ಮೈಸೂರು: ಮೃಗಾಲಯ ಪುನರಾರಂಭಕ್ಕೆ ಸಿದ್ಧತೆ ಮಾಡಿಕೊಂಡಿದ್ದು, ಜೂನ್ ಮೊದಲ ವಾರದಲ್ಲಿ ಮೈಸೂರು ಮೃಗಾಲಯ ಪುನರಾರಂಭವಾಗಲಿದೆ. ಸೋಮವಾರ ಅಥವಾ ಮಂಗಳವಾರ ಈ ಬಗ್ಗೆ ಅಧಿಕೃತ ಆದೇಶ ಬರಲಿದೆ ಎಂದು ಸಚಿವ ಸೋಮಶೇಖರ್ ಹೇಳಿದರು. ಮೃಗಾಲಯಕ್ಕೆ 4ನೇ ಬಾರಿಗೆ ಭೇಟಿ ನೀಡಿ, ಚೆಕ್ ವಿತರಿಸಿ ಮಾತನಾಡಿ, ಪ್ರಾಣಿಗಳ ಹಾಗೂ ಪ್ರವಾಸಿಗರ ಹಿತದೃಷ್ಟಿಯಿಂದ ಪುನರಾರಂಭ ಮಾಡುತ್ತೇವೆ. ಮೃಗಾಲಯದಿಂದ ಪುನರಾರಂಭಕ್ಕೆ ಮನವಿ ಕೇಳಿ ಬಂದಿತ್ತು.
ಈ ಬಗ್ಗೆ ಜಿಲ್ಲೆಯ ಜನಪ್ರತಿನಿಧಿಗಳ ಅಭಿಪ್ರಾಯಪಡೆದು ಮೃಗಾಲಯ ಪುನರಾರಂಭಕ್ಕೆ ಜಿಲ್ಲಾಡಳಿತ ಸಜ್ಜಾಗಿದೆ. ಎಲ್ಲ ರೀತಿಯ ಸುರಕ್ಷತಾ ಕ್ರಮಗಳನ್ನ ಕೈಗೊಳ್ಳಲಾಗಿದೆ. ಅರಣ್ಯ ಸಚಿವರು ಹಾಗೂ ಸರ್ಕಾರದ ಅನುಮತಿ ಬಾಕಿ ಇದೆ. ಅಧಿಕೃತ ಆದೇಶ ಬಂದ ನಂತರ ಮೃಗಾಲಯ ಪುನರಾರಂಭ ಆಗಲಿದೆ. ಕರ್ನಾಟಕದ ಇತರೆ ಮೃಗಾಲಯದ ಬಗ್ಗೆ ನನಗೆ ಮಾಹಿತಿ ಇಲ್ಲ. ಕೇವಲ ಮೈಸೂರು ಮೃಗಾಲಯ ಪುನರಾರಂಭದ ಬಗ್ಗೆ ಮಾತ್ರ ನಾನು ಮಾತನಾಡುತ್ತಿದ್ದೇನೆ ಎಂದು ಸ್ಪಷ್ಟಪಡಿಸಿದರು.
ಅರಮನೆ ಬಗ್ಗೆ ಮಾಹಿತಿಯಿಲ್ಲ: ಮೈಸೂರು ಅರಮನೆ ಪುನರಾರಂಭದ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಇದನ್ನು ಸಿಎಂ ಸ್ಪಷ್ಟಪಡಿಸಬೇಕು. ಚಾಮುಂಡಿಬೆಟ್ಟ ದೇವಾಲಯ ಪುನರಾರಂಭಕ್ಕೂ ಕೇಂದ್ರದ ಆದೇಶ ಬರಬೇಕು. ಪ್ರವಾಸಿ ತಾಣಗಳನ್ನು ಮತ್ತೆ ಆರಂಭಿಸಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಕೇಂದ್ರ ಸರ್ಕಾರ ಮೇ 31ರಂದು ಹೊಸ ಮಾರ್ಗಸೂಚಿ ಬಿಡುಗಡೆ ಮಾಡಲಿದೆ. ಅದನ್ನು ನೋಡಿಕೊಂಡು ಪುನರಾರಂಭ ಮಾಡಲಿದ್ದೇವೆ. ಎಲ್ಲ ಸ್ಥಳಗಳನ್ನು ಪುನರಾರಂಭ ಮಾಡಿದರೆ ಮತ್ತೆ ಮುಚ್ಚುವುದಿಲ್ಲ. ಮೈಸೂರು ಜಿಲ್ಲಾಡಳಿತ ಎಲ್ಲದಕ್ಕೂ ಸಜ್ಜಾಗಿದೆ ಎಂದರು.
25.16 ಲಕ್ಷ ರೂ.ಚೆಕ್ ಹಸ್ತಾಂತರ: ಸಚಿವರು ಮೃಗಾಲಯಕ್ಕೆ ತಮ್ಮ ಸ್ವಕ್ಷೇತ್ರದ ದಾನಿಗಳಿಂದ ಸಂಗ್ರಹಿಸಿದ 25.16 ಲಕ್ಷ ರೂ. ಚೆಕನ್ನು ಮೃಗಾಲಯದ ನಿರ್ದೇಶಕ ಅಜಿತ್ ಕುಲಕರ್ಣಿಗೆ ಶಾಸಕರು, ಅಧಿಕಾರಿಗಳ ಸಮ್ಮುಖದಲ್ಲಿ ಸ್ತಾಂತರಿಸಿದರು. ಈವರೆಗೆ 4 ಬಾರಿ ಮೃಗಾಲಯಕ್ಕೆ ಚೆಕ್ ಹಸ್ತಾಂತರಿಸಿದ್ದು, ಒಟ್ಟು 2.6 ಕೋಟಿ. ರೂ.ದೇಣಿಗೆಯನ್ನು ಸಚಿವರು ನೀಡಿದಂತಾಗಿದೆ. ಶಾಸಕರಾದ ಎಸ್.ಎ.ರಾಮದಾಸ್, ಎಲ್.ನಾಗೇಂದ್ರ, ಬಿಜೆಪಿ ಮುಖಂಡ ಸಿ.ರಮೇಶ್, ಕರ್ನಾಟಕ ಮೃಗಾಲಯ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಬಿ.ಪಿ.ರವಿ ಇದ್ದರು.