ಬಾಳೆಹೊನ್ನೂರು: ಬಿ. ಕಣಬೂರು ಗ್ರಾಮದ ಸ.ನಂ.213ರಲ್ಲಿ ಒತ್ತುವರಿ ಯಾಗಿದ್ದ 2.20ಹಾಗೂ 3.20 ಎಕರೆ ಜಮೀನನ್ನು ತೆರವುಗೊಳಿಸಲಾಗಿದೆ ಎಂದು ನಾಡಕಚೇರಿ ಅದಿ ಕಾರಿಗಳು ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರಕಾರದ ಆದೇಶದಂತೆ ಎನ್.ಆರ್. ಪುರ ತಹಶೀಲ್ದಾರ್ ಅವರು ತೆರವುಗೊಳಿಸುವಂತೆ ಸೂಚಿಸಿದ ಹಿನ್ನೆಲೆಯಲ್ಲಿ ಜಮೀನನ್ನು ತೆರವುಗೊಳಿಸಿ ಅತಿಕ್ರಮ ನಿಷೇಧ ಎಂದು ನಾಮಫಲಕ ಅಳವಡಿಸಲಾಗಿದೆ ಎಂದು ತಿಳಿಸಿದರು.
ಕಂದಾಯ ಇಲಾಖೆ ಅಧಿಕಾರಿಗಳಿಗೆ ಮೀಸಲಿಟ್ಟ 4ಎಕರೆ ಜಮೀನು ಒತ್ತುವರಿ ಬಗ್ಗೆ ಪ್ರಶ್ನಿಸಿದಾಗ ಉತ್ತರಿಸಿದ ಅವರು, ಸರ್ವೆ ನಂ.213ರ ಸಂಪೂರ್ಣ ಸರ್ವೆ ಮಾಡಿ ಸ್ಕೆಚ್ ತಯಾರಿಸಿ ಸರಕಾರಕ್ಕೆ ಸಲ್ಲಿಸಲಾಗಿದೆ. ಸರಕಾರದ ಸೂಚನೆ ಬಂದಾಕ್ಷಣ ಮಂಜೂರಾದ ನಾಲ್ಕು ಎಕರೆ ಜಮೀನನ್ನು ವಶಪಡಿಸಿಕೊಳ್ಳಲಾಗುವುದೆಂದು ತಿಳಿಸಿದರು.
ಒತ್ತುವರಿ ಜಾಗವನ್ನು ತೆರವುಗೊಳಿಸುವಲ್ಲಿ ತಾಲೂಕು ಆಡಳಿತ ವಿಫಲವಾಗಿದೆ ಎಂದು ನಾಗರಿಕ ವೇದಿಕೆ ಆರೋಪಿಸಿದೆ. ಬಾಳೆಹೊನ್ನೂರು ಹೋಬಳಿಯಲ್ಲಿ 38420 ಎಕರೆ ಕಂದಾಯ ಭೂಮಿಯಿದ್ದು ಈ ಪೈಕಿ 17269 ಎಕರೆ ಒತ್ತುವರಿಯಾಗಿದೆ ಎಂದು ಈ ಹಿಂದೆ ಮಾಹಿತಿ ಹಕ್ಕಿನಲ್ಲಿ ನೀಡಿದ್ದಾರೆ. 2011ರಲ್ಲಿ ಅಂದಿನ ಜಿಲ್ಲಾಧಿಕಾರಿಗಳು ಎಲ್ಲಾ ತಹಶೀಲ್ದಾರ್‌ರಿಗೆ ಪತ್ರ ಬರೆದು ಒತ್ತುವರಿ ತೆರವುಗೊಳಿಸುವ ಬಗ್ಗೆ ವರದಿ ನೀಡುವಂತೆ ಸೂಚಿಸಿದ್ದರು.
2010ರಲ್ಲಿ ಕಂದಾಯ ಇಲಾಖೆ ಪ್ರದಾನ ಕಾರ್ಯದರ್ಶಿಯವರ ಪತ್ರದ ಅನ್ವಯ ಜಿಲ್ಲೆಯ ಎಲ್ಲಾ ಅಧಿ ಕಾರಿಗಳಿಗೂ ಪತ್ರ ಬರೆಯಲಾಗಿದೆ. ಆದರೆ ರಾಜಕೀಯ ಒತ್ತಡದಿಂದ ಒತ್ತುವರಿ ತೆರವುಗೊಳಿಸುವಲ್ಲಿ ವಿಫಲರಾಗಿದ್ದಾರೆ. ನಮೂನೆ 50, 53ರಲ್ಲಿ ನೈಜ ಫಲಾನುಭವಿಗಳಿಗೆ ಹಕ್ಕು ಪತ್ರ ವಿತರಿಸಲಿ. ಈ ಮೊದಲೇ ಜಮೀನು ಉಳ್ಳವರಿಗೆ ಬೇರೆ ಬೇರೆ ಹೋಬಳಿಯಲ್ಲಿ ನಮೂನೆ 53ರಲ್ಲಿ ಹಕ್ಕು ಪತ್ರ ವಿತರಿಸಲಾಗಿದೆ. ಈ ಬಗ್ಗೆ ತನಿಖೆ ನಡೆಸಬೇಕಿದೆ. ಪ್ರತೀ ಗ್ರಾಮ ಸಭೆಗಳಲ್ಲಿ ನಿವೇಶನ ರಹಿತರಿಗೆ ನಿವೇಶನ ನೀಡಲು ಭೂಮಿ ಇಲ್ಲವೆಂದು ಜನ ಪ್ರತಿನಿಧಿಗಳು ಹಾಗೂ ಅಧಿ ಕಾರಿಗಳು ಹೇಳುತ್ತಾ ಬಂದಿದ್ದಾರೆ. ಹೆಚ್ಚಿನ ಕಂದಾಯ ಭೂಮಿ ಒತ್ತುವರಿ ಮಾಡಿದವರ ಒತ್ತುವರಿ ತೆರವುಗೊಳಿಸಿ ನಿವೇಶನ ರಹಿತರಿಗೆ ನಿವೇಶನ ನೀಡಬಹುದು. ಒತ್ತುವರಿ ತೆರವುಗೊಳಿಸುವಲ್ಲಿ ತಾರತಮ್ಯ ನೀತಿಯನ್ನು ಅನುಸರಿಸಬಾರದೆಂದು ನಾಗರಿಕ ವೇದಿಕೆ ಒತ್ತಾಯಿಸಿದೆ.