Advertisement

ದಾವಣಗೆರೆ ಕ್ಷೇತ್ರದಿಂದ ಎಸ್ಸೆಸ್‌-ಎಸ್ಸೆಸ್ಸೆಎಂ ಸ್ಪರ್ಧಿಸಲಿ: ಶಿವಶಂಕರ್‌

05:04 PM Apr 03, 2019 | Team Udayavani |

ದಾವಣಗೆರೆ: ದಾವಣಗಬೆರೆ ಲೋಕಸಭಾ ಕ್ಷೇತ್ರದಿಂದ ಶಾಸಕ ಶಾಮನೂರು ಶಿವಶಂಕರಪ್ಪ ಇಲ್ಲವೇ ಮಾಜಿ ಸಚಿವ ಎಸ್‌.ಎಸ್‌. ಮಲ್ಲಿಕಾರ್ಜುನ್‌ ಅವರೇ ಸ್ಪರ್ಧಿಸಬೇಕು ಹರಿಹರ ಕ್ಷೇತ್ರದ ಮಾಜಿ ಶಾಸಕ ಎಚ್‌. ಎಸ್‌. ಶಿವಶಂಕರ್‌ ಒತ್ತಾಯಿಸಿದರು.

Advertisement

ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದಾವಣಗೆರೆಯಲ್ಲಿ ಕಾಂಗ್ರೆಸ್‌ಗೆ ಗೆಲ್ಲುವ ಅವಕಾಶ ಇದೆ. ಮಲ್ಲಿಕಾರ್ಜನ್‌ ಮೂರು ಬಾರಿ ಸೋತಿರುವ ಬಗ್ಗೆ ಅನುಕಂಪ ಇದೆ. ಜಿ.ಎಂ. ಸಿದ್ದೇಶ್ವರ್‌ ವಿರುದ್ಧ ಆಡಳಿತ ವಿರೋಧಿ ಅಲೆ ಇದೆ. ಆದರೂ, ಮಲ್ಲಿಕಾರ್ಜುನ್‌ ಸ್ಪರ್ಧಿಸಲು ಅದೂ ನಾಮಪತ್ರ
ಸಲ್ಲಿಸಲು 48 ಗಂಟೆ ಇರುವಾಗ ಹಿಂದೇಟು ಹಾಕುತ್ತಿರುವುದು ವಿಪರ್ಯಾಸ ಎಂದರು.

ಶಾಮನೂರು ಶಿವಶಂಕರಪ್ಪ, ಎಸ್‌.ಎಸ್‌. ಮಲ್ಲಿಕಾರ್ಜುನ್‌ ನಿಲ್ಲದೇ ಹೋದರೆ ಜಿಲ್ಲೆಯಲ್ಲಿ ಕಾಂಗ್ರೆಸ್‌ ಅವಸಾನ ಹೊಂದಲಿದೆ. ಬೇರೆ ಯಾರೇ ನಿಂತರೂ ಚುನಾವಣೆ ನಡೆಯೋದಿಲ್ಲ ಅಂದರೆ
ಕಾಟಾಚಾರಕ್ಕೆ ನಿಲ್ಲಬೇಕಾಗುತ್ತದೆ. ಈಗಲೂ ಕಾಲಾವಕಾಶ ಇದೆ. ಕಾಂಗ್ರೆಸ್‌ ರಾಜ್ಯ ಅಧ್ಯಕ್ಷ ದಿನೇಶ್‌ ಕೆ. ಗುಂಡುರಾವ್‌ ಹಾಗೂ ಮುಖಂಡರು ಅವರಿಬ್ಬರ ಬೇಡಿಕೆ ಈಡೇರಿಸಿ, ಮನ ಸಂತೋಷ ಪಡಿಸಿ, ಯಾರಾದರೂ ಒಬ್ಬರನ್ನ ಚುನಾವಣೆಯಲ್ಲಿ ಸ್ಪರ್ಧಿಸಲು ಮನವೊಲಿಸಬೇಕು ಎಂದು ಆಗ್ರಹಿಸಿದರು.

ಚುನಾವಣೆ ಘೋಷಣೆ ಆಗುವ ಮುನ್ನ ಬೇರೆ ಕಡೆಯಿಂದ ಬಂದವರು ಬಿಜೆಪಿಯಿಂದ ಸಂಸದರಾಗುತ್ತಾರೆ. ಜಿಲ್ಲೆಯಲ್ಲಿ ಯಾರೂ ಗಂಡಸರು ಇಲ್ಲವೇ ಎಂದು ಪ್ರಶ್ನಿಸಿದ್ದಂತಹ ಮಲ್ಲಿಕಾರ್ಜುನ್‌ ಅವರೇ ಈಗ ನಾಮಪತ್ರ ಸಲ್ಲಿಕೆಗೆ ಕೆಲವೇ ದಿನಗಳು ಇರುವಾಗ ಹಿಂದೇಟು ಹಾಕುವುದು ಯಾವ ಕಾರಣಕ್ಕೆ ಎಂಬುದೇ ಅರ್ಥವಾಗುತ್ತಿಲ್ಲ. ಅವರೇ ನಿಲ್ಲದೇ ಹೋದರೆ ಜನರು ಬೇರೆ ರೀತಿಯ ಪ್ರಶ್ನೆ ಕೇಳುವಂತಾಗುತ್ತದೆ ಎಂದರು.

ಚುನಾವಣೆ ಎಂದರೆ ಸೋಲು-ಗೆಲುವು ಇದ್ದದ್ದೇ. ಸೋಲುತ್ತೇನೆ ಎಂದು ಹಿಂದೆ ಸರಿಯುವುದು ರಾಜಕಾರಣಿಯ ಲಕ್ಷಣ ಅಲ್ಲ. ಸೋಲಲಿ ಗೆಲ್ಲಲಿ ಅಖಾಡಕ್ಕೆ ಇಳಿಯಬೇಕು. ಅಖಾಡಕ್ಕೆ ಇಳಿಯದೇ
ಹೋದರೆ ಸರಿ ಆಗುವುದಿಲ್ಲ. ಚುನಾವಣೆಗೆ ಸ್ಪರ್ಧಿಸಿದರೆ ಐಟಿ ದಾಳಿ ಆಗುತ್ತದೆ ಎಂಬ ಹೆದರಿಕೆ ಏನಾದರೂ ಮಲ್ಲಿಕಾರ್ಜುನ್‌ಗೆ ಇದೆಯೇ ಎಂಬ ಅನುಮಾನ ಬರುತ್ತದೆ. ಐಟಿ ದಾಳಿ ಏನಿದ್ದರೂ ಮೈಸೂರು, ಮಂಡ್ಯಕ್ಕೆ ಮಾತ್ರ.ಈ ಕಡೆ ಬರುವುದೇ ಇಲ್ಲ. ಹಾಗಾಗಿ ಮಲ್ಲಿಕಾರ್ಜುನ್‌ ಐಟಿ ದಾಳಿಗೆ ಹೆದರುವ ಅಗತ್ಯವೇ ಇಲ್ಲ. ಚುನಾವಣೆಯಲ್ಲಿ ಸ್ಪರ್ಧಿಸಬೇಕು ಎಂದು ಒಬ್ಬ ಆತ್ಮೀಯ ಮಿತ್ರನಾಗಿ ಕೇಳಿಕೊಳ್ಳುತ್ತೇನೆ ಎಂದು ಹೇಳಿದರು.

Advertisement

ಎಸ್‌.ಎಸ್‌. ಮಲ್ಲಿಕಾರ್ಜುನ್‌ ಜಿಲ್ಲಾ ಉಸ್ತುವಾರಿ ಸಚಿವರಾಗಿದ ಸಂದರ್ಭದಲ್ಲಿ ಹರಿಹರ ಕ್ಷೇತ್ರದ ಅಭಿವೃದ್ಧಿ ಕಾರ್ಯಕ್ಕೆ ಸಾಕಷ್ಟು ತೊಂದರೆ ಮಾಡಿದ್ದಾರೆ. ಆದರೂ, ನಾನು ವಿಶಾಲ ಭಾವನೆಯಿಂದ ಆ ಎಲ್ಲವನ್ನೂ ಮರೆತು ಚುನಾವಣೆಗೆ ನಿಲ್ಲುವಂತೆ ಒತ್ತಾಯ ಮಾಡುತ್ತಿದ್ದೇನೆ. ಮಲ್ಲಿಕಾರ್ಜುನ್‌ ಬಗ್ಗೆ ನನಗೆ ಯಾವುದೇ ವೈಯಕ್ತಿಕ ದ್ವೇಷ ಇಲ್ಲ. ಅವರು ಚುನಾವಣೆಗೆ ನಿಂತರೆ ಗೆಲ್ಲುವ ಅವಕಾಶ ಇದೆ ಎಂದು ಹೇಳಿದರು.

ಚುನಾವಣೆಯಲ್ಲಿ ಗೂಳಿಗೆ ಗೂಳಿಯೇ ಎದುರಾಗಿ ನಿಲ್ಲಬೇಕು. ಅದನ್ನು ಬಿಟ್ಟು ಗೂಳಿ ಮುಂದೆ ಆಡು, ಕುರಿ ನಿಲ್ಲಿಸಿದರೆ ಗೂಳಿಯನ್ನೇ ನೋಡಿಯೇ ಹೆದರಿ ಓಡಿ ಹೋಗುತ್ತದೆ. ಹಾಗಾಗಿ ಎಸ್‌.ಎಸ್‌. ಮಲ್ಲಿಕಾರ್ಜುನ್‌ ಇಲ್ಲವೇ ಶಾಮನೂರು ಶಿವಶಂಕರಪ್ಪ ಅವರೇ ನಿಲ್ಲಬೇಕು. ಬೇರೆ ಯಾರೇ ನಿಂತರೂ ಮೈತ್ರಿ ಧರ್ಮ ಪಾಲನೆ ಮಾಡುತ್ತೇವೆ. ಅಚಾತುರ್ಯ, ಮೋಸ ಮಾಡುವುದೇ ಇಲ್ಲ. ಗೆಲ್ಲಿಸುವ ನಿಟ್ಟಿನಲ್ಲಿ ಶ್ರಮಿಸುತ್ತೇವೆ ಎಂದು ತಿಳಿಸಿದರು.

ದಾವಣಗೆರೆ ದಕ್ಷಿಣ ಕ್ಷೇತ್ರದ ಜೆಡಿಎಸ್‌ ಅಧ್ಯಕ್ಷ ಜೆ. ಅಮಾನುಲ್ಲಾಖಾನ್‌ ಮಾತನಾಡಿ, ಕಾಂಗ್ರೆಸ್‌ಗೆ ಅಲ್ಪಸಂಖ್ಯಾತರು, ಹಿಂದುಳಿದ ವರ್ಗದವರು, ದಲಿತರ ಎಲ್ಲರ ಬೆಂಬಲ ಇದೆ. ಈ ಬಾರಿ ಮಲ್ಲಿಕಾರ್ಜುನ್‌ ಗೆಲುವು ಖಚಿತ. ಆದರೂ, ಅವರು ಕೊನೆ ಕ್ಷಣದಲ್ಲಿ ಸ್ಪರ್ಧೆಗೆ ಹಿಂದೇಟು ಹಾಕುತ್ತಿರುವುದ ನೋಡಿದರೆ ಒಳ ಒಪ್ಪಂದ ಏನಾದರೂ ಆಗಿದೇಯಾ ಎಂಬ ಅನುಮಾನ ಜನರಲ್ಲಿ ಬರುತ್ತದೆ ಎಂದರು. ಜೆಡಿಎಸ್‌ ಜಿಲ್ಲಾ ಅಧ್ಯಕ್ಷ ಬಿ. ಚಿದಾನಂದಪ್ಪ, ದಾವಣಗೆರೆ ಕಡತಿ ಅಂಜಿನಪ್ಪ, ಎಸ್‌. ಓಂಕಾರಪ್ಪ, ಶೀಲಾಕುಮಾರಿ, ದೇವೇಂದ್ರಪ್ಪ, ಗುರುಸಿದ್ದಪ್ಪ, ಕೆ. ಚಂದ್ರಪ್ಪ ಇತರರು ಸುದ್ದಿಗೋಷ್ಠಿಯಲ್ಲಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next