Advertisement

ಜಿಲ್ಲಾಧಿಕಾರಿ ಕಾರ್ಯ ಪ್ರೇರಣೆ-ಯುಪಿಎಸ್‌ಸಿಯಲ್ಲಿ ಸಾಧನೆ

11:32 AM Apr 08, 2019 | Naveen |

ಬಳ್ಳಾರಿ: ಜಿಲ್ಲಾಧಿಕಾರಿಯೊಬ್ಬರು ಬಡವರಿಗೆ ಸೂರು ಕಲ್ಪಿಸಿದ್ದನ್ನು ಕಂಡು ನಾನೂ ಜಿಲ್ಲಾಧಿಕಾರಿ ಯಾಗಬೇಕೆಂಬ ಆಸೆ ಆಗಲೇ ಚಿಗುರೊಡೆದಿತ್ತು. ಅದೇ ನನಗೆ ಪ್ರೇರಣೆಯಾಗಿದ್ದು, ಇದೀಗ ಯುಪಿಎಸ್‌ಸಿ ಪರೀಕ್ಷೆಯಲ್ಲಿ ಉತ್ತೀರ್ಣಳಾಗಲು ಸಾಧ್ಯವಾಗಿದೆ. ಇದು ಕೇಂದ್ರ ಲೋಕಸೇವಾ ಆಯೋಗದ ಪರೀಕ್ಷೆಯಲ್ಲಿ 423ನೇ ರ್‍ಯಾಂಕ್‌ ಪಡೆದ ಬಳ್ಳಾರಿಯ ಬಿ.ವಿ.ಆಶ್ವೀಜಾ ಅವರ ಸಾಧನೆಯ ಮಾತು.

Advertisement

ತಾಲೂಕಿನ ಸಂಗನಕಲ್ಲು ನಿವಾಸಿಗಳಾದ ಲೋಕೋಪಯೋಗಿ ಇಲಾಖೆ ಇಂಜಿನಿಯರ್‌ ವೆಂಕಟರಮಣಪ್ಪ ಮತ್ತು ಸುಮಾ ದಂಪತಿ ಮಗಳಾದ ಬಿ.ವಿ. ಆಶ್ವೀಜಾ ಅವರು ಕೆಲ ವರ್ಷಗಳ ಹಿಂದೆ ತಂದೆಯೊಂದಿಗೆ ನಗರದ ಹೊರವಲಯದಲ್ಲಿರುವ ಗುಡಾರ ನಗರಕ್ಕೆ ಭೇಟಿ ನೀಡಿದ್ದರು. ಆಗ ಅಂದಿನ ಡಿಸಿ ಆಗಿದ್ದ ಜಾವೇದ್‌ ಅಕ್ತರ್‌ ಅವರು ಗುಡಾರ ನಗರ ನಿವಾಸಿಗಳಿಗೆ 200 ಮನೆಗಳನ್ನು ನಿರ್ಮಿಸಿದ್ದರಂತೆ.

ಅವರ ಕಾರ್ಯವನ್ನು ಕಂಡು ಪ್ರೇರಣೆಗೊಂಡಿದ್ದ ಆಶ್ವೀಜಾ ಅವರಿಗೆ ತಾವು ಸಹ ಡಿಸಿ ಆಗಬೇಕೆಂಬ ಆಸೆ ಚಿಗುರೊಡೆಯಿತು. ಸಿವಿಲ್‌ ಸರ್ವಿಸ್‌ ಪರೀಕ್ಷೆ ಬರೆಯಲು ಅಂದಿನಿಂದಲೇ ಓದಿನ ಬಗ್ಗೆ ಹೆಚ್ಚಿನ ಗಮನ ಹರಿಸಿದ ಆಶ್ವೀಜಾ, ಬಳ್ಳಾರಿಯಲ್ಲಿ ಪಿಯುಸಿವರೆಗೆ
ವ್ಯಾಸಂಗ ಮಾಡಿದರು. ಬಳಿಕ 2014-15ನೇ ಸಾಲಿನಲ್ಲಿ ಬೆಂಗಳೂರಿನಲ್ಲಿ ಟೆಲಿಕಮ್ಯುನಿಕೇಷನ್‌ ಇಂಜಿನಿಯರಿಂಗ್‌ ಪದವಿ ಮುಗಿಸಿದರು. ನಂತರ ಯುಪಿಎಸ್‌ಸಿ ಪರೀಕ್ಷೆಗೆ ತಯಾರಿ ನಡೆಸಲು
ಹೈದ್ರಾಬಾದ್‌ನಲ್ಲಿ ಖಾಸಗಿ ಕೋಚಿಂಗ್‌ ಸೆಂಟರ್‌ ಸೇರಿ ತರಬೇತಿ ಪಡೆದರು. 2 ಬಾರಿ ಯುಪಿಎಸ್‌ಪಿ ಪರೀಕ್ಷೆ ಬರೆದರೂ ವಿಫಲವಾಗಿದ್ದು, ಸತತ ಪ್ರಯತ್ನದೊಂದಿಗೆ 3ನೇ ಬಾರಿಗೆ ಪುನಃ ಪರೀಕ್ಷೆ ಎದುರಿಸಿ ರಾಷ್ಟ್ರಕ್ಕೆ 423ನೇ ರ್‍ಯಾಂಕ್‌, ರಾಜ್ಯಕ್ಕೆ 14ನೇ ರ್‍ಯಾಂಕ್‌ ಗಳಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಯುಪಿಎಸ್‌ಸಿ ಪರೀಕ್ಷೆಯಲ್ಲಿ 423ನೇ ರ್‍ಯಾಂಕ್‌ನಲ್ಲಿ ತೇರ್ಗಡೆಯಾಗಿರುವುದು ಖುಷಿ ನೀಡಿದೆ. ಸತತ ನಾಲ್ಕು ವರ್ಷಗಳ ಶ್ರಮಕ್ಕೆ ಫಲ ದೊರೆತಂತಾಗಿದೆ. ಬಳ್ಳಾರಿ ಜಿಲ್ಲಾಧಿಕಾರಿಯೊಬ್ಬರು ಇಲ್ಲಿನ ಗುಡಾರನಗರದಲ್ಲಿ ಬಡ ಜನರಿಗೆ 200 ಮನೆಗಳು ನಿರ್ಮಿಸಿಕೊಟ್ಟಿರುವುದೇ ನನಗೆ ಪ್ರೇರಣೆಯಾಗಿದ್ದು, ಅಂದಿನಿಂದಲೇ ನನ್ನಲ್ಲಿ ಐಎಎಸ್‌ ಆಗಬೇಕೆಂಬ ಆಸೆ ಚಿಗುರೊಡೆಯಿತು. ಅದಕ್ಕೆ ಪೂರಕವಾಗಿ ತಯಾರಿ ನಡೆಸಿ ಕಳೆದ ವರ್ಷ ಯುಪಿಎಸ್‌ಸಿ ಪರೀಕ್ಷೆ ಬರೆದಿದ್ದು, ಯಶಸ್ವಿಯಾಗುವಲ್ಲಿ ಸಾಧ್ಯವಾಯಿತು.
ಬಿ.ವಿ.ಆಶ್ವೀಜಾ,
ಯುಪಿಎಸ್‌ಸಿ ಪರೀಕ್ಷೆ ತೇರ್ಗಡೆಯಾದ ವಿದ್ಯಾರ್ಥಿನಿ

„ವೆಂಕೋಬಿ ಸಂಗನಕಲ್ಲು

Advertisement
Advertisement

Udayavani is now on Telegram. Click here to join our channel and stay updated with the latest news.

Next