ಕುಂದಾಪುರ: ರಾಜಕಾರಣಿಗಳ ಪಕ್ಷಾಂತರ ಪರ್ವ ಅವರು ಗಳಿಸುವ ಮತಗಳ ಮೇಲೂ ಪರಿಣಾಮ ಬೀರಬಲ್ಲುದೇ ಎನ್ನುವುದು ಪ್ರತೀ ಚುನಾವಣಾ ಸಂದರ್ಭದಲ್ಲಿ ಚರ್ಚೆಗೆ ಬರುತ್ತದೆ. ಈ ಬಾರಿ ಲೋಕಸಭೆಗೆ ಸ್ಪರ್ಧಿಸಿದವರಲ್ಲಿ ಉಡುಪಿಯ ಪ್ರಮೋದ್ ಮಧ್ವರಾಜ್ ಕಾಂಗ್ರೆಸಿಗರು, ಆದರೆ ಜೆಡಿಎಸ್ ಚಿಹ್ನೆಯಿಂದ ಸ್ಪರ್ಧಿಸುತ್ತಿದ್ದಾರೆ. ಲೋಕಸಭಾ ಅಭ್ಯರ್ಥಿಗಳಿಗೆ ಮತ ಯಾಚಿಸುವ ಶಾಸಕ, ಮಾಜಿ ಶಾಸಕರು ಕೂಡ ಬೇರೆ ಬೇರೆ ಪಕ್ಷದಲ್ಲಿ ಇದ್ದು ಬಂದವರು. ಹಾಗಾಗಿ ಪಕ್ಷಾಂತರ, ಇತರ ಪಕ್ಷಗಳನ್ನು ದೂರುವ ಸಂದರ್ಭಗಳನ್ನು ತಾವಾಗಿ ದೂರ ಮಾಡಿಕೊಂಡಿದ್ದಾರೆ.
ಕುಂದಾಪುರದಲ್ಲಿ ಹಾಲಾಡಿ ಶ್ರೀನಿವಾಸ ಶೆಟ್ಟಿ ಬಿಜೆಪಿಯಲ್ಲಿದ್ದು, ರಾಜೀನಾಮೆ ನೀಡಿ ಸ್ವತಂತ್ರರಾಗಿ ಸ್ಪರ್ಧಿಸಿ ಅಭೂತಪೂರ್ವ ಜಯ ಗಳಿಸಿ ಮತ್ತೆ ಬಿಜೆಪಿಗೆ ಸೇರಿ ಅಲ್ಲೂ ದಾಖಲೆಯ ಮತಗಳನ್ನು ಪಡೆದು ಶಾಸಕರಾದವರು. ಐದು ಬಾರಿ ಆಯ್ಕೆಯಾದ ಇವರಿಗೆ ರಾಜ್ಯದಲ್ಲಿ ಅತಿ ಹೆಚ್ಚು ಮತ ಪಡೆದವರ ಪೈಕಿ ಐದನೇ ಸ್ಥಾನ. ಲೋಕಸಭಾ ಟಿಕೆಟ್‌ಗೆ ಪ್ರಬಲ ಪೈಪೋಟಿ ನೀಡಿದ ಜಯಪ್ರಕಾಶ್ ಹೆಗ್ಡೆ ಅವರು ಜನತಾದಳ ಮೂಲಕ ರಾಜಕೀಯ ರಂಗ ಪ್ರವೇಶಿಸಿ ಸಚಿವರಾಗಿ, ಸ್ವತಂತ್ರ ಅಭ್ಯರ್ಥಿಯಾಗಿ ಶಾಸಕರಾಗಿ, ಕಾಂಗ್ರೆಸ್‌ನಲ್ಲಿ ಸಂಸದರಾಗಿ ಈಗ ಬಿಜೆಪಿಯಲ್ಲಿದ್ದಾರೆ.
ಬೆಳ್ತಂಗಡಿ ಕ್ಷೇತ್ರದಲ್ಲಿ ಮಾಜಿ ಶಾಸಕ ಕೆ. ವಸಂತ ಬಂಗೇರ ಅವರು ಮೊದಲ ಬಾರಿ ಬಿಜೆಪಿಯಲ್ಲಿ ಶಾಸಕರಾಗಿ, ಜನತಾದಳದಲ್ಲಿ ಶಾಸಕರಾಗಿ, ಮುಖ್ಯಸಚೇತಕರಾಗಿ, ಕಾಂಗ್ರೆಸ್‌ನಲ್ಲಿ ಶಾಸಕರಾಗಿದ್ದವರು. ಅಲ್ಲಿನ ಮಾಜಿ ಸಚಿವ ಕೆ. ಗಂಗಾಧರ ಗೌಡ ಕಾಂಗ್ರೆಸ್‌ನಲ್ಲಿ ಸಚಿವರಾಗಿ, ಜೆಡಿಎಸ್‌ನಲ್ಲಿ ಸ್ಪರ್ಧಿಸಿ, ಬಿಜೆಪಿಯಲ್ಲಿದ್ದು ಈಗ ಪುನಃ ಕಾಂಗ್ರೆಸ್ ಸೇರಿದ್ದಾರೆ. ಪುತ್ತೂರಿನಲ್ಲಿ ಮಾಜಿ ಶಾಸಕಿ ಶಕುಂತಳಾ ಶೆಟ್ಟಿ ಬಿಜೆಪಿಯಲ್ಲಿ ಶಾಸಕರಾಗಿದ್ದು, ಪಕ್ಷೇತರರಾಗಿ ಸ್ಪರ್ಧಿಸಿ ಕಾಂಗ್ರೆಸ್‌ನಲ್ಲಿ ಶಾಸಕಿಯಾಗಿದ್ದರು. ಬೈಂದೂರು ಮಾಜಿ ಶಾಸಕ ಕೆ. ಗೋಪಾಲ ಪೂಜಾರಿ ಅವರದೂ ಇಂಥದೇ ಕತೆ. ಬಂಗಾರಪ್ಪನವರ ಕೆಸಿಪಿಯಲ್ಲಿ ಸ್ಪರ್ಧಿಸಿ ಅನಂತರ ಕಾಂಗ್ರೆಸ್‌ನಲ್ಲಿ ಶಾಸಕರಾಗಿದ್ದವರು.
ವಿಧಾನಸಭೆ ಚುನಾವಣೆ ಸಂದರ್ಭ ಜೆಡಿಎಸ್ ವಿರುದ್ಧ ಮತ ಚಲಾಯಿಸಲು ಹೇಳಿದ ನಾಯಕರೇ ಈಗ ಜೆಡಿಎಸ್ ಪರವಾಗಿ ಮತ ಕೇಳಬೇಕಾದ ಸಂದರ್ಭ ಉಡುಪಿ ಕ್ಷೇತ್ರದಲ್ಲಿ ಉಂಟಾಗಿದ್ದರೆ ಜೆಡಿಎಸ್‌ನವರು ಕಾಂಗ್ರೆಸ್ ಪರವಾಗಿ ಮತ ಕೇಳಬೇಕಾದ ಸ್ಥಿತಿ ದಕ್ಷಿಣ ಕನ್ನಡದಲ್ಲಿದೆ. ನಾಯಕರಂತೂ ವೇದಿಕೆಯಲ್ಲಿ ಭಾಷಣ ಮಾಡಿ ತೆರಳುತ್ತಾರೆ. ಮತ ಕೇಳುವ ಕಾರ್ಯಕರ್ತರು ಕೊನೆಗೂ ಹೈರಾಣು.
ಲಕ್ಷ್ಮೀ ಮಚ್ಚಿನ