ಬಾಗಲಕೋಟೆ: ಪ್ರಸ್ತುತ ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಜಿಲ್ಲೆಯ ಕುರುಬ ಸಮಾಜದ ನಡೆ ಏನು ಎಂಬುದರ ಕುರಿತು ಈಗ ತೀವ್ರ ಕುತೂಹಲ ಕೆರಳಿಸಿದೆ. ಬಿಜೆಪಿ-ಕಾಂಗ್ರೆಸ್ ಎರಡೂ ಪಕ್ಷಗಳಿಂದ ಅಧಿಕೃತ
ಟಿಕೆಟ್ ಘೋಷಣೆಗೂ ಮುನ್ನ ಮಾಧ್ಯಮಗೋಷ್ಠಿ ನಡೆಸಿದ್ದ ಸಮಾಜದ ಜಿಲ್ಲಾ ಘಟಕದ ಪ್ರಮುಖರು, ಕುರುಬ ಸಮಾಜದ ಆಕಾಂಕ್ಷಿಗಳಿಗೆ ಟಿಕೆಟ್ ಕೊಡಬೇಕು ಎಂಬ ಒತ್ತಾಯ ಮಾಡಿದ್ದರು.
ಅಲ್ಲದೇ ಯಾವ ಪಕ್ಷ ಕುರುಬ ಸಮಾಜಕ್ಕೆ ಟಿಕೆಟ್ ಕೊಡುತ್ತದೆಯೋ ಅವರಿಗೆ ಸಂಪೂರ್ಣ ಬೆಂಬಲ ನೀಡುವುದಾಗಿ ಹೇಳಿದ್ದರು. ಯಾವ ಪಕ್ಷವೂ ನಮ್ಮ ಸಮಾಜಕ್ಕೆ ಟಿಕೆಟ್ ಕೊಡದಿದ್ದರೆ, ಯಾವ ಪಕ್ಷದ ಅಭ್ಯರ್ಥಿ ಅಹಿಂದ ವರ್ಗಕ್ಕೆ ಸೇರಿರುತ್ತಾರೋ ಅವರಿಗೆ ಬೆಂಬಲ ಕೊಡುತ್ತೇವೆ. ಒಂದು ವೇಳೆ ಎರಡೂ ಪಕ್ಷದ ಅಭ್ಯರ್ಥಿಗಳು ಅಹಿಂದ ವರ್ಗದವರಾಗಿದ್ದರೆ, ಯಾರಿಗೆ ಬೆಂಬಲ ಕೊಡಬೇಕು ಎಂಬುದರ ಕುರಿತು ಚರ್ಚಿಸಿ, ನಿರ್ಧಾರ ಕೈಗೊಳ್ಳುವ ಸಂದೇಹ ಸಮಾಜದ ಮುಖಂಡು ನೀಡಿದ್ದರು.
ಆಕಾಂಕ್ಷಿಗಳಿಗೆ ನಿರಾಶೆ: ಪ್ರಸ್ತುತ ಲೋಕಸಭೆ ಚುನಾವಣೆಗೆ ಕಾಂಗ್ರೆಸ್‌ನಿಂದ ಭೂ ಸೇನಾ ನಿಗಮದ ಮಾಜಿ ಅಧ್ಯಕ್ಷ ಶ್ರೀಶೈಲ ದಳವಾಯಿ, ಕಾಂಗ್ರೆಸ್ ಒಬಿಸಿ ಘಟಕದ ಜಿಲ್ಲಾಧ್ಯಕ್ಷ ಡಾ| ದೇವರಾಜ ಪಾಟೀಲ, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ರಕ್ಷಿತಾ ಈಟಿ, ಜಿಪಂ ಮಾಜಿ ಸದಸ್ಯ ಎಸ್.ಡಿ. ಜೋಗಿನ್ ಅವರು ಟಿಕೆಟ್ ಆಕಾಂಕ್ಷಿಗಳಾಗಿದ್ದರು.
ಇನ್ನು ಬಿಜೆಪಿಯಿಂದ ಜಿಪಂ ಸದಸ್ಯ ವೀರೇಶ ಉಂಡೋಡಿ, ಪಕ್ಷದ ಜಿಲ್ಲಾ ಉಪಾಧ್ಯಕ್ಷ ಬಸವರಾಜ ಶಿದ್ಲಿಂಗಪ್ಪನವರ ಟಿಕೆಟ್ ಕೇಳಿದ್ದರು. ಎರಡೂ ಪಕ್ಷಗಳಲ್ಲಿ ಇರುವ ಕುರುಬ ಸಮಾಜದ ಪ್ರಮುಖರಿಗೆ, ಈ ಬಾರಿ ಟಿಕೆಟ್ ದೊರೆತಿಲ್ಲ. ಹೀಗಾಗಿ ಸಮಾಜ, ಈಗ ಯಾವ ನಿರ್ಧಾರ ಕೈಗೊಳ್ಳುತ್ತದೆ ಎಂಬ ಕುತೂಹಲ ಮೂಡಿದೆ.
ಕಾಂಗ್ರೆಸ್ಸಾ-ಅಹಿಂದಾ?: ಸದ್ಯ ಎರಡೂ ಪಕ್ಷಗಳು ಅಭ್ಯರ್ಥಿಗಳನ್ನು ಅಂತಿಮಗೊಳಿಸಿವೆ. ಕಾಂಗ್ರೆಸ್‌ನಿಂದ ವೀಣಾ ಕಾಶಪ್ಪನವರ (ಲಿಂಗಾಯತ), ಬಿಜೆಪಿಯಿಂದ ಹಾಲಿ ಸಂಸದ ಪಿ.ಸಿ. ಗದ್ದಿಗೌಡರ (ಲಿಂಗಾಯತ ಉಪ ಪಂಗಡ-ಗಾಣಿಗ) ಅಭ್ಯರ್ಥಿಯಾಗಿದ್ದಾರೆ. ಕರ್ನಾಟಕ ಪ್ರದೇಶ ಕುರುಬರ ಸಂಘದ ಜಿಲ್ಲಾ ಘಟಕದಲ್ಲಿ, ಬಿಜೆಪಿ-ಕಾಂಗ್ರೆಸ್ ಪಕ್ಷಗಳಲ್ಲಿ ಸಕ್ರಿಯವಾಗಿರುವ ಪ್ರಮುಖರು ವ್ಯಕ್ತಿಗಳಿದ್ದಾರೆ. ಅವರೆಲ್ಲ ತಮ್ಮ ತಮ್ಮ ಪಕ್ಷದ ಪರವಾಗಿ ಬೆಂಬಲ ಕೊಡಲು ಸಮಾಜದಲ್ಲಿ ಚರ್ಚೆ ಮಾಡುವುದು ಸಹಜ. ಆದರೆ, ಅಂತಿಮವಾಗಿ ಕುರುಬ ಸಮಾಜ, ಕಾಂಗ್ರೆಸ್ ಅಥವಾ ಬಿಜೆಪಿಗೆ ಬೆಂಬಲ ಕೊಡುತ್ತದೆಯೋ, ಇಲ್ಲವೇ ಸಮಾಜದಿಂದ ಪ್ರತ್ಯೇಕ ಅಭ್ಯರ್ಥಿ ಕಣಕ್ಕಿಳಿಸುತ್ತದೆಯೋ ಎಂಬ ಚರ್ಚೆ ನಡೆಯುತ್ತಿದೆ.
ಪ್ರತ್ಯೇಕ ಅಭ್ಯರ್ಥಿ ಕಣಕ್ಕೆ?: ಜಿಲ್ಲೆಯಲ್ಲಿ ಕುರುಬ ಸಮಾಜ ಬಹುಸಂಖ್ಯೆಯಲ್ಲಿದೆ. ಜಿಲ್ಲೆಯ ಎಲ್ಲ ವಿಧಾನಸಭೆ ಕ್ಷೇತ್ರ ವ್ಯಾಪ್ತಿಯಲ್ಲೂ, ಈ ಸಮಾಜ, ನಿರ್ಣಾಯಕ ಪಾತ್ರ ವಹಿಸುತ್ತದೆ. ಹೀಗಾಗಿ ಈ ಸಮಾಜ, ಲೋಕಸಭೆ ಚುನಾವಣೆಯಲ್ಲಿ ಯಾರಿಗೆ ಬೆಂಬಲ ಕೊಡಲಿದೆ ಎಂಬ ಕುತೂಹಲ ಸಹಜವಾಗಿ ಮೂಡಿದೆ.
ಸಮಾಜದ ಪ್ರಮುಖರೇ ಹೇಳುವಂತೆ, ಲೋಕಸಭೆ ಕ್ಷೇತ್ರ ವ್ಯಾಪ್ತಿಯಲ್ಲಿ ಕುರುಬ ಸಮಾಜದ ಮತದಾರರು ಸುಮಾರು 3.40 ಲಕ್ಷ ಸಂಖ್ಯೆಯಲ್ಲಿದ್ದಾರೆ. ಹೀಗಾಗಿ ನಮ್ಮ ಸಮಾಜಕ್ಕೆ ಟಿಕೆಟ್ ಕೊಡಬೇಕಿತ್ತು. ಈಗ ಎರಡೂ ಪಕ್ಷದವರು ಟಿಕೆಟ್ ಕೊಟ್ಟಿಲ್ಲ. ಚುನಾವಣೆಗೆ ಯಾವ ತೀರ್ಮಾನ ಕೈಗೊಳ್ಳಬೇಕೆಂಬುದರ ಕುರಿತು ಚರ್ಚಿಸಲೆಂದೇ ಏ.2ರಂದು ಸಮಾಜದ ಸಭೆ ಆಯೋಜಿಸಿದ್ದಾಗಿ ಸಮಾಜದ ಜಿಲ್ಲಾ ಘಟಕ ತಿಳಿಸಿದೆ. ಈ ಹಿನ್ನೆಲೆಯಲ್ಲಿ ಕುರುಬ ಸಮಾಜದ ಜಿಲ್ಲಾ ನಾಯಕರ ಸಭೆಯಲ್ಲಿ ಯಾವ ನಿರ್ಣಯ ಹೊರ ಬರಲಿದೆ ಎಂಬ ಕುತೂಹಲ ಮನೆ ಮಾಡಿದೆ.
ಬಿಜೆಪಿ-ಕಾಂಗ್ರೆಸ್ ಎರಡೂ ಪಕ್ಷಗಳಲ್ಲಿ ನಮ್ಮ ಸಮಾಜದ ಆಕಾಂಕ್ಷಿಗಳಿದ್ದರು. ಎರಡೂ ಪಕ್ಷ ಟಿಕೆಟ್ ಕೊಟ್ಟಿಲ್ಲ. ಹೀಗಾಗಿ ಏ.2ರಂದು ಬೆಳಗ್ಗೆ 10:30ಕ್ಕೆ ನವನಗರದ ಕಾಳಿದಾಸ ಕಲ್ಯಾಣ ಮಂಟಪದಲ್ಲಿ ಸಭೆ ಕರೆದಿದ್ದೇವೆ. ಯಾರಿಗೆ ಬೆಂಬಲ ಕೊಡಬೇಕು ಅಥವಾ ಸಮಾಜದಿಂದ ಪ್ರತ್ಯೇಕ ಅಭ್ಯರ್ಥಿ ಕಣಕ್ಕಿಳಿಸಬೇಕೋ ಎಂಬುದರ ಕುರಿತು ಅಂದಿನ ಸಭೆಯಲ್ಲಿ ಚರ್ಚಿಸಿ, ಅಂತಿಮ ನಿರ್ಧಾರ ಕೈಗೊಳ್ಳುತ್ತೇವೆ.
.ಡಿ.ಬಿ. ಸಿದ್ದಾಪುರ, ಜಿಲ್ಲಾಧ್ಯಕ್ಷ,
ಜಿಲ್ಲಾ ಕುರುಬರ ಸಂಘ
ವಿಶೇಷ ವರದಿ