ವಿಜಯಪುರ: ಜಿಪಂ ಅಧ್ಯಕ್ಷೆ ನೀಲಮ್ಮ ಮೇಟಿ ಅವರ ಮನೆಯಲ್ಲಿ ಕಳ್ಳತನ ಮಾಡಿ ನಗದು, ಚಿನ್ನಾಭರಣ, ಬೆಲೆ ಬಾಳುವ ಸೀರೆಗಳನ್ನು ಕದ್ದಿರುವ ಕಳ್ಳರು, ಮನೆ ಮುಂದೆ ನಿಲ್ಲಿಸಿದ್ದ ಫಾರ್ಚೂನರ್ ಕಾರನ್ನೂ ಕದ್ದು ಪರಾರಿಯಾಗಿರುವ ಘಟನೆ ಗುರುವಾರ ಬೆಳಗಿನಜಾವ ನಡೆದಿದೆ.
ನೀಲಮ್ಮ ಅವರು ವಾಸವಿದ್ದ ನಗರದ ಕನಕದಾಸ ಬಡಾವಣೆ ಬಾಡಿಗೆ ಮನೆ ಹಿಂಬಾಗಿಲು ಮುರಿದು ಒಳ ಪ್ರವೇಶಿಸಿರುವ ಕಳ್ಳರು ಮಲಗುವ ಕೋಣೆಯಲ್ಲಿದ್ದ ಸುಮಾರು 300 ಗ್ರಾಂ ಚಿನ್ನಾಭರಣ, 4 ಲಕ್ಷ ರೂ. ನಗದು ಹಾಗೂ ಬೆಲೆ ಬಾಳುವ ಹತ್ತಾರು ರೇಷ್ಮೆ ಸೀರೆಗಳನ್ನು ಕಳ್ಳತನ ಮಾಡಿದ್ದಾರೆ. ಇದೇ ವೇಳೆ ಕಳ್ಳರಿಗೆ ಫಾರ್ಚೂನರ್ ಕಾರಿನ ಬೀಗ ದೊರಕಿದ್ದು, ಅದನ್ನು ಬಳಸಿಕೊಂಡು ಮನೆ ಮುಂದಿದ್ದ ನೀಲಮ್ಮ ಅವರ
ಕಾರಿನಲ್ಲೇ ಪರಾರಿಯಾಗಿದ್ದಾರೆ.ಪಕ್ಷದ ಹೈಕಮಾಂಡ್ ಸೂಚನೆ ಮೇರೆಗೆ ಜಿಪಂ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಲು ಬೆಂಗಳೂರಿಗೆ ತೆರಳಿದ್ದರು. ಕಳೆದ ಎರಡು ದಿನಗಳ ಹಿಂದೆಯೆ ಗೋವಾಕ್ಕೆ ಹೋಗಿದ್ದ ನೀಲಮ್ಮ, ಅಲ್ಲಿಂದಲೇ ನೇರವಾಗಿ ಬೆಂಗಳೂರಿಗೆ ತೆರಳಿದ್ದರು.
ಹೀಗಾಗಿ ಮನೆಯಲ್ಲಿ ಯಾರೂ ಇಲ್ಲದಿರುವುದನ್ನು ಮನವರಕೆ ಮಾಡಿಕೊಂಡು ಕಳ್ಳರು ಈ ಕೃತ್ಯ ಎಸಗಿರುವ ಶಂಕೆ ವ್ಯಕ್ತಾಗಿದೆ. ಗುರುವಾರ ನಸುಕಿನಲ್ಲಿ ನೀಲಮ್ಮ ಮನೆಗೆ ಬಂದಾಗಲೇ ಕಳ್ಳತನ ನಡೆದಿರುವುದು ಪತ್ತೆಯಾಗಿದೆ. ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದು, ಬೆರಳಚ್ಚು ತಜ್ಞರು ಹಾಗೂ ಶ್ವಾನದಳ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಎಸ್‌ಪಿ ಪ್ರಕಾಶ ನಿಕ್ಕಂ ಅವರು ಸ್ಥಳಕ್ಕೆ ಭೇಟಿ ತನಿಖೆಗೆ ಮಾರ್ಗದರ್ಶನ ನೀಡಿದ್ದಾರೆ. ಈ ಕುರಿತು ಜಲನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.