Advertisement
ಕೆಆರ್‌ಎಸ್ ಅಣೆಕಟ್ಟು ಸುರಕ್ಷತೆ ದೃಷ್ಟಿಯಿಂದ ಜಲಾಶಯದ ಸುತ್ತಲಿನ 15 ರಿಂದ 20 ಕಿ.ಮೀ. ವ್ಯಾಪ್ತಿಯೊಳಗೆ ಗಣಿಗಾರಿಕೆ ನಿಷೇಧಿಸುವಂತೆ ಕೃಷ್ಣರಾಜಸಾಗರ ಸಮೀಪವಿರುವ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ 25 ಸೆಪ್ಟೆಂಬರ್ 2018ರಂದು ವರದಿ ನೀಡಿತ್ತು. ಈ ವರದಿಯನ್ನು ಸಂಪೂರ್ಣವಾಗಿ ಕಡೆಗಣಿಸಿರುವ ಹಿರಿಯ ಭೂ ವಿಜ್ಞಾನಿ ಕೆ.ಎಂ.ನಾಗಭೂಷಣ್, 24 ಏಪ್ರಿಲ್ 2009ರಂದು ಕೋಲಾರದ ಕೆಜಿಎಫ್ನ ನ್ಯಾಷನಲ್ ಇನ್ಸಿಟಿಟ್ಯೂಟ್ ಆಫ್ ರಾಕ್ ಮೆಕಾನಿಕ್ಸ್ ನೀಡಿರುವ ವರದಿಯನ್ವಯ ಕೆಆರ್‌ಎಸ್ ಅಣೆಕಟ್ಟೆಗೆ ಬೇಬಿ ಬೆಟ್ಟದ ಕಾವಲ್ನ ಸರ್ವೆ ನಂ.1ರಲ್ಲಿ ನಡೆಯುತ್ತಿರುವ ಕಲ್ಲು ಗಣಿಗಾರಿಕೆಯಿಂದ ತೊಂದರೆ ಇಲ್ಲ ಎಂದು ಹೇಳಿರುವುದನ್ನು ಉಲ್ಲೇಖೀಸಿ ಸರ್ಕಾರಕ್ಕೆ ಪತ್ರ ಬರೆದಿರುವುದಾಗಿ ತಿಳಿಸಿದ್ದಾರೆ.
Related Articles
Advertisement
17 ಜನವರಿ 2011ರಂದು ಮೈಸೂರಿನ ಕಾವೇರಿ ನೀರಾವರಿ ಯೋಜನೆ ಅಧ್ಯಕ್ಷರು ನಡೆಸಿದ ಸಭೆಯ ನಿರ್ಣಯದಂತೆ ಕೆಆರ್‌ಎಸ್ ಅಣೆಕಟ್ಟೆಯ ನಾರ್ಥ್ಬ್ಯಾಂಕ್‌ನಿಂದ 5 ಕಿ.ಮೀ. ವ್ಯಾಪ್ತಿಯಲ್ಲಿ ಈ ಹಿಂದೆ ಮಂಜೂರು ಮಾಡಿದ್ದ 8 ಗಣಿ ಗುತ್ತಿಗೆಗಳನ್ನು ರದ್ದುಪಡಿಸಿ ಗಣಿಗಾರಿಕೆ ಸ್ಥಗಿತಗೊಳಿಸಿದೆ. ಕೆಆರ್‌ಎಸ್ ಅಣೆಕಟ್ಟೆಯ ಸುತ್ತಮುತ್ತಲ ಪ್ರದೇಶಗಳನ್ನು ಪೊಲೀಸ್ ಹಾಗೂ ಕಂದಾಯ ಅಧಿಕಾರಿಗಳೊಂದಿಗೆ ಪರಿಶೀಲಿಸಿ ಗಣಿಗಾರಿಕೆ ಸ್ಥಗಿತಗೊಳಿಸಿರುವುದಾಗಿ ತಿಳಿಸಿದ್ದಾರೆ.
30-35 ವರ್ಷದಿಂದ ಗಣಿಗಾರಿಕೆ: ಬೇಬಿಬೆಟ್ಟದ ಕಾವಲು ಗ್ರಾಮದ ಸರ್ವೆ ನಂ.1 ಪ್ರದೇಶ ಕಲ್ಲುಗಳಿಂದ ಆವೃತವಾಗಿದೆ. ಇಲ್ಲಿ 30-35 ವರ್ಷಗಳಿಂದ ಕಲ್ಲು ಗಣಿಗಾರಿಕೆ ನಡೆಯುತ್ತಿದೆ. ಕೆಆರ್‌ಎಸ್ ಅಣೆಕಟ್ಟು, ಶ್ರೀರಂಗಪಟ್ಟಣ ಕೋಟೆ, ಪುರಾಣ ಪ್ರಸಿದ್ಧ ದೇವಾಲಯಗಳು, ಹಳೆಯ ಕಟ್ಟಡಗಳು, ಐತಿಹಾಸಿಕ ಸ್ಮಾರಕಗಳು ಬೇಬಿ ಬೆಟ್ಟ ಹಾಗೂ ಸುತ್ತಲಿನ ಪ್ರದೇಶಗಳಿಂದ ತೆಗೆದ ಕಲ್ಲುಗಳಿಂದ ನಿರ್ಮಾಣಗೊಂಡಿವೆ.
ಬೇಬಿ ಬೆಟ್ಟದ ಸರ್ವೆ ನಂ.1 ಪ್ರದೇಶ, ಚಿಕ್ಕಮರಳಿ, ಹಿರೇಮರಳಿ, ಬನ್ನಂಗಾಡಿ, ಕನ್ನಂಬಾಡಿ, ಬಸ್ತಿಹಳ್ಳಿ, ಬಿಂಡಹಳ್ಳಿ, ಕೆ.ಮಂಚನಹಳ್ಳಿ, ಶಂಭೂನಹಳ್ಳಿ, ಗುಮ್ಮನಹಳ್ಳಿ, ಹಾರೋಹಳ್ಳಿ, ಹಳೇಬೀಡು, ಕಂಚನಹಳ್ಳಿ, ವೀರಶೆಟ್ಟಿಪುರ, ಸಂಗಾಪುರ, ಹೊನಗಾನಹಳ್ಳಿ, ಚಿಕ್ಕಬ್ಯಾಡರಹಳ್ಳಿ, ಶಿಂಗಾಪುರ, ಮೊಳೆಸಂದ್ರ, ವಡ್ಡರಹಳ್ಳಿ, ಡಿಂಕಾ, ಬಿಜ್ಜನಹಳ್ಳಿ, ಬಳಘಟ್ಟ, ನುಗ್ಗೇಹಳ್ಳಿ, ಬೋಳೇನಹಳ್ಳಿ, ವದೇ ಸಮುದ್ರ, ಕೆ.ಮಲ್ಲೇನಹಳ್ಳಿ, ಗುಜಗೋನಹಳ್ಳಿ, ನರಹಳ್ಳಿ, ಕಾಮನಾಯಕನಹಳ್ಳಿ, ಚಿಕ್ಕಯಾರಹಳ್ಳಿ, ಅಮಾನಹಳ್ಳಿ, ವಳಲೆಕಟ್ಟೆಕೊಪ್ಪಲು, ಬೇಬಿ ಮತ್ತು ಬೇಬಿ ಬೆಟ್ಟದ ಕಾವಲು ಗ್ರಾಮಗಳ ಇಸವಿಯಲ್ಲಿ ಇಟ್ಟು 256 ಕಲ್ಲು ಗಣಿ ಗುತ್ತಿಗೆಗಳನ್ನು ಕಂದಾಯ ಇಲಾಖೆಯಿಂದ ನಿರಾಪೇಕ್ಷಣಾ ಪತ್ರ ಪಡೆದು 1985ರಿಂದ ನಿಯಮಾನುಸಾರ ಗಣಿಗಾರಿಕೆ ನಡೆಸಲಾಗುತ್ತಿದೆ.
ಬನ್ನಂಗಾಡಿ ಪ್ರದೇಶವು ಕೃಷ್ಣರಾಜಸಾಗರ ಜಲಾಶಯ ಅಣೆಕಟ್ಟೆಯಿಂದ ಸುಮಾರು ಏಳೆಂಟು ಕಿ.ಮೀ. ದೂರವಿರುತ್ತದೆ. ಈ ಪ್ರದೇಶವು ಗ್ರಾನಿಟಿಕ್ ನೈಸ್ ಶಿಲೆಯಿಂದ ಕೂಡಿದೆ. ಉತ್ತರ-ದಕ್ಷಿಣವಾಗಿ ಹಬ್ಬಿದೆ. ಕೆಆರ್‌ಎಸ್ ಅಣೆಕಟ್ಟು ನಿರ್ಮಿಸಲು ಬಂದಂತಹ ಕಾರ್ಮಿಕರು ಪ್ರಸ್ತುತ ಕಾವೇರಿ ಪುರ, ರಾಗಿಮುದ್ದನಹಳ್ಳಿ ಹೊಸ ಬಡಾವಣೆ ಹಾಗೂ ಸುತ್ತಲಿನ ಪ್ರದೇಶಗಳಲ್ಲಿ ವಾಸಿಸುತ್ತಿದ್ದು, ವೃತ್ತಿಯಿಂದ ಕಲ್ಲು ಕುಟಿಕರಾಗಿದ್ದು, ಈ ಪ್ರದೇಶಗಳಲ್ಲಿರುವ ಕಲ್ಲಿನ ನಿಕ್ಷೇಪಗಳ ಮೇಲೆ ಅವಲಂಬಿತರಾಗಿ ರುತ್ತಾರೆ ಎಂದು ವರದಿಯಲ್ಲಿ ತಿಳಿಸಿದ್ದಾರೆ.