ಶಿವಮೊಗ್ಗ: ಲೋಕಸಭಾ ಚುನಾವಣೆ ನಂತರ ಮಂಡ್ಯ ಅಭ್ಯರ್ಥಿಯನ್ನು ವಿದೇಶದಲ್ಲಿ ಹುಡುಕುವಂತೆ ಶಿವಮೊಗ್ಗ ಮೈತ್ರಿ ಅಭ್ಯರ್ಥಿಯನ್ನು ಕೂಡ ವಿದೇಶದಲ್ಲಿ ಹುಡುಕಬೇಕಾಗುತ್ತದೆ ಎಂದು ಶಾಸಕ ಕುಮಾರ್ ಬಂಗಾರಪ್ಪ ಹೇಳಿದರು.
ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಜ್ಞಾವಂತ ಮತದಾರರು ಇರುವ ಜಿಲ್ಲೆ ಶಿವಮೊಗ್ಗ. ಇಲ್ಲಿ ನಿಮ್ಮ ಸುಳ್ಳು, ಬಣ್ಣ ಬಣ್ಣದ ರಾಜಕೀಯ ಹೇಳಿಕೆಗಳಿಗೆ ಜನರು ಮೋಸ ಹೋಗುವುದಿಲ್ಲ ಬದಲಿಗೆ ತಕ್ಕ ಪಾಠ ಕಲಿಸಲಿದ್ದಾರೆ ಎಂದರು.
ಅತಿವೃಷ್ಟಿ, ಅನಾವೃಷ್ಟಿ, ಕೆಎಫ್‌ಡಿ ಸೇರಿ ಜಿಲ್ಲೆಯ ಸಮಸ್ಯೆಗಳ ಬಗ್ಗೆ ಗಮನಕ್ಕೆ ತಂದಾಗ ಬಾರದ ಎಚ್.ಡಿ. ಕುಮಾರಸ್ವಾಮಿ ಫಾರಿನ್ ಅಭ್ಯರ್ಥಿ ಗೆಲ್ಲಿಸಲು ಶಿವಮೊಗ್ಗದಲ್ಲಿ ಠಿಕಾಣಿ ಹೂಡಿದ್ದಾರೆ. ಇವರಿಗೆ ಅಧಿಕಾರ ಮುಖ್ಯ. ಜನರ ಸಂಕಷ್ಟ ಪರಿಹರಿಸುವುದು ಮುಖ್ಯವಲ್ಲ ಎಂದು ದೂರಿದರು. ಮೈತ್ರಿ ಅಭ್ಯರ್ಥಿ ಸಿದ್ಧಪಡಿಸಿಕೊಂಡಿರುವ ಕರಪತ್ರದಲ್ಲಿ ನೀರಾವರಿ, ಬಗರ್‌ಹುಕುಂ ಹಕ್ಕು ಪತ್ರ ವಿತರಣೆ, ಸೊರಬ ಕ್ಷೇತ್ರದ ಅಭಿವೃದ್ಧಿ ಬಗ್ಗೆ ಸುಳ್ಳಿನ ಕಂತೆ ಹೆಣೆದಿದ್ದಾರೆ. ಬಗರ್‌ಹುಕುಂನಲ್ಲಿ ಏಳು ಸಾವಿರ ಹಕ್ಕುಪತ್ರ ನೀಡಲಾಗಿದೆ ಎಂದು ಕರಪತ್ರ ಹಂಚಿದ್ದಾರೆ. ಆದರೆ ತಹಶೀಲ್ದಾರ್ ಮೂರೂವರೆ ಸಾವಿರ ಹಕ್ಕುಪತ್ರ ಹಂಚಲಾಗಿದೆ ಎಂದಿದ್ದಾರೆ. ಹಾಗಾದರೆ ಏಳು ಸಾವಿರ ಹೇಗೆ ಸಿಕ್ಕಿತು ಎಂದು ಪ್ರಶ್ನಿಸಿದರು. ರಾಜ್ಯದ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಸುಳ್ಳಿನ ಸರದಾರ. ಅವರು ತಮ್ಮ ರಾಜಕೀಯ ಉಳಿವಿಗಾಗಿ ಯಾವ ಸುಳ್ಳನ್ನೂ ಬೇಕಾದರೂ ಹೇಳುತ್ತಾರೆ. ಡಿಕೆಶಿ ಅವರು ಬಿ.ಎಸ್. ಯಡಿಯೂರಪ್ಪ ಒತ್ತಡಕ್ಕೆ ಮಣಿದು ನೀರಾವರಿ ಯೋಜನೆ ಜಾರಿ ಮಾಡಿದ್ದೇವೆ ಎಂದಿದ್ದಾರೆ. ಆದರೆ ಸಿಎಂ ಮಧು ಹೇಳಿದ್ದಕ್ಕಾಗಿಯೇ ಯೋಜನೆ ಜಾರಿ ಮಾಡಿದ್ದೇನೆ ಎನ್ನುತ್ತಾರೆ. ಮಧು ಇಲ್ಲದಿದ್ದರೆ ಏನೂ ಇಲ್ಲ ಎಂಬಂತೆ ಮಾತನಾಡುತ್ತಾರೆ. ಜಿಲ್ಲೆಗೆ ನೀರಾವರಿ ಯೋಜನೆ ತರಲು 7 ತಿಂಗಳಿಂದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ನೇತೃತ್ವದಲ್ಲಿ ಹೋರಾಡುತ್ತಿರುವುದಕ್ಕೆ ಹಲವು ದಾಖಲೆ, ಸಾಕ್ಷಿಗಳಿವೆ ಎಂದ ಅವರು, ಸಿ.ಎಂ.ಕುಮಾರಸ್ವಾಮಿ ಅವರು ಸುಳ್ಳು ಹೇಳಿಕೊಂಡು ಬರುತ್ತಿದ್ದಾರೆ. ಇದಕ್ಕೆ ಮೈತ್ರಿ ಪಕ್ಷದ ಅಭ್ಯರ್ಥಿಯೂ ಸಹ ಧ್ವನಿಗೂಡಿಸುತ್ತಿದ್ದಾರೆ ಎಂದು ಆರೋಪಿಸಿದರು.
ಬಿಜೆಪಿ ದೇಶದಲ್ಲಿ ಸಿಂಗಲ್ ಲಾರ್ಜೆಸ್ಟ್ ಪಾರ್ಟಿ, ದೇಶದಲ್ಲಿ ಬಿಜೆಪಿ ಅಧಿಕಾರದ ಚುಕ್ಕಾಣಿ ಹಿಡಿಯುವ ಮೂಲಕ ನರೇಂದ್ರ ಮೋದಿ ಮತ್ತೂಮ್ಮೆ ಪ್ರಧಾನಿಯಾಗಲಿದ್ದಾರೆ ಎಂದು ತಿಳಿಸಿದರು.
ಗೋಷ್ಠಿಯಲ್ಲಿ ಪ್ರಮುಖರಾದ ಮರಿಸ್ವಾಮಿ, ಎಂ. ರುದ್ರೇಶ್, ಜಿ.ಡಿ. ನಾರಾಯಣಪ್ಪ, ಅಣ್ಣಪ್ಪ, ರತ್ನಾಕರ್ ಶೆಣೈ ಮತ್ತಿತರರು ಇದ್ದರು.
ಯಡಿಯೂರಪ್ಪನವರ ನೇತೃತ್ವದಲ್ಲಿ ಶಿವಮೊಗ್ಗದಲ್ಲಿ ಅನೇಕ ಅಭಿವೃದ್ಧಿ ಕಾರ್ಯಗಳು ನಡೆದಿವೆ. ದೇಶದಲ್ಲಿ ನರೇಂದ್ರ ಮೋದಿ ಅವರು ಮಾಡಿರುವ ಅಭಿವೃದ್ಧಿ ಕಾರ್ಯ, ದೇಶ ರಕ್ಷಣೆಗೆ ತೆಗೆದುಕೊಂಡಿರುವ ದಿಟ್ಟ ನಿರ್ಧಾರ ಇಂದು ಜಿಲ್ಲೆಯ ಜನರ ಮನದಲ್ಲಿದೆ. ಕೇಂದ್ರ ಸರ್ಕಾರದ ಉತ್ತಮ ಆಡಳಿತದಿಂದ ಬಿಜೆಪಿ ಅಭ್ಯರ್ಥಿ ಗೆಲುವು ಸಾಧಿಸಲಿದ್ದಾರೆ ಎಂದ ಅವರು, ಸೊರಬ ಕ್ಷೇತ್ರದಲ್ಲಿ ಪ್ರತಿ ಬೂತ್‌ನಲ್ಲಿ ಬಿಜೆಪಿ ಅಭ್ಯರ್ಥಿಗೆ ಹೆಚ್ಚಿನ ಮತ ಬರಲಿದೆ.
• ಕುಮಾರ್ ಬಂಗಾರಪ್ಪ, ಶಾಸಕ