ಬಳ್ಳಾರಿ: ಕಾಮಗಾರಿಗಳ ಶಂಕುಸ್ಥಾಪನೆ ಮತ್ತು ಉದ್ಘಾಟನೆ ವೇಳೆ ನಾಮಫಲಕಗಳಲ್ಲಿ ಶಿಷ್ಟಾಚಾರ ಪಾಲಿಸದ ಅಧಿಕಾರಿಗಳ ವಿರುದ್ಧ ಸದಸ್ಯರು ಗರಂ… ಕ್ರಿಯಾಯೋಜನೆಯಲ್ಲಿ ಬಳ್ಳಾರಿ ತಾಲೂಕನ್ನು ಕೈಬಿಟ್ಟಿದ್ದಕ್ಕೆ, ಪ್ರೌಢಶಾಲೆಗಳಿಗೆ ಕಳಪೆ ಸಾಮಗ್ರಿ ಪೂರೈಸಿದ್ದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಸದಸ್ಯರು… ಒಂದೇ ಸಭೆಯಲ್ಲಿ ಭಾಗವಹಿಸಿದ ಪತಿ-ಪತ್ನಿಯರು…
ನಗರದ ಜಿಪಂ ಸಭಾಂಗಣದಲ್ಲಿ ಸೋಮವಾರ ನಡೆದ ಜಿಪಂ ಸಾಮಾನ್ಯ ಸಭೆಯ ಪ್ರಮುಖ ಹೈಲೈಟ್‌ಗಳಿವು. ಸಭೆ ಆರಂಭವಾಗಿದ್ದೇ ತಡ ಸೋಗಿ ಜಿಪಂ ಸದಸ್ಯ ವಿಶ್ವನಾಥ್ (ವಿಜಯಕುಮಾರ್) ಅವರು ಶಿಷ್ಟಾಚಾರ ಪಾಲಿಸದ ಹಡಗಲಿ ಇಒ ಸೋಮಶೇಖರ್ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು. ಹಡಗಲಿ ತಾಲೂಕು ಗ್ರಾಮ ಪಂಚಾಯಿತಿಯೊಂದರಲ್ಲಿ ಅಭಿವೃದ್ಧಿ ಕಾಮಗಾರಿ ಉದ್ಘಾಟನೆ, ಶಂಕುಸ್ಥಾಪನೆ ವೇಳೆ ನಾಮಫಲಕಗಳಲ್ಲಿ ಸ್ಥಳೀಯ ಜನಪ್ರತಿನಿಧಿಗಳನ್ನು ಕೈಬಿಟ್ಟು, ಶಿಷ್ಟಾಚಾರವನ್ನು ಉಲ್ಲಂಘಿಸಲಾಗುತ್ತಿದೆ. ಅಲ್ಲಿನ ಸಚಿವರು, ಶಾಸಕರು, ಗ್ರಾಪಂ ಸದಸ್ಯರು, ಅಧ್ಯಕ್ಷರು, ಕೆಲ ಗುತ್ತಿಗೆದಾರರ ಹೆಸರುಗಳನ್ನು ಸಹ ಹಾಕಲಾಗಿದೆ. ಆದರೆ, ಅಲ್ಲಿನ ಜಿಪಂ ಸದಸ್ಯರ ಹೆಸರನ್ನು ಮಾತ್ರ ಹಾಕಲ್ಲ. ಈ ಕುರಿತು ಕೇಳಿದರೆ ಇಒಗಳಿಂದ ಸಮರ್ಪಕ ಉತ್ತರವಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ವಿವಿಧ ಇಲಾಖೆಗಳಿಂದ ಸಿದ್ಧಪಡಿಸಲಾಗಿದ್ದ ವಾರ್ಷಿಕ ಕ್ರಿಯಾಯೋಜನೆಯಲ್ಲಿ ಬಳ್ಳಾರಿ ತಾಲೂಕನ್ನು ಕೈಬಿಟ್ಟಿದ್ದಕ್ಕೆ ಸದಸ್ಯರಾದ ಅಲ್ಲಂ ಪ್ರಶಾಂತ್, ಎ.ಮಾನಯ್ಯ ಆಕ್ಷೇಪ ವ್ಯಕ್ತಪಡಿಸಿದರು. ಆರೋಗ್ಯ ಇಲಾಖೆ, ಪಶುಸಂಗೋಪನೆ ಇಲಾಖೆ, ಮೀನುಗಾರಿಕೆ, ಸಮಾಜ ಕಲ್ಯಾಣ ಇಲಾಖೆ ಸೇರಿದಂತೆ ಹಲವಾರು ಇಲಾಖೆಗಳಲ್ಲಿ ಬಳ್ಳಾರಿ ತಾಲೂಕಿಗೆ ಅನುದಾನವನ್ನು ಮೀಸಲಿಟ್ಟಿಲ್ಲ. ಬಳ್ಳಾರಿ ತಾಲೂಕು ಸಹ ಈ ಜಿಲ್ಲೆಯಲ್ಲೇ ಇದೆ ಎಂಬುದನ್ನು ಮರೆಯಬಾರದು ಎಂದು ಅಧಿಕಾರಿಗಳ ವಿರುದ್ಧ ಗರಂ ಆದರು. ಕ್ರಿಯಾಯೋಜನೆ ರೂಪಿಸುವಾಗ ನಮ್ಮ ಗಮನಕ್ಕೆ ಏಕೆ ತಂದಿಲ್ಲ ಎಂದು ಪ್ರಶ್ನಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾ ಆರೋಗ್ಯಾಧಿಕಾರಿ ಶಿವರಾಜ್ ಹೆಡೆ, ಜಿಲ್ಲೆಯ ಎಲ್ಲ ತಾಲೂಕು ಆರೋಗ್ಯಾಧಿಕಾರಿಗಳನ್ನು ಸಂಪರ್ಕಿಸಿ ಈ ಕ್ರಿಯಾಯೋಜನೆ ಸಿದ್ಧಪಡಿಸಲಾಗಿದೆ. ಅವರು ಜನಪ್ರತಿನಿಧಿಗಳೊಂದಿಗೆ ಮಾತನಾಡಿದ್ದಾರೆ ಎಂದು ತಿಳಿಸಿದ್ದಾರೆ ಎಂದರು.
ಜಿಲ್ಲೆಯ ವಿವಿಧ ತಾಲೂಕುಗಳಲ್ಲಿನ 55 ಎಸ್ಸೆಸ್ಸೆಲ್ಸಿ ಪರೀಕ್ಷಾ ಕೇಂದ್ರಗಳಿಗೆ ಡೆಸ್ಕ್ ಉಪಕರಣಗಳನ್ನು ಖರೀದಿಸಿ ಪೂರೈಸಲು 1.23 ಕೋಟಿ ರೂ. ಹಣವನ್ನು ತೆಗೆದಿರಿಸಲಾಗಿದ್ದು, ಪೂರೈಕೆ ಮಾಡಲಾಗಿದೆ. ಕೆಲವೆಡೆ ಡೆಸ್ಕ್ಗಳು ಗುಣಮಟ್ಟದಿಂದ ಕೂಡಿಲ್ಲ ಎಂದು ಕೆಲ ಸದಸ್ಯರು ಅಸಮಾಧಾನವನ್ನು ಹೊರಹಾಕಿದರು. ಇದಕ್ಕೆ ಮಧ್ಯಪ್ರವೇಶಿಸಿದ ಜಿಪಂ ಸಿಇಒ ಕೆ.ನಿತೀಶ್, ಇನ್ನು ಮುಂದೆ ಶಾಲಾ ಡೆಸ್ಕ್ಗಳ ಖರೀದಿಗೆ ಡಿಐಸಿಯಿಂದ ಮತ್ತು ಕಂಪ್ಯೂಟರ್ ಉಪಕರಣ ಖರೀದಿಗೆ ಎನ್‌ಐಸಿಯು ಸಮಿತಿಗಳನ್ನು ರಚಿಸಿ ಆ ಮೂಲಕ ಟೆಂಡರ್ ಕರೆಯಲಾಗುವುದು ಎಂದರು. ಜನಪ್ರತಿನಿಗಳು ಕೇಳಿದಲ್ಲಿ ವಯಸ್ಕರ ಶಿಕ್ಷಣದ ಮಾಹಿತಿ ನೀಡಬೇಕು ಎಂದು ಅಕಾರಿಗಳಿಗೆ ಸಂಸದರು ಸೂಚಿಸಿದರು.
ಕ್ರೀಡಾ ಇಲಾಖೆಗೆ ಲಕ್ಷಾಂತರ ರೂ. ಪೋಲು: ಯುವಜನ ಮತ್ತು ಕ್ರೀಡಾ ಇಲಾಖೆ ಬಗ್ಗೆ ಸದಸ್ಯ ಅಲ್ಲಂ ಪ್ರಶಾಂತ್ ಅಸಮಾಧಾನ ವ್ಯಕ್ತಪಡಿಸಿದರು. ಇಲಾಖೆ ವಸತಿ ನಿಲಯದಲ್ಲಿನ ಕ್ರೀಡಾ ವಿದ್ಯಾರ್ಥಿಗಳಿಗೆಂದು ಪ್ರತಿವರ್ಷ ಲಕ್ಷಾಂತರ ರೂ. ಖರ್ಚು ಮಾಡಲಾಗುತ್ತಿದೆ. ಆದರೆ, ಅದರಿಂದ ಫಲಿತಾಂಶ ದೊರೆಯುತ್ತಿಲ್ಲ. ಜಿಲ್ಲಾ ಮಟ್ಟದ ಕ್ರೀಡೆಗಳಲ್ಲಿ ಪ್ರಥಮ ಸ್ಥಾನ ಬಂದ ಕ್ರೀಡಾಪಟುಗಳು ಪ್ರಮಾಣ ಪತ್ರದ ಕೊರತೆಯಿಂದಾಗಿ ದಸರಾ ಕ್ರೀಡಾಕೂಟದಲ್ಲಿ ಭಾಗವಹಿಸುತ್ತಿಲ್ಲ. ಜತೆಗೆ ಇಲಾಖೆಯಿಂದಲೂ ನೀಡಲಾಗುವ ಟಿಎ, ಡಿಎ ಕ್ರೀಡೆಗಳಲ್ಲಿ ಭಾಗವಹಿಸಿದ ನಂತರ ಅದಕ್ಕೆ ಸಂಬಂಧಿಸಿದ ಬಿಲ್ಗಳನ್ನು ಸಲ್ಲಿಸಿದ ಬಳಿಕ ನೀಡಲಾಗುತ್ತದೆ. ಇದರಿಂದ ಬಹುತೇಕರು ಹಣದ ಕೊರತೆಯಿಂದಾಗಿ ರಾಜ್ಯಮಟ್ಟದ ಕ್ರೀಡೆಗಳಿಂದ ದೂರ ಉಳಿಯುತ್ತಿದ್ದಾರೆ. ಹೀಗಾಗಿ ಹೋಗುವಾಗಲೇ ನೀಡಿದರೆ ಅವರಿಗೆ ಅನುಕೂಲವಾಗಲಿದೆ ಎಂದು ಕೋರಿದರು.
ಬಳಿಕ ವಾರ್ಷಿಕ ಕ್ರಿಯಾಯೋಜನೆ ಕುರಿತು ಸುದೀರ್ಘ ಚರ್ಚೆ ಈ ಸಂದರ್ಭದಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಸಂಸದ ವೈ. ದೇವಿಂದ್ರಪ್ಪ, ಜಿಪಂ ಉಪಾಧ್ಯಕ್ಷೆ ದೀನಾ ಮಂಜುನಾಥ, ಜಿಪಂ ಸದಸ್ಯರು ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.
ಒಂದೇ ಸಭೆಯಲ್ಲಿ ಪತಿ-ಪತ್ನಿಯರು: ಬಳ್ಳಾರಿ ನೂತನ ಸಂಸದ ವೈ. ದೇವೇಂದ್ರಪ್ಪ, ದಂಪತಿ ಸಮೇತ ಮೊದಲ ಬಾರಿಗೆ ಜಿಪಂ ಸಾಮಾನ್ಯ ಸಭೆಯಲ್ಲಿ ಭಾಗವಹಿಸಿದರು. ಹರಪನಹಳ್ಳಿ ತಾಲೂಕು ಬಳ್ಳಾರಿಗೆ ಸೇರಿದ ಬಳಿಕ ನಡೆಯಬೇಕಿದ್ದ ಜಿಪಂ ಸಾಮಾನ್ಯ ಸಭೆ ಕೋರಂ ಕೊರತೆಯಿಂದಾಗಿ ಎರಡು ಬಾರಿ ರದ್ದಾಗಿತ್ತು. ಮೂರನೇ ಬಾರಿಗೆ ನಡೆದಿದ್ದು, ನೂತನ ಸಂಸದ ದೇವೇಂದ್ರಪ್ಪ ಮತ್ತವರ ಪತ್ನಿ ಅರಸಿಕೆರೆ ಕ್ಷೇತ್ರದ ಜಿಪಂ ಸದಸ್ಯೆ ಸುಶೀಲಮ್ಮ ದೇವೇಂದ್ರಪ್ಪನವರು ಒಂದೇ ಕಾರಲ್ಲಿ ಬಂದು ಸಭೆಯಲ್ಲಿ ಭಾಗವಹಿಸಿದ್ದು ಗಮನ ಸೆಳೆಯಿತು. 1990ರ ದಶಕದಲ್ಲಿ ಬಳ್ಳಾರಿ ಜಿಪಂ ಉಪಾಧ್ಯಕ್ಷರಾಗಿದ್ದ ದೇವೇಂದ್ರಪ್ಪ, ಇದೀಗ ಮೂರು ದಶಕಗಳ ಬಳಿಕ ಸಂಸದರಾಗಿ ಆಯ್ಕೆಯಾಗಿ ಜಿಪಂ ಸಾಮಾನ್ಯ ಸಭೆಯಲ್ಲಿ ಮೊದಲ ಬಾರಿಗೆ ಭಾಗವಹಿಸಿದ್ದಾರೆ.