ಕಲಬುರಗಿ: ಲೋಕಸಭೆ ಚುನಾವಣೆ ನಂತರ ಕಾಂಗ್ರೆಸ್ ನಾಯಕ ಡಾ| ಮಲ್ಲಿಕಾರ್ಜುನ ಖರ್ಗೆ ಅವರು ಜೈಲಿಗೆ ಹೋಗುತ್ತಾರೆ ಎನ್ನಲು ಬಿಜೆಪಿಯ ಮಾಲೀಕಯ್ಯ ಗುತ್ತೇದಾರನೆನೂ ಜೈಲರ್‌ನೇ, ಜೈಲಿನ ಕೀ ಅವರ ಕೈಯಲ್ಲಿದೆಯೇ ಎಂದು ಕಾಂಗ್ರೆಸ್ ಮುಖಂಡ, ಮಾಜಿ ಶಾಸಕ ಬಿ.ಆರ್.ಪಾಟೀಲ ಖಾರವಾಗಿ ಪ್ರಶ್ನಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತ ನಾಡಿದ ಅವರು, ಖರ್ಗೆ ವಿರುದ್ಧ 50 ಸಾವಿರ ಕೋಟಿ ರೂ. ಅಕ್ರಮ ಆಸ್ತಿ ಸಂಪಾದನೆ ಆರೋಪ ಮಾಡಿ, ಅವರು ಜೈಲಿಗೆ ಹೋಗುತ್ತಾರೆ ಎಂಬ ಮಾಲೀಕಯ್ಯ ಹೇಳಿಕೆ ಭೂತದ ಬಾಯಿಂದ ಭಗವದ್ಗೀತೆ ಹೇಳಿದಂತಿದೆ. ತಮ್ಮ ಮುಖವನ್ನು ಕನ್ನಡಿಯಲ್ಲಿ ಒಮ್ಮೆ ನೋಡಿಕೊಳ್ಳಲ್ಲಿ. ಖರ್ಗೆ ವಿರುದ್ಧ ರಾಜಕೀಯ ದ್ವೇಷದಿಂದ ಸುಳ್ಳು ಆಪಾದನೆ ಸಲ್ಲದು ಎಂದರು.
ಖರ್ಗೆ ಅವರು ಎರಡನೇ ಅಂಬೇಡ್ಕರ್ ಎಂದು ಹೊಗಳಿದ್ದ ನೀವು ಈಗ ಜೈಲಿಗೆ ಹಾಕುವುದಾಗಿ ಹೇಳುತ್ತೀರಿ. ಇದು ಯಾವ ಆಷಾಢಭೂತಿತನ? ನಿಮ್ಮ ಸ್ವಾರ್ಥಕ್ಕೆ ಈಡಿಗ ಸಮಾವೇಶದಲ್ಲಿ ಸಾಮಾಜಿಕ ಹರಿಕಾರ ನಾರಾಯಣ ಗುರುವನ್ನು ಬಳಸಿಕೊಂಡು ಖರ್ಗೆ ಬಗ್ಗೆ ಮಾತನಾಡುವುದು ಸಾಧುವಲ್ಲ. ಖರ್ಗೆ ವಿರುದ್ಧದ ಆರೋಪ ಹೊಸದಲ್ಲ. ನೀವು ಕಾಂಗ್ರೆಸ್‌ನಲ್ಲಿದ್ದಾಗಲೂ ಆರೋಪ ಕೇಳಿ ಬಂದಿತ್ತು. ಆಗ ಯಾಕೆ ನೀವು ಬಾಯಿ ಬಿಡಲಿಲ್ಲ?. ನಿಮ್ಮ ಅಲ್ಮಾರಿ (ಬೀರು) ತೆಗೆದು ಎಷ್ಟು ಅಸ್ಥಿ ಪಂಜರಗಳು ಬಿದ್ದಿವೆ ನೋಡಿಕೊಳ್ಳಿ ಎಂದು ತಿರುಗೇಟು ನೀಡಿದರು.
ಖರ್ಗೆಯಿಂದಲೇ ರಾಜಕೀಯಕ್ಕೆ: ಖರ್ಗೆ ಅವರು ನಿಮಗೆ ಕಾಂಗ್ರೆಸ್ ಟಿಕೆಟ್ ಕೊಟ್ಟಿದ್ದರಿಂದಲೇ ನೀವು ಶಾಸಕರಾಗಿದ್ದು. ಖರ್ಗೆ ಟಿಕೆಟ್ ಕೊಡದೆ ಇದ್ದರೆ ನೀವು ರಾಜಕೀಯಕ್ಕೂ ಬರುತ್ತಿರಲಿಲ್ಲ ಎಂದು ಮಾಲೀಕಯ್ಯ ಗುತ್ತೇದಾರರನ್ನು ಕಿಚಾಯಿಸಿದ ಬಿ.ಆರ್. ಪಾಟೀಲ, ಕುಟುಂಬ ರಾಜಕಾರಣ ಬಗ್ಗೆ ಮಾತನಾಡಲು ನಿಮಗೆ ನೈತಿಕತೆ ಇಲ್ಲ. ನಿಮ್ಮ ಕುಟುಂಬದಲ್ಲೂ ಶಾಸಕ, ಜಿಲ್ಲಾ ಪಂಚಾಯತ್ ಸದಸ್ಯ, ಬ್ಯಾಕ್ ಅಧ್ಯಕ್ಷ, ಕೆಎಂಎಫ್ ಸದಸ್ಯರಾಗಿದ್ದಾರೆ. ಇದು ನಿಮ್ಮ ಕುಟುಂಬ ರಾಜಕಾರಣದ ನಂಗಾನಾಚ್ ಎಂದು ಲೇವಡಿ ಮಾಡಿದರು.
ಶಾಸಕ ಎಂ.ವೈ. ಪಾಟೀಲ, ಕೆಪಿಸಿಸಿ ಕಾರ್ಯದರ್ಶಿ ಅಲ್ಲಮಪ್ರಭು ಪಾಟೀಲ, ನೀಲಕಂಠ ಮೂಲಗೆ, ಮಜರ್ ಹುಸೇನ್, ಶಿವರಾಜು ಇತರರು ಸುದ್ದಿಗೋಷ್ಠಿಯಲ್ಲಿದ್ದರು.
ಫೋಟೋ ಬಳಕೆ ಬಗ್ಗೆ ದೂರು
ಶನಿವಾರ ನಡೆದ ಈಡಿಗ ಸಮಾಜದ ಸಮಾವೇಶದಲ್ಲಿ ನಾರಾಯಣಗುರು ಫೋಟೋ ಇಟ್ಟು ರಾಜಕೀಯ ದಾಳವಾಗಿ ಬಳಸಿಕೊಳ್ಳಲಾಗಿದೆ. ನಾರಾಯಣಗುರು ಫೋಟೋ ಮೇಲೆ ಬಿಜೆಪಿಗೆ ಮತ ಕೇಳಿದ್ದು ಚುನಾವಣಾ ನೀತಿ ಸಂಹಿತೆಯ ಸ್ಪಷ್ಟ ಉಲ್ಲಂಘನೆಯಾಗಿದೆ. ಈ ಬಗ್ಗೆ ಚುನಾವಣಾಧಿಕಾರಿಗಳಿಗೆ ದೂರು ಕೊಡಲಾಗುವುದು ಎಂದು ಬಿ.ಆರ್. ಪಾಟೀಲ ತಿಳಿಸಿದರು. ಈಡಿಗ ಸಮಾಜದವರಿಗೆ ಕುಡಿಯುವುದನ್ನು ಬಿಡಿಸಿ, ಹೆಂಡ ಮಾರಾಟ ಮಾಡುವುದನ್ನು ನಾರಾಯಣ ಗುರುಗಳು ತಡೆದಿದ್ದರು. ಅದಕ್ಕೆ ಪರ್ಯಾಯವಾಗಿ ತೆಂಗಿನ ನಾರಿನ ಕೆಲಸವನ್ನು ಹೇಳಿಕೊಟ್ಟಿದ್ದರು. ಅಲ್ಲದೇ, ದೇವಸ್ಥಾನ ಪ್ರವೇಶಕ್ಕೆ ಅವಕಾಶ ಇಲ್ಲದ ಸಂದರ್ಭದಲ್ಲಿ ಲಿಂಗ ಸ್ಥಾಪನೆ ಮಾಡಿ ಈಡಿಗರಿಗೆ ಅವಕಾಶ ಮಾಡಿಕೊಟ್ಟಿದ್ದರು. ಇಂತಹ ಸಾಮಾಜಿಕ ಹರಿಕಾರನನ್ನು ಮುಂದಿಟ್ಟುಕೊಂಡು ರಾಜಕೀಯ ಮಾಡಿದ್ದು ಸರಿಯಲ್ಲ ಎಂದರು.