Advertisement

ತೀರ್ಥಹಳ್ಳಿ ಜೆಡಿಎಸ್‌ನಲ್ಲಿ ತಳಮಳ; ಮದನ್‌ ಬಿಜೆಪಿ ಸೇರುವ ಸಾಧ್ಯತೆ?

11:42 AM Apr 08, 2019 | Team Udayavani |

ತೀರ್ಥಹಳ್ಳಿ: ಲೋಕಸಭಾ ಚುನಾವಣೆ ಹತ್ತಿರವಾಗುತ್ತಿದ್ದಂತೆ ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರದ ಜೆಡಿಎಸ್‌ನಲ್ಲಿ ತಳಮಳ ಹೆಚ್ಚಾಗಿದೆ. ಕಳೆದ ಹತ್ತು ವರ್ಷಗಳಿಂದ ತಾಲೂಕು ಜೆಡಿಎಸ್‌ ಅಧ್ಯಕ್ಷರಾಗಿದ್ದ ಆರ್‌. ಮದನ್‌ ಇತ್ತೀಚೆಗೆ ಅಧ್ಯಕ್ಷ ಸ್ಥಾನ ಹಾಗೂ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ ಹಿನ್ನೆಲೆಯಲ್ಲಿ ಮದನ್‌ ಅವರ ನಡೆ ಬಿಜೆಪಿ ಕಡೆಯೋ? ಕಾಂಗ್ರೆಸ್‌ ಕಡೆಯೋ? ಎಂಬ ಮಾತು ಕೇಳಿ ಬರುತ್ತಿದೆ.

Advertisement

ತೀರ್ಥಹಳ್ಳಿ ಭಾಗದಲ್ಲಿ ಪ್ರತಿ ಚುನಾವಣಾ ಸಂದರ್ಭದಲ್ಲೂ ರಾಜಕೀಯ ಪಕ್ಷಗಳ ಧುರೀಣರ ಭಿನ್ನಾಭಿಪ್ರಾಯ, ವೈಮನಸ್ಸು ನಡೆಯುತ್ತಲೇ ಬಂದಿದೆ. ಆದರೀಗ ತಾಲೂಕು ಜೆಡಿಎಸ್‌ ಅಧ್ಯಕ್ಷರಾಗಿದ್ದ ಆರ್‌. ಮದನ್‌ ಹಠಾತ್ತನೆ ಜೆಡಿಎಸ್‌ನಿಂದ ನಿರ್ಗಮಿಸಿದ್ದು, ಜೆಡಿಎಸ್‌ಗೆ ಬಲವಾದ ಪೆಟ್ಟು ಬಿದ್ದಂತಾಗಿದೆ. ಕಳೆದ ಲೋಕಸಭಾ ಉಪ ಚುನಾವಣೆ ಸಂದರ್ಭದಲ್ಲಿ ಮಧು ಬಂಗಾರಪ್ಪ ಅವರ ಪರವಾಗಿ ಪ್ರಚಾರ ನಡೆಸಿದ್ದ ಆರ್‌. ಮದನ್‌ ಹಾಗೂ ಜೆಡಿಎಸ್‌ ಜಿಲ್ಲಾಧ್ಯಕ್ಷ ಆರ್‌.ಎಂ. ಮಂಜುನಾಥ ಗೌಡರ ಜತೆ ಅಸಮಾಧಾನದ ಹೊಗೆ ಕಂಡು ಬಂದಿತ್ತು. ಈ ಸಂದರ್ಭದಲ್ಲಿ ಮೈತ್ರಿ ಅಭ್ಯರ್ಥಿ ಮಧು ಬಂಗಾರಪ್ಪ ಆಗಿರುವುದರಿಂದ ಕಾಂಗ್ರೆಸ್‌
ಮುಖಂಡ, ಮಾಜಿ ಸಚಿವ ಕಿಮ್ಮನೆ ರತ್ನಾಕರ್‌ ಅವರ ನಡುವೆ ಹೆಚ್ಚಿನ ಸ್ನೇಹ ಸಂಪರ್ಕದೊಂದಿಗೆ ಆರ್‌. ಮದನ್‌ ಚುನಾವಣೆಯಲ್ಲಿ ತೊಡಗಿದ್ದರು.

ಜೆಡಿಎಸ್‌ ಜಿಲ್ಲಾಧ್ಯಕ್ಷ ಆರ್‌.ಎಂ. ಮಂಜುನಾಥ ಗೌಡ ಅ ಧಿಕಾರ ಸ್ವೀಕರಿಸಿದ ಮೇಲೆ ಆರ್‌. ಮದನ್‌ ಬೆಂಬಲಿಗರನ್ನು ಯಾವುದೇ ಸಭೆ, ಕಾರ್ಯಕ್ರಮಗಳಿಗೆ ಕರೆಯದೆ ನಿರ್ಲಕ್ಷéಧೋರಣೆ ತೋರುತ್ತಿದ್ದಾರೆ. ಪಕ್ಷಕ್ಕಾಗಿ ಹತ್ತು ವರ್ಷ ದುಡಿದ ಅಧ್ಯಕ್ಷರಿಗೆ ಅವಮಾನ ಮಾಡುವುದು ಸೂಕ್ತವಲ್ಲ ಎಂಬುದು ಆರ್‌. ಮದನ್‌ ಅಭಿಮಾನಿಗಳ ಅನಿಸಿಕೆ ಕೇಳಿ ಬರುತ್ತಿದೆ. ಈ ಹಿಂದೆ 2008ರ ವಿಧಾನಸಭಾ ಚುನಾವಣೆಯ ಜೆಡಿಎಸ್‌ ಅಭ್ಯರ್ಥಿಯಾಗಿದ್ದ ಆರ್‌.
ಮದನ್‌ 22000 ಮತಗಳನ್ನು ಪಡೆದು ಜೆಡಿಎಸ್‌ ಅಸ್ತಿತ್ವ ಉಳಿಸಿದ್ದರು. ಆದರೆ ಬೇರೆ ಪಕ್ಷಗಳಿಂದ ಜೆಡಿಎಸ್‌ ಗೆ ಬಂದು ಪ್ರಾಮಾಣಿಕ ಕಾರ್ಯಕರ್ತರು ಹಾಗೂ ಮುಖಂಡರ ಮೇಲೆ ದೌರ್ಜನ್ಯ ಮಾಡಬಾರದು ಎಂಬ ಮಾತು ಜೆಡಿಎಸ್‌ ವಲಯದಲ್ಲಿ ಕೇಳಿ ಬರುತ್ತಿದೆ.

ಯುಗಾದಿಯ ನಂತರ ನನ್ನ ಮುಂದಿನ ರಾಜಕೀಯ ನಡೆಯ ಬಗ್ಗೆ ಉತ್ತರಿಸುತ್ತೇನೆ ಎಂದು ಹೇಳಿರುವ ಮದನ್‌ ಕಾದು ನೋಡುವ ತಂತ್ರಗಾರಿಕೆಯಲ್ಲಿ ತೊಡಗಿದ್ದಾರೆ. ಕಳೆದ ಎರಡು ದಿನಗಳಿಂದ ಕ್ಷೇತ್ರದ ಶಾಸಕರು, ಬಿಜೆಪಿಯ ಹಲವು ಜಿಲ್ಲಾ ಹಾಗೂ ತಾಲೂಕು ಮುಖಂಡರು ಆರ್‌. ಮದನ್‌ ಅವರನ್ನು ಭೇಟಿ ಮಾಡಿ ಪಕ್ಷಕ್ಕೆ ಆಹ್ವಾನಿಸಿದ್ದಾರೆ.

ಮೂಲತಃ ಬಿಜೆಪಿಯಿಂದಲೇ ಕಾರ್ಯಕರ್ತನಾಗಿ ನಂತರ ಮುಖಂಡರಾಗಿದ್ದ ಆರ್‌. ಮದನ್‌ ಮತ್ತೆ ಬಿಜೆಪಿ ಸೇರುತ್ತಾರೆಂದು ಬಿಜೆಪಿಯ ಹಲವು ಕಾರ್ಯಕರ್ತರು ನಿರೀಕ್ಷೆಯಲ್ಲಿದ್ದಾರೆ.
ಜೆಡಿಎಸ್‌- ಕಾಂಗ್ರೆಸ್‌ ಮೈತ್ರಿ ಅಭ್ಯರ್ಥಿ ಮಧು ಬಂಗಾರಪ್ಪ ಲೋಕಸಭಾ ಅಭ್ಯರ್ಥಿಯಾಗಿರುವುದರಿಂದ ಯಾವುದೇ ಕ್ಷಣದಲ್ಲಿ ಮಾತುಕತೆ ಹಾಗೂ ಚರ್ಚೆ ನಡೆಸಿ ಮದನ್‌ ಅವರನ್ನು ಕಾಂಗ್ರೆಸ್‌ಗೆ ಸೆಳೆಯುವ ಪ್ರಯತ್ನವು ಇನ್ನೊಂದೆಡೆ ಸಾಗಿದೆ. ಮಾಜಿ ಶಾಸಕ ಕಿಮ್ಮನೆ ರತ್ನಾಕರ್‌ ಅವರೊಂದಿಗೆ ಆಪ್ತರಾಗಿರುವ ಆರ್‌. ಮದನ್‌ ಅಷ್ಟು ಸುಲಭವಾಗಿ ಬಿಜೆಪಿ ಮನೆಯ ಬಾಗಿಲು ತಟ್ಟುವುದಿಲ್ಲ
ಎಂಬ ಮಾತು ಕೇಳಿ ಬರುತ್ತಿದೆ.

Advertisement

ಒಟ್ಟಾರೆ ಜೆಡಿಎಸ್‌ನಲ್ಲಿನ ತಳಮಳಕ್ಕೆ ಯಾವುದೇ ಚಿಕಿತ್ಸೆ ನೀಡುವ ಕೆಲಸವನ್ನು ಜೆಡಿಎಸ್‌ ಹೈಕಮಾಂಡ್‌ ಮಾಡದ ಕಾರಣ ಬಿಜೆಪಿಗೆ ಹೋಗುವ ಬಗ್ಗೆ ಹೆಚ್ಚಿನ ಅಭಿಮಾನಿಗಳಲ್ಲಿ ಅಕ್ರೋಶ ವ್ಯಕ್ತವಾಗಿದೆ. ಆದರೆ ಲೋಕಸಭಾ ಚುನಾವಣೆ ಮುಗಿಯುವ ತನಕ ಯಾವುದೇ ಗೊಂದಲ ಮೂಡಿಸದೇ ಮದನ್‌ ಅವರನ್ನು ಕಾಂಗ್ರೆಸ್‌ಗೆ ಸೆಳೆದುಕೊಳ್ಳುವ ಪ್ರಯತ್ನವು ಇನ್ನೊಂದೆಡೆ ಸಾಗಿದೆ. ಬಿಜೆಪಿ ಮತ್ತು ಕಾಂಗ್ರೆಸ್‌ ಪಕ್ಷಗಳ ಮುಖಂಡರಿಗೆ ಪ್ರಸ್ತುತ ಚುನಾವಣೆಗೆ ಬೇಕಾಗಿರುವ ಮದನ್‌ ಬಲ ಇನ್ನೊಂದು ದಿನದಲ್ಲಿ ನಿರ್ಧಾರವಾಗಲಿದೆ.

ಜೆಡಿಎಸ್‌ನ್ನು ತೀರ್ಥಹಳ್ಳಿಯಲ್ಲಿ ಪ್ರಾಮಾಣಿಕವಾಗಿ ಕಟ್ಟಿ ಬೆಳೆಸಿ ಅಸ್ತಿತ್ವಕ್ಕೆ ತಂದಿದ್ದೇನೆ. ನನ್ನ ಸ್ವಾಭಿಮಾನಕ್ಕೆ ಧಕ್ಕೆ ಮಾಡಿದವರ ಬಗ್ಗೆ ಬೇಸತ್ತು ರಾಜೀನಾಮೆ ನೀಡಿದೆ. ಆದರೆ ಜೆಡಿಎಸ್‌ನ
ಒಬ್ಬರಾದರೂ ಜಿಲ್ಲಾ ಹಾಗೂ ರಾಜ್ಯ ಮುಖಂಡರು ನನ್ನನ್ನು ಪಕ್ಷದಲ್ಲಿ ಉಳಿಸಿಕೊಳ್ಳಲು ಪ್ರಯತ್ನ ಮಾಡಲಿಲ್ಲ. ನಾನು ಬಿಜೆಪಿಗೆ ಹೋಗುವ ವಿಚಾರದ ಬಗ್ಗೆ ಮುಂದಿನ 24 ಗಂಟೆಗಳಲ್ಲಿ ನನ್ನ
ಕಾರ್ಯಕರ್ತರೊಂದಿಗೆ ಚರ್ಚಿಸಿ ನಿರ್ಧಾರ ಕೈಗೊಳ್ಳುತ್ತೇನೆ.
ಆರ್‌. ಮದನ್‌

ರಾಂಚಂದ್ರ ಕೊಪ್ಪಲು

Advertisement

Udayavani is now on Telegram. Click here to join our channel and stay updated with the latest news.

Next