ಭಟ್ಕಳ: ಮೈಸೂರಿನ ನ್ಯೂ ಕಾಂಗ್ರೆಸ್ ಪಕ್ಷದ ಕಾರ್ಯಾಧ್ಯಕ್ಷ ಅಯೂಬ್ ಖಾನ್ ಎನ್ನುವವರು ಜೈನ ಧರ್ಮೀಯರ ಬಗ್ಗೆ ವಿಜಯಾ ಟಿ.ವಿ. ಚಾನೆಲ್ಲಿನಲ್ಲಿ ಅವಹೇಳನಕರವಾಗಿ ಮಾತನಾಡಿದ್ದು ಖಂಡನೀಯ ಆತನ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಇಲ್ಲಿನ ಶ್ರೀ ಪದ್ಮಾವತಿ ಜ್ವಾಲಾಮಾಲಿನಿ ಮತ್ತು ಚಂದ್ರನಾಥ ಸ್ವಾಮಿ ಬಸದಿ ಟ್ರಸ್ಟ್ ಹಾಡುವಳ್ಳಿ ಇದರ ವತಿಯಿಂದ ಪೊಲೀಸ್ ಉಪಾಧೀಕ್ಷಕರ ಮೂಲಕ ಮನವಿ ಸಲ್ಲಿಸಲಾಯಿತು.
ಮೈಸೂರಿನ ಸಂಸದ ಪ್ರತಾಪ ಸಿಂಹ ಅವರನ್ನು ಟೀಕಿಸುವ ಭರದಲ್ಲಿ ಜೈನ ಧರ್ಮಕ್ಕೆ ಸಂಬಂಧ ಪಟ್ಟ ಹಾಗೆ ನಮ್ಮ ಧಾರ್ಮಿಕ ಭಾವನೆಗೆ ಧಕ್ಕೆ ತರುವ ರೀತಿಯಲ್ಲಿ ಹೇಳಿಕೆ ನೀಡುವುದು ಖಂಡನೀಯವಾಗಿದೆ.
ಜೈನಧರ್ಮಿಯರು ಆರಾಧಿಸುವ ಬಾಹುಬಲಿಯ ಬಗ್ಗೆ ಅವಮಾನಕಾರಿ ಹೇಳಿಕೆ ನೀಡಿ ಜೈನ ಧರ್ಮಿಯರಿಗೆ ನೋವನ್ನುಂಟು ಮಾಡಿದ್ದು ಅಕ್ಷಮ್ಯ ಅಪರಾಧವಾಗಿದ್ದು ಅವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕು. ಹಲವು ಬಾರಿ ನಮ್ಮ ಧರ್ಮದ ಕುರಿತು ಅವಹೇಳನಕಾರಿ ಹೇಳಿಕೆ ನೀಡುವುದರ ಮೂಲಕ ಜೈನ ಧರ್ಮಿಯರಿಗೆ ನೋವನ್ನುಂಟು ಮಾಡಿದ್ದಾರೆ. ಇನ್ನು ಮುಂದೆ ಯಾವುದೇ ವ್ಯಕ್ತಿ ಜೈನ ಧರ್ಮದ ವಿರುದ್ದ ಅವಹೇಳನಕಾರಿ ಹೇಳಿಕೆ ನೀಡಿದರೆ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಲಾಯಿತು. ಅಲ್ಲದೇ ಬಿಗ್ಬಾಸ್ ಸ್ಪರ್ಧಿ ಪ್ರಥಮ್ ಹಾಗೂ ಪಬ್ಲಿಕ್ ಟಿ.ವಿ.ಯ ಅರುಣ್ ಬಡಿಗೇರ ಇವರೂ ಕೂಡಾ ಅವಹೇಳನಕಾರಿಯಾಗಿ ಮಾತನಾಡಿದ್ದು ಅವರ ಮೇಲೂ ಕ್ರಮ ಜರುಗಿಸುವಂತೆ ಆಗ್ರಹಿಸಿದ್ದಾರೆ.
ಡಿವೈಎಸ್ಪಿ ಕೆ. ಯು. ಬೆಳ್ಳಿಯಪ್ಪ ಮನವಿ ಸ್ವೀಕರಿಸಿದರು. ಈ ಸಂದರ್ಭದಲ್ಲಿ ನ್ಯಾಯವಾದಿ ಧನ್ಯಕುಮಾರ ಜೈನ್, ಪದ್ಮರಾಜ ಜೈನ್, ವೀರೇಂದ್ರಕುಮಾರ ಜೈನ್, ಯೋಗರಾಜ ಜೈನ್, ಪದ್ಮಪ್ರಸಾದ ಜೈನ್, ಪ್ರಸಾದ ಜೈನ್, ಪ್ರಭತೀಂದ್ರ ಜೈನ್ ಮುಂತಾದವರಿದ್ದರು.
ಇದನ್ನೂ ಓದಿ : ಯುದ್ಧ ಸನ್ನಿವೇಶ : ಪುತಿನ್-ಬಿಡೆನ್ ಉನ್ನತ ಮಟ್ಟದ ದೂರವಾಣಿ ಮಾತುಕತೆ