Advertisement

ಆಕಾಂಕ್ಷಿಗಳ ಕನಸಿಗೆ ಮೂಡಿದ ರೆಕ್ಕೆ ಪುಕ್ಕ

08:43 PM Apr 02, 2021 | Team Udayavani |

ಶಶಿಕಾಂತ ಬಂಬುಳಗೆ

Advertisement

ಬೀದರ: ಬಹುನಿರೀಕ್ಷಿತ ಬೀದರ ಜಿಪಂ ಪ್ರಾದೇಶಿಕ ಚುನಾವಣಾ ಕ್ಷೇತ್ರಗಳ ವಿಂಗಡಣೆ ಪಟ್ಟಿ ರಾಜ್ಯ ಚುನಾವಣಾ ಆಯೋಗ ಪ್ರಕಟಿಸಿದೆ. ಇದರೊಂದಿಗೆ ಚುನಾವಣೆ ಸ್ಪರ್ಧೆ ತಯಾರಿಯಲ್ಲಿರುವ ಆಕಾಂಕ್ಷಿಗಳ ಕನಸು ಚಿಗುರೊಡೆದಿದೆ. ಕ್ಷೇತ್ರಗಳ ಪುನರ್‌ ವಿಂಗಡಣೆಯಿಂದ ಹೊಸ ಕ್ಷೇತ್ರಗಳು ಸೃಷ್ಟಿಯಾಗಿದ್ದರೆ, ಕೆಲ ಕ್ಷೇತ್ರಗಳು ಬದಲಾವಣೆಗೊಂಡಿವೆ.

ರಾಜ್ಯದ ವಿಧಾನಸಭೆ ಮತ್ತು ಲೋಕಸಭೆ ಉಪ ಚುನಾವಣೆ ಮುಗಿದ ಬೆನ್ನಲ್ಲೇ ಜಿಪಂ ತಾಪಂಗೆ ಚುನಾವಣೆ ಮುಹೂರ್ತ ಫಿಕ್ಸ್‌ ಆಗುವ ಸಾಧ್ಯತೆ ಇದ್ದು, ಈಗಾಗಲೇ ಚುನಾವಣೆ ಆಯೋಗ ಅಗತ್ಯ ಸಿದ್ಧತೆ ಮಾಡಿಕೊಳ್ಳುತ್ತಿದೆ. ಮೊದಲ ಹಂತವಾಗಿ ಕ್ಷೇತ್ರ ಮರು ವಿಂಗಡಣೆ ಪ್ರಕ್ರಿಯೆ ಮಾ.29ಕ್ಕೆ ಪೂರ್ಣಗೊಳಿಸಿದೆ. ಇದರಿಂದ ಬೀದರ ಜಿಲ್ಲೆಯ ಕ್ಷೇತ್ರಗಳ ಸಂಖ್ಯೆ 34ರಿಂದ 41ಕ್ಕೆ ಹೆಚ್ಚಳವಾಗಿದೆ. ಜಿಪಂ ಕ್ಷೇತ್ರಗಳ ಸ್ಥಾನ ಹೆಚ್ಚುವುದರಿಂದ ಆಡಳಿತ ಇನ್ನಷ್ಟು ವಿಕೇಂದ್ರೀಕರಣಗೊಂಡು, ಅಭಿವೃದ್ಧಿಗೆ ಒತ್ತು ಸಿಗಲು ಸಾಧ್ಯವಾಗಲಿದೆ.

ಗ್ರಾಮೀಣ ಪ್ರದೇಶದ ಜನಸಂಖ್ಯೆ ಆಧಾರದ ಮೇಲೆ ಹಾಗೂ ಕರ್ನಾಟಕ ಗ್ರಾಮ ಸ್ವರಾಜ್‌ ಮತ್ತು ಪಂಚಾಯತ್‌ ರಾಜ್‌ ಅ ಧಿನಿಯಮ 1993ರ ಪ್ರಕರಣ 121 ಮತ್ತು 16ಗಳಿಗೆ ಉಲ್ಲೇಖ (2) ಮತ್ತು (3) ಗಳಂತೆ ಮಾಡಲಾಗಿರುವ ತಿದ್ದುಪಡಿಯನ್ವಯ ಜಿಪಂ ಸದಸ್ಯ ಸ್ಥಾನ ನಿಗದಿಪಡಿಸಲಾಗಿದೆ. ನೂತನ ಕ್ಷೇತ್ರಗಳ ರಚನೆ ವೇಳೆ ಗ್ರಾಮೀಣ ಪ್ರದೇಶ ಮಾತ್ರ ಪರಿಗಣನೆಗೆ ತೆಗೆದುಕೊಳ್ಳಲಾಗಿದೆ. ತಾಲೂಕಿನ ಗ್ರಾಪಂಗಳನ್ನು ಒಡೆಯದೇ, ಪೂರ್ಣ ಗ್ರಾಪಂಗಳನ್ನು ಒಟ್ಟುಗೂಡಿಸಿ ಜಿಪಂ ಕ್ಷೇತ್ರ ರಚನೆ ಮಾಡಲಾಗಿದೆ.

7 ಜಿಪಂ ಕ್ಷೇತ್ರಗಳ ಬದಲಾವಣೆ: ಜಿಲ್ಲೆಯ 5 ತಾಲೂಕುಗಳ 34 ಜಿಪಂ ಕ್ಷೇತ್ರಗಳು ಇದ್ದವು. ಈಗ ತಾಲೂಕುಗಳ ಸಂಖ್ಯೆ 8ಕ್ಕೆ ಏರಿಕೆಯಾಗಿದ್ದು, ಜಿಪಂ ಸ್ಥಾನಗಳೂ 41ಕ್ಕೆ ಹೆಚ್ಚಳವಾಗಿದೆ. ಜಿಲ್ಲೆಯಲ್ಲಿ ಹಳ್ಳಿಖೇಡ(ಬಿ) ಒಂದು ಕ್ಷೇತ್ರ ಕೈಬಿಡಲಾಗಿದ್ದು, ಹೊಸದಾಗಿ 8 ಕ್ಷೇತ್ರಗಳು ಸೇರ್ಪಡೆಯಾಗಿವೆ. ಇನ್ನೂ 7 ಜಿಪಂ ಕ್ಷೇತ್ರಗಳು ಬದಲಾವಣೆ ಕಂಡಿದ್ದು, ಅದರಲ್ಲಿ ಬೀದರ ತಾಲೂಕಿನ ಗಾದಗಿ (ಮಾಳೇಗಾಂವ್‌), ಕಮಲನಗರ ತಾಲೂಕಿನ ಮುಧೋಳ-ಬಿ (ಠಾಣಾಕುಶನೂರ), ಮುರ್ಕಿ (ದಾಬಕಾ-ಸಿ) ಔರಾದ ತಾಲೂಕಿನ ಚಿಕ್ಲಿ-ಜೆ (ವಡಗಾಂವ್‌), ಭಾಲ್ಕಿ ತಾಲೂಕಿನ ಧನ್ನೂರ-ಎಸ್‌ (ಹಲಬರ್ಗಾ), ಸಿದ್ಧೇಶ್ವರ (ಮದಕಟ್ಟಿ) ಮತ್ತು ಬಸವಕಲ್ಯಾಣ ತಾಲೂಕಿನ ಮೋರ್ಖಂಡಿ (ಪರ್ತಾಪುರ) ಸೇರಿವೆ. ತಾಪಂ ಆಡಳಿತ ವ್ಯವಸ್ಥೆ ರದ್ದುಪಡಿಸುವ ಕುರಿತು ಸರ್ಕಾರದ ಮಟ್ಟದಲ್ಲಿ ಚಿಂತನೆ ಹಾಗೂ ಕ್ಷೇತ್ರಗಳ ಸಂಖ್ಯೆ ಕುಸಿತದಿಂದ ರಾಜಕೀಯವಾಗಿ ನೆಲೆ ಕಂಡುಕೊಳ್ಳಲು ಕನಸು ಹೊತ್ತಿದ್ದ ಗ್ರಾಮೀಣ ಯುವ ರಾಜಕಾರಣಿಗಳು ತೀವ್ರ ಬೇಸರಗೊಂಡಿದ್ದರು. ಆದರೆ, ಈಗ ಹೊಸ ಜಿಪಂ ಕ್ಷೇತ್ರಗಳು ಉದಯವಾಗುವುದರಿಂದ ಆಕಾಂಕ್ಷಿಗಳ ಖುಷಿಗೆ ಕಾರಣವಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next