ ಸಹ ಈ ದೇಶಕ್ಕಾಗಿ ಏನನ್ನಾದರೂ ಸಾಧಿ ಸಿ ಜೀವನ ಸಾರ್ಥಕ ಮಾಡಿಕೊಳ್ಳಬೇಕೆಂಬ ಪ್ರೇರಣೆ ನೀಡುವಂತಿದೆ. ಈ ರೀತಿ ಸರ್ಕಾರಿ ಬಸ್ಸಿನಲ್ಲಿ ತಮ್ಮ ಸ್ವಂತ ಗಳಿಕೆ ಹಣವನ್ನು ಖರ್ಚು ಮಾಡಿ ದೇಶಪ್ರೇಮ ಸಾರುವ ವಾತಾವರಣ ಸೃಷ್ಟಿಸಿರುವ
ಬಸ್ ಚಾಲಕ ಪ್ರಕಾಶ್ ಅವರನ್ನು ಪತ್ರಿಕೆ ಸಂಪರ್ಕಿಸಿದಾಗ ಮಾತನಾಡಿದ ಅವರು, ದೇಶಕ್ಕೆ ಅನ್ನ ನೀಡುವ ರೈತ, ದೇಶ ಕಾಯುವ ಸೈನಿಕ ಇವರ ನೆನಪಿನಿಂದ ವಿದ್ಯಾರ್ಥಿಗಳು ಸ್ಫೂರ್ತಿ ಗೊಂಡು ದೇಶಕ್ಕಾಗಿ ಅವರೂ ಸಹ ಏನಾದರೂ ಒಳ್ಳೆಯ ಕೊಡುಗೆ ನೀಡುವಂತೆ ಬೆಳೆಯಲಿ ಎಂಬ ಸದುದ್ದೇಶದಿಂದ ಈ ರೀತಿ ಚಿತ್ರಗಳನ್ನು ನಾನು ಹಾಗೂ ನನ್ನ ಸ್ನೇಹಿತ ಬಸ್ ನ ಕಾರ್ಯ ನಿರ್ವಾಹಕ ರಮೇಶ್ ಅವರು ಇದರಲ್ಲಿ ಅಳವಡಿಸಿದ್ದೇವೆ. ಈ ಬಸ್ಸಿನಲ್ಲಿ ಪ್ರತಿ ನಿತ್ಯ ಪ್ರಯಾಣಿಸುವ ವಿದ್ಯಾರ್ಥಿಗಳು ಮತ್ತು ಪ್ರಯಾಣಿಕರು ನಮ್ಮ ಈ ಕಾರ್ಯದ ಬಗ್ಗೆ ಅಪಾರ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅದು ನಮ್ಮ ಕೆಲಸಕ್ಕೆ ಮತ್ತಷ್ಟು ಪ್ರೋತ್ಸಾಹದಾಯಕ ವಾಗಿದ್ದು ಮುಂದಿನ ದಿನಗಳಲ್ಲಿ ಈ ರೀತಿ ದೇಶಪ್ರೇಮ ಸಾರುವ ಕಾರ್ಯಗಳನ್ನು ಹಮ್ಮಿಕೊಳ್ಳುವ ಯೋಚನೆಯಿದೆ ಎಂದರು.
Related Articles
Advertisement
ತುಕ್ಕು ಹಿಡಿದು ಬದುಕುವುದಕ್ಕಿಂತ ದುಡಿದು ಸವೆಯುವುದು ಮೇಲು. ದೇಶಕ್ಕಾಗಿ ಹೋರಾಡುತ್ತಿರುವ ಭಾರತೀಯ ಸೇನೆಗೊಂದು ಸಲಾಂ. ನಾವಿಲ್ಲಿ ಆರಾಮವಾಗಿದ್ದೇವೆಂದರೆ ಅದಕ್ಕೆ ಕಾರಣ ನಮ್ಮ ಭಾರತೀಯ ಯೋದರ ಸೇವೆ. ಈ ರೀತಿ ಅಲ್ಲಲ್ಲಿ ಬದುಕಿನ ಸಾರ್ಥಕತೆಯನ್ನು ಸಾರುವ ಘೋಷಣಾ ವಾಕ್ಯದ ಬರಹಗಳೂ ಸಹ ಪ್ರಯಾಣಿಕರನ್ನು ಚಿಂತನೆಗೊಳಪಡಿಸುವಷ್ಟರ ಮಟ್ಟಿಗೆ ಪ್ರಖರ ಸಂದೇಶವನ್ನು ಸಾರುವಂತಿವೆ.
ಕೆ.ಎಸ್. ಸುಧೀಂದ್ರ ಭದ್ರಾವತಿ