ಕೆಜಿಎಫ್: ಕೆಜಿಎಫ್ ಪೊಲೀಸ್ ಜಿಲ್ಲಾ ಕಚೇರಿಯನ್ನು ಬೇರೆ ಜಿಲ್ಲೆಗೆ ವರ್ಗಾವಣೆ ಮಾಡುವ ಪ್ರಕ್ರಿಯೆಗೆ ಸರ್ಕಾರ ಮುಂದಾಗಿದ್ದು, ಈಗಿರುವ ಇಲಕ್ಕಿಯಾ ಕರುಣಾಗರನ್ ಪೊಲೀಸ್ ಜಿಲ್ಲೆಯ ಕೊನೆಯ ಎಸ್ಪಿಯಾಗಲಿದ್ದಾರೆ ಎಂಬ ಮಾಹಿತಿಗಳು ಪೊಲೀಸ್ ಇಲಾಖೆಯಿಂದ ಕೇಳಿ ಬರುತ್ತಿದೆ.
ಕೆಜಿಎಫ್ ಪೊಲೀಸ್ ಜಿಲ್ಲೆಯನ್ನು ಹೊಸದಾಗಿ ರಚಿತವಾದ ವಿಜಯನಗರ ಜಿಲ್ಲೆಗೆವರ್ಗಾವಣೆ ಮಾಡಬೇಕು ಎಂಬ ಸುದ್ದಿ ಆಗಸ್ಟ್ ತಿಂಗಳಲ್ಲಿ ಹರಡಿತ್ತು. ಈ ಸಂಬಂಧವಾಗಿ ತಾಲೂಕಿನಲ್ಲಿ ಜನಪ್ರತಿನಿಧಿಗಳು ಮತ್ತುಸಂಘಟನೆಗಳು ಸರ್ಕಾರದ ನಿರ್ಧಾರವನ್ನು ಖಂಡಿಸಿ ವಿವಿಧ ರೀತಿಯಲ್ಲಿ ಪ್ರತಿಭಟನೆ ನಡೆಸಿದ್ದವು. ಆಗಸ್ಟ್ 7 ರಂದು ಕೆಜಿಎಫ್ ಬಂದ್ ಸಹ ಆಚರಣೆ ಮಾಡಲಾಗಿತ್ತು.
ನಂತರ ನಗರಕ್ಕೆ ಭೇಟಿ ನೀಡಿದ್ದ ಸಂಸದ ಎಸ್.ಮುನಿ ಸ್ವಾಮಿ, ಇವೆಲ್ಲವೂ ಸುಳ್ಳು. ಸರ್ಕಾರದ ಪೊಲೀಸ್ ಜಿಲ್ಲೆಯನ್ನು ಬೇರೆಡೆಗೆ ವರ್ಗಾವಣೆ ಮಾಡುವುದಿಲ್ಲ ಎಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದರು.ಸಿಎಸ್‌ಗೆ ಶಾಸಕಿ ಮನವಿ: ಇದೇ ಸಂದರ್ಭದಲ್ಲಿ ರಾಜ್ಯದ ಮುಖ್ಯ ಕಾರ್ಯದರ್ಶಿ ರವಿಕುಮಾರ್ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿದ್ದ ಶಾಸಕಿ ರೂಪಕಲಾ ಅವರಿಗೆ ರವಿಕುಮಾರ್ ಅವರು ಖಡಾಖಂಡಿತವಾಗಿ ಇದು ಸರಿಯಾದ ಸುದ್ದಿಯಲ್ಲ.
ಇದನ್ನೂ ಓದಿ;- ಪೌಷ್ಠಿಕ ಆಹಾರಕ್ಕೆ ಕನ್ನ : ಮಿಂಚಿನ ದಾಳಿ
ಇದು ನನ್ನ ಗಮನಕ್ಕೆ ಬಂದಿಲ್ಲ. ನನ್ನ ಗಮನಕ್ಕೆ ಬಾರದೆ ಯಾವುದೇ ಪ್ರಕ್ರಿಯೆ ನಡೆಯಲು ಸಾಧ್ಯವಿಲ್ಲ ಎಂದು ತಿಳಿಸಿದ್ದರು. ಹೊರ ತಪ್ಪಿಸಲು ವರ್ಗಾವಣೆ: ಆದರೆ, ಸಾರ್ವಜನಿಕಮತ್ತು ಜನಪ್ರತಿನಿಧಿಗಳು ವಿರೋಧ ಮಾಡಬಹುದು ಎಂಬ ದೃಷ್ಟಿಯಿಂದ ಪೊಲೀಸ್ ಕೇಂದ್ರ ಕಚೇರಿಯಲ್ಲಿ ಅಧಿಕಾರಿಗಳು ಗುಪ್ತವಾಗಿ ಕಡತ ಸಿದ್ಧಮಾಡಿದ್ದಾರೆ ಎಂದು ತಿಳಿದುಬಂದಿದೆ. ಸರ್ಕಾರಕ್ಕೆ ಹೊಸ ಜಿಲ್ಲೆಯಿಂದ ಆರ್ಥಿಕ ಹೊರೆ ತಪ್ಪಿಸಲು ಕೆಜಿಎಫ್ ಪೊಲೀಸ್ ಜಿಲ್ಲೆಯನ್ನು ಬಲಿ ಕೊಡುವುದು ಹಿರಿಯ ಅಧಿಕಾರಿಗಳ ವಾದವಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಪುಡಿ ರೌಡಿಗಳ ಕಾಟ ಹೆಚ್ಚಳ ಸಾಧ್ಯತೆ: ಈಗಾಗಲೇ ಅವೈಜ್ಞಾನಿಕವಾಗಿ ಪೊಲೀಸ್ ಜಿಲ್ಲೆಯನ್ನು ಪುನರ್ ರಚಿತ ಮಾಡಿರುವುದು ಸಾರ್ವಜನಿಕರಲ್ಲಿ ಅಸಮಾಧಾನ ಉಂಟು ಮಾಡಿದೆ. ಅಲ್ಲದೆ, ಇತ್ತೀಚಿನ ದಿನಗಳಲ್ಲಿ ಪದೇ ಪದೆ ಸಂಭವಿಸುವ ಕಾನೂನು ಮತ್ತು ಸುವ್ಯವಸ್ಥೆ ಉಲ್ಲಂಘನೆ ಬಗ್ಗೆ, ರೌಡಿ ಚಟುವಟಿಕೆಗಳ ಬಗ್ಗೆ ವರದಿಯಾಗುತ್ತಲೇ ಇದೆ. ಇಷ್ಟು ದಿನಗಳ ಕಾಲ ಸುಮ್ಮನಿದ್ದ ಪುಡಿ ರೌಡಿಗಳು ಇನ್ನು ಮುಂದೆ ತಮ್ಮ ಆಟ ಆರಂಭಿಸಬಹುದು ಎಂಬ ಆತಂಕ ಸ್ಥಳೀಯ ಪೊಲೀಸ್ ಸಿಬ್ಬಂದಿಗೆ ಇದೆ.
ಸಾರ್ವಜನಿಕರಿಗೆ ಅಧಿಕಾರಿಗಳು ಕೂಡಲೇಸಿಗಬೇಕು. ಅಧಿಕಾರ ವಿಕೇಂದ್ರಿಕರಣವಾದರೆ ಸಾರ್ವಜನಿಕ ಕೆಲಸಗಳು ಸುಲಭವಾಗಿ ಆಗುತ್ತದೆ ಎಂಬ ಮಾತಿದೆ. ಆದರೆ, ಜಿಲ್ಲೆಯಲ್ಲಿ ಸುಲಭವಾಗಿ ಸಿಗುವ ಹಿರಿಯ ಅಧಿಕಾರಿಗಳು ಇನ್ನು ಮುಂದೆ ತಕ್ಷಣ ಕೈಗೆ ಸಿಗದೆ ಇದ್ದರೆ ಜನರಿಗೆ ನ್ಯಾಯ ಸಿಗುವುದು ಎಲ್ಲಿ ಈಗಾಗಲೇ ಬೆಮಲ್‌ನಿಂದ ವಶಪಡಿಸಿಕೊಂಡಿರುವ 950 ಎಕರೆ ಜಮೀನಿನಲ್ಲಿ ಅತ್ಯಾಧುನಿಕ ಕೈಗಾರಿಕಾ ಪ್ರಾಂಗಣ ಬರಲಿದೆ.
ಅದಕ್ಕಾಗಿ ಸಿದ್ಧತೆಗಳು ನಡೆಯುತ್ತಿವೆ. ಇಂತಹ ಸಂದರ್ಭದಲ್ಲಿ ನಗರದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಸುಭದ್ರವಾಗಿರಬೇಕಾಗಿರುತ್ತದೆ. ಉದ್ಯಮಿಗಳಿಗೆ ಸುರಕ್ಷಿತ ವಲಯ ಎಂಬ ಪಟ್ಟಿ ಬೇಕಾಗಿರುತ್ತದೆ. ಕೆಜಿಎಫ್ ಪೊಲೀಸ್ ಜಿಲ್ಲೆ ಬೇರೆಡೆಗೆ ವರ್ಗಾವಣೆಯಾದರೆ, ಹಿರಿಯ ಅಧಿಕಾರಿಗಳ ನೇರ ಹಿಡಿತ ಇಲ್ಲಿನ ಅಧಿಕಾರಿಗಳ ಮೇಲೆ ಸಿಗುವುದಿಲ್ಲ ಎಂಬ ಭಾವನೆ ಕೂಡ ವ್ಯಕ್ತವಾಗುತ್ತಿದೆ.
“ಕೆಜಿಎಫ್ ಪೊಲೀಸ್ ಜಿಲ್ಲಾ ಕಚೇರಿಯನ್ನು ಬೇರೆಡೆಗೆ ವರ್ಗಾವಣೆ ಮಾಡಲು ಬಿಡುವುದಿಲ್ಲ. ಈ ವಿಷಯದಲ್ಲಿ ಸೋಲೇ ಇಲ್ಲ.”
ಎಂ.ರೂಪಕಲಾ, ಕೆಜಿಎಫ್ ಶಾಸಕಿ
“ಕೆಜಿಎಫ್ ಪೊಲೀಸ್ ಜಿಲ್ಲೆಯ ಕಚೇರಿ ವರ್ಗಾವಣೆ ಬಗ್ಗೆ ಮಾಹಿತಿ ಇಲ್ಲ.ಮಾಹಿತಿ ಪಡೆದು ಹಿರಿಯ ಅಧಿಕಾರಿಗಳ ಜೊತೆ ಮಾತನಾಡುತ್ತೇನೆ.”
ಎಸ್.ಮುನಿಸ್ವಾಮಿ, ಕೋಲಾರ ಸಂಸದ.