Advertisement

ಜನ-ಮನ ಸೆಳೆದ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ

04:42 PM Apr 01, 2019 | Naveen |

ಗದಗ: ಕಲಾಚೇತನ ಸಾಂಸ್ಕೃತಿಕ ಅಕಾಡೆಮಿ 23ನೇ ವಾರ್ಷಿಕೋತ್ಸವ ಅಂಗವಾಗಿ ನಗರದ ತೋಂಟದಾರ್ಯ ಕಲ್ಯಾಣ ಕೇಂದ್ರದಲ್ಲಿ ಆಯೋಜಿಸಿದ್ದ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ ಜನಮನ ಸೆಳೆಯಿತು. ಕಲಾವಿದರ ಲಯಬದ್ಧ ರಾಗಕ್ಕೆ ತಾಳ ಹಾಕಿ, ತಲೆದೂಗಿದರು.

Advertisement

ಹೊನ್ನಾವರದ ಕರ್ಕಿಯ ಉದಯೋನ್ಮುಖ ಹಿಂದೂಸ್ತಾನಿ ಗಾಯಕ ಸಂಕೇತ ಭಟ್‌ ಶಾಸ್ತ್ರೀಯ ಸಂಗೀತದಲ್ಲಿ ರಾಗ ‘ಪೂರಿಯಾ ಧನಶ್ರೀ’ ರಾಗದಲ್ಲಿ ಗಾಯನ ಆರಂಭಿಸಿದರು. ಐತಿಹಾಸಿಕ ಹಿನ್ನೆಲೆ ಹೊಂದಿರುವ ‘ಪಾರ ಕರೋ ಅರಜ ಸುನೋ’ ಬಂದಿಷ್‌ನ್ನು ಝಪ್‌ ತಾಲ್‌ನಲ್ಲಿ ಹಾಗೂ ‘ಪಾಯಲಿಯಾ ಝನ್‌ ಕಾರ್‌’ ಬಂದಿಷ್‌ನ್ನು ಧೃತ್‌ ತೀನ್‌ ತಾಲ್‌ನಲ್ಲಿ ವಿಶೇಷವಾದ ತಾನ್‌ ಮತ್ತು ಫಿರತ್‌ಗಳ ಮೂಲಕ ಸ್ವರಬದ್ಧ ಹಾಗೂ ಗಾಂಭೀರ್ಯಭರಿತ ಕಿರಾಣಾ ಘರಾಣಾ ಶೈಲಿಯಲ್ಲಿ ಗಾಯನ ಪ್ರಸ್ತುತಪಡಿಸಿದರು. ನಂತರ ಅವರು ಹಾಡಿದ ನಾಟ್ಯಗೀತೆಗಳಾದ ‘ಸೋಹಂ ಹರ ಡಮರು ಬಾಜೇ’, ‘ಮಾಝೇ ಮಾಹೇರ ಪಂಢರಿ’, ‘ಅಭಂಗ’ ಹಾಗೂ ‘ಪಾಲಯ ಮಾಂ ಶ್ರೀನಿಕೇತನ’ ದಾಸವಾಣಿಗಳು ನೆರೆದವರ ಮನಸೊರೆಗೊಂಡಿತು. ಎನ್‌.ಜಿ. ಹೆಗಡೆ ಕಪ್ಪೆಕೆರೆ ತಬಲಾ, ಪುಣೆಯ ಧನಂಜಯ ಬೊಂಗಾನೆ, ಪಖವಾಜ್‌ ಹಾಗೂ ಬೆಂಗಳೂರಿನ ಸತೀಶ ಕೊಳ್ಳಿಯವರ ಸಂವಾದಿನಿಗಳ ವಾದ್ಯಗಳ ಸಮಾಗಮ ಕೇಳುಗರಿಗೆ ಮುದ ನೀಡಿತು.

ಚಪ್ಪಾಳೆ ಸುರಿಮಳೆ: ‘ನಾದನಿ ’ ಪ್ರಶಸ್ತಿ ಪುರಸ್ಕೃತ ಪಂ. ಹರಿಪ್ರಸಾದ್‌ ಚೌರಾಸಿಯಾ ಶಿಷ್ಯರಾದ ಮೈಸೂರಿನ ದುರ್ಗಾಪ್ರಸಾದರಾವ್‌ ಕುಲಕರ್ಣಿ ಅವರು ‘ರಾಗ್‌ ಅಮೃತವರ್ಷಿಣಿ’ಯಿಂದ ಬಾನ್ಸೂರಿ ವಾದನ ಪ್ರಾರಂಭಿಸಿದರು. ಕರ್ಣಾಟಕ ಶಾಸ್ತ್ರೀಯ ಸಂಗೀತದ ರಾಗವನ್ನು ಹಿಂದುಸ್ತಾನಿ ಶೈಲಿಯಲ್ಲಿ ನುಡಿಸಿದರು. ಪಂ. ಹರಿಪ್ರಸಾದ ಚೌರಾಸಿಯಾ ಅವರ ‘ಮೇವಾರ್‌ ಘರಾಣಾ’ ಶೈಲಿಯಲ್ಲಿ ಆಲಾಪ, ಜೋಡ್‌- ಝಾಲಾಗಳನ್ನು ಪ್ರಸ್ತುತ ಪಡಿಸಿದರು. ನಂತರ ‘ರೂಪಕ್‌ ಹಾಗೂ ತೀನ್‌ ತಾಲ್‌’ ಗಳಲ್ಲಿ ಬಂದಿಷ್‌ ನುಡಿಸಿ ಚಪ್ಪಾಳೆ ಗಿಟ್ಟಿಸಿಕೊಂಡರು.

ನಂತರ ‘ಚಾರುಕೇಶಿ ರಾಗದಲ್ಲಿ ‘ನಾಮ ಜಪನ್‌ ಕ್ಯೂಂ ಛೋಡ್‌ ದಿಯಾ’ ಮತ್ತು ‘ಏನ್‌ ಕೊಡ ಏನ್‌ ಕೊಡವ್ವ’ ಎಂಬ ಜಾನಪದ ಹಾಡನ್ನು ಮಿಶ್ರ ಭೈರವಿಯಲ್ಲಿ ನುಡಿಸಿ, ಸ್ವರ ಸಂಭ್ರಮದ ಮೆರಗು ಹೆಚ್ಚಿಸಿದರು. ಉಸ್ತಾದ್‌ ನಿಸಾರ್‌ ಅಹ್ಮದ್‌ ತಬಲಾ ಸಾಥ್‌ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next