Advertisement

ಜಿಪಂ ಸಬ್ಸಿಡಿ ಹಣ ಲೂಟಿ ಆರೋಪ

10:11 AM Jun 23, 2020 | Suhan S |

ಚಿಕ್ಕಮಗಳೂರು: ಕೃಷಿ ಯಾಂತ್ರೀಕರಣ ಯೋಜನೆಯಡಿ ರೈತರಿಗೆ ಸರ್ಕಾರ ನೀಡುವ ಸಬ್ಸಿಡಿ ಹಣದಲ್ಲಿ ಕೃಷಿ ಇಲಾಖೆ ಅಧಿಕಾರಿಗಳು ಖಾಸಗಿ ಸಂಸ್ಥೆಗಳ ಜತೆ ಸೇರಿ ಕೋಟ್ಯಂತರ ರೂ. ಲೂಟಿ ಮಾಡಿದ್ದಾರೆ. ಈ ಪ್ರಕರಣವನ್ನು ಮುಚ್ಚಿ ಹಾಕುವ ಹುನ್ನಾರ ನಡೆಯುತ್ತಿದೆ ಎಂದು ಆರೋಪಿಸಿ ಜಿಪಂ ವಿರೋಧ ಪಕ್ಷದ ಸದಸ್ಯರು ಸಭಾತ್ಯಾಗ ಮಾಡಿದ ಘಟನೆ ಜಿಪಂ ಸಭೆಯಲ್ಲಿ ನಡೆಯಿತು.

Advertisement

ಸೋಮವಾರ ನಗರದ ಜಿಪಂ ಸಭಾಂಗಣದಲ್ಲಿ ಅಧ್ಯಕ್ಷೆ ಸುಜಾತಾ ಕೃಷ್ಣಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆದ ಸರ್ವ ಸದಸ್ಯರ ಸಾಮಾನ್ಯ ಸಭೆಯಲ್ಲಿ ಸದಸ್ಯ ಶರತ್‌ ಕೃಷ್ಣಮೂರ್ತಿ ಮಾತನಾಡಿ, 2016 ರಿಂದ 19ರ ವರೆಗೆ ರಾಜ್ಯ ಸರ್ಕಾರ ರೈತರಿಗೆ ಯಾಂತ್ರೀಕರಣ ಯೋಜನೆಯಡಿ ಯಂತ್ರೋಪರಣ ಖರೀದಿಗೆ ಸಬ್ಸಿಡಿ ನೀಡುತ್ತಿದೆ. ಕೃಷಿ ಇಲಾಖೆ ಅಧಿಕಾರಿಗಳುಹಾಗೂ ಖಾಸಗಿ ಕಂಪನಿಗಳು ರೈತರ ಅರ್ಜಿಗಳಿಗೆ ನಕಲಿ ದಾಖಲೆಗಳನ್ನು ಸೃಷ್ಟಿಸಿ ಕೋಟ್ಯಂತರ ರೂ. ಅನುದಾನ ಲೂಟಿ ಮಾಡಿದ್ದಾರೆ. ಸಭೆಯಲ್ಲಿ ಈ ವಿಷಯದ ಮೇಲೆ ಚರ್ಚೆಗೆ ಅವಕಾಶ ನೀಡಬೇಕೆಂದು ಸಭಾಧ್ಯಕ್ಷರಿಗೆ ಮನವಿ ಮಾಡಿದರು. ಸಭಾಧ್ಯಕ್ಷೆ ಸುಜಾತಾ ಕೃಷ್ಣಪ್ಪ ಹಾಗೂ ಉಪಾಧ್ಯಕ್ಷ ಬೀಕನಹಳ್ಳಿ ಸೋಮಶೇಖರ್‌ ಮಾತನಾಡಿ, ಈ ಪ್ರಕರಣದ ಕುರಿತು ಕೆಡಿಪಿ ಸಭೆಯಲ್ಲಿ ಚರ್ಚೆಯಾಗಿದ್ದು, ಸಚಿವ ಸಿ.ಟಿ.ರವಿ ಅವರೇ ತನಿಖೆಗೆ ಸೂಚಿಸಿದ್ದಾರೆ. ಅದರಂತೆ ಅಧಿಕಾರಿಗಳ ನೇತೃತ್ವದಲ್ಲಿ ವಿಚಕ್ಷಣ ಸಮಿತಿ ನೇಮಕ ಮಾಡಲಾಗಿದೆ. ಸಮಿತಿ ವರದಿ ಬಂದ ಬಳಿಕ ಚರ್ಚೆ ಮಾಡೋಣ ಎಂದರು.

ಇದಕ್ಕೆ ಕಡೂರು ಶಾಸಕ ಬೆಳ್ಳಿ ಪ್ರಕಾಶ್‌, ತರೀಕೆರೆ ಶಾಸಕ ಡಿ.ಎಸ್‌.ಸುರೇಶ್‌ ಸೇರಿದಂತೆ ಆಡಳಿತ ಪಕ್ಷದ ಸದಸ್ಯರು ಬೆಂಬಲ ಸೂಚಿಸಿ ಅನುಪಾಲನಾ ವರದಿ ಮೇಲೆ ಚರ್ಚೆ ನಡೆಯಬೇಕೆಂದು ಪಟ್ಟು ಹಿಡಿದರು. ಇದಕ್ಕೆ ವಿರೋಧ ವ್ಯಕ್ತಪಡಿಸಿದ ಸದಸ್ಯ ಶರತ್‌ ಕೃಷ್ಣಮೂರ್ತಿ, ಹಗರಣ ಇಡೀ ಜಿಲ್ಲೆಗೆ ಸಂಬಂಧಿಸಿದೆ. ಅಧಿಕಾರಿಗಳು ಭಾರೀ ಭ್ರಷ್ಟಚಾರ ನಡೆಸಿದ್ದು, ರೈತರನ್ನು ವಂಚಿಸಲಾಗಿದೆ. ಈ ಪ್ರಕರಣದಲ್ಲಿ ಭಾಗಿಯಾಗಿರುವ ಅಧಿಕಾರಿಗಳು ಹಾಗೂ ಖಾಸಗಿ ಕಂಪನಿ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು. ಚರ್ಚೆಗೆ ಅವಕಾಶ ನೀಡಬೇಕೆಂದು ಆಗ್ರಹಿಸಿ ಪಟ್ಟು ಹಿಡಿದರು. ಇದಕ್ಕೆ ವಿರೋಧ ಪಕ್ಷದ ಸದಸ್ಯರು ಬೆಂಬಲ ಸೂಚಿಸಿದರು.

ಸದಸ್ಯ ಶರತ್‌ ಕೃಷ್ಣಮೂರ್ತಿ ಅವರ ಮನವಿಗೆ ಆಡಳಿತ ಪಕ್ಷದ ಸದಸ್ಯರು ಒಪ್ಪದಿದ್ದ ಹಿನ್ನೆಲೆಯಲ್ಲಿ ಚರ್ಚೆಗೆ ಅವಕಾಶ ನೀಡದೆ ಜಿ.ಪಂ. ಸದಸ್ಯನ ಹಕ್ಕು ಚುತಿಯಾಗಿದೆ. ವಿರೋಧ ಪಕ್ಷದ ಸದಸ್ಯರು ಸಭಾತ್ಯಾಗಕ್ಕೆ ಮುಂದಾದರು. ಸದಸ್ಯ ಶರತ್‌ ಕೃಷ್ಣಮೂರ್ತಿ ಸಭೆ ವೇದಿಕೆ ಮುಂದೆ ತೆರಳಿ ಚರ್ಚೆಗೆ ಅವಕಾಶ ನೀಡದಿರುವ ಹಿನ್ನೆಲೆ ತಾವು ತಂದಿದ್ದ ದಾಖಲೆಗಳನ್ನು ಪ್ರದರ್ಶಿಸಿ ಆಕ್ರೋಶ ಹೊರ ಹಾಕಿದರು. ಈ ವೇಳೆ ಆಡಳಿತ ಪಕ್ಷದ ಸದಸ್ಯರು ಹಾಗೂ ವಿರೋದ ಪಕ್ಷದ ಸದಸ್ಯರ ನಡುವೆ ಮಾತಿನ ಚಕಾಮಕಿ ನಡೆದು ಸಭೆ ಗೊಂದಲದ ಗೂಡಾಗಿ ಮಾರ್ಪಟ್ಟಿತು.

ಸಭಾಧ್ಯಕ್ಷೆ ಸುಜಾತಾ ಕೃಷ್ಣಪ್ಪ, ಉಪಾಧ್ಯಕ್ಷ ಸೋಮಶೇಖರ್‌ ಅನುಪಾಲನಾ ವರದಿ ಬಳಿಕ ಚರ್ಚೆಗೆ ಅವಕಾಶ ನೀಡುತ್ತೇವೆ. ಸಭೆಯ ಮಧ್ಯದಲ್ಲಿ ಪ್ರಕರಣದ ಚರ್ಚೆ ಬೇಡವೆಂದು ರೂಲಿಂಗ್‌ ನೀಡಿದರು. ಪಟ್ಟು ಬಿಡದ ವಿರೋಧ ಪಕ್ಷದ ಸದಸ್ಯರಾದ ಶರತ್‌ ಕೃಷ್ಣಮೂರ್ತಿ, ಕೆ.ಆರ್‌. ಪ್ರಭಾಕರ್‌, ಲೋಕೇಶ್‌, ರಾಧಾ, ಪ್ರೇಮಾಬಾಯಿ, ರೇಣುಕಮ್ಮ ಸಭಾತ್ಯಾಗ ಮಾಡಿ, ಜಿಪಂ ಕಚೇರಿ ಎದುರು ಧರಣಿ ನಡೆಸಿದರು.

Advertisement

ವಿರೋಧ ಪಕ್ಷದ ಸದಸ್ಯರು ಧರಣಿ ನಡೆಸುತ್ತಿದ್ದರೆ ಆಡಳಿತ ಪಕ್ಷದ ಸದಸ್ಯರು ಅನುಪಾಲನ ವರದಿ ಮೇಲಿನ ಚರ್ಚೆ ಮುಂದುವರಿಸಿದ್ದರು. ಈ ವೇಳೆ ಸಭೆಗೆ ತಡವಾಗಿ ಆಗಮಿಸಿದ ಶೃಂಗೇರಿ ಶಾಸಕ ಟಿ.ಡಿ.ರಾಜೇಗೌಡ ಮಾತನಾಡಿ, ವಿರೋಧ ಪಕ್ಷದ ಸದಸ್ಯರನ್ನು ಹೊರಗಿಟ್ಟು ಸಭೆ ನಡೆಸಿದರೆ ಸಭೆಗೆ ಅರ್ಥ ಬರುವುದಿಲ್ಲ, ಅವರು ಜನರಿಂದ ಆಯ್ಕೆಯಾಗಿ ಬಂದಿದ್ದಾರೆ. ಅವರ ಸಮಸ್ಯೆ ಆಲಿಸುವುದು ಆಡಳಿತ ಪಕ್ಷದ ಜವಾಬ್ದಾರಿ. ವಿರೋಧ ಪಕ್ಷದ ಸದಸ್ಯರ ಮನವೊಲಿಸಿ ಸಭೆಗೆ ಕರೆತರಬೇಕೆಂದು ಮನವಿ ಮಾಡಿದರು.

ತರೀಕೆರೆ ಶಾಸಕ ಡಿ.ಎಸ್‌.ಸುರೇಶ್‌ ಸೇರಿದಂತೆ ಆಡಳಿತ ಪಕ್ಷದ ಸದಸ್ಯರು, ಜನಪ್ರತಿನಿಧಿಗಳ ಹಕ್ಕಿಗೆ ಚುತಿಗೊಳಿಸಿಲ್ಲ. ಸಭೆಯ ನಿಯಮಾವಳಿ ಮೀರಿ ವಿರೋಧ ಪಕ್ಷದ ಸದಸ್ಯರು ಸಭಾತ್ಯಾಗ ಮಾಡಿದ್ದಾರೆ. ಸಭೆಯ ಮಹತ್ವ ಅರಿತು ಅವರೇ ಸಭೆಗೆ ಹಾಜರಾಗಬೇಕಿತ್ತು. ಅವರನ್ನು ಮನವೊಲಿಸಿ ಸಭೆಗೆ ಕರೆತರುವ ಪ್ರಯತ್ನ ಮಾಡಲಾಗುವುದು ಎಂದು ಜಿಪಂ ಅಧ್ಯಕ್ಷೆ ಹಾಗೂ ಉಪಾಧ್ಯಕ್ಷರು ತಿಳಿಸಿದರು.

ನಂತರ ಜಿ.ಪಂ. ಅಧ್ಯಕ್ಷರು, ಉಪಾಧ್ಯಕ್ಷ ಹಾಗೂ ಸದಸ್ಯರು, ಟಿ.ಡಿ.ರಾಜೇಗೌಡ ಅವರು ಸಭಾತ್ಯಾಗ ಮಾಡಿದ ಸದಸ್ಯರ ಮನವೊಲಿಸಿದರು. ಮಧ್ಯಾಹ್ನದ ನಂತರ ನಡೆದ ಅನುಪಾಲನಾ ವರದಿ ಚರ್ಚೆ ವೇಳೆ ಪ್ರಕರಣ ತನಿಖೆ ಯಾವ ಹಂತದಲ್ಲಿದೆ ಎಂಬುದರ ಬಗ್ಗೆ ಚರ್ಚೆ ನಡೆಯಿತು.

Advertisement

Udayavani is now on Telegram. Click here to join our channel and stay updated with the latest news.

Next