Advertisement

ಪತ್ರಕರ್ತರ ಹೊರಗಿಟ್ಟು ಕೆಡಿಪಿ ಸಭೆ ನಡೆಸಿದ ಸಚಿವ

03:53 PM May 11, 2022 | Team Udayavani |

ಕೋಲಾರ: ಜಿಲ್ಲಾ ಪಂಚಾಯಿತಿಯಲ್ಲಿ ನಡೆದ ಕರ್ನಾಟಕ ಪ್ರಗತಿ ಪರಿಶೀಲನಾ ಸಭೆಗೆ ವಾರ್ತಾ ಇಲಾಖೆಯಿಂದ ಎಲ್ಲಾ ಪತ್ರಕರ್ತರನ್ನು ಆಹ್ವಾನಿಸಿ ನಂತರ ಸಭೆಯ ಪ್ರಾರಂಭದಲ್ಲಿ ಹೊರಗೆ ಹೋಗಲು ಜಿಪಂ ಕಾರ್ಯನಿರ್ವಹಣಾಧಿಕಾರಿಗಳೇ ಸೂಚಿಸುವ ಮೂಲಕ ಪಾರದರ್ಶಕ ನಡೆಗೆ ಸಭೆ ತಿಲಾಂಜಲಿಯಿಟ್ಟಿತು.

Advertisement

ಜಿಲ್ಲಾ ಉಸ್ತುವಾರಿ ಸಚಿವ ಮುನಿರತ್ನ ಜಿಲ್ಲಾ ಉಸ್ತುವಾರಿ ವಹಿಸಿಕೊಂಡ ಒಂದೂವರೆ ವರ್ಷದ ನಂತರ ಅನೇಕ ಟೀಕೆ ಟಿಪ್ಪಣಿ ಆಕ್ಷೇಪಣೆಗಳ ಹಿನ್ನೆಲೆಯಲ್ಲಿ ಮಂಗಳವಾರ ಕೆ.ಡಿ.ಪಿ. ಸಭೆಯನ್ನು ಕರೆಯಲಾಗಿತ್ತು. ಈ ಸಭೆಗೆ ಪ್ರತಿಪಕ್ಷದ ಶಾಸಕರಾದ ಕೆ.ರಮೇಶ್‌ಕುಮಾರ್‌, ಕೆ.ಶ್ರೀನಿವಾಸಗೌಡ, ಎಸ್‌. ಎನ್‌.ನಾರಾಯಣಸ್ವಾಮಿ, ಕೆ.ವೈ.ನಂಜೇಗೌಡ, ವಿಧಾನ ಪರಿಷತ್‌ ಸದಸ್ಯ ಅನಿಲ್‌ಕುಮಾರ್‌ ಒಟ್ಟಾಗಿ ಬಂದು ಉಪಸ್ಥಿತರಿದ್ದು, ಸಚಿವ ಮುನಿರತ್ನ ಅವರೊಂದಿಗೆ ಎಂ.ಎಲ್‌.ಸಿ. ಕೆ.ವೈ.ನಾರಾಯಣಸ್ವಾಮಿ ಅವರು ನಿಗಧಿತ ಅವಧಿಗೆ ಬಂದರು. ಅದರೆ, ಏಕೋ…. ಏನೋ…. ವಿಪಕ್ಷದ ದಂಡು ದಾಳಿ ಮಾಡುವ ಭೀತಿಯಿಂದಲೋ ಏನೂ ಸಚಿವರು ಜಿಪಂ ಸಿಇಒ ಮೂಲಕ ಸಭೆಯಲ್ಲಿ ನಡೆಯುವಂತಹ ಮಾಹಿತಿಗಳು ಸಾರ್ವಜನಿಕವಾಗಿ ಬಹಿರಂಗವಾಗದಂತೆ ತಡೆಯಲು ಸಭೆಗೆ ಆಹ್ವಾನ ನೀಡಿದ್ದ ಪತ್ರಕರ್ತರನ್ನು ಹೊರಗೆ ಹಾಕುವ ಕೆಲಸ ಮಾಡಿದರು. ಪಾರದರ್ಶಕ ಅಡಳಿತಕ್ಕೆ ಅಂಕುಶ ಹಾಕಿ, ಜಿಪಂ ಸಿಇಒ ಮೇಲೆ ಗೂಬೆ ಕೂರಿಸುವ ಕೆಲಸವನ್ನು ಅಚ್ಚಕಟ್ಟಾಗಿ ಸಚಿವರೇ ಮಾಡಿದರು.

ರಹಸ್ಯವಾಗಿ ಸಭೆ ನಡೆಸಿದ್ದೇಕೆ: ಸಭೆಯಲ್ಲಿ ಉಪಸ್ಥಿತರಿದ್ದ ಪತ್ರಕರ್ತರು ಸಿಇಒ ಅವರು ಪತ್ರಕರ್ತರನ್ನು ಹೊರಗೆ ಹೋಗಲು ಮಾಡಿಕೊಂಡ ಮನವಿ ವಿರುದ್ಧ ಸಿಡಿದು ಕೆಡಿಪಿ ಸಭೆಗಳು ಪಾರದರ್ಶಕವಾಗಿ ನಡೆಸಬೇಕು. ಆದರೆ, ನಿಮ್ಮ ಸರಕಾರವೇನಾದರೂ ಪತ್ರಕರ್ತರನ್ನು ಹೊರಗೆ ಇಟ್ಟು ರಹಸ್ಯವಾಗಿ ಸಭೆ ನಡೆಸಲು ಸೂಚಿಸಿದೆಯೇ, ಕಮೀಷನ್‌ ವ್ಯಾಪಾರವೇನಾದರೂ ಅಧಿಕಾರಿಗಳ ಕುದುರಿಸುತ್ತಿದ್ದಿರಾ ಎಂದು ಖಾರವಾಗಿ ಪ್ರಶ್ನಿಸಿದರು.

ಸಭೆಗೆ ಹೊರಗೆ ಹೋಗಲು ಸೂಚನೆ: ಈ ಸಂದರ್ಭದಲ್ಲಿ ನಾವು ಸಭೆ ನಡೆಸಲು ಅಡ್ಡವಾಗಿದ್ದ ಟಿ.ವಿ. ಮಾಧ್ಯಮದವರಿಗೆ ಹೇಳಿದ್ದು ಎಂದು ಸಬೂಬು ಹೇಳಿದರು. ಆದರೆ, ನಂತರ ಸಚಿವರ ಸೂಚನೆ ಮೇರೆಗೆ ಸಿಇಒ ಅವರು ಮಾಧ್ಯಮದವ ರೆಲ್ಲರೂ ಸಭೆಯಿಂದ ನಿರ್ಗಮಿಸಲು ಮನವಿ ಮಾಡು ತ್ತೇನೆ. ಸಭೆಯ ನಂತರ ಪತ್ರಿಕಾಗೋಷ್ಠಿ ಮೂಲಕ ಮಾಹಿತಿ ನೀಡುವುದಾಗಿ ಮನವಿ ನೀಡಿದರು.

ರೊಚ್ಚಿಗೆದ್ದ ಪತ್ರಕರ್ತರು: ಇದರಿಂದ ರೊಚ್ಚಿಗೆದ್ದ ಪತ್ರ ಕರ್ತರು ಇದು ಕೆ.ಡಿ.ಪಿ. ಸಭೆ, ನೀವುಗಳು ರಹಸ್ಯವಾಗಿ ಸಭೆ ನಡೆಸುವ ಹಾಗಿದ್ದರೆ ಪತ್ರಕರ್ತರನ್ನು ಏತಕ್ಕೆ ಆಹ್ವಾನಿ ಸಿದಿರಿ ಎಂಬ ಪ್ರಶ್ನೆಗೆ ಯಾರ ಬಳಿಯೂ ಉತ್ತರವಿರಲಿಲ್ಲ. ಪತ್ರಕರ್ತರು ಸಭಾಂಗಣದಿಂದ ಹೊರ ಬಂದಾಗ ಜಿಲ್ಲಾಧಿಕಾರಿ ವೆಂಕಟರಾಜ ಅವರು ಹಿಂದೆಯೇ ಬಂದು ಸಮಾಧಾನ ಪಡಿಸಲು ಯತ್ನಿಸಿದರು.

Advertisement

ಒಟ್ಟಾರೆಯಾಗಿ ಕೆಡಿಪಿ ಸಭೆಯಿಂದ ಪತ್ರಕರ್ತರನ್ನು ಹೊರಗೆ ಕಳಹಿಸುವ ಮೂಲಕ ಜಿಲ್ಲಾ ಉಸ್ತುವಾರಿ ಸಚಿವರು ವಿವಾದಕ್ಕೆ ತುತ್ತಾದರು. ಜಿಪಂ ಇತಿಹಾಸದಲ್ಲಿ ಕೆಡಿಪಿ ಸಭೆಯನ್ನು ರಹಸ್ಯವಾಗಿ ನಡೆಸುವ ಮೂಲಕ ಹೊಸ ದಾಖಲೆ ಬರೆದರು.

Advertisement

Udayavani is now on Telegram. Click here to join our channel and stay updated with the latest news.

Next