ಉಪ್ಪಿನಂಗಡಿ: ಪಟ್ಟಣದ ಎಲ್ಲ ಚರಂಡಿಗಳ ತ್ಯಾಜ್ಯ ನೀರು ಒಂದೆಡೆ ಸೇರಿ ಹರಿಯುವಂತಾಗಲು ಮೇಲ್ಸೇತುವೆ ಪ್ರಸ್ತಾವನೆ ಸಲ್ಲಿಸಿ ನಾಲ್ಕು ವರ್ಷಗಳೇ ಸಂದರೂ ಕಾರ್ಯಗತಗೊಂಡಿಲ್ಲ. ಇದು ಸ್ಥಳೀಯರಲ್ಲಿ ಬೇಸರ ಉಂಟುಮಾಡಿದೆ.
ಹತ್ತಾರು ಸಭೆಗಳಲ್ಲಿ ಗ್ರಾಮಸ್ಥರು ಹಾಗೂ ಶಾಲಾ ಆಡಳಿತ ಮಂಡಳಿ ಪ್ರತ್ಯೇಕ ಮನವಿ ಸಲ್ಲಿಸಿವೆ. ಉಪ್ಪಿನಂಗಡಿ ಗ್ರಾ.ಪಂ. ಅಧ್ಯಕ್ಷ ಅಬ್ದುಲ್ ರಹಿಮಾನ್, ಸದಸ್ಯ ಯು.ಟಿ. ಮಹಮ್ಮದ್ ತೌಸಿಫ್, ಕಾಂಗ್ರೆಸ್ ಮುಖಂಡ ಅಶ್ರಫ್ ಬಸ್ತಿಕಾರ್, ಅರ್ತಿಲ ಕೃಷ್ಣರಾವ್ ಅವರನ್ನು ಒಳಗೊಂಡ ತಂಡ ಜಿಲ್ಲಾಧಿಕಾರಿ ಬಳಿಗೆ ನಿಯೋಗ ತೆರಳಿ ಮನವಿ ಸಲ್ಲಿಸಿತ್ತು.
ಸುಮಾರು 300 ಮೀಟರ್ ಉದ್ದದ ಈ ಚರಂಡಿಯ ಅಕ್ಕಪಕ್ಕದ ಮನೆ ಮಂದಿ ಬಾಗಿಲು ಮುಚ್ಚಿ ದಿನ ಸಾಗಿಸುವಂತಾಗಿದೆ. ಇಲ್ಲಿ ಚರಂಡಿಯಲ್ಲಿ ಬಾಟ್ಲಿ, ಇತರ ತ್ಯಾಜ್ಯಗಳು ರಾಶಿ ಬಿದ್ದಿದ್ದು, ನೀರಿನ ಸರಾಗ ಹರಿಯುವಿಕೆಗೆ ಅಡ್ಡಿಯಾಗುತ್ತಿವೆ. ಮೋರಿ ಸಮೀಪವೇ ತ್ಯಾಜ್ಯ ನೀರು ಸಂಗ್ರಹಗೊಂಡು ಸಮಸ್ಯೆಯಾಗಿದೆ. ಕಳೆದ ವರ್ಷ ನೆರೆ ಉಂಟಾದಾಗ ಇಲ್ಲಿ ಇದೇ ಕಾರಣಕ್ಕೆ ಕೃತಕ ನೆರೆ ಉಂಟಾಗಿ ಅನೇಕರು ನಷ್ಟ ಅನುಭವಿಸಿದ್ದರು.
ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್, ಶ್ರೀ ಸಹಸ್ರಲಿಂಗೇಶ್ವರ ದೇವಸ್ಥಾನದಲ್ಲಿ ಜಿಲ್ಲಾಧಿಕಾರಿ, ಪುತ್ತೂರು ಸಹಾಯಕ ಆಯುಕ್ತರು, ತಾಲೂಕು ದಂಡಾಧಿಕಾರಿಗಳನ್ನು ಒಳಗೊಂಡು ತತ್‌ಕ್ಷಣವೇ ನೀಲಿ ನಕಾಶೆ ತಯಾರಿಸಿ ಕಾಮಗಾರಿ ಆರಂಭಿಸಲು ಸೂಚನೆ ನೀಡಿದ್ದರೂ ಪ್ರಗತಿ ಕಂಡಿಲ್ಲ.
ನೂತನ ತಾಲೂಕು ದಂಡಾಧಿಕಾರಿ ಡಾ| ಪ್ರದೀಪ್ ಕುಮಾರ್ ಅವರೂ ಮಾಹಿತಿ ಪಡೆದು, ಉಪ್ಪಿನಂಗಡಿ ಗ್ರಾ.ಪಂ. ಅಧ್ಯಕ್ಷ ಅಬ್ದುಲ್ ರಹಿಮಾನ್ ಹಾಗೂ ಸದಸ್ಯ ಇಬ್ರಾಹಿಂ ಅವರೊಂದಿಗೆ ಸ್ಥಳ ಪರಿಶೀಲನೆ ಮಾಡಿದ್ದಾರೆ. ಹೀಗಾಗಿ ಕಾಮಗಾರಿ ಆರಂಭಿಸುವ ನಿರೀಕ್ಷೆ ವ್ಯಕ್ತವಾಗಿದೆ.
ಮನವಿ ಸಲ್ಲಿಸಿದ್ದೇವೆ
ಗ್ರಾಮದ ಆರೋಗ್ಯದ ದೃಷ್ಟಿಯಿಂದ ಹತ್ತು ವರ್ಷಗಳಿಂದ ಹಲವು ಇಲಾಖೆಗಳಿಗೆ ಮನವಿ ಸಲ್ಲಿಸುತ್ತಿದ್ದೇನೆ. ಚರಂಡಿ ಸಮಸ್ಯೆಗೆ ಶಾಶ್ವತ ಪರಿಹಾರ ಆಗಬೇಕು. ಆದರೆ, ಸ್ಪಂದನೆ ಸಿಗದಿರುವುದು ವಿಪರ್ಯಾಸವೇ ಸರಿ ಎನ್ನುತ್ತಾರೆ ಡಾ| ಎಂ.ಆರ್. ಶೆಣೈ.
ಅನುದಾನ ಬೇಕು
ಹಲವು ಬಾರಿ ಮನವಿ ಮಾಡಿದರೂ ಅಧಿಕಾರಿಗಳು ಸ್ಪಂದಿಸಿಲ್ಲ. ತುರ್ತು ವ್ಯವಸ್ಥೆಗಳ ಕುರಿತಾಗಿ ಕ್ರಮ ಕೈಗೊಳ್ಳಲು ಅವಕಾಶವಿದ್ದರೂ ಇಲಾಖೆಗಳ ನಡುವಿನ ದ್ವಂದ್ವ ನಿಲುವಿನಿಂದಾಗಿ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ. ಇಷ್ಟೊಂದು ಪ್ರಮಾಣದ ಅನುದಾನ ಒದಗಿಸಲು ಗ್ರಾ.ಪಂ.ಗೆ ಸಾಧ್ಯವಿಲ್ಲ. ಹೆದ್ದಾರಿ ಇಲಾಖೆಯೇ ಮನಸ್ಸು ಮಾಡಲಿ.
-ಯು. ರಾಮ, ಉದ್ಯಮಿ