ಚಿತ್ರದುರ್ಗ: ತಿಪ್ಪರಲಾಗ ಹಾಕಿದರೂ ಹಾಸನ ಮತ್ತು ಮಂಡ್ಯ ಲೋಕಸಭಾ ಕ್ಷೇತ್ರಗಳಲ್ಲಿ ಜೆಡಿಎಸ್ ಗೆಲುವು ಸಾಧಿಸುವುದಿಲ್ಲ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಹಾಗೂ ಮೊಳಕಾಲ್ಮೂರು ಶಾಸಕ ಬಿ. ಶ್ರೀರಾಮುಲು ಹೇಳಿದರು.
ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಮಾಲೆ ಕಣ್ಣಿಗೆ ಕಾಣೋದೆಲ್ಲಾ ಹಳದಿ ಎನ್ನುವಂತಾಗಿದೆ ಜೆಡಿಎಸ್ ನವರ ಸ್ಥಿತಿ. ಸೋಲಿನ ಭೀತಿಯಿಂದ ಮುಖ್ಯಮಂತ್ರಿ ಕುಮಾರಸ್ವಾಮಿ ಪೇಪರ್, ಟಿವಿ ನೋಡುತ್ತಲೇ ಇಲ್ಲ. ಮಗನನ್ನು ಗೆಲ್ಲಿಸಿಕೊಳ್ಳಬೇಕೆಂದು ಒಂದಿಲ್ಲೊಂದು ನೆಪ ಹೇಳುತ್ತಿದ್ದಾರೆ ಎಂದು ಟೀಕಿಸಿದರು.
ಕುಮಾರಸ್ವಾಮಿ ಹಾಸನ, ಮಂಡ್ಯ ಬಿಟ್ಟು ಹೊರಗೆ ಹೋಗುತ್ತಲೇ ಇಲ್ಲ. ಹೊರಗೆ ಏನಾಗುತ್ತಿದೆ ಎಂಬುದನ್ನು ಒಮ್ಮೆ ತಿಳಿದುಕೊಳ್ಳಬೇಕು. ಚುನಾವಣೆ ಬಳಿಕ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಡಬೇಕು ಎಂದು ಒತ್ತಾಯಿಸಿದರು.
ದೇವೇಗೌಡರ ಕುಟುಂಬ ಚುನಾವಣೆ ಬಂದಾಗ ಮಾತ್ರ ಕಣ್ಣೀರು ಹಾಕುತ್ತದೆ. ಚುನಾವಣೆ ನಂತರ ಜನರು ಕಣ್ಣೀರು ಹಾಕುವಂತೆ ಮಾಡುತ್ತಾರೆ. ಅವರಿಗೆ ಜನರು ಈ ಬಾರಿ ತಕ್ಕ ಪಾಠ ಕಲಿಸುತ್ತಾರೆ. ಅಲ್ಲದೆ ಚುನಾವಣೆ ಬಳಿಕ ರಾಜ್ಯ ಸರ್ಕಾರ ಪತನವಾಗುತ್ತದೆ ಎಂದೂ ಮಾತನಾಡಿಕೊಳ್ಳುತ್ತಿದ್ದಾರೆ ಎಂದರು. ಮಂಡ್ಯದಲ್ಲಿ ಸುಮಲತಾ ಸೂಕ್ತ ಅಭ್ಯರ್ಥಿಯಾಗಿದ್ದಾರೆ. ಕುಟುಂಬ ರಾಜಕಾರಣವನ್ನು ದೂರ ಇಡಬೇಕು ಎಂದು ಅವರಿಗೆ ಬೆಂಬಲ ನೀಡಿದ್ದೇವೆ ಎಂದು ಶ್ರೀರಾಮುಲು ಸಮರ್ಥಿಸಿಕೊಂಡರು.
ಹಾಸನ-ಮಂಡ್ಯದಲ್ಲೇ ಭ್ರಷ್ಟಾಚಾರ ಜಾಸ್ತಿ: ರಾಜ್ಯದೆಲ್ಲೆಡೆ ಐಟಿ ದಾಳಿಯಾಗುತ್ತಿರುವುದಕ್ಕೆ ಅದಕ್ಕೆ ಚುನಾವಣೆ ಕಾರಣವೇ ವಿನಃ ಬೇರೆ ಯಾರೂ ಅಲ್ಲ. ಹಾಸನ, ಮಂಡ್ಯ ಜಾಸ್ತಿ ದಾಳಿಯಾಗುತ್ತಿದೆ ಎಂದರೆ ಅಲ್ಲಿ ಭ್ರಷ್ಟಾಚಾರದ ಹಣ ಇದೆ ಎಂದೇ ಅರ್ಥ ಎಂದು ಕುಟುಕಿದರು.
ಸಚಿವ ಸಿ.ಎಸ್. ಪುಟ್ಟರಾಜು ಭ್ರಷ್ಟ, ನೀತಿಗೆಟ್ಟ ರಾಜಕಾರಣ ಮಾಡುತ್ತಿದ್ದಾರೆ. ಇವರ ಮೇಲೆ ಸ್ಪೆಷಲ್ ರೈಡ್ ಆಗುತ್ತಿದೆಯೇ ಎಂದು ಪ್ರಶ್ನಿಸಿದ ಶ್ರೀರಾಮುಲು, ರೈಡ್ ಆದರೆ ಇವರಿಗೆ ಏಕೆ ಭಯ, ಬಾಯಿ ಚಪ್ಪರಿಸಿಕೊಳ್ಳಲು ಮಾತನಾಡಿ ನಾಲಿಗೆಯನ್ನು ಏಕೆ ಹೊಲಸು ಮಾಡಿಕೊಳ್ಳುತ್ತೀರಿ ಎಂದು ಲೇವಡಿ ಮಾಡಿದರು. ನಮ್ಮ ಮುಖ ನೋಡಿ ಓಟು ಹಾಕೋದು ಬೇಡ, ಮೋದಿ ಮುಖ ನೋಡಿ ಮತ ಹಾಕಿ. ಮೋದಿ ವಿಶ್ವ ನಾಯಕರಾಗಿದ್ದು, ಭಾರತ ಅಂದರೆ ರಾಹುಲ್ ಗಾಂಧಿ ಅನ್ನಲ್ಲ, ಮೋದಿ ಎನ್ನುತ್ತಾರೆ ಎಂದರು.