Advertisement

ಕೆರೆ ಕಾಮಗಾರಿ ಪ್ರಗತಿಯಲ್ಲಿ: ಅಖೀಲೇಶ್‌

03:38 PM Apr 04, 2019 | Team Udayavani |

ಸಾಗರ: ಚಿಪ್ಳಿ ಲಿಂಗದಹಳ್ಳಿಯ ಬಂಗಾರಮ್ಮನ ಕೆರೆಯ ಹೂಳು ತೆಗೆಯುವ ಕಾಮಗಾರಿಯನ್ನು ಈ ಹಂತದಲ್ಲಿ ಸ್ಥಗಿತಗೊಳಿಸುವ ನಿರ್ಧಾರವನ್ನು ಕೈ ಬಿಟ್ಟಿದ್ದೇವೆ. ಈ ವರ್ಷವೇ ಇದರ ಸಂಪೂರ್ಣ ಹೂಳು ತೆಗೆಯುವ ಚಟುವಟಿಕೆ ಪೂರೈಸಲು ಬೇಕಾದ ಪ್ರೋತ್ಸಾಹ ಸಮಾಜದಿಂದ ಲಭ್ಯವಾಗಿದೆ ಎಂದು ಸಾಗರ ತಾಲೂಕು ಜೀವಜಲ ಕಾರ್ಯಪಡೆ ಹಾಗೂ ಸ್ವಾನ್‌ ಆ್ಯಂಡ್‌ ಮ್ಯಾನ್‌ ಸಂಸ್ಥೆಯ ಪ್ರಮುಖ ಅಖೀಲೇಶ್‌ ಚಿಪ್ಳಿ ಘೋಷಿಸಿದರು.

Advertisement

ಮಂಗಳವಾರ ಕಲ್ಮನೆ ಗ್ರಾಪಂ ವ್ಯಾಪ್ತಿಯ ಲಿಂಗದಹಳ್ಳಿಯ ಸುಜಲಶ್ರೀ ಲಕ್ಷ್ಮೀ ಸ್ವ-ಸಹಾಯ ಸಂಘದ ಮಹಿಳಾ ಸದಸ್ಯರು ಬಂಗಾರಮ್ಮನ ಕೆರೆ ಹೂಳು ಕಾಮಗಾರಿ ನಿರ್ವಹಣೆಗೆ ನೀಡಿದ 20 ಸಾವಿರ ರೂ.ಗಳ ಚೆಕ್‌ನ್ನು ಕೆರೆ ಆವರಣದಲ್ಲಿ ಸ್ವೀಕರಿಸಿ ಅವರು ಮಾತನಾಡಿದರು.

ಇದುವರೆಗೆ ಕಾಮಗಾರಿಯ ಶೇ. 70ರಷ್ಟು ಮುಕ್ತಾಯವಾಗಿದೆ. ಈ ಹಿಂದಿನ ಅನುಭವಗಳ ಆಧಾರದಲ್ಲಿ ಹಣಕಾಸು ನೆರವು ಸಿಕ್ಕರೆ ಮಾತ್ರ ಕೆಲಸ ಮುಂದುವರಿಸುವ ಮನಃಸ್ಥಿತಿಯನ್ನು ನಾವು ಹೊಂದಿದ್ದೆವು. ಈ ವಿಚಾರಗಳನ್ನು ಸಾಮಾಜಿಕ ಜಾಲತಾಣ ಹಾಗೂ ಪತ್ರಿಕಾ ಮಾಧ್ಯಮಗಳ ಮೂಲಕ ಪ್ರಕಟಿಸಿದ ನಂತರ
ಬಂದಿರುವ ಪ್ರತಿಕ್ರಿಯೆ ಹೊಸ ಧೈರ್ಯ ನೀಡಿದೆ. ಅದರಲ್ಲೂ ಮಹಿಳೆಯರು ತಮ್ಮ ಉಳಿತಾಯದ 20 ಸಾವಿರ ರೂ.ಗಳ ಸಹಾಯ ನೀಡಿರುವಾಗ ನಾವು ಹಿಂಸರಿಯುವ ಮಾತೇ ಇಲ್ಲ ಎಂದರು.

ಹೂಳು ತೆಗೆಯುವ ಕಾಮಗಾರಿಯನ್ನು ಹಂತ ಹಂತವಾಗಿ ತೆಗೆಯುವ ಕಾರ್ಯಕ್ರಮ ಹಾಕಿಕೊಳ್ಳುವುದರಿಂದ ಬಜೆಟ್‌ ಸಾಕಷ್ಟು ಹೆಚ್ಚಾಗುತ್ತದೆ. ಮಾಡಿದ ಕೆಲಸವನ್ನೇ ಮತ್ತೆ ಮತ್ತೆ ಮಾಡಬೇಕಾಗುತ್ತದೆ. ಅದರಲ್ಲೂ ಮಳೆಗಾಲದಲ್ಲಿ ಕೆರೆಯ ನೀರನ್ನು ನಿಲ್ಲಿಸಲು ಸಾಧ್ಯವಾಗುವುದಿಲ್ಲ. ಇದೇ ವೇಳೆ ಹಣಕಾಸು ಹರಿದುಬರದಿದ್ದರೆ ಕೈ ಚೆಲ್ಲುವುದು ಅನಿವಾರ್ಯವಾಗುತ್ತದೆ. ನಮ್ಮ ಸಂಕಷ್ಟಗಳ ಬಗ್ಗೆ ಮಾಧ್ಯಮಗಳು ಬೆಳಕು ಚೆಲ್ಲಿದ ಮೇಲೆ
ಸಹೃದಯರು ಸಕಾರಾತ್ಮಕವಾಗಿ ನಮ್ಮನ್ನು ಬೆಂಬಲಿಸಿದ್ದಾರೆ. ಈ ಹಂತದಲ್ಲಿ ಕಾಮಗಾರಿಯನ್ನು ನಿಲ್ಲಿಸುವುದಿಲ್ಲ ಎಂದು ಪ್ರಕಟಿಸಿದರು.

ಕಲ್ಮನೆ ಗ್ರಾಪಂ ಸದಸ್ಯ ಎಲ್‌.ವಿ. ಅಕ್ಷರ ಮಾತನಾಡಿ, ಸದ್ಯ ನಮ್ಮಲ್ಲಿ ನಾಲ್ಕು ದಿನಗಳ ಕಾಲ ಕಾಮಗಾರಿ ಮುಂದುವರೆಸಲು ಬೇಕಾದ ಹಣಕಾಸು ಸಂಗ್ರಹವಾಗಿದೆ. ಹಲವು ದಾನಿಗಳು ಧನ ಸಹಾಯದ ಬೆಂಬಲ ವ್ಯಕ್ತಪಡಿಸಿದ್ದಾರೆ. ಕಾಮಗಾರಿಯನ್ನು ಒಂದು ಹಂತಕ್ಕೆ ತೆಗೆದುಕೊಂಡು ಹೋಗಲು ಇನ್ನೂ ಒಂದೂವರೆಯಿಂದ ಎರಡು ಲಕ್ಷ ರೂ. ಬೇಕಾಗಬಹುದು. ವೆಚ್ಚದ ಬಗ್ಗೆ ಈ ಹಂತದಲ್ಲಿ
ನಾವು ತಲೆಬಿಸಿ ಮಾಡಿಕೊಳ್ಳುವುದಿಲ್ಲ. ಕಾಮಗಾರಿಯನ್ನು ಪೂರೈಸುತ್ತೇವೆ. ಆಗುವ ವೆಚ್ಚವನ್ನು ದಾನಿಗಳ ಮೂಲಕ ಸರಿದೂಗಿಸುವ ಭರವಸೆ ನಮಗೀಗ ಬಂದಿದೆ ಎಂದರು.

Advertisement

ಸುಜಲಶ್ರೀ ಲಕ್ಷ್ಮೀ ಸ್ವ-ಸಹಾಯ ಸಂಘದ ಅಧ್ಯಕ್ಷೆ ನಳಿನಾ ಪರಮೇಶ್ವರ್‌, ಕಾರ್ಯದರ್ಶಿ ಅಮೃತಾ ವಿನಯ್‌, ಮೇಲ್ವಿಚಾರಕಿ ಗಿರಿಜಾ, ಸದಸ್ಯರಾದ ಸುಜಾತಾ ವರದೇಶ್‌, ನರ್ಮದಾ, ದಿವ್ಯ, ಸರೋಜ, ಶುಭಾ, ಜಯಲಕ್ಷ್ಮೀ, ಕಿರಣ ಸತೀಶ್‌ ಇತರರು ಚೆಕ್‌ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಜೀವಜಲ ಕಾರ್ಯಪಡೆಯ ದಿನೇಶ್‌ ಎಲ್‌.ಟಿ., ಎಲ್‌.ವಿ. ಅಶೋಕ್‌, ವ.ಶಂ. ರಾಮಚಂದ್ರ ಭಟ್‌, ಲೋಕೇಶ್‌, ವಿನಯ್‌ ಇದ್ದರು.

ಸಾಗರ: ಚಿಪ್ಳಿ ಲಿಂಗದಹಳ್ಳಿಯ ಬಂಗಾರಮ್ಮನ ಕೆರೆಯ ಹೂಳು ತೆಗೆಯುವ ಕಾಮಗಾರಿಯ ಮುಂದುವರಿಕೆಗಾಗಿ ಲಿಂಗದಹಳ್ಳಿಯ ಸುಜಲಶ್ರೀ ಲಕ್ಷ್ಮೀ ಸ್ವ-ಸಹಾಯ ಸಂಘದ ಮಹಿಳಾ ಸದಸ್ಯರು 20 ಸಹಸ್ರ ರೂ.ಗಳ ಚೆಕ್‌ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next