Advertisement

ಕುಂದಗೋಳ ಕದನದಲ್ಲಿ ಕೈ, ಕಮಲಕ್ಕೆ ಒಳಹೊಡೆತ‌ ಭೀತಿ

11:57 AM Apr 25, 2019 | Team Udayavani |

ಹುಬ್ಬಳ್ಳಿ: ಕುಂದಗೋಳ ವಿಧಾನಸಭೆ ಚುನಾವಣೆ ಕಾವು ಹೆಚ್ಚು ತೊಡಗಿದೆ. ನಾಮಪತ್ರ ಸಲ್ಲಿಕೆಯ ಕೊನೆ ದಿನಕ್ಕೆ ಇನ್ನು ನಾಲ್ಕು ದಿನ ಮಾತ್ರ ಬಾಕಿ ಇದೆ. ಇಲ್ಲಿವರೆಗೂ ಕಾಂಗ್ರೆಸ್‌, ಬಿಜೆಪಿ, ಜೆಡಿಎಸ್‌ ಅಭ್ಯರ್ಥಿಯನ್ನು ಅಂತಿಮಗೊಳಿಸಿಲ್ಲ. ವಿಶೇಷವಾಗಿ ಕಾಂಗ್ರೆಸ್‌-ಬಿಜೆಪಿಗೆ ಒಳಹೊಡೆತದ ಭೀತಿ ಎದುರಾಗಿದೆ.

Advertisement

ಸಿ.ಎಸ್‌.ಶಿವಳ್ಳಿ ಅವರ ನಿಧನದಿಂದಾಗಿ ತೆರವಾದ ಸ್ಥಾನಕ್ಕೆ ಮೇ 19ರಂದು ಚುನಾವಣೆ ನಡೆಯುತ್ತಿದ್ದು, ನಾಮಪತ್ರ ಸಲ್ಲಿಸಲು ಏ.29 ಕೊನೆ ದಿನವಾದರೂ ಪ್ರಮುಖ ಪಕ್ಷಗಳು ತಮ್ಮ ಅಭ್ಯರ್ಥಿಯನ್ನು ಘೋಷಿಸಿಲ್ಲ. ಆಕಾಂಕ್ಷಿಗಳ ಮಾಹಿತಿ ಸಂಗ್ರಹ, ಸಭೆ, ಹೈಕಮಾಂಡ್‌ಗೆ ಜಿಲ್ಲಾ ಸಮಿತಿಯಿಂದ ಶಿಫಾರಸು ಹಂತದಲ್ಲೇ ಉಳಿದಿದೆ. ಕುಂದಗೋಳ ವಿಧಾನಸಭೆ ಉಪ ಚುನಾವಣೆಗೆ ಕಾಂಗ್ರೆಸ್‌ನಿಂದ ಸಿ.ಎಸ್‌.ಶಿವಳ್ಳಿ ಅವರ ಪತ್ನಿ ಕುಸುಮಾ ಶಿವಳ್ಳಿ ಅವರಿಗೆ ಟಿಕೆಟ್ ಬಹುತೇಕ ಖಚಿತ ಎಂದು ಹೇಳಲಾಗುತ್ತಿದೆಯಾದರೂ, 18 ಜನ ಆಕಾಂಕ್ಷಿಗಳು ತಮಗೆ ಟಿಕೆಟ್ ನೀಡುವಂತೆ ಮನವಿ ಸಲ್ಲಿಸಿದ್ದಾರೆ.

ಕೆಪಿಸಿಸಿ ವೀಕ್ಷಕ ವಿ.ಆರ್‌.ಸುದರ್ಶನ ಅವರು ಇತ್ತೀಚೆಗೆ ನಗರಕ್ಕೆ ಆಗಮಿಸಿ ಕುಂದಗೋಳ ವಿಧಾನಸಭೆ ಉಪ ಚುನಾವಣೆ ಕುರಿತಾಗಿ ಆಕಾಂಕ್ಷಿಗಳಿಂದ ಪ್ರಾಥಮಿಕ ಹಂತದ ಮಾಹಿತಿ ಸಂಗ್ರಹ ಮಾಡಿದ್ದರು. ಇದೀಗ ಕುಸುಮಾ ಶಿವಳ್ಳಿ ಸೇರಿದಂತೆ 18 ಆಕಾಂಕ್ಷಿಗಳು ಅರ್ಜಿ ಸಲ್ಲಿಸಿದ್ದು, ಏ.25ರಂದು ಮಧ್ಯಾಹ್ನ 12 ಗಂಟೆಗೆ ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ನಡೆಯುವ ಸಭೆಯಲ್ಲಿ ಅಭ್ಯರ್ಥಿ ಯಾರು ಎಂಬುದನ್ನು ಬಹುತೇಕ ಪೂರ್ಣಗೊಳಿಸುವ ಸಾಧ್ಯತೆ ಇದೆ. ಕಾಂಗ್ರೆಸ್‌ ಮೂಲಗಳ ಪ್ರಕಾರ ಗುರುವಾರ ಇಲ್ಲವೆ ಶುಕ್ರವಾರ ಅಭ್ಯರ್ಥಿ ಘೋಷಣೆ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ಬಿಜೆಪಿಯಲ್ಲೂ ತೀವ್ರ ಪೈಪೋಟಿ: ಬಿಜೆಪಿಯಲ್ಲೂ ಟಿಕೆಟ್‌ಗೆ ಟೈಟ್ಫೈಟ್ ನಡೆದಿದೆ. ಮಾಜಿ ಶಾಸಕ ಎಸ್‌.ಐ.ಚಿಕ್ಕನಗೌಡ್ರ ಹಾಗೂ ಎಂ.ಆರ್‌.ಪಾಟೀಲ ನಡುವೆ ತೀವ್ರ ಸ್ಪರ್ಧೆ ನಡೆದಿದೆ. ಇದಲ್ಲದೆ ಡಾ| ಮಲ್ಲಿಕಾರ್ಜುನ ಬಾಳಿಕಾಯಿ ಸೇರಿದಂತೆ ಅನೇಕರ ಹೆಸರುಗಳು ಸಹ ಕ್ಷೇತ್ರದಲ್ಲಿ ತೇಲಾಡುತ್ತಿವೆ. ಕುಂದಗೋಳ ವಿಧಾನಸಭೆ ಉಪಚುನಾವಣೆ ಕುರಿತಾಗಿ ಬಿಜೆಪಿ ಬುಧವಾರ ಸಂಜೆ ಸಭೆ ನಡೆಸಿದ್ದದೆ, ಟಿಕೆಟ್ ಆಕಾಂಕ್ಷಿಗಳಿಂದ ಮಾಹಿತಿ ಪಡೆಯಿತು. ಸಭೆಯಲ್ಲಿ ಪ್ರಮುಖವಾಗಿ ಎಸ್‌.ಐ.ಚಿಕ್ಕನಗೌಡ್ರ, ಎಂ.ಆರ್‌.ಪಾಟೀಲರ ಹೆಸರುಗಳು ಪ್ರಸ್ತಾಪಗೊಂಡಿವೆ ಎಂದು ಹೇಳಲಾಗುತ್ತಿದೆ.

ಜೆಡಿಎಸ್‌ ಕ್ಲೈಮ್‌: ಕುಂದಗೋಳ ವಿಧಾನಸಭೆ ಉಪ ಚುನಾವಣೆಗೆ ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿಕೂಟ ಸ್ಪರ್ಧಿಸುವುದೋ, ಪ್ರತ್ಯೇಕವಾಗಿ ಸ್ಪರ್ಧೆಗಿಳಿಯುವರೋ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಆದರೆ, ಜೆಡಿಎಸ್‌ ಟಿಕೆಟ್ ಆಕಾಂಕ್ಷಿಯೊಬ್ಬರು ತಾವು ಸ್ಪರ್ಧೆಳಿಯುವುದಾಗಿ ಘೋಷಿಸಿದ್ದಾರೆ. ಜೆಡಿಎಸ್‌ನ ಹಜರತ್‌ ಅಲಿ ಜೋಡುಮನೆ ಜೆಡಿಎಸ್‌ನಿಂದ ಪ್ರಬಲ ಆಕಾಂಕ್ಷಿಯಾಗಿದ್ದಾರೆ.

Advertisement

ಒಳಪೆಟ್ಟು ಆತಂಕ: ಕುಂದಗೋಳ ಉಪ ಚುನಾವಣೆಯಲ್ಲಿ ಪ್ರಮುಖವಾಗಿ ಕಾಂಗ್ರೆಸ್‌ ಹಾಗೂ ಬಿಜೆಪಿ ಪಕ್ಷಗಳಿಗೆ ಒಳಪೆಟ್ಟು ಹೆಚ್ಚು ಆತಂಕ ಮೂಡಿಸತೊಡಗಿದೆ. ಕಾಂಗ್ರೆಸ್‌ನಲ್ಲಿ ಸಿ.ಎಸ್‌.ಶಿವಳ್ಳಿ ಅವರ ಪತ್ನಿ ಕುಸುಮಾ ಶಿವಳ್ಳಿ ಅವರಿಗೆ ಟಿಕೆಟ್ ನೀಡಬೇಕೆಂದು ಕ್ಷೇತ್ರದ ಅನೇಕರು ಒತ್ತಾಯಿಸಿದ್ದರು. ಜಿಲ್ಲೆಯ ಬಹುತೇಕ ಮುಖಂಡರ ಒಲವು ಕುಸುಮಾ ಶಿವಳ್ಳಿ ಅವರ ಪರ ಇದೆ ಎನ್ನಲಾಗಿದ್ದು, ಮಾಜಿ ಸಿಎಂ ಸಿದ್ದರಾಮಯ್ಯ ಕ್ಷೇತ್ರದಲ್ಲಿ ತಯಾರಿ ಕೈಗೊಳ್ಳುವಂತೆ ಕುಸುಮಾ ಶಿವಳ್ಳಿ ಅವರಿಗೆ ಸೂಚಿಸಿದ್ದಾರೆ ಎಂದು ಹೇಳಲಾಗುತ್ತಿದೆ.

ದಿನಗಳೆದಂತೆ ಕಾಂಗ್ರೆಸ್‌ನಲ್ಲಿ ಟಿಕೆಟ್ ಆಕಾಂಕ್ಷಿಗಳ ಪಟ್ಟಿ ಬೆಳೆಯತೊಡಗಿದೆ. ಮುಖ್ಯವಾಗಿ ಕಾಂಗ್ರೆಸ್‌ನಲ್ಲಿ ಯಾರಿಗೆ ಟಿಕೆಟ್ ಸಿಕ್ಕರೂ ಒಳಪೆಟ್ಟು ಬೀಳುವ ಸಾಧ್ಯತೆ ಇದೆ. ಕುಸುಮಾ ಶಿವಳ್ಳಿ ಅವರಿಗೆ ಟಿಕೆಟ್ ನೀಡಿದರೆ ಅನುಕಂಪ ಕೈ ಹಿಡಿಯುವ ಸಾಧ್ಯತೆ ಇದೆ ಎಂಬುದು ಕಾಂಗ್ರೆಸ್‌ನ ಲೆಕ್ಕಾಚಾರ. ಇದನ್ನು ಸುಳ್ಳಾಗಿಸಲು ಬಿಜೆಪಿ ತನ್ನದೇ ತಂತ್ರಗಾರಿಕೆ ರೂಪಿಸಿದೆ ಎನ್ನಲಾಗಿದೆ. ಆದರೆ, ಕಾಂಗ್ರೆಸ್‌ನ ಲೆಕ್ಕಾಚಾರವನ್ನು ಪಕ್ಷದೊಳಗಿನ ಒಳಪೆಟ್ಟು ಬುಡಮೇಲು ಮಾಡಲಿದೆಯೇ ಎಂಬ ಆತಂಕ ಕಾಂಗ್ರೆಸ್‌ನಲ್ಲಿ ಮನೆ ಮಾಡಿದೆ ಎಂದು ಹೇಳಲಾಗುತ್ತಿದೆ.

ಬಿಜೆಪಿಯೂ ಒಳ ಹೊಡೆತದಿಂದ ಹೊರತಾಗಿಲ್ಲ. ಒಳ ಹೊಡೆತದ ಕಹಿ ಅನುಭವ ಈಗಾಗಲೇ ಬಿಜೆಪಿಗೆ ಆಗಿದೆ ಎಂದೇ ಹೇಳಲಾಗುತ್ತಿದೆ. ಬಿಜೆಪಿಯಲ್ಲಿ ಮುಖ್ಯವಾಗಿ ಎಸ್‌.ಐ.ಚಿಕ್ಕನಗೌಡ್ರ, ಎಂ.ಆರ್‌.ಪಾಟೀಲ ನಡುವೆ ಟಿಕೆಟ್‌ಗೆ ತೀವ್ರ ಪೈಪೋಟಿ ನಡೆದಿದೆ. ಇಲ್ಲಿ ಯಾರಿಗೆ ಟಿಕೆಟ್ ಕೊಟ್ಟರೂ ಇನ್ನೊಬ್ಬರು ಅಸಮಾಧಾನಗೊಳ್ಳುವುದು ಖಚಿತ. ಈಗಾಗಲೇ ಇಬ್ಬರು ಮುಖಂಡರ ಕಡೆಯವರು ಟಿಕೆಟ್ ತಮಗೆ ಎಂದು ಹೇಳಿಕೊಳ್ಳುತ್ತಿದ್ದಾರೆ. ಪಕ್ಷ ಸಂಘಟನೆ, ಹಣ ಖರ್ಚು ಮಾಡಲು ನಾನು ಬೇಕು, ಅಧಿಕಾರ ಅನುಭವಿಸಲು ಇನ್ನೊಬ್ಬರು ಬೇಕಾ, ಕಳೆದ 20-25 ವರ್ಷಗಳಿಂದ ಅಧಿಕಾರ ಅನುಭವಿಸದೆಯೇ ಪಕ್ಷ ಸಂಘಟನೆಯಲ್ಲಿ ತೊಡಗಿದ್ದೇನೆ. ನನಗೂ ಅವಕಾಶ ಕೊಡಲಿ, ನಾನೇನು ರಾಜಕೀಯ ಸನ್ಯಾಸಿಯೇ ಎಂದು ಬಿಜೆಪಿ ಮುಖಂಡರೊಬ್ಬರು ಪ್ರಶ್ನಿಸಿದ್ದಾರೆ.

ಪಕ್ಷದಲ್ಲಿ ಇಬ್ಬರು ಮುಖಂಡರು ಟಿಕೆಟ್ ವಿಚಾರದಲ್ಲಿ ತೀವ್ರ ಪೈಪೋಟಿಗಿಳಿದಿದ್ದು, ಒಬ್ಬರಿಗೆ ಟಿಕೆಟ್ ನೀಡಿ ಇನ್ನೊಬ್ಬರನ್ನು ಸಂತೈಸುವ ಕಾರ್ಯಕ್ಕೆ ಬಿಜೆಪಿ ಮುಂದಾಗಲಿದೆ. ಚುನಾವಣೆಯಲ್ಲಿ ಡ್ಯಾಮೇಜ್‌ ಮಾಡುವ ರೀತಿಯಲ್ಲಿ ಅಸಮಾಧಾನ ಸೃಷ್ಟಿ ಸಾಧ್ಯತೆ ಏರ್ಪಟ್ಟರೆ, ಬಿಜೆಪಿ ಇಬ್ಬರನ್ನು ಬದಿಗೆ ಸರಿಸಿ ಹೊಸ ಮುಖಕ್ಕೆ ಅವಕಾಶ ನೀಡುವ ಸಾಧ್ಯತೆ ತಳ್ಳಿ ಹಾಕುವಂತಿಲ್ಲ. ಸಂಘದ ಅನಿಸಿಕೆಯಂತೆ ಟಿಕೆಟ್ ಶಿಫಾರಸು ಪಟ್ಟಿಯಲ್ಲಿ ಎಸ್‌.ಐ.ಚಿಕ್ಕನಗೌಡ್ರ, ಎಂ.ಆರ್‌. ಪಾಟೀಲ್ ಜತೆಗೆ ಮೂರನೇ ವ್ಯಕ್ತಿಯಾಗಿ ಯುವ ಮುಖಂಡರೊಬ್ಬರ ಹೆಸರು ರವಾನೆ ಚಿಂತನೆ ನಡೆದಿದೆ.

ಕುಂದಗೋಳ ವಿಧಾನಸಭೆ ಉಪ ಚುನಾವಣೆಗೆ ಪಕ್ಷದಿಂದ 18 ಆಕಾಂಕ್ಷಿಗಳು ಅರ್ಜಿ ಸಲ್ಲಿಸಿದ್ದಾರೆ. ಪಕ್ಷದ ನಿಯಮ ಪ್ರಕಾರ ಅರ್ಜಿ ಸ್ವೀಕರಿಸಲಾಗಿದೆ. ಏ.25ರಂದು ಬೆಂಗಳೂರಿನಲ್ಲಿ ನಡೆಯುವ ಸಭೆಯಲ್ಲಿ ಮಹತ್ವದ ಚರ್ಚೆ ನಡೆದು, ನಾಳೆ ಇಲ್ಲವೆ ನಾಡಿದ್ದು ಅಭ್ಯರ್ಥಿ ಅಂತಿಮಗೊಳ್ಳುವ ಸಾಧ್ಯತೆ ಇದೆ. •ಅನಿಲಕುಮಾರ ಪಾಟೀಲ,
ಕಾಂಗ್ರೆಸ್‌ ಗ್ರಾಮೀಣ ಜಿಲ್ಲಾಧ್ಯಕ್ಷ

•ಅಮರೇಗೌಡ ಗೋನವಾರ

Advertisement

Udayavani is now on Telegram. Click here to join our channel and stay updated with the latest news.

Next